ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ
‘ದೇವತಾಯಜ್ಞದ ಮೂಲಕ ಭೋಗಯೋಗಾದಿಗಳನ್ನು ಪಡೆಯಬಹುದು. ಈ ಮೂಲಕ ಶ್ರೇಯಸ್ಸುಂಟಾಗುತ್ತದೆ ಎನ್ನುವ ವಿಚಾರವನ್ನು ಸೃಷ್ಟಿಕರ್ತನು ಸೃಷ್ಟಿಯ ಆದಿಯಲ್ಲೇ ಉಪದೇಶಿಸಿದ್ದನು’ ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ‘ಯಜ್ಞ ಎಂದರೇನು? ಅದರಿಂದ ಸರ್ವತೋಮುಖ ಶ್ರೇಯಸ್ಸು ಹೇಗೆ ಆಗುತ್ತದೆ?’ ಎನ್ನುವ ವಿಚಾರವನ್ನೂ ಚರ್ಚಿಸಿದ್ದೇವೆ. ಇದೇ ವಿಚಾರವನ್ನೇ ಭಗವಾನ್ ಕೃಷ್ಣನು ಮುಂದುವರೆಸುತ್ತಾನೆ;
ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ|
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ|| (3.12)
‘ಯಜ್ಞಗಳಿಂದ ತುಷ್ಟಿಗೊಳಿಸಲ್ಪಟ್ಟ ದೇವತೆಗಳು ಇಷ್ಟಭೋಗಗಳನ್ನು ಜೀವಿಗಳಿಗೆ ಪ್ರಸಾದಿಸುತ್ತಾರೆ. ಆದರೆ, ಹಾಗೆ ಪಡೆದ ಭೋಗ ಭಾಗ್ಯಗಳನ್ನು (ಯಾರೊಂದಿಗೂ ಹಂಚಿಕೊಳ್ಳದೆ) ತಾನೊಬ್ಬನೇ ಭೋಗಿಸುವವನು ‘‘ಕಳ್ಳ’’ ಎನಿಸುತ್ತಾನೆ.’
ಈ ಶ್ಲೋಕಾರ್ಥವು ಮನನಯೋಗ್ಯ! ನೇಮನಿಷ್ಠೆಗಳಿಂದ ಯಜ್ಞವನ್ನು ಮಾಡಿ ದೇವತಾನುಗ್ರಹದಿಂದ ಪಡೆದವರು, ತಾವೊಬ್ಬರೇ ಆ ಭೋಗಭಾಗ್ಯ ಅನುಭವಿಸಿದರೆ ‘ಕಳ್ಳ’ರಂತೆ! ಅದು ಹೇಗೆ? ಇಲ್ಲೇ ಇರುವುದು ಸ್ವಾರಸ್ಯ! ಯಾವುದೇ ಕರ್ಮವು ‘ಯಜ್ಞ’ವಾಗಬೇಕಾದರೆ ಈ ಮೂರು ಅಂಶಗಳಾದರೂ ಇರಲೇಬೇಕು; 1) ಉದ್ದೇಶ ಶುದ್ಧಿ ಕ್ರಮಶುದ್ಧಿ, 2) ದೇವತಾರ್ಪಣ ಭಾವ, 3) ಫಲಗಳನ್ನು ಸರ್ವರೊಂದಿಗೂ ಹಂಚಿಕೊಳ್ಳುವಿಕೆ.
ಗಮನಿಸಿ ನೋಡಿದರೆ ಗೊತ್ತಾಗುತ್ತದೆ, ಸನಾತನಧರ್ಮದ ಧಾರ್ವಿುಕ ಸಂಸ್ಕೃತಿಯು ಬೆಳೆದಿರುವುದು ‘ಈ ಯಜ್ಞಭಾವ’ದ ತಳಹದಿಯ ಮೇಲೆಯೆ! ಪರಹಿಂಸೆಗಾಗಿಯೋ, ಪೈಪೋಟಿಗಾಗಿಯೋ, ತೋರಾಣಿಕೆಗಾಗಿಯೋ ಮಾಡುವ ಅಶುದ್ಧ-ಉದ್ದೇಶದ ಕರ್ಮ ‘ಯಜ್ಞ’ವೆನಿಸದು. ತನು-ಮನ ಶುದ್ಧಿಯಿಲ್ಲದ, ಮಂತ್ರ ತಂತ್ರಗಳಲ್ಲಿ ಲೋಪವಿರುವ, ಶ್ರದ್ಧಾಹೀನವಾದ ಅಥವಾ ಕಾಟಾಚಾರಕ್ಕಾಗಿ ಮಾಡುವಂತಹ ಅಶುದ್ಧಕ್ರಮದ ಕರ್ಮವೂ ‘ಯಜ್ಞ’ವೆನಿಸದು. ಅಂತೆಯೇ ಮಾಡಿದ ಕರ್ಮದ ಫಲವನ್ನು ಪ್ರಸಾದರೂಪದಲ್ಲಿ ಸರ್ವರೊಂದಿಗೂ ಹಂಚಿಕೊಳ್ಳದಿದ್ದರೂ ಅದು ‘ಯಜ್ಞ’ವೆನಿಸದು.
ಮೋಕ್ಷಸಾಧನೆಯ ಅಂತರ್ಮುಖೀ ಪ್ರವೃತ್ತಿಯ ಆತ್ಮಾನುಸಂಧಾನದ ಹೊರತಾಗಿ ಬೇರಾವುದೇ ಧರ್ಮಕರ್ಮಗಳನ್ನು ಮಾಡುವಾಗಲೂ, ಫಲವನ್ನು ಅನುಭವಿಸುವಾಗಲೂ ‘ಒಬ್ಬರೆ’ ಇರುವುದಿಲ್ಲ. ಸಕುಟುಂಬರಾಗಿ, ಬಂಧುಮಿತ್ರರೊಡಗೂಡಿಯೇ ಇರುತ್ತಾರೆ! ಸಂನ್ಯಾಸಿಗಳೂ ತಮ್ಮ ಸಹಸಂನ್ಯಾಸಿಗಳನ್ನು ಆಹ್ವಾನಿಸುತ್ತಾರೆ! ಯಜಮಾನನ ಮೂಲಸಂಕಲ್ಪ ಅದಾವುದೋ ವೈಯಕ್ತಿಕ ಲಾಭವೇ ಆಗಿದ್ದರೂ ಸರಿ, ಆದರೆ ಯಜ್ಞಾಂತ್ಯದಲ್ಲಿ ಮಾತ್ರ ಆಗಂತುಕರೆಲ್ಲರಿಗೂ ಅನ್ನ-ತಾಂಬೂಲ-ದಕ್ಷಿಣೆಗಳನ್ನು ಪ್ರಸಾದರೂಪವಾಗಿ ಹಂಚಲಾಗುತ್ತದೆ. ‘ಸರ್ವೆ ಭವಂತು ಸುಖಿನಃ…’ ಎಂಬ ಪ್ರಾರ್ಥನೆ ಇದ್ದರೇನೇ ಕರ್ಮವು ಸಂಪನ್ನವೆನಿಸುವುದು!
‘ಅದು ಸರಿ. ಹಾಗೆ ಎಲ್ಲರನ್ನೂ ಆಹ್ವಾನಿಸಿ ಪ್ರಸಾದವನ್ನು ವಿತರಿಸುವುದು ಅವರವರ ಔದಾರ್ಯದ ವಿಷಯ. ಆದರೆ ಅದನ್ನು ‘‘ಕಡ್ಡಾಯ’’ ಮಾಡುವುದೇಕೆ? ಹಂಚಿಕೊಳ್ಳದಿದ್ದರೆ ‘ಕಳ್ಳತನ’’ ಹೇಗಾದೀತು?’ ಎನ್ನುವಿರೋ?
ನಾವು ನಮ್ಮ ಪೂರ್ವಜರಿಂದ ಶರೀರವನ್ನಷ್ಟೇ ಅಲ್ಲ, ಸಂಸ್ಕಾರಗಳನ್ನೂ ಆಸ್ತಿಯನ್ನೂ ಪಡೆಯುತ್ತೇವೆ. ಗುರುಗಳಿಂದ ವಿದ್ಯೆಯನ್ನೂ, ಬಂಧು-ಮಿತ್ರ-ಸಜ್ಜನರ ಬೆಂಬಲದಿಂದ ಅನುಕೂಲಗಳನ್ನೂ ಅವಕಾಶಗಳನ್ನೂ ಪಡೆಯುತ್ತೇವೆ. ಜೀವಿಕೆಗೆ ಬೇಕಾದ ದ್ರವ್ಯಗಳನ್ನು ನಿಸರ್ಗದಿಂದಲೂ ಪಶುಪಕ್ಷಿಗಳಿಂದಲೂ ಪಡೆಯುತ್ತಲೇ ಇರುತ್ತೇವೆ. ಇಷ್ಟೆಲ್ಲ ಋಣದ ಭಾರ ನಮ್ಮ ಮೇಲಿದೆ! ಗುರುಹಿರಿಯರಿಗೂ ಬಂಧುಮಿತ್ರರಿಗೂ ಸೇವೆ ಸಲ್ಲಿಸಿ ಋಣವನ್ನು ತೀರಿಸುತ್ತಿರಬೇಕು. ಆದರೆ ಗತಿಸಿಹೋದ ನಮ್ಮ ಪೂರ್ವಜರಿಗೂ, ನಿಸರ್ಗಕ್ಕೂ ನಾವು ಸಲ್ಲಿಸುವುದಾದರೂ ಏನನ್ನು? ಅದರಲ್ಲೂ ಮಾತಾಪಿತೃಗಳ ದೀಕ್ಷಾಗುರುಗಳ ಹಾಗೂ ಮಾತೃಭೂಮಿಯ ಋಣವನ್ನು ಅದೆಷ್ಟು ತೀರಿಸಿದರೂ ಸಾಲದು! ಮತ್ತದೆಷ್ಟೋ ಜನ್ಮಗಳ ಸ್ಥೂಲವೂ ಸೂಕ್ಷ್ಮವೂ ಆದ ಋಣಗಳ ಭಾರ ನಮ್ಮ ಮೇಲಿರುತ್ತದೆ. ಅವೆಲ್ಲ ತೀರದೆ ನಾವು ಕೃತಕೃತ್ಯರಾಗುವ ಮಾತೇ ಇಲ್ಲ! ಹಾಗಾದರೆ ಇದಕ್ಕೆಲ್ಲ ಉಪಾಯವೇನು? ಯಜ್ಞ! ಯಜ್ಞವನ್ನು ಮಾಡಿದಾಗ, ಅದರ ಫಲವನ್ನು ಪ್ರಸಾದರೂಪದಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡಾಗ ಅದೆಷ್ಟೋ ಋಣಗಳ ಭಾರ ಕುಗ್ಗುತ್ತದೆ. ಅಗತ್ಯವಿದ್ದಾಗ ಎಲ್ಲರಿಂದ ಎಲ್ಲವನ್ನೂ ಬಗೆಬಗೆಯ ಸಹಾಯ ಸಹಕಾರಗಳನ್ನೂ ಪಡೆದ ನಾವು, ದೇವತಾಯಜ್ಞದ ಮೂಲಕ ಬೇಕಾದ್ದನ್ನು ಪಡೆದಾಗ, ಇವರಿಗೆಲ್ಲ ಕೃತಜ್ಞತಾಭಾವವನ್ನು ಸಮರ್ಪಿಸದಿದ್ದರೆ ಅದು ಜಿಪುಣತನವೂ ದ್ರೋಹವೂ ಆಗುತ್ತದೆ. ಪಡೆದದ್ದನ್ನು ಮರಳಿ ಕೊಡದೆ ತಪ್ಪಿಸಿಕೊಂಡು ತಿರುಗುವ ‘ಕಳ್ಳಬುದ್ಧಿ’ಯೂ ಆಗುತ್ತದೆ! ಹಾಗಾಗಿಯೇ ಯಜ್ಞಶೇಷವನ್ನು ಸರ್ವಭೂತಗಳೊಂದಿಗೆ ಹಂಚಿಕೊಳ್ಳಬೇಕು ಎನ್ನುವುದು ನೀತಿ!
ಇಲ್ಲಿ ನಾವು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳೋಣ. ನಾವು ಜೀವನದಲ್ಲಿ ಗುರುಹಿರಿಯರಿಂದ ಬಂಧುಮಿತ್ರರಿಂದ ಸರ್ಕಾರದಿಂದ ಸಾರ್ವಜನಿಕರಿಂದ, ಹಲವೊಮ್ಮೆ ಅಪರಿಚಿತರಿಂದಲೂ ಸೇವೆ ಪಡೆಯುವುದಿಲ್ಲವೆ? ಅನ್ನ – ವಸ್ತ್ರ – ದ್ರವ್ಯ – ವಾಹನ ಸೌಕರ್ಯಗಳನ್ನೂ, ಉಚಿತ ಸೌಲಭ್ಯಗಳನ್ನೂ ಅವಕಾಶಗಳನ್ನೂ ಸಹಾಯ – ಸಹಕಾರಗಳನ್ನೂ ಪಡೆಯುವುದಿಲ್ಲವೆ? ಬಿಟ್ಟಿಯಾಗಿ ಸಿಕ್ಕದ್ದನ್ನೆಲ್ಲ ಬಾಚಿಕೊಂಡು ಸುಖಿಸಿದ ಮೇಲೆಯೂ, ಯಾರಿಗೂ ಏನನ್ನೂ ಪ್ರತಿಯಾಗಿ ಅರ್ಪಿಸದ ದುರ್ಬುದ್ಧಿಯು ಜಿಪುಣತನವೂ ಕಳ್ಳತನವೂ ಆಗದೆ? ಹಾಗಾಗಿಯೇ ಎಲ್ಲರೂ ಸರ್ವಜೀವಹಿತದ ಭಾವದಿಂದ ಜೀವಿಸಬೇಕು ಎನ್ನುವುದು ಧರ್ಮ. ‘ನಾನು; ನನ್ನ ಬದುಕು; ನನ್ನ ಇಷ್ಟ; ನನಗೆ ಸಿಕ್ಕಷ್ಟು ಸಿಗಲಿ; ನಾನೇಕೆ ವಾಪಸ್ಸು ಕೊಡಬೇಕು?’ ಎಂಬ ಭಾವವು ಸಂಕುಚಿತತೆಯಷ್ಟೇ ಅಲ್ಲ. ಅದು ನಾವು ನಮ್ಮ ಸಹಮಾನವರಿಗೆ ನಿಸರ್ಗಕ್ಕೆ ಜೀವನಕ್ಕೆ ಮಾಡುವ ದ್ರೋಹವೇ ಸರಿ.
ಸಹಬಾಳ್ವೆಯೇ ನೀತಿಯಾಗಿರುವ ಈ ಭೂಮಿಯ ಮೇಲೆ, ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ’ ಬದುಕುವುದೇ ನೀತಿ. ಇದೇ ಸನಾತನಧರ್ಮದ ದಿಗ್ದರ್ಶನ.
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ