ಮುಕ್ಕು ಚಿಕ್ಕಿಯ ಕಾಳು

ಮುಕ್ಕು ಚಿಕ್ಕಿಯ ಕಾಳು (ಕಾದಂಬರಿ)

ಜವಾರಿ ಭಾಷೆ ಬಿತ್ತಿ ಗಟ್ಟಿ ಕಾಳ ಫಸಲು
ಸಿಂಧು ರಾವ್ ಟಿ.

ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು
ಮುತ್ತು ರತುನವ ಬಿತ್ತಿ ಮಾಡದಿರು ಹೊಲ ಹಾಳು
ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ ದೇವನುಡಿ ನುಡಿವಂತೆ ಮಾಡು ಮೆಚ್ಚಿ – ಬೇಂದ್ರೆ

ಈ ಕವಿತೆಯ ಸೊಲ್ಲಿನಿಂದ ಶೀರ್ಷಿಕೆಯನ್ನು ಆರಿಸಿಕೊಂಡೆ ಎಂದು ಲೇಖಕಿ ಜಯಲಕ್ಷ್ಮಿ ಪಾಟೀಲ್ ವಿವರಿಸಿದ್ದರು. ಕಾದಂಬರಿಯನ್ನು ಓದಿ ಮುಗಿಸಿದಾಗ ಬೇಂದ್ರೆಯವರ ಈ ಕವಿತೆ ಎಷ್ಟು ಚೊಲೊದಾಗಿ ಹೊಂದುತ್ತದೆ ಎಂದೆನ್ನಿಸಿತು. ಸೀಳ್ದುಟಿಯ ಹುಡುಗ ಗಟ್ಟಿ ಕಲವಿದನಾಗಿ ರೂಪುಗೊಂಡ ಪರಿಯನ್ನು ಬಿಜಾಪುರದ ಜವಾರಿ ಭಾಷೆಯಲ್ಲಿ ಆಪ್ತವಾಗಿ ಕಾದಂಬರಿಯಲ್ಲಿ ಜಯಲಕ್ಷ್ಮಿ ನೇಯ್ದಿದ್ದಾರೆ. ಭಾವತೀವ್ರ ಸನ್ನಿವೇಶಗಳಿಂದ ಕಟ್ಟಲಾದ ಈ ಕಾದಂಬರಿ ಓದುಗರನ್ನು ತನ್ನ ಜೊತೆಗೊತೆಗೇ ಅಳಿಸಿ ನಗಿಸುತ್ತದೆ. ಕಥೆಯೆಂದರೆ ಕಾದಂಬರಿಯೆಂದರೆ ಈ ಸೂತ್ರಗಳನ್ನು ಅನುಸರಿಸಿ ಬರೆಯಿರಿ ಎಂದು ಎಲ್ಲರೂ ಬರೆಬರೆದು ಮುದ್ರಿಸುತ್ತಿರುವ ಮುದ್ರಣ ಸುಲಭವಾದ ಈ ಹೊತ್ತಿನಲ್ಲಿ ಸಾವಧಾನದಿಂದ ಕಥೆಯೊಂದನ್ನು ಧ್ಯಾನಿಸಿ ಬಿಜಾಪುರದ ಆಡುಭಾಷೆಯ ಶ್ರೀಮಂತಿಕೆಯಲ್ಲಿ ಅದನ್ನು ಸಿಂಗರಿಸಿ, ಅಲ್ಲಿನ ಜನಪದವನ್ನು ನಮ್ಮ ಮನಸ್ಸಿನಂಗಳಕ್ಕೆ ಕರುವೊಂದನ್ನು ತಂದು ಕಟ್ಟಿದ ಹಾಗೆ ಲೇಖಕಿಯ ಬರವಣಿಗೆ ಇದೆ. ಭಾಷೆ, ಅನುಭವ, ಸಂವೇದನಾಶೀಲತೆ, ಗಟ್ಟಿಗಿತ್ತಿ ಹೆಂಗಸರು, ಹೆಂಗರುಳಿನ ಗಂಡಸರು, ಬಿದ್ದವರ ಮೇಲೆ ಆಳಿಗೊಂದು ಕಲ್ಲೆಸವ ಸಮಾಜದ ರೀತಿ, ನಗೆಯಲ್ಲೆ ನೋವುಣುವ ಹೂಮನಸ್ಸಿನ ಮಕ್ಕಳು, ಹುಟ್ಟಿನಿಂದ ಬಂದ ದೇಹಸ್ಥಿತಿಯಿಂದ ಗೇಲಿ ಮಾಡುವ ಮನಸ್ಥಿತಿ, ಅದರಿಂದ ಹರಡುವ ನೊವು, ಆ ನೋವಿನ ರಾಡಿಯಲ್ಲಿ ಅರಳುವ ಕಲೆಯೆಂಬ ಕಮಲ, ನಂತರದ ಪ್ರಪುಲ್ಲಿತ ಬದುಕು, ಎತ್ತರದ ನೆಲೆಯಲ್ಲಿ ನಿಂತಾಗಲೂ ಹತ್ತಿದ ಮೆಟ್ಟಿಲುಗಳನ್ನ, ಏಣಿ ಹುಗಿದ ನೆಲವನ್ನ, ತಂದೆ ತಾಯಿಯರನ್ನು ಕೃತಜ್ಞತೆಯಿಂದ ನೆನೆವ ಹಿರಿತನವನ್ನ ಜಯಲಕ್ಷಿ ಅವರು ಸಮರ್ಥವಾಗಿ ಅರ್ಥಪೂರ್ಣವಾಗಿ ಇಲ್ಲಿ ಚಿತ್ರಿಸಿದ್ದಾರೆ. ತಾಯ ಅಕ್ಕರೆ, ಕಳವಳ, ತನ್ನ ಮಗುವನ್ನ ಎತ್ತಿ ನಿಲ್ಲಿಸಬೇಕೆನ್ನುವ ಹಟ, ಮತ್ತು ಅದಕ್ಕೆ ಮಗು ಸ್ಪಂದಿಸಿದ ಪರಿ ಇವುಗಳ ಒಂದು ಸೈಕ್ಲಿಕ್ ಚಿತ್ರಣಕ್ಕೆ, ಅಲ್ಲದೆ ಈ ಪರಿಪೂರ್ಣ ಚಿತ್ರದ ಆಸುಪಾಸಲ್ಲಿ ಹರಡಿಕೊಂಡಿರುವ ಚುಕ್ಕಿ ಚುಕ್ಕಿ ಕೂಡದ, ಕಾಲೆಳೆಯುವ ಸಮಾಜದ ನಿಖರ ಚಿತ್ರಣಕ್ಕೆ ನೀವು ಇದನ್ನು ಓದಬೇಕು. ಮುತ್ತು ರತುನವ ಬಿತ್ತಿದರೆ ಬೆಳೆಯುವುದಿಲ್ಲ. ಮುಕ್ಕಾದ ನಿಜವಾದ ಕಾಳು ಕೂಡ ಬಿತ್ತಿದರೆ ಚಿಗಿತು ಫಲವೀಯುವುದು ಎಂಬ ಮಾತಿನ ವಿಶಾಲ ಹರಹು ಇಲ್ಲಿದೆ. ಕಾದಂಬರಿ ತುಸು ವಿಲಂಬಿಸಿದೆ ಎನಿಸಿಯೂ ಎಲ್ಲಿಯೂ ಬೇಸರ ಹುಟ್ಟಿಸದ ಹಾಗಿನ ಅಕ್ಕರಾಸ್ತೆಯಲ್ಲಿ ಬಿಜಾಪುರದ ಭಾಷೆ ಇಲ್ಲಿ ಬಳಕೆಯಾಗಿದೆ. ಸಾಮಾನ್ಯವಾಗಿ ಬೇರೆ ಆಡುಭಾಷೆಗಳನ್ನು ಕೇಳಲು ಚೆನ್ನಾಗಿ ಅನಿಸಿದರೂ ಓದುವುದು ತಾಳ್ಮೆ ಬೇಡುತ್ತದೆ. ಹಾಗನಿಸದ ಹಾಗೆ ಇಲ್ಲಿ ಲೇಖಕಿ ಮಾಂತ್ರಿಕತೆ ತುಂಬಿದ್ದಾರೆ. ಮೊದಲ ಕಾದಂಬರಿಯ ತಾಳ್ಮೆ ಅಚ್ಚುಕಟ್ಟುತನ ಎರಡೂ ನನಗೆ ಇಷ್ಟವಾಯಿತು. ನೀಳ್ಗತೆಯನ್ನು ಲಂಬಿಸಿ ಕಾದಂಬರಿಯಾಗಿಸುವುದು ಸುಲಭವಲ್ಲ. ಮೊದಲೆ ಈ ನೀಳ್ಗತೆ ಓದಿದ್ದ ನಾನು ಅದೇ ಅಳುಕಿನಲ್ಲಿ ಪುಸ್ತಕ ಓದಲು ತಗೊಂಡೆ. ಅದು ಜಾಳಾಗದೆ ಹಾಗೆ ಗಟ್ಟಿ ತೆನೆಯಾಗುವ ಹಾಗೆ ಮಾಡಬೇಕಾದ ಜವಾಬ್ದಾರಿಯನ್ನು ಲೇಖಕಿ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ. ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿದ ಅನುಭವ ಪಡೆಯಲು ಓದಲೇಬೇಕಾದ ಪುಸ್ತಕಗಳಲ್ಲಿ ಇದು ಒಂದು. ಅಪಾರ ಸಾಹಿತ್ಯ ಪ್ರೀತಿಯ ಮತ್ತು ಸಾಮಾಜಿಕ ಜವಾಬ್ದಾರಿಯಿರುವ ಜಯಲಕ್ಷ್ಮಿ ಪಾಟೀಲರಿಂದ ನಮ್ಮ ಸಮಕಾಲೀನ ಸಮಸ್ಯೆಗಳ ಕುರಿತಾದ ವಿಭಿನ್ನ ಕ್ಯಾನ್ವಾಸುಗಳ ಕಾದಂಬರಿಗಳ ನಿರೀಕ್ಷೆ ನನ್ನದು.

 

ಮುಕ್ಕು ಚಿಕ್ಕಿಯ ಕಾಳು (ಕಾದಂಬರಿ)
ಲೇ: ಜಯಲಕ್ಷ್ಮಿ ಪಾಟೀಲ್
ಪ್ರ: ಅಂಕಿತ ಪ್ರಕಾಶನ, ಬೆಂಗಳೂರು

ಕೃಪೆ : ಹೊಸದಿಗಂತ

Leave a Reply