“ಮುಂಬೈಯಲ್ಲಿ ಕಲಾಕೃತಿ ಪ್ರದರ್ಶನ”

ಮುಂಬೈನ ಆರ್ಟಿಸ್ಟ್ ಸೆಂಟರ್ ಆರ್ಟ್‌ ಗ್ಯಾಲರಿಯಲ್ಲಿ ರೀಸೆಂಟ್‌ ಪರ್ಸೆಕ್ಟಿವ್ಸ್‌(Recent Perspectives) ಶೀರ್ಷಿಕೆಯಲ್ಲಿ ಕರ್ನಾಟಕದ ಕಲಾವಿದರ ಸಮೂಹ ಕಲಾ ಪ್ರದರ್ಶನದಲ್ಲಿ ಹುಬ್ಬಳ್ಳಿ–ಧಾರವಾಡದ ಹಿರಿಯ ಕಲಾವಿದರು ಇತ್ತೀಚೆಗೆ ಪ್ರದರ್ಶಿಸಿದ ವಿವಿಧ ಮಾಧ್ಯಮದ ಕಲಾಕೃತಿಗಳು ಕಲಾಸಕ್ತರಿಂದ ಸೈ ಎನಿಸಿಕೊಂಡಿತು.ಹಿರಿಯ ಕಲಾವಿದ ದೇವೇಂದ್ರ ಬಡಿಗೇರ ತಮ್ಮ ವಿಶೇಷ ಸರಣಿಯ ಆಕ್ರಾಲಿಕ್ ವರ್ಣ ಮಾಧ್ಯಮ ಬಳಸಿಕೊಂಡು ಭಾರತೀಯ ಪೌರಾಣಿಕ ಕಥಾ ಹಿನ್ನೆಲೆಯ ನಳ ದಮಯಂತಿ ಕಥಾ ವಸ್ತು ಮಾಲಿಕೆಯನ್ನು ಸೂಕ್ಷ್ಮ ವರ್ಣಗಾರಿಕೆ ವರ್ಣ ಸಂಯೋಜನೆಯ ದೃಶ್ಯ ಕಲ್ಪನೆಯಲ್ಲಿ ಚಿತ್ರಿಸಿದ್ದಾರೆ. ವರ್ಣ ಸೌಂದರ್ಯದ ಸಂಯೋಜನೆ ಆಕೃತಿಯ ರೂಪ, ಕಲಾ ವರ್ಣ ತಾಂತ್ರಿಕತೆಯಲ್ಲಿ ಹೇಳಿರುವ ಇವರ ಈ ಸರಣಿಯ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತವೆ. ಈ ಸರಣಿಯ ಕಲಾ ಕೃತಿಗಳೊಂದಿಗೆ ಕೃಷ್ಣನ ಲೀಲೆ, ಬುಡಕಟ್ಟು ಜನಾಂಗದವರ ನೃತ್ಯ, ಜನಪದಿ ಅಲೆಮಾರಿಗಳ ನೃತ್ಯ ಸೇರಿದಂತೆ ಇನ್ನು ಹಲವು ಕಲಾಕೃತಿಗಳು ಪ್ರದರ್ಶನದಲ್ಲಿದ್ದವು.ಕಲಾಕೃತಿಯೊಂದರಲ್ಲಿ ಆಕೃತಿಯ ರೂಪ, ರೇಖೆಗಳ ಲಾಲಿತ್ಯ ಸೌಂದರ್ಯ ವರ್ಣ ಸಂಯೋಜನೆಯಂತಹ ಕಲಾಕೃತಿಯೊಂದೇ ಅಲ್ಲದೆ ಕೇವಲ ಕಲಾಕೃತಿಯಲ್ಲಿ ಬಣ್ಣಗಳ ಮೇಳದಿಂದಲೂ ಒಂದು ಕಲಾಕೃತಿಗೆ ಕಲಾ ಜೀವ ತುಂಬಬಹುದು ಎನ್ನುವಂತಹ ಕಲಾಕೃತಿಗಳನ್ನು ಶಿವಾನಂದ ಪತ್ತಾರ ಅವರು ತಾವು ಸೃಷ್ಟಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿರುವ ಇವರು ಎಲಿಮೆಂಟ್ಸ್ ಶೀರ್ಷಿಕೆಯ ಅಕ್ರಾಲಿಕ್ ವರ್ಣ ಮಾಧ್ಯಮದ ಒಂದೇ ಸರಣಿಯ ಕಲಾಕೃತಿಗಳು ಅಮೂರ್ತ ರೂಪದಲ್ಲಿಯ ಆಕೃತಿ, ವಿಶಾಲವಾದ ಸೌಮ್ಯ ವರ್ಣ ಸಂಯೋಜನೆ, ಅಲ್ಲಲ್ಲಿ ವರ್ಣ ತಂತ್ರಗಾರಿಕೆ, ಕುಂಚದ ಸ್ಪರ್ಶ, ಮೈವಳಿಕೆಯ ರೂಪ ಅನನ್ಯವಾಗಿದೆ. ಒಟ್ಟಾರೆ ಎಲ್ಲ ಕಲಾಕೃತಿಗಳೂ ಪೈಪೋಟಿ ನೀಡುವ ರೀತಿಯಲ್ಲಿದ್ದವು.ಕಪ್ಪು ವರ್ಣ ಶಾಯಿ (ಪೆನ್ ಆಂಡ್ ಇಂಕ್) ಹಾಗೂ ಗ್ರಾಫಿಕ್ ಮುದ್ರಣ ಕಲಾಕೃತಿಗಳನ್ನು ರಚಿಸುವಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಧಾರವಾಡದ ಕಲಾವಿದರು ಜೆ.ಎಸ್.ಎಸ್.ಹಾಲಭಾವಿ ಸ್ಕೂಲ್‌ ಆಫ್ ಆರ್ಟ್‌ನಲ್ಲಿ ಉಪನ್ಯಾಸಕರಾಗಿರುವ ಶಶಿಧರ ಲೋಹಾರ ಅವರು ಸೌರಂಡಿಂಗ್ ಶೀರ್ಷಿಕೆಯಲ್ಲಿ ಕಪ್ಪು ಶಾಯಿಯಿಂದ ರಚಿಸಿದ ವಿವಿಧ ಕಲಾಕೃತಿಗಳನ್ನು ಪ್ರದರ್ಶಸಿದ್ದರು. ಅಮೂರ್ತ ಕಲ್ಪನೆಯ ದೃಶ್ಯದಲ್ಲಿ ಮನೆ ಆಫೀಸ್ ಒಂದರ ಒಳ ಆವರಣದಲ್ಲಿ ಕಂಡುಬರುವ ವಿವಿಧ ಪೀಠೋಪಕರಣಗಳು, ಕಿಟಕಿಯ ಹೊರ ನೋಟದಲ್ಲಿಯ ನಿಸರ್ಗ ಸೌಂದರ್ಯದ ಸೊಬಗು, ಒಳ ಮತ್ತು ಹೊರ ಆವರಣದ ನೆರಳು, ಬೆಳಕು ಬೃಹತ್ ಎತ್ತರದ ಅಣಬೆ(ಆಡು ಭಾಷೆಯಲ್ಲಿ ಕರೆಯಲ್ಪಡುವ ನಾಯಿ ಕೊಡೆ)ಯನ್ನು ಸಂಯೋಜಿಸಿದ್ದಾರೆ. ಒಟ್ಟಾರೆ ರೇಖೆಗಳಲ್ಲಿಯೇ ನೆರಳು ಬೆಳಕಿನ ಸಂಯೋಜನೆ ಉತ್ತಮವಾಗಿ ಮೂಡಿಬಂದಿದೆ.ಭೀಮರಾವ್ ಬಡಿಗೇರ ಅವರು ಆಕ್ರಾಲಿಕ್ ವರ್ಣ ಮಾಧ್ಯಮವನ್ನು ಬಳಸಿಕೊಂಡು ನಿಸರ್ಗ ದೃಶ್ಯದ ವೈಭವನ್ನು ಕ್ಯಾನ್ವಾಸ್ ಮೇಲೆ ಅರಳಿಸಿದ್ದಾರೆ. ಹಿಮಾಲಯದ ಪರ್ವತಗಳ ನಡುವೆ ನೀರು ಝರಿಗಳ ಹಾಗೆ ಹರಿದು ಬರುತ್ತಿದ್ದು ಬಂಡೆಗಳ ನೈಜತೆ ನೀಲ ಆಕಾಶ ಶ್ವೇತ ವರ್ಣದ ಹಿಮದ ರಾಶಿ ನೋಡುವುದೇ ಒಂದು ಸೊಗಸು. ಅದರಲ್ಲಿ ರಮ್ಯತೆ ಕಾಣಿಸುತ್ತದೆ. ಈ ಸರಣಿಯ ಹಲವು ಕಲಾಕೃತಿಗಳು ಪ್ರದರ್ಶನದಲ್ಲಿದ್ದವು.

courtsey:prajavani.net

https://www.prajavani.net/artculture/art/art-exhibition-mumbai-647422.html

Leave a Reply