ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು
ಹನ್ನೆರಡನೆಯ ಶತಮಾನದ ವಚನಕಾರರು ಬರೆದರು
ನಡೆದಡೆ
ನಡೆಗೆಟ್ಟ ನಡೆಯ ನಡೆವುದಯ್ಯ
ನುಡಿದಡೆ
ನುಡಿಗೆಟ್ಟ ನುಡಿಯ ನುಡಿವುದಯ್ಯ
ಒಡಲ ಹಿಡಿದಡೆ
ಹಿಡಿಯದೆ ಹಿಡಿವುದಯ್ಯ
ಕೂಡುವೆಡೆ
ಕೇಡಿಲ್ಲದೆ ಕೂಟವ ಕೂಡುವುದಯ್ಯ
ಆಮೇಲೆ ಬಂದ ದಾಸರು ಬರೆದರು;
ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿ ಎನಿಸಿ
ಭಿನ್ನವಿಲ್ಲದೆ ಅರ್ಧದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ
ಇದೇ ಸುಮಾರಿಗೆ ಬಂದ ಕುಮಾರವ್ಯಾಸ ಬರೆದ;
ಹಿರಿಯರಿಲ್ಲದ ಸಭೆ ಮನುಷ್ಯರ
ನೆರವಿಯದು ಸಭೆಯಲ್ಲ ಮೂರ್ಖರು
ಹಿರಿಯರಲ್ಲ ಯಥಾರ್ಥಭಾಷಣ ಭೀತ ಚೇತನರು
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಸ್ತ್ರೀಮತವನು
ತ್ತರಿಸಲಾಗದೆ ಧರ್ಮಶಾಸ್ತ್ರದೊಳೆಂದಳಿಂದುಮುಖಿ
ಇಪ್ಪತ್ತೊಂದನೆಯ ಶತಮಾನದ ಕವಿ ಬರೆದ;
ಶರ್ಯಣಾವ್ಗಿರಿಶ್ರೇಣಿಯನು ಗುರಿಯಿಟ್ಟು
ತುರ್ವಶರ ರಾಜ್ಯದಿಂದೀಚೆ ಭೂಸಂಚಾರ
ಮುಂಬರಿಯುತಾನವರ ರಾಜ್ಯದೊಳು ಹಾಯ್ದಿರಲು
ಮುನ್ನಡೆದ ವಿಶ್ವರಥನವರಿವರ ಕೇಳಿ.
ಮರುವೃಧಾ-ಅಸಿಕ್ನೀನದಿಗಳೊಂದಾಗುತ್ತ
ವಿತಸ್ತೆಯ ಕೂಡುತೊಲಿಯುವಲ್ಲಿ ಸಿಂಧುವಿಗೆ
ಆನವರಿದ್ದರಾ…
ಮೊನ್ನೆ ಮೊನ್ನೆ ರೇಡಿಯೋದಲ್ಲಿ ಯಾರೋ ಅನ್ನುತ್ತಿದ್ದರು;
ಮಧ್ಯಾಹ್ನದ ವಿರಾಮ
ಕರ್ಣಗಳಿಗೆ ಸಂತೋಷ
ನಿಜಕ್ಕೂ ಕನ್ನಡ ಎಷ್ಟು ಕ್ಲಿಷ್ಟವಾಗುತ್ತಾ ಬಂದಿದೆ? ಸುಲಿದ ಬಾಳೆಯ ಹಣ್ಣಿನಂದದಿ ಇದ್ದ ಭಾಷೆ ಹೇಗಾಗಿಬಿಟ್ಟಿದೆ?
ಆಡದಿದ್ದರೆ ಆಡದೇ ಉಳಿದರು ಎಂಬ ಅಂಕೆ. ಆಡಿದರೆ ಅದು ಕನ್ನಡವೇ ಎಂಬ ಶಂಕೆ. ರುಂಡವೊಂದು ಕಡೆ ಮುಂಡವೊಂದು ಕಡೆ ಮದುವೆಯಾಗುವುದು ಯಾವ ಕಡೆ ಎಂದು ಸರಳವಾಗಿ ಕೇಳಿದ ಮೊನ್ನೆ ಮೊನ್ನೆಯ ಸಿನಿಮಾ ಹಾಡುಗಳು ಕೂಡ ಇವತ್ತಿಲ್ಲ. ಇವತ್ತು ಅದೇನು ಹಾಡುತ್ತಾರೋ ಗೊತ್ತಾಗುವುದಿಲ್ಲ. ಕನ್ನಡ ಬಲ್ಲ ಹಂಸಲೇಖ ಹಿನ್ನೆಲೆಗೆ ಸರಿದಿದ್ದಾರೆ.
*****
ಇದನ್ನೆಲ್ಲ ನೋಡುತ್ತಿದ್ದರೆ ನೆನಪಾಗುವುದು ಲಂಕೇಶರು ಅನುವಾದಿಸಿದ ಬೋಧಿಲೇರನ `ಪಾಪದ ಹೂವುಗಳು’. ಚಾರ್ಸ ಬೋಧಿಲೇರ್ ಕಾವ್ಯವನ್ನು ಲಂಕೇಶರು ಎಷ್ಟು ನವಿರಾಗಿ ಅನುವಾದಿಸಿದ್ದರು?;
ಅತ್ಯಂತ ಉಲ್ಲಾಸದ ಆಕೆಗೆ
ನಿನ್ನ ಶಿರ, ನಿನ್ನ ಚಲನೆ, ನಿನ್ನ ನಡಿಗೆ ಎಲ್ಲವೂ ಮೋಹಕ ಹೊಲದಂತಿದೆ. ಸ್ವಚ್ಛ ಆಕಾಶದಲ್ಲಿ ತಣ್ಣನೆ ಗಾಳಿಯ ಹಾಗೆ ನಗೆ ನಿನ್ನ ಮುಖದ ಮೇಲೆ ಲಾಸ್ಯವಾಡುತ್ತಿದೆ.
ಬೇಸರದಿಂದ ಮುಖ ಸಿಂಡರಿಸಿಕೊಂಡ ದಾರಿಹೋಕ ನಿನ್ನ ಮೈ, ಭುಜಕ್ಕೆ ಸೋಕಿದೊಡನೆ ನಿನ್ನ ದೇಹದಿಂದ ಉಕ್ಕುವ ಆರೋಗ್ಯದಿಂದ ಉತ್ಸಾಹಗೊಳ್ಳುತ್ತಾನೆ.
ನನ್ನ ಜಡದೇಹವನ್ನು ನಾನು ಕೆಲವೊಮ್ಮೆ ಸುಂದರತೋಟದ ನಡುವೆ ಎಳೆದುಕೊಂಡು ಹೋಗುವಾಗ ಅಲ್ಲಿಯ ಸೂರ್ಯಪ್ರಕಾಶ ನನ್ನ ಚೇತನವನ್ನು ವ್ಯಂಗ್ಯದಿಂದ ಹೇಗೆ ಸೀಳಿತೆಂದರೆ, ತೋಟದ ವಸಂತಕಾಲ ಮತ್ತು ಶ್ರೀಮಂತ ಹಸಿರು ಹೇಗೆ ಅಣಕಿಸಿತೆಂದರೆ, ಪ್ರಕೃತಿಯ ಭಂಡತನವನ್ನು ದ್ವೇಷಿಸಿ ಶಿಕ್ಷೆಗೆ ಗುರಿಪಡಿಸಿದ್ದೇನೆ.
ಹಾಗೆಯೇ ಒಂದಾನೊಂದು ರಾತ್ರಿ, ನನ್ನ ಕಾಮ ಕೆರಳಿದ ಘಳಿಗೆ, ಕಳ್ಳನ ಹಾಗೆ ಮೆಲ್ಲಗೆ ನಿನ್ನ ದೇಹದ ಸಿರಿವಂತಿಕೆಯತ್ತ ಸದ್ದಿಲ್ಲದೆ ತೆವಳಿ ನಿನ್ನ ದೇಹದ ಅನರ್ಘ್ಯ ಮಾಂಸಖಂಡವನ್ನು ದಂಡಿಸಬೇಕು. ಚಕಿತಗೊಂಡ ನಿನ್ನಲ್ಲಿ ಆಳವಾದ ಗಾಯಮಾಡಬೇಕು. ಆಹಾ, ಹಷೋತ್ಕಟತೆಯಿಂದ ನನ್ನನ್ನು ಕುರುಡನನ್ನಾಗಿಸುವ ನಿನ್ನ ಶುಭ್ರ ತುಟಿಗಳಲ್ಲಿ ನನ್ನ ವಿಷವನ್ನು ಹಾಕಬೇಕು. ನನ್ನ ತಂಗಿ.
****
ಲಂಕೇಶರು ಬೋದಿಲೇರನ ಪುಟ್ಟ ಚಿತ್ರ ಕೊಡುತ್ತಾರೆ;
ಮೋಜುಗಾರನಾದ ಬೋದಿಲೇರ್, ನೀಳವಾದ ಮೂಗಿನ, ಹೊಳೆವ ಕಣ್ಣುಗಳ, ತುಂಬುಗೂದಲ, ಯೌವನದಿಂದ ತುಳುಕುವ ತರುಣನಾಗಿದ್ದ ಬೋದಿಲೇರ್; ಉಲ್ಲಾಸ, ಸಂಭ್ರಮ ಅವನ ಉಸಿರಾಯಿತು. ಅತ್ಯುತ್ತಮ ಬಟ್ಟೆ ಬೇಕಾಗಿತ್ತವನಿಗೆ; ಮೊದಲನೆಯ ದರ್ಜೆಯ ಚಿತ್ರಗಳಾಗಬೇಕು; ಶ್ರೇಷ್ಠ ಸಂಗೀತವಾಗಬೇಕು. ತಾಯಿಗೆ ಇವನ ಬದುಕಿನ ಶೈಲಿ ಕಂಡು ದಿಗಿಲಾಗಿ ಹಿತವಚನ ಹೇಳಿದಳು. ತಾಯಿಯ ಬಗ್ಗೆ ಆತನಿಗೆ ಪ್ರೀತಿಯಿತ್ತು. ಆದರೆ ಸ್ನೇಹಿತರ ಬಗ್ಗೆ ಅದಕ್ಕಿಂತ ಹೆಚ್ಚು ವಿಶ್ವಾಸವಿತ್ತು.
ಉದಾರನಾಗಿದ್ದಜ ಬೋದಿಲೇರ್ ಎಂದೂ ಸ್ನೇಹಿತರಿಂದ ಖರ್ಚು ಮಾಡಿಸುತ್ತಿರಲಿಲ್ಲ. ಹಣವನ್ನು ನೀರಿನಂತೆ ಚೆಲ್ಲುತ್ತಿದ್ದ. ವೇಶ್ಯೆಯರೊಂದಿಗೆ ಚಿನ್ನಾಟ, ಇಡೀ ರಾತ್ರಿಗಳ ಕೇಲಿ. ಅನುಭವದ ಹೊಸ ಬಾಗಿಲುಗಳು ತೆರೆದವು. ಬೋದಿಲೇರನಿಗೆ ಬೇಕಾದದ್ದು ಎಂಥದೂ ಇರಲಿಲ್ಲ. ತರುಣನೊಬ್ಬ ಬಯಸುವ ಎಲ್ಲವೂ ಅವನಿಗಿತ್ತು.’
ಯಾವಾಗಲೂ ಕುಡಿದ ಸ್ಥಿತಿಯಲ್ಲಿರು ಎಂದು ಬೋಧಿಸಿದ ಬೋದಿಲೇರ್. ಕುಡಿಯುವುದು ಏನನ್ನು? ವೈನ್, ಕಾವ್ಯ, ಸಜ್ಜನಿಕೆ -ಯಾವುದಾದರೂ ಸರಿಯೆ. ಕಳ್ಳರಿಗೆ ಮಾತ್ರ ಪೂರ್ಣ ಶ್ರದ್ಧೆ ಸಾಧ್ಯ ಎಂದು ಸಾರಿದ.
*****
ನಮ್ಮ ಕವಿಗಳಲ್ಲಿ ಇಂಥವರು ಕಡಿಮೆ. ದುರಂತವನ್ನು ವೈಫಲ್ಯವನ್ನು ಕಾವ್ಯವಾಗಿಸಿದವರು ಅಷ್ಟಾಗಿ ಸಿಗುವುದಿಲ್ಲ. ಸಾಮಾಜಿಕವಾಗಿ ರಾಜಕೀಯವಾಗಿ ಹಣಿಯಲ್ಪಟ್ಟು ಅತ್ಯಂತ ಅಸಹನೀಯ ಸ್ಥಿತಿಯಲ್ಲಿ ಕಾವ್ಯ ಬರೆದವರೂ ಕೂಡ ಅಷ್ಟಾಗಿ ಇಲ್ಲ. ನಮ್ಮ ಲೇಖಕರಲ್ಲಿ ಬಹಳಷ್ಟು ಮಂದಿ ಸುಖಪುರುಷರು. ಅನೇಕರಿಗೆ ಅವರ ಅರ್ಹತೆ ಮತ್ತು ಯೋಗ್ಯತೆಯಿಂದ ಹೆಚ್ಚಿನ ಮನ್ನಣೆ ಮತ್ತು ಸಂಪತ್ತು ಸಿಕ್ಕಿದೆ.
ಆದರೆ ಯುರೋಪಿನ ಬಹುತೇಕ ಲೇಖಕರು ಬದುಕನ್ನೇ ಪಣವಾಗಿಟ್ಟು ಬರೆದವರು. ಸರ್ವಾಧಿಕಾರದಿಂದ ತಪ್ಪಿಸಿಕೊಂಡು ರಾಜ್ಯಭ್ರಷ್ಟರಾಗಿ ಭೂಗತರಾಗಿ ಬರೆಯುತ್ತಾ ಹೋದವರು. ಅವರಲ್ಲಿ ಅನೇಕರು ಬರೆದದ್ದು ಜನಕ್ಕೆ ತಲುಪಿದ್ದು ಅವರು ತೀರಿಕೊಂಡ ನಂತರವೇ. ಆ ಮಟ್ಟದ ಕಷ್ಟದಿಂದ ಬರೆದವರು ನಮ್ಮಲ್ಲಿ ಸಿಗುವುದಿಲ್ಲ. ನಮ್ಮಲ್ಲಿ ಬಡತನ ಬಿಟ್ಟರೆ ಬೇರೆ ಕಷ್ಟಗಳೇ ಇರಲಿಲ್ಲ. ಅರಸೊತ್ತಿಗೆ ಯಾವತ್ತೂ ಲೇಖಕರನ್ನು ಕಾಡಲಿಲ್ಲ.