ಮರೆತ ಭೂಗೋಳ

ಮರೆತ ಭೂಗೋಳ

‘ಸೂರ್ಯನು ಮುಳುಗಿದನೆಂದು ಅಳುತ್ತ ಕುಳಿತರೆ ತಾರೆಗಳನ್ನು ನೋಡುವ ಭಾಗ್ಯವೂ ನಿನಗೆ ಇಲ್ಲವಾಗುತ್ತದೆ’ -ಹಿಂದೊಮ್ಮೆ ಎಲ್ಲಿಯೋ ಓದಿದ ಮಾತು ಮನಸ್ಸನ್ನು ಆವರಿಸಿತ್ತು. ಆದರೆ ಮನಸ್ಸು ಅದೇ ನಿರಾಶೆ ಮತ್ತು ನಿರಾಸಕ್ತಿಯ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದೆ. ಒಮ್ಮೊಮ್ಮೆ ನನ್ನ ಅಸಹಾಯಕತೆಯ ಬಗೆಗೆ ನನಗೇ ಜಿಗುಪ್ಸೆಯುಂಟಾಗುತ್ತದೆ. ಈಗಲೂ ಸಹ ಪಕ್ಕದಲ್ಲಿರುವ ವಿನೀತಾ ಯಾರೂ ಬಯಸುವಂತಹ ಆದರ್ಶ ಪತ್ನಿ, ತನ್ನ ಮುದ್ದು ಮಾತು ಹಾಗೂ ರೂಪದಿಂದ ಇಡೀ ವಠಾರದಲ್ಲಿಯೇ ಅಚ್ಚುಮೆಚ್ಚಾಗಿರುವ ಅರ್ಪಿತಾ ನನ್ನ ಮುದ್ದುಮಗಳು. ಆದರೂ ನಾನು ಎಷ್ಟೋ ಬಾರಿ ಇವರೆಲ್ಲರನ್ನು ಮರೆತು ಕಾಲ ಹಿಂದೆ ಓಡಿದರೆ ಅಥವಾ ಹೀಗೇ ಸ್ತಬ್ಧವಾದರೆ ಎಂದು ಅಸಂಬದ್ಧವಾಗಿ ಯೋಚಿಸುತ್ತ ಭಾವನೆಗಳೊಂದಿಗೆ ಕಳೆದುಹೋಗುವುದು ಯಾಕೆ? ತಿಳಿಯುವುದಿಲ್ಲ. ‘ಇರುವುದೆಲ್ಲವ ಬಿಟ್ಟು ಇಲ್ಲದುದೆಡೆಗೆ ತುಡಿಯುವುದೇ ಜೀವನ’ ಎನ್ನುವುದು ಬಹುಶಃ ಇದಕ್ಕೇ ಏನೋ?
‘ಅಪ್ಪಾ ಎಕ್ಸಿಬಿಶನ್ ಬಂತು’ ಉತ್ಸಾಹದಿಂದ ಕೂಗಿದ ಅರ್ಪಿತಾಳ ಮಾತು ನನ್ನನ್ನು ತಡೆದು ನಿಲ್ಲಿಸಿತು. ಟಿಕೇಟಿನ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಬಹುರ್ಶ ಕೊನೆಯ ಎರಡೇ ದಿನಗಳಾದುದರಿಂದಲೋ ಏನೋ? ಕಳೆದ ಹದಿನೈದು ದಿನಗಳಿಂದಲೂ ಬರಬೇಕೆಂದು ಹೇಳುತ್ತಿದ್ದಳು ವಿನೀತಾ. ಆದರೆ ‘ಜೀವನೋತ್ಸಾಹ’ ಎಂಬ ಶಬ್ದವನ್ನೇ ಮರೆತಂತಿದ್ದ ನಾನು ಅವಳ ಮಾತನ್ನೇ ಮರೆತಿದ್ದೆ. ಇಂದು ನಾನು ಆಫೀಸಿನಿಂದ ಹಿಂತಿರುಗುವ ವೇಳೆಗೆ ತಾನೊಬ್ಬಳೇ ಮಗುವಿನೊಂದಿಗೆ ಹೊರಟು ನಿಂತಿದ್ದಳು. ನನ್ನ ತಿಂಡಿ, ಚಹಾ ಎಲ್ಲ ಟೇಬಲ್ ಮೇಲೆ ತಯಾರಾಗಿ ಕುಳಿತಿತ್ತು. ನನಗೆ ತಿಳಿಸಿ ಹೋಗಬೇಕೆಂದು ಕಾಯುತ್ತಿದ್ದರವರು. ವಿನೀತಾ ತುಂಬ ಸೂಕ್ಷ್ಮ ಸ್ವಭಾವದವಳಷ್ಟೇ ಅಲ್ಲ, ಬಲು ಸ್ವಾಭಿಮಾನಿ ಸಹ. ಯಾವುದನ್ನೇ ಆಗಲೀ ಮತ್ತೆ ಮತ್ತೆ ಜ್ಞಾಪಿಸುವ ಜಾಯಮಾನ ಅವಳದಲ್ಲ. ನಾನೇ ಕೀಳರಿಮೆಯಿಂದ ಕುಗ್ಗಿಹೋದೆ. ಇಲ್ಲದ ಉತ್ಸಾಹವನ್ನು ನಟಿಸುತ್ತ ನಾನೂ ಬೇಗ ತಯಾರಾಗಿ ಬರುವುದಾಗಿ ಹೇಳಿಬಂದೆ. ಆಗಲೂ ಅವಳು ಹೇಳಿದ್ದಳು- ‘ನೋಡ್ರಿ ಆರಾಮಾಗಿ ನಡೆದುಕೊಂಡು ಹೋಗಿ ಬರಬಹುದು; ನಿಮಗ ದಣಿವಾಗಿದ್ರ ಮನ್ಯಾಗ ವಿಶ್ರಾಂತಿ ತಗೋಬಹುದು, ನಾನು ಬೇಕಾದ್ರ ಅರ್ಪಿತಾನ್ನ ಕರಕೊಂಡು ಹೋಗಿಬರ್ತೀನಿ, ನಂಗೇನೂ ಸಮಸ್ಯಾ ಇಲ್ಲ’ ಆಗ ಇಲ್ಲದ ಉತ್ಸಾಹ ತೋರಿಸಿ ಬಂದಾಗಿತ್ತು. ಈಗ ಈ ಗದ್ದಲ ಎತ್ತರದ ಧ್ವನಿಗಳ ನಡುವೆ ಐದೇ ನಿಮಿಷಗಳಲ್ಲಿ ತಲೆ ನೋಯುವಂತೆ ಭಾಸವಾಯಿತು.
“ಹೆಂಗಸರ ಕ್ಯೂ ಸಣ್ಣದದ. ನಾನ ಹೋಗಿ ಟಿಕೇಟು ತರ್ತೀನಿ. ಅರ್ಪಿತಾನ್ನ ನೋಡ್ತಿರಿ” ಎಂದು ವಿನೀತಾ ಕ್ಯೂ ಸೇರಿದಳು. ಅಲ್ಲಿಯೇ ಹುಲ್ಲಿನ ಮೇಲೆ ಕುಳಿತೆವು. ಅರ್ಪಿತಾಳ ನೂರೊಂದು ಪ್ರಶ್ನೆಗಳಿಗೆ ಯಾಂತ್ರಿಕವಾಗಿ ಉತ್ತರಿಸುತ್ತಿದ್ದೆ. ತಟ್ಟನೇ ಕಣ್ಣು ಒಂದೆಡೆ ಸ್ತಬ್ಧವಾದವು. ನಂಬಲಾಗುತ್ತಿಲ್ಲ. “ಸುನೀತಾ” ನನಗರಿಯದೇ ಉದ್ಗರಿಸಿದೆ. ಅರ್ಪಿತಾಳ ಕೈ ಹಿಡಿದೆಳೆಯುತ್ತ ಧಾವಿಸಿದೆ.
“ಏಯ್ ಚೀನೀ….” ಸಂತೋಷ ಉದ್ವೇಗದಿಂದ ಚೀರಿದೆ. ತಟ್ಟನೇ ತಿರುಗಿದಳವಳು.
ಅದೇ ಸಣ್ಣ ಆದರೆ ತೀಕ್ಷ್ಣವಾದ ಕಣ್ಣುಗಳು ನನ್ನನ್ನೇ ದಿಟ್ಟಿಸಿದವು. ಆ ಸಣ್ಣ ಕಣ್ಣಗಳಿಗಾಗಿಯೇ ಅವಳನ್ನು “ಚೀನೀ” ಎಂದು ಕಾಡುತ್ತಿದ್ದೆ.
ಒಂದೇ ಕ್ಷಣ ಅವಳ ಕಣ್ಣುಗಳಲ್ಲಿ ಆಶ್ಚರ್ಯ, ಸಂತೋಷ, ದಿಗ್ಭ್ರಮೆ ಹಾಗೂ ಖಿನ್ನತೆಗಳು ಒಂದರ ಹಿಂದೊಂದು ಇಣುಕಿದವು.
“ಏ ಚೀನಿ, ಯಾಕ ಗುರ್ತಾ ಸಿಗಲಿಲ್ವಾ? ನೀ ಇಲ್ಲಿ ಯಾವಾಗ ಬಂದೀ? ಅಂದ್ರ ಹುಬ್ಬಳ್ಯಾಗ ಎಷ್ಟು ದಿನದಿಂದ ಇದ್ದೀ?”
ಅಷ್ಟರಲ್ಲಿ ಒಬ್ಬ ವ್ಯಕ್ತಿ ಕೈಯಲ್ಲಿ ಟಿಕೆಟ್ ಹಿಡಿದು ಬಂದ. ಒಮ್ಮೆಲೇ ಬೆಚ್ಚಿದಳು ಅವಳು.
“ನೋಡಿ ಇವರೇ ಬಹುಶಃ ನಿಮಗೆ ತಪ್ಪು ಕಲ್ಪನಾ ಆಗೇದ. ನೀವು ಅಂದ್ಕೊಂಡಿರೋ ವ್ಯಕ್ತಿ ನಾನಲ್ಲ….”
ಮತ್ತೊಂದು ಮಾತಿಗೆ ಅವಕಾಶವೇ ಇಲ್ಲದಂತೆ ಮುಖ ತಿರುಗಿಸಿ ನಡೆದಳಾಕೆ. ನಾನು ನಂಬಲಾರದವನಂತೆ ನಿಂತೇ ಇದ್ದೆ.
ಮುಖ ಗಂಟಿಕ್ಕಿದ ವ್ಯಕ್ತಿ “ಏನಂತ? ಯಾರವರು?” ಎಂದಿದ್ದು ಕೇಳಿಸಿತು.
“ಯಾರೋ ಏನರೀ ಪಾಪ, ನನ್ನ ನೋಡಿ ತಮ್ಮ ಪೈಕೀ ಯಾರೋ ಅಂತ ತಪ್ಪು ತಿಳಿದು ಬಂದು ಮಾತಾಡಿಸಿದ್ರು. ನಾ ಹೇಳಿದೆ ನಿಮಗ ತಪ್ಪು ಕಲ್ಪನಾ ಆಗೇದಂತ” ಅಷ್ಟು ದೂರದಿಂದಲೂ ಅವಳ ಧ್ವನಿ ನಡುಗಿದಂತೆ ಭಾಸವಾಯಿತು ನನಗೆ.
“ತಪ್ಪು ಕಲ್ಪನಾ ಇಲ್ಲಾ ಏನಿಲ್ಲಾ. ಸ್ವಲ್ಪ ಚಂದ ಹೆಂಗಸರನ್ನ ನೋಡಿದ್ರ ಅವರಿಗೆಲ್ಲಾ ಹಿಂಗs ಅನಸ್ತದೇಳು. ಸುಮ್ನ ಏನರ ನೆವಾ ಮಾಡಿ ಮಾತಾಡಿಸೋದು. ಇಂಥಾವ್ರುನ್ನ ಭಾಳ ಮಂದೀ ನೋಡೀನಿ.”
ಆ ಮನುಷ್ಯ ಬೇಕಂತಲೇ ಧ್ವನಿ ಏರಿಸಿ ಹೇಳಿದಾಗ ನನಗೆ ಕಪಾಳಕ್ಕೆ ಬಾರಿಸಿದಂತಾಯಿತು. ಸುನಿತಾಳ ವರ್ತನೆಯಿಂದಲೇ ಅರ್ಧ ನೊಂದಿದ್ದ ನನಗೆ ಈಗಂತೂ ತಲೆಯೇ ತಿರುಗಿದಂತಾಯಿತು. ಅಷ್ಟರಲ್ಲಿ ವಿನೀತಾ ಟಿಕೆಟಿನೊಂದಿಗೆ ಹಿಂದಿರುಗಿದಳು.
ನನ್ನ ಮುಖದಲ್ಲಿಯ ಬದಲಾವಣೆ ಅವಳಿಗೆ ತಿಳಿಯಿತು. “ಯಾಕ ಒಮ್ಮೆಲೇ ಏನಾತು?”
“ಏನಿಲ್ಲ, ಈ ಗದ್ದಲಕ್ಕ ತಲೀ ನೋಯ್ತದ ಅಷ್ಟ”
“ಹಂಗಾದ್ರ ನೀವು ತಿರುಗಿ ಹೋಗಿಬಿಡ್ರಿ. ನಾವೂ ಹಿಂಗs ಒಂದು ಸುತ್ತು ಹೋಗಿ ಬಂದs ಬಿಡ್ತೀವಿ.”
“ಇಲ್ಲ ವಿನೀ, ಈ ತಲಿನೋವು ನನ್ನ ಜನ್ಮಕ್ಕ ಅಂಟಿದ್ದು. ಏನೇನಂತ ಬಿಡ್ಲಿಕ್ಕೆ ಆಗ್ತದ? ನಾನು ಒಳಗ ಒಂದು ಜಾಗಾದಾಗ ಕೂತ್ಕೋತೇನಿ ನೀವು ಆರಾಮಾಗಿ ಎಲ್ಲಾ ನೋಡಿ ಬರೋವರೆಗೂ.”
ಹೆಚ್ಚು ವಾದಿಸದೆ ವಿನೀತಾ ಮಗಳೊಂದಿಗೆ ಹೋದಳು. ಆ ಗದ್ದಲದ ನಡುವೆಯೂ ನನ್ನ ಮನಸ್ಸು ಹಿಂದೆ ಹಾರಿತು.
ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಡಿಗ್ರಿ ಫಸ್ಟ್ ಕ್ಲಾಸಿನಲ್ಲಿ ಮುಗಿಸಿ ವರ್ಷದೊಳಗೇ ಬ್ಯಾಂಕಿನಲ್ಲಿ ನೌಕರಿಯೂ ಸಿಕ್ಕಿದಾಗ ಸ್ವರ್ಗ ಮೂರೇ ಗೇಣು ಎನ್ನಿಸಿತ್ತು. ಸುಮಾ, ಉಷಾ, ರಜನಿ, ಗೀತಾ, ಸುನೀತಾ ಹೀಗೆ ಬಾಲ್ಯಸ್ನೇಹಿತೆಯರ ಪಟ್ಟಿಯೂ ದೊಡ್ಡದಿತ್ತು.
ಒಂದೆರಡು ದಿನಗಳ ರಜೆ ದೊರೆತರೂ ಊರಿಗೆ ಧಾವಿಸುತ್ತಿದ್ದೆ. ಅಪ್ಪ ಒಂದು ಬಾರಿ ಚೇಷ್ಟೆ ಮಾಡಿದ್ದು ಕೇಳಿಸಿತ್ತು ಅವ್ವನ ಮುಂದೆ.
“ನಿನ್ನ ಮಗಂಗ ಕೃಷ್ಣ ಅಂತ ಹೆಸರಿಡಬೇಕಾಗಿತ್ತು ನೋಡು. ಇಪ್ಪತ್ತನಾಲ್ಕು ತಾಸೂ ಆ ಹುಡುಗೀರ ಗುಂಪಿನ್ಯಾಗ ಇರ್ತಾನ.”
ಆಗಲೇ ಮನಸ್ಸು ಪ್ರಾಮಾಣಿಕವಾಗಿ ಯೋಚಿಸಲಾರಂಭಿಸಿತು. ‘ನನ್ನ ಮನಸ್ಸಿನ ಒಳಗ ಮೂಡಿರೋ ಮುಖ ಯಾವುದು’ ಎಂದು ನನ್ನ ಮನಸ್ಸಿನ ವಿಚಾರ ತಿಳಿಯಲು ಸಹಾಯ ಮಾಡಿದ ಅಪ್ಪನಿಗೆ ಮನಸ್ಸಿನಲ್ಲಿಯೇ ಧನ್ಯವಾದ ಹೇಳಿದೆ. ಇನ್ನೂ ಹದಿನೇಳು ಹದಿನೆಂಟು ದಾಟಿರದ ಸುನೀತಾಳಿಗೆ ಈಗಲೇ ಸಲ್ಲದ ವಿಷಯ ತಲೆಯಲ್ಲಿ ತಂದು ಅವಳ ವಿದ್ಯಾಭ್ಯಾಸಕ್ಕೆ ಅಡ್ಡಿಯುಂಟು ಮಾಡುವುದು ಬೇಡವೆಂದು ಸುಮ್ಮನಾದೆ.
ಆದರೆ ಮುಂದಿನ ತಿಂಗಳೇ ಅಪ್ಪ ಬರೆದ ಪತ್ರ ನನ್ನಲ್ಲಿ ಅತೀವ ವೇದನೆಯನ್ನು ತಂದಿತು. ಕೊನೆಯಲ್ಲಿ ಕೇವಲ ಒಂದು ಸಾಮಾನ್ಯ ವಿಷಯವೆಂಬಂತೆ ಬರೆದಿದ್ದರು. ‘ನೀನು ನಿನ್ನ ಬ್ಯಾಂಕಿನಲ್ಲಿಯ ಪರೀಕ್ಷೆಗೆ ಅಭ್ಯಾಸ ಮಾಡುತ್ತಿರುವುದು ಕೇಳಿ ಬಹಳೇ ಸಂತೋಷವಾಯಿತು. ಮತ್ತೆ ಮತ್ತೆ ಊರಿಗೆ ಬಂದು ವೇಳೆ ಹಾಳು ಮಾಡಿಕೊಳ್ಳಬೇಡ. ಬೇಕಾದರೆ ಮುಂದಿನ ತಿಂಗಳು ಸುನೀತಾಳ ಮದುವೆಗೆ ಬರುವೆಯಂತೆ. ಅವರ ಅಜ್ಜ ಹೊರಗಿನ ಹುಡುಗಿಯನ್ನು ಸೊಸೆಯಾಗಿ ತಂದರೆ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆಯಿಲ್ಲವೆಂದು, ಮಗಳಿಗೆ ತುಂಬ ಒತ್ತಾಯ ಮಾಡಿ ಮದುವೆಗೆ ಆಗ್ರಹಪಡಿಸಿದ್ದಾರೆ. ಆ ಹುಡುಗಿಗೂ ಅಷ್ಟು ಮನಸ್ಸಿದ್ದಂತೆ ಕಾಣಲಿಲ್ಲ. ಹಿರಿಯರನ್ನು ವಿರೋಧಿಸಲಾಗದೇ ಸುಮ್ಮನಿದ್ದಾಳೆ ಎಂದು ನಿನ್ನ ತಂಗಿ ಹೇಳುತ್ತಿದ್ದಳು….’ ಇತ್ಯಾದಿ.
ಯಾರಲ್ಲಿಯೂ ಹೇಳದೇ ನಾನು ಮಾಡಿದ ತಪ್ಪಿಗೆ ದಂಡ ತೆರಬೇಕಾಯಿತು ಎಂದರೂ ಮನಸ್ಸು ಕೊರಗುವುದನ್ನು ಬಿಡಲಿಲ್ಲ.
ಮದುವೆಗಂತೂ ಹೋಗಿ ಭಾಗವಹಿಸಲು ಮನಸ್ಸು ಬರಲಿಲ್ಲ. ಒಂದು ವಾರ ಮೊದಲೇ ಊರಿಗೆ ಹೋದೆ.
ಮದುವೆಯ ಮೊದಲಿನ ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಅಂದು ರಾತ್ರಿ ಮಾತು ಮುಗಿಸಿ ಏಳುತ್ತ ಹೇಳಿದೆ.
“ಆಯ್ತು ನಾನಂತೂ ನಾಳೆ ಬೆಳಿಗ್ಗೆ ಹೊಂಟೀನಿ. ಮುಂದಿನ ತಿಂಗಳು ಉತ್ತರ ಭಾರತದ ಯಾವುದೋ ಮೂಲೆಗೆ ಬದಲೀ ಆಗ್ತದ. ನಾವೆಲ್ಲಾ ಮತ್ತ ಎಲ್ಲಿ ಯಾವಾಗ ಭೇಟಿ ಆಗ್ತೀವೋ ಯಾರಿಗ್ಗೊತ್ತು?”
ಬೇಡವೆಂದರೂ ನನ್ನ ಧ್ವನಿ ನಡುಗುತ್ತಿತ್ತು.
ಎಲ್ಲರ ದೃಷ್ಟಿಯೂ ನನ್ನ ಮೇಲೆ ಇದ್ದಿತು.
“ಏಯ್ ಹಂಗ್ಯಾಕೋ ಅಂತೀ…” ರಜನಿ ನುಡಿದಳು.
“ಹೌದವಾ ಈ ಜೀವನಾ ಅನ್ನೋದು ಒಂದು ಪ್ರವಾಸ. ದೊಡ್ಡ ಪ್ರವಾಸ. ಎಷ್ಟೋ ಸ್ಟೇಷನ್, ಎಷ್ಟೋ ಸಹಪ್ರಯಾಣಿಕರು. ಕೆಲವರು ಮತ್ತೆ ಸಿಕ್ಕಬಹುದು, ಕೆಲವರು ಸಿಕ್ಕಲಿಕ್ಕಿಲ್ಲ. ಹೌದಲ್ಲೋ?”
ಈಗ ಸುನೀತಾ ತಿರುಗಿದ್ದಳು.
“ಸದಾ ನೀ ಭೂಗೋಳ ಕಲ್ತೀಯೋ ಇಲ್ಲೋ?”
“ಮೂವತ್ತೈದು ತಗೊಂಡು ಪಾಸಾಗೇನಿ, ಆದ್ರೂ ಕಲ್ತೇನಿ ಯಾಕ?”
“ಆಗದೀ ಬೇಸಿಕ್ ಭೂಗೋಳನ ಗೊತ್ತಿಲ್ಲಲ್ಲ ಮತ್ತ? ಭೂಮಿ ದುಂಡಗದ ಮಾರಾಯ, ಖಂಡಿತವಾಗಲೂ ನಾವು ಮತ್ತೆ ಭೇಟ್ಟಿ ಆಗತೀವಿ.”
ಭಾವುಕತೆಯಲ್ಲಿ ನನ್ನ ದೌರ್ಬಲ್ಯ ಹೊರಬರದಿರಲೆಂದು ಬೇಗನೇ ಹೊರಟೆ. ಆಡಿಟ್ ನೆಪದಿಂದ ಮದುವೆಯನ್ನೂ ತಪ್ಪಿಸಿದೆ.
ಕಾಲದ ವೇಗದಲ್ಲಿ ನೆನಪು ಮಸುಕಾಯಿತು. ವಿನೀತಳೊಂದಿಗೆ ಜೀವನ ತೃಪ್ತಿಕರವಾಗಿಯೇ ಇತ್ತು. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಅತೃಪ್ತಿ ಆಗಾಗ ಕಾರಣವಿಲ್ಲದೆಯೇ ಹೆಡೆಯತ್ತುತ್ತಿತ್ತು.
ಇಂದು ಆಕಸ್ಮಿಕವಾಗಿ ಭೇಟಿಯಾದ ಸುನೀತಾ ನೆನಪನ್ನು ಮರುಕಳಿಸುವಂತೆ ಮಾಡಿದ್ದಳು. ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲದೇ ನಾನೊಬ್ಬ ಸ್ನೇಹಿತನಾಗಿ ಅವಳನ್ನು ಎದುರುಗೊಂಡಿದ್ದೆ. ಆದರೆ ಅವಳ ವರ್ತನೆ ಅನಿರೀಕ್ಷಿತವಾಗಿತ್ತು.
ಅರ್ಪಿತ ಮತ್ತು ವಿನೀತಾ ಹಿಂತಿರುಗಿದಾಗ ಎದ್ದು ಹೊರಟೆವು. ಅವರಿಬ್ಬರಿಗೂ ಐಸ್ ಕ್ರೀಂ ಕೊಡಿಸಿ ನಾನು ನಡೆದುದನ್ನೇ ನೆನಪು ಮಾಡಿಕೊಳ್ಳುತ್ತ ನಿಂತಿದ್ದೆ.
ಗಡಿಬಿಡಿಯಿಂದ ಬಂದ ಸುನೀತಾ “ಸದಾ ಸಾರಿ” ಎಂದು ತಡವರಿಸಿದಳು. “ಸಾರಿ ಯಾವುದಕ್ಕ? ಭೂಗೋಳ ಬದಲಾದದ್ದಕ್ಕಾ?” ಎಂದೆ ಕಹಿಯಾಗಿ.
ಒಮ್ಮೆ ದೀರ್ಘವಾಗಿ ನೋಡಿ ಹಿಂತಿರುಗಿದಳು.
ವಿನೀತಾ ಪ್ರಶ್ನಾರ್ಥಕವಾಗಿ ನೋಡಿದಳು ಮಾತ್ರ. ನಾನಾಗಿ ಹೇಳದೇ ಏನನ್ನೂ ಪ್ರಶ್ನಿಸುವ ಜಾಯಮಾನ ಅವಳದಲ್ಲ.
ಮನಸ್ಸು ಇನ್ನೂ ಖಿನ್ನವಾಗಿಯೇ ಇತ್ತು. ನಮ್ಮ ಮುಗ್ಧ ಸ್ನೇಹದ ಬಗ್ಗೆಯೇ ನೆನಪಾಗುತ್ತಿತ್ತು.
ಅಂದು ಬ್ಯಾಂಕಿನಲ್ಲಿ ನನ್ನ ಹೆಸರಿಗೊಂದು ಕವರು ಕಾಣಿಸಿತು. ಸಾಮಾನ್ಯವಾಗಿ ನನ್ನ ವೈಯಕ್ತಿಕ ಪತ್ರಗಳು ಮನೆಗೆ ಮಾತ್ರವೇ ಬರುತ್ತಿದ್ದವು. ಆಫೀಸಿನ ವಿಳಾಸಕ್ಕೆ ಯಾರು ಬರೆದಿರಬಹುದು ಎನ್ನುತ್ತಲೇ ಕವರು ಬಿಡಿಸಿದೆ.
ಸದಾ,
ಮೊದಲು ನಿನ್ನ ಕ್ಷಮೆ ಕೇಳಿ ಪತ್ರ ಮುಂದುವರೆಸುತ್ತೇನೆ. ಬಹಳ ಕಷ್ಟಪಟ್ಟು ನಿನ್ನ ವಿಳಾಸ ದೊರಕಿಸಿ ಬರೆದಿದ್ದೇನೆ. ಪೂರ್ಣ ಓದದೇ ಹರಿಯಬೇಡ.
ಆ ದಿನವೇನೋ ನೀನು ಮಾತನಾಡಿದಾಗ ದೊಡ್ಡದಾಗಿ ಹೇಳಿದ್ದೆ, ‘ಸದಾ ಭೂಮಿ ದುಂಡಗಿದೆ. ನಾವು ಮತ್ತೆ ಭೇಟಿಯಾಗುತ್ತೇವೆ’ ಎಂದು. ಆದರೆ ನಂತರ ನಾನು ಹೇಳಿದ್ದೆ ತಪ್ಪಾಗಿರಲಿ, ನಾವೆಂದೂ ಮತ್ತೊಮ್ಮೆ ಸೇರುವುದು ಬೇಡ ಎಂದು ದೇವರಲ್ಲಿ ಬೇಡಿದ್ದೇನೆಂದರೆ ನಂಬುತ್ತೀಯ?
ಸದಾ, ನಮ್ಮ ಸ್ನೇಹ ಇನ್ನೂ ಮಧುರ ರೂಪ ಪಡೆಯುವುದೇನೋ ಎಂದು ನಾನು ಆಶಿಸಿದ್ದೆ. ನೀನು ವ್ಯಕ್ತಪಡಿಸದಿದ್ದರೂ ನಿನ್ನ ಭಾವನೆಗಳೂ ಅದೇ ದಿಶೆಯಲ್ಲಿ ಸಾಗುತ್ತಿವೆಯೇನೋ ಎಂದು ಭಾವಿಸಿ ಆನಂದಿಸುತ್ತಿದ್ದೆ. ಆದರೆ ಬದುಕು ಪಡೆದ ಅನಿವಾರ್ಯ ತಿರುವಿನಲ್ಲಿ ಅದು ಬಂದಂತೆ ಸ್ವೀಕರಿಸಬೇಕಾಯಿತು. ಇರಲಿ ಸ್ನೇಹವೇ ಸಾಕು ಎಂದುಕೊಂಡೆ.
ಸದಾ ನಿನಗೆ ನನ್ನ ಅವ್ವನ ನೆನಪಿದೆಯೇ? ಅಪ್ಪನ ಸದಾ ಸಂಶಯದ ಸುಳಿಯಲ್ಲಿ ಅವಳು ಪಡುತ್ತಿದ್ದ ಗೋಳು ಹೇಳಲಾರದ್ದು. ಮನೆಯೆಂಬ ಜೈಲಿನಲ್ಲಿ ಭಾವನೆಗಳನ್ನೆಲ್ಲ ಕೊಂದು ಅವಳು ಹೇಗೋ ಜೀವನ ನಡೆಸಿದಳು. ಇತಿಹಾಸ ಮರುಕಳಿಸುತ್ತದೆ ಎನ್ನುತ್ತಾರೆ. ನನ್ನ ಪಾಲಿಗಂತೂ ಅದು ನಿಜವೇ ಆಗಿದೆ. ಅವ್ವ ದೈಹಿಕ ನೋವುಗಳಿಂದ ಬಳಲಿದಳು. ಅವಳ ತಮ್ಮ ನನ್ನನ್ನು ಮಾನಸಿಕವಾಗಿ ಕೊಂದಿದ್ದಾನೆ. ಅವರ ದೃಷ್ಟಿಯಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವೆ ಇರಬಹುದಾದುದು ಒಂದೇ ಸಂಬಂಧ. ಅವರ ನೂರು ಪ್ರಶ್ನೆಗಳನ್ನು ಎದುರಿಸುವಾಗ ಆಗುವ ನೋವು ಹೇಳಲಾರದಂತಹುದು.
ಅಂದು ನಿನ್ನನ್ನು ಗುರುತಿಸಲು ನಿರಾಕರಿಸಿದ್ದು ಸಹ ಅದಕ್ಕೇ. ನಿನ್ನೆದುರಿಗೇ ಏನಾದರೂ ಅಸಹನೀಯವಾದುದು ಘಟಿಸಿದರೆ ಎಂದು ಭಯಪಟ್ಟು ಸುಮ್ಮನಿದ್ದೆ.
ಈ ಪತ್ರವೂ ಕೂಡ ನನ್ನನ್ನು ನಾನು ಸಮರ್ಥಿಸಿಕೊಳ್ಳುವುದಕ್ಕಾಗಿ ಅಲ್ಲ. ವಸ್ತುಸ್ಥಿತಿಯನ್ನು ತಿಳಿದರೆ ನಿನ್ನ ಮನಸ್ಸಿನ ನೋವು ಸ್ವಲ್ಪ ಕಡಿಮೆಯಾಗಬಹುದು ಎಂದು ಮಾತ್ರ.
ಗೆಳೆಯಾ ಮತ್ತೊಮ್ಮೆ ಹೇಳಲೇ-
ಭೂಗೋಳ ಬದಲಾಗಿಲ್ಲ- ಬದಲಾಗುವುದಿಲ್ಲ- ಆದರೆ ಇತಿಹಾಸ ಮರುಕಳಿಸಿದ್ದರಿಂದ ನಾನು ಭೂಗೋಳವನ್ನು ಮರೆಯುವುದು ಅನಿವಾರ್ಯವಾಗಿದೆ. ಮತ್ತೊಮ್ಮೆ ಪತ್ರ ಬರೆಯಲಾರೆ.
ವಂದನೆಗಳೊಡನೆ,
ಸುನೀತಾ
ಭಾರತೀಯ ಜೀವವಿಮಾ ನಿಗಮ
ನಗರಶಾಖೆ-1
ಲ್ಯಾಮಿಂಗ್ಟನ್ ರಸ್ತೆ
ಹುಬ್ಬಳ್ಳಿ-580020.

Leave a Reply