ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು
“ನೀನು ಹಾರಲು ಅಸಮರ್ಥ ಎಂದು ಸಂಶಯಪಟ್ಟರೇ ನೀನೆಂದಿಗೂ ಹಾರುವದೇ ಇಲ್ಲ”
“ಮಗು, ನೀನು ಹೆಚ್ಚು ಓದಿದಂತೆ ಹೆಚ್ಚು ತಿಳಿದುಕೊಳ್ಳುತ್ತಿ. ಹೆಚ್ಚು ತಿಳಿದುಕೊಂಡಂತೆ ನೀ ಜಗತ್ತನ್ನು ಎದುರಿಸುವ ಶಕ್ತಿ ಪಡೆಯುತ್ತಿ”
ಕೆಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಒಂದು ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಿತು. ನಾನು ಹೋಗಿ ನೋಡಿ ಅನುಭವಿಸದಿದ್ದರೂ, ಕಾರ್ಯಕ್ರಮ ಪಟ್ಟಿ, ಅಧ್ಯಕ್ಷರ ಮಾತುಗಳು, ಅತಿಥಿಗಳ ಮಾತುಗಳು ಎಲ್ಲವೂ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕಾರಣ ಹಾಗೂ ಭಾಗವಹಿಸಿದ ಲೇಖಕರ ಬಗ್ಗೆ ಕೊಂಚ ಕೊಂಚವಾದರೂ ಗೊತ್ತಿದ್ದ ಕಾರಣ, ಮತ್ತು ನನಗೆ ಆಮಂತ್ರಣವು/ಮಾಹಿತಿ ಸಂಪೂರ್ಣವಾಗಿ ಇರದ ಕಾರಣ ನನಗೆ ಹೋಗಲು ಆಗಲಿಲ್ಲ. ಹಿಂದೆ ನಾನು ಮಕ್ಕಳ ವಿಜ್ಞಾನ ಸಮ್ಮೇಳನದ ಸಂಘಟನೆ/ತರಬೇತಿ ಇತ್ಯಾದಿಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕಾರಣ ಸ್ವಲ್ಪ ಟಚ್ ಇತ್ತು, ಈಗಿಲ್ಲ. ಧಾರವಾಡದಲ್ಲಿ ಯಾವುದೇ ಸಮ್ಮೇಳನ ನಡೆಯಲಿ, ಸಂಭ್ರಮ, ಉತ್ಸವ ನಡೆಯಲಿ ಅದೊಂದು ರೀತಿಯಲ್ಲಿ ಮಠ ಹಟ ಪ್ರಭಾವವಿರುತ್ತದೆ. ಅವರ ಅವರ ಮಠಗಳಿಗೆ ಅನುಕೂಲರಾದವರ, ಸ್ನೇಹಜಾಲ ಅಥವಾ ಸಿದ್ಧಾಂತ ಮೋಹಗಳನುಸಾರವಾಗಿ ಅದರಲ್ಲಿ ಮುಂದೇನು ಉಪಯೋಗ, ಮುಂಚಿತ ಹೊಳವು ಹಾಕಿಕೊಂಡು ಅಧಿಕಾರಸ್ಥರನ್ನು, ಪೀಠಾಸಕ್ತರನ್ನು ಕರೆಯುವ, ಆಮಂತ್ರಿಸುವ ಪರಂಪರೆಯಾಗಿ ಬಿಟ್ಟಿದೆ. ಅಲ್ಲಿ ತಮ್ಮವರು, ತಮ್ಮ ಸ್ನೇಹಿತೆಯರು, ಧರ್ಮ, ಜಾತಿ ಮತ್ತು ಅನುಭವ ಮಂಟಪದ ಸಿಂಡಿಕೇಟ್ ಶರಣರು, ದಾಸರು ಮಾಯಾಲೀಲೆಯ ಪಾತ್ರದವರು ಹೀಗೆ ಸಾಗುತ್ತದೆ ಪಟ್ಟಿ. ಇದು ಕೇವಲ ಧಾರವಾಡಕ್ಕೆ ಅಷ್ಟೇ ಅಲ್ಲ ಸುಮಾರಾಗಿ ಎಲ್ಲೆಡೆ ಇರುತ್ತದೆ. ಇಂತಹದರಲ್ಲಿ ಗುಣಮಟ್ಟದ ಪ್ರಶ್ನೆ ಬರುವುದಿಲ್ಲ. ಹೊಸದರಲ್ಲಿ ಎಲ್ಲವೂ ಆಕರ್ಷಕ, ಹಿತವಾಗಿ ಕಂಡರೂ ಮತ್ತೆ ಮತ್ತೆ ಸಂಪರ್ಕಕ್ಕೆ ಬಂದಾಗ 24 ಅಥವಾ 22 ಅಥವಾ 16,17 ಕ್ಯಾರೆಟ್ ಬಂಗಾರ ಅನ್ನುವದು ಗೊತ್ತಾಗುವದು. ವಿಶ್ವವಿದ್ಯಾನಿಲಯ ಮಾಡಿದರೇ (ಈಗ ಅದೂ ಕಡಿಮೆಯಾಗಿದೆ. ಯುಜಿಸಿ ಹಣ ನೀಡಿದರೇ ಮಾತ್ರ. ಯುಜಿಸಿ ನೀಡುವುದಾಗಿ ಆಯಾ ಪ್ರೊಫೆಸರ್ಗಳ ಖ್ಯಾತಿಯ ಸಂಪರ್ಕದ ಮೂಲಕ ಅಷ್ಟು ಖ್ಯಾತಿ, ಎಲ್ಲರಿಗೂ ಎಲ್ಲಿ ಇರುತ್ತದೆ. ಪರಿಷತ್ನವರು ಮಾಡಿದರೆ ಪರಿಷತ್ ಸಂಪರ್ಕದವರು ಜಿಲ್ಲಾ ರಾಜಕೀಯದಲ್ಲಿದ್ದವರು, ಪ್ರಕಾಶನದವರು ಮಾಡಿದರೇ ಅವರಿಗನುಕೂಲವಾದ ಸನ್ನಿವೇಶದಲ್ಲಿ ಜರುಗುವವು. ಪ್ರತಿಯೊಂದು ಗೋಷ್ಠಿಗಳಲ್ಲಿ ಅಪ್ರಕಟಿತ, ಅಲಿಖಿತವಾದ ಮೀಸಲಾತಿಗಳು, ಇಡೀ ಗೋಷ್ಠಿಗಳ ಸತ್ವವನ್ನು ಬುಡಮೇಲು ಮಾಡಿಬಿಡುತ್ತವೆ. ಹೀಗೆ ಸಮ್ಮೇಳನಗಳ ಬಗ್ಗೆ ಒಂದು ಸಿರಿಯಲ್ ಮಾಡುವಷ್ಟು ತಾಕತ್ತು ಇದೆ. ವಿಜ್ಞಾನದ ವಿಚಾರ ಕುರಿತು, ಇತರ ವಿಷಯಗಳ ಕುರಿತು ಸಮ್ಮೇಳನ ಆಗುವದು ಕಡಿಮೆ. ಈಗ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಬರುವದಾದರೇ ಕೆಲ ಮಾತುಗಳನ್ನು ಹೇಳಲೇಬೇಕು ಅನಿಸುತ್ತದೆ. ಮಕ್ಕಳ ಸಾಹಿತ್ಯ ಹೇಗಿರಬೇಕು? ಅನ್ನುವ ಪ್ರಶ್ನೆಗೆ ಕೆಲವು ಸತ್ಯಸಂಗತಿಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗುವದು. ಎಳೆಯ ಮನಸ್ಸು ಹಸಿ ಜೇಡಿಮಣ್ಣಿನಂತೆ ಇರುತ್ತದೆ. ಆಯಾ ಮಕ್ಕಳ ಕೌಟುಂಬಿಕ ಸಂಸ್ಕಾರವೇ ಹಸಿ ಅಂದರೆ ಮಣ್ಣು ಮಣ್ಣೆ. ಅದರಿಂದ ಎಂತಹ ಮೂರ್ತಿಯನ್ನಾದರೂ ಮಾಡಬಹುದು. ಚಿಕ್ಕವಯಸ್ಸು ಅಂದರೆ 12-13ರ ಒಳಗೆ ಅದಕ್ಕೊಂದು ಮೂರ್ತ ಸ್ವರೂಪ ನೀಡುವ ಕೆಲಸವಾಗಬೇಕು. ನಂತರ ನಾವು ಅಪೇಕ್ಷಿಸಿದ ಆಕಾರ ಕೊಡಲಿಕ್ಕೆ ಬರುವುದೇ ಇಲ್ಲ. ಇದಕ್ಕಾಗಿ ಮಕ್ಕಳ ಸಾಹಿತ್ಯದ ಲಕ್ಷಣಗಳನ್ನು ಗಮನಿಸಲೇಬೇಕು. ಅದಕ್ಕಾಗಿ ಇತಿಹಾಸಕ್ಕೆ ಹೋಗಬೇಕು. ಇತಿಹಾಸವಿಲ್ಲದವನಿಗೆ ವರಮಾನವಿಲ್ಲ. ವರಮಾನವಿಲ್ಲದವನಿಗೆ ಭವಿಷ್ಯವಿಲ್ಲ. ನಮ್ಮ ಪರಂಪರೆಯಲ್ಲಿ ಬಂದ ಪಂಚತಂತ್ರ ಕಥೆ, ಕಥಾ ಸಂತ ಸಾಗರ ಉದ್ದೇಶ ಉಗಮ ನಮ್ಮ ನೆಲದಲ್ಲಿಯೇ ಆಗಿರುವರು. ಹಾಗೆಯೆ ಇಂದು ಯಾವುದಾದರೂ ಆಗಿದೆಯೆ? ಮಿಕಿಮೌಸ್ ಪಾಶ್ಚಿಮಾತ್ಯ ದೇಶದಲ್ಲಿ 100 ವರ್ಷಗಳಲ್ಲಿ ಹುಟ್ಟಿದ್ದು ಇಂದು ಎಲ್ಲರಿಗೂ ಮಿಕಿಮೌಸ್ ಗೊತ್ತು. ಪಂಚತಂತ್ರ ಇಲ್ಲ. ಕಥಾ ಸಂಗ್ರಹಾಗಾರವಂತೂ ಇಲ್ಲವೇ ಇಲ್ಲ. ನಮ್ಮ ಯಾವುದೇ ಸೃಜನಶೀಲ, ಲೇಖಕರು ಆ ದಿಕ್ಕಿನಲ್ಲಿ ಓರಿಜನಲ್ ಆಗಿ ಪ್ರಯತ್ನ ಮಾಡಲೇ ಇಲ್ಲ. ಕೆಲವರಿಗಂತೂ ಅದರ ಬಗ್ಗೆ ನಮ್ಮ ಕ್ಷೇತ್ರವೇ ಅಲ್ಲ ಅಂತ ನಾಟಕ ಸಂಗೀತದಲ್ಲಿ ಹೆಸರು ಮಾಡಿ ಈಗ ನಾಟಕಕ್ಕೂ ಸಂಗೀತ ಮಾಡಿ ಅಂದ್ರೆ, ದೂರ ಹೋಗುವ ಸಂಗೀತ ಕಲಾವಿದರಂತೆ, ಸಂಸ್ಕೃತದಲ್ಲಿ ಮಕ್ಕಳ ಸಾಹಿತ್ಯ ಯಾಕೆ ಬಂತು? ಕನ್ನಡದಲ್ಲಿ ಯಾಕೆ ಇನ್ನೂ ಸರಿಯಾಗಿ ಬರಲೊಲ್ಲದು ಅನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಮಕ್ಕಳಿಗೆ ಅವರೆದುರು ಕೂತುಗೊಂಡು ಕಥೆ ಹೇಳುವ, ಓದುವ ಪಾಲಕರು ಭಾವನಾತ್ಮಕವಾಗಿ ಕನ್ನಡದವರಾಗಬೇಕು. ತಾಯಿ-ತಂದೆ, ಅಜ್ಜ-ಅಜ್ಜಿ, ಅಕ್ಕ-ಅಣ್ಣ ಎಲ್ಲರೂ ಕಥೆ ಹೇಳುವ ಕಲೆ ಬೆಳೆಸಿಕೊಳ್ಳಬೇಕು. ಕಥೆ ಹೇಳುವುದೇ ನಮ್ಮ ನಮ್ಮ ಸಂವಹನ ಕರೆಯನ್ನು ಬೆಳೆಸಿಕೊಳ್ಳುವರು. ಅದಕ್ಕಿಂತ ಹೆಚ್ಚಾಗಿ ನಮ್ಮ ನಮ್ಮ ಸಂಸ್ಕಾರಗಳನ್ನು ಮಕ್ಕಳಿಗೆ ಧಾರೆ ಎರೆಯುವದರ ಮೂಲಕ ಅವರ ಲಾಲನೆ, ಪಾಲನೆ ಪೋಷಣೆಯಾದಾಗ ಅದರ ಮುಖಾಂತರ ಸಂಸ್ಕೃತಿಯ ಪರಂಪರೆಯ ಛಾಪು ಬೀಳುತ್ತ ಸಂಸ್ಕಾರದ ಕ್ರಿಯೆ ನಡೆಯುತ್ತದೆ. ಮಕ್ಕಳು ಓದುವ ಚಟ ಬೆಳೆಸಿಕೊಳ್ಳುತ್ತಾರೆ. ಕೀಲಿಯನ್ನು ಕೀಲಿಕೈಯಿಂದ ತೆಗೆಯುವದನ್ನು ತೋರಿಸಿದಾಗ ಮಕ್ಕಳು ತಾವೇ ಜ್ಞಾನ ಭಂಡಾರ ಕೀಲಿಯನ್ನು ತೆಗೆದುಕೊಳ್ಳುತ್ತಾ ಹೋಗುತ್ತಾರೆ. ಅದಕ್ಕಾಗಿ ಮನೆಯಿಂದ ಹಿಡಿದು ಶಾಲೆಯವರೆಗೆ ಇರುವ ಶಿಕ್ಷಣ ವ್ಯವಸ್ಥೆ ಪೂರಕವಾಗಿ ಬದಲಾಗಬೇಕು. ಮಕ್ಕಳ ಸಹಜ ಪ್ರತಿಭೆಗೆ ಬೆಳವಣಿಗೆಗೆ ಇಂಬು ನೀಡುವಂತಹ ವಾತಾವರಣವಾಗಬೇಕು. ಎಲ್ಲ ಗುಲಾಬಿ ಹೂಗಳು ಕೆಂಪೆ ಇರಬೇಕೆಂದಲ್ಲ ಬಿಳಿ, ಹಳದಿ ಅಥವಾ ಮತ್ತ್ಯಾವದೂ ಬಣ್ಣವು ಆಗಬಹುದು. ಎಲ್ಲ ಹೂಗಳು ಆಕರ್ಷಕವೇ. ಹಾಗೆಯೇ ಮಕ್ಕಳಲ್ಲಿ ಏನು ಆಸಕ್ತಿ ಇರುತ್ತದೋ ಆ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು, ಅದಲ್ಲದೇ ನೀನು ಇಂಜನೀಯರ್, ನೀನು ಲಾಯರ್, ನೀನು ಡಾಕ್ಟರ್ ಆಗು ಅಂತಾ ಹೇಳದೇ ಉತ್ತಮ ನಾಗರಿಕನಾಗು. ಉತ್ತಮ ಪ್ರಜೆಯಾಗು ಎನ್ನುವ ಉದ್ದೇಶದೊಂದಿಗೆ ಸಾಹಿತ್ಯ ರಚನೆ ಮಕ್ಕಳಿಗಾಗಿ ಮನೋರಂಜನೆ ಮಾಹಿತಿಯೊಂದಿಗೆ ನೀಡಬೇಕಾಗಿದೆ. ಶಿವರಾಮ ಕಾರಂತ, ಜೆ.ಪಿ.ರಾಜರತ್ನಮ್ ಬಿಟ್ಟರೆ ನನಗಂತೂ ಯಾವ ಹೆಸರೂ ಈಗ ಹೊಳೆಯುತ್ತಿಲ್ಲ. ಕನ್ನಡದಲ್ಲಿ ನಿಯತಕಾಲಿಕೆಗಳು ಕಡಿಮೆ. ಇಂಗ್ಲೀಷ್ನಲ್ಲಿ ಸಾಕಷ್ಟು ಮಕ್ಕಳ ಸಾಹಿತ್ಯ, ಕಾರ್ಟೂನ್, ಸಿನಿಮಾ ಎಲ್ಲವೂ ಸಿಗುತ್ತವೆ. ಆದರೆ ಕನ್ನಡದ ಕಂದಗಳಿಗೆ ಆ ಪರಿಸ್ಥಿತಿ ಇಲ್ಲ. ಯಾವುದೇ ಟಿ.ವಿ.ಚಾನೆಲ್ ತೆಗೆದುಕೊಳ್ಳಿ. ಅದರಲ್ಲಿ ಇಂಗ್ಲೀಷಿನಲ್ಲಿ ತಯಾರಾದ ನಮ್ಮದಲ್ಲದ ಪಾತ್ರ ಕಥೆಗೆ ಹಿಂದಿ ಭಾಷೆಗೆ ಅಥವಾ ಯಾವುದೇ ಪ್ರಾದೇಶಿಕ ಭಾಷೆಗೆ ಭಾಷಾಂತರ ಕಂಠದಾನವಿದ್ದರೂ ಕನ್ನಡದ್ದು ಅದರಲ್ಲಿ ಕಡಿಮೆ ಅನ್ನುವದು ನೋಡಿದವರಿಗೆ ಗೊತ್ತು. ಹೀಗಾಗಿ ಕನ್ನಡದ ಕಂದಗಳು ಬಲವಂತವಾಗಿಯೂ ಇಂಗ್ಲಿಷ್ ಕಾರ್ಟೂನ್ ನೋಡಲೇಬೇಕು. ಅದೇ ಬರಬರುತ್ತ ಸಂಪ್ರದಾಯ ಸಂಸ್ಕೃತಿಯಾಗುವ ದುರಂತ ಭವಿತವ್ಯದಲ್ಲಿ ದಟ್ಟವಾಗಿ ಕಾಣುತ್ತದೆ. ಇನ್ನೂ ಕನ್ನಡವರು ಕನ್ನಡದಲ್ಲಿ ಮಕ್ಕಳಿಗಾಗಿ ಬರೆಯುವ ಪ್ರಯತ್ನ ನಡೆದಿದ್ದರೂ ಗುಣಮಟ್ಟ ಕಡಿಮೆ, ನಮ್ಮ ಉದ್ದಾಮ ಸಾಹಿತಿಗಳಲ್ಲಿ ಪಿಡಿಯಾಟ್ರಿಕ್ಸ್ ಸಾಹಿತ್ಯ ರಚಿಸುವುದು ಕಡಿಮೆ. (ಆದರೆ ವೈದ್ಯಕೀಯ ವೃತ್ತಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಿಡಿಯಾಟ್ರಿಕ್ಗಾಗಿ ಬೇಡಿಕೆ ಹೆಚ್ಚು ಅನ್ನುವುದನ್ನು ಗಮನಿಸಬೇಕಾಗುವುದು). “ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ” ಜಿ.ಪಿ.ರಾಜರತ್ನಂ ಬರೆದ ಹಾಡು ನನ್ನ ಬಾಲ್ಯದಲ್ಲಿ ಕಲಿತಿದ್ದು ಇಂದು ನೆನಪಿದೆ. ಅಂತಹ ಹಾಡಿಗಳು, ಅಂತಹ ಸಾಹಿತಿಗಳು, ಅದನ್ನು ನೆನಪಿಡುವಂತೆ ಹೇಳುವ ಹಾಡುವ ಹಾಡಿಸುವ ಶಿಕ್ಷಕರೆಲ್ಲಿದ್ದಾರೆ. ಇದ್ದರೂ ಎಲ್ಲೊ ಎಲೆಯ ಮರೆಯ ಕಾಯಿಯಂತೆ. ಗೊತ್ತೇ ಆಗುವುದಿಲ್ಲ. ಮಮ್ಮಿ ಡ್ಯಾಡಿಗಳ ಕಾಡಿನಲ್ಲಿ ಎಲ್ಲೆಡೆ ಇಂಗ್ಲೀಷ್ಮಯವಾದ ಸಂದರ್ಭದಲ್ಲಿ ಕನ್ನಡದ ಬಾಲ ಕವಿತೆಗಳ ಬಗ್ಗೆ, ಪಂಚತಂತ್ರ, ಮತ್ತಿತರ ಮಕ್ಕಳ ಕಥೆಗಳ ಬಗ್ಗೆ ಮಾತನಾಡುವುದೇ ಅಸಂಸ್ಕೃತ ಅನ್ನುವ ವಾತಾವರಣ ಬರುತ್ತಿದೆ. ನನ್ನ ಸುತ್ತಲೂ ಇರುವ ಮಕ್ಕಳ ಮನೆಯಲ್ಲಿ ಎಲ್ಲರೂ ಕನ್ನಡ ಮಾತನಾಡುತ್ತಿದ್ದರೂ ಕನ್ನಡದ ಪದ್ಯಗಳು, ಕನ್ನಡ ಕಥೆಗಳು ಎಲ್ಲವೂ ಕ್ವಚಿತ್. ಎಲ್ಲವೂ ಮಿಕಿಡೊನಾಲ್ಡಮಯ. ಪಾಲಕರ ಅಲಕ್ಷ್ಯತನದಿಂದ ಮಕ್ಕಳಲ್ಲಿ ಕೇಳುವ ಪ್ರವೃತ್ತಿ ಹುಟ್ಟಿಲ್ಲ.
ಕೃಪೆ : ಸಂಯುಕ್ತ ಕರ್ನಾಟಕ