ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ!

ಭತ್ತದ ಬೆಳೆಗೆ ದೃಷ್ಟಿ ತೆಗೆಯುವುದಾ!

ಜಗತ್ತಿನಲ್ಲಿ ಮನುಷ್ಯರಿಗೆ ಅದರಲ್ಲೂ ನವವಧು-ವರರಿಗೆ ಚಿಕ್ಕ ಮಕ್ಕಳಿಗೆ ದೃಷ್ಟಿ ತೆಗೆಯುವ ಪದ್ದತಿ ಪುರಾತನ ಕಾಲದಿಂದಲೂ ನಮ್ಮ ರಾಷ್ಟ್ರದಲ್ಲಿದೆ. ಇದು ಕೇವಲ ಹಿಂದೂ ಧರ್ಮದಲ್ಲಿ ಇಲ್ಲದೆ ಮುಸ್ಲಿಂ, ಕ್ರಿಸ್ಚಿಯನ, ಹಾಗೂ ಇತರೆ ಧರ್ಮಗಳಲ್ಲಿಯೂ ಇದೆ. ಇದೆ ಸಂಪ್ರದಾಯ ಮುಂದುವರೆದು ಸಾಕು ಪ್ರಾಣಿಗಳಾದ ಎತ್ತು, ಆಕಳು, ಕುರಿ, ಕೋಣ, ಹಾಗೂ ಟಗರುಗಳಿಗೂ  ದೃಷ್ಟಿ ತೆಗೆಯುವ ಪದ್ದತಿ ದಿನನಿತ್ಯ ನಮ್ಮ ಸಮಾಜದಲ್ಲಿ ನೋಡಬಹುದು. ಅದರೆ ನಮ್ಮೂರು ಧಾರವಾಡದ ಹಳ್ಳಿಗಳಲ್ಲಿ ಭತ್ತದ ಬೆಳೆಗಳಿಗೆ ದೃಷ್ಟಿ ತೆಗೆಯುದು ಆಶ್ಚರ್ಯವಾದರೂ ನಂಬಲಾಗದ ಸತ್ಯವಾಗಿದೆ. ಭತ್ತದ ಬೆಳೆಗಳಿಗೆ ಯಾರಾದರೂ ದೃಷ್ಟಿ ತೆಗಿತಾರಾ!  ಅಂತ ನೀವೆಲ್ಲಾ ಆಶ್ಚರ್ಯ ಪಡಬಹುದು. ಧಾರವಾಡದ ಜಿಲ್ಲೆಯ  ರೈತರು ಭತ್ತವನ್ನು ಭಿತ್ತಿ ಅದು ಬೆಳೆಯುವಾಗ ಬಾದಾಮಿ ಅಮವಾಸ್ಯೆಯಾದ ನಂತರ ಕಾರಹುಣ್ಣಿಮೆಯೊಳಗೆ ಭತ್ತದ ಬೆಳೆಯು ಹಸಿರಾಗಿ ಹೊಲವೆಲ್ಲಾ ತುಂಬಾ ಚೆನ್ನಾಗಿ ಕಾಣುತ್ತಿರುತ್ತದೆ. ಬೇಸಿಗೆಯಲ್ಲಿ ಒಣಗಿದ ಗಿಡ ಮರಗಳು ಹಾಗೂ ಹುಲ್ಲುಗಳು ಚಿಗುರಿ ಜನರ ಕಣ್ಣಿಗೆ ಹಸುರಿನ ಮುದ ನೀಡುತ್ತಿರುತ್ತದೆ. ಅದಲ್ಲದೆ ಮಳೆಗಾಲದ ದಿನವಾದ್ದರಿಂದ ಎಲ್ಲಿ ನೋಡಿದರೆಲ್ಲಿ ಹಸಿರು ಅದರಲ್ಲೂ ಬೆಳೆಯುತ್ತಿರುವ ಭತ್ತದ ಬೆಳೆಯಂತೂ ಕಣ್ಣಿಗೆ ತುಂಬಾ ಚೆನ್ನಾಗಿ ಕಾಣುತ್ತಿರುತ್ತದೆ. ಅದಕ್ಕೆ ರೈತರು ತಮ್ಮ ಬೆಳೆಗೆ ದೃಷ್ಟಿ ಆಗಬಾರದು ಎಂದು ಬಾದಾಮಿ ಅಮವಾಸ್ಯೆಯಿಂದ ಕಾರ ಹುಣ್ಣಿಮೆಯೊಳಗೆ ಬರುವ ಯಾವುದೇ ಬುಧವಾರ ಅಥವಾ ರವಿವಾರದಂದು ಭತ್ತಕ್ಕೆ ದೃಷ್ಟಿ ತೆಗೆಯುವ ಸಂಪ್ರದಾಯವಿದೆ.
ದೃಷ್ಟಿ ತೆಗೆಯುವ ದಿನ 5 ತರಹದ ತರಕಾರಿ ಸೇರಿಸಿ ಪಲ್ಯ ಮಾಡಿ, ಮೊಸರು ಕಲಿಸಿದ ಅನ್ನ, ಮತ್ತು ಎಣ್ಣೆಯಲ್ಲಿ ಕರಿದ ಯಾವುದೇ ತರಹದ ತಿಂಡಿ, ಮತ್ತು ಹುಗ್ಗಿಯನ್ನು ಮಾಡಿ ಮನೆಯಲ್ಲಿ ಪೂಜೆ ಮಾಡಿ, ಹೊಲಕ್ಕೆ ಹೋಗಿ ಅಲ್ಲಿಯು ಪೂಜೆ ಮಾಡಿ, ಒಂದು ಮಣ್ಣಿನ ಗಡಿಗೆಗೆ ಸುಣ್ಣ ಹಚ್ಚಿ ಅದನ್ನು ತಮ್ಮ ಹೊಲದಲ್ಲಿರುವ ಭತ್ತ ಬೆಳೆದ ಗದ್ದೆಗಳ ಒಂದು ಮೂಲೆಯಲ್ಲಿ ಎಲ್ಲರಿಗೂ ಕಾಣುವಂತೆ ಎತ್ತರದಲ್ಲಿ ಇಟ್ಟು ಅದಕ್ಕೆ ಪೂಜೆ ಮಾಡಿ ನೈವೇದ್ಯ ಮಾಡಿ ಅದನ್ನು ಹೊಲದ ತುಂಬಾ ಎಸೆಯುತ್ತಾರೆ ಮತ್ತು ಎಲ್ಲೆಲ್ಲಿ ತಮ್ಮ ಭತ್ತದ ಗದ್ದೆಗಳಿವೆ ಆ ಗದ್ದೆಗಳ ಮೂಲೆಯಲ್ಲಿ ಎಲ್ಲರಿಗೂ ಕಾಣುವಂತೆ ಕಲ್ಲನ್ನು ಇಟ್ಟು ಅದಕ್ಕೆ ಸುಣ್ಣ ಹಚ್ಚುತ್ತಾರೆ.
ಭತ್ತದ ಗದ್ದೆಯ ಯಾವುದೇ ಮೂಲೆಯಲ್ಲಿ ಈ ರೀತಿ ಎಲ್ಲರಿಗೂ ಕಾಣುವಂತೆ ಕಲ್ಲು ಇಟ್ಟು ಅದಕ್ಕೆ ಸುಣ್ಣ ಹಚ್ಚುವುದರಿಂದ ಹಸಿರಾಗಿ ಕಾಣುವ ಭತ್ತದ ಬೆಳೆಯ ನಡುವೆ ಆ ಕಲ್ಲುಗಳು ಎದ್ದು ಕಾಣುವುದರಿಂದ ಆ ಬೆಳೆಯನ್ನು ನೋಡುವ ಜನರ ಕಣ್ಣುಗಳು ಆ ಸುಣ್ಣದ ಕಲ್ಲಿನ ಕಡೆಗೆ ದೃಷ್ಟಿ ಹೋಗುತ್ತದೆ  ಅಂತ  ಈ ರೀತಿ ಮಾಡುತ್ತಾರೆ.
ಈ ಪದ್ಧತಿಯನ್ನು ರೈತರು ಒಂದು ಹಬ್ಬದಂತೆ ಆಚರಣೆ ಮಾಡುತ್ತಾರೆ. ಬಾದಾಮಿ ಅಮವಾಸ್ಯೆಯಿಂದ ಕಾರ ಹುಣ್ಣಿಮೆಯವರೆಗೆ ಈ ಹಬ್ಬವನ್ನು ಮಾಡಬೇಕಾದ ರೈತರು 2 ವರ್ಷಗಳಿಂದ ಮಳೆ ಬಾರದೆ ಬರಗಾಲ ಬಂದ ಕಾರಣ ಹಬ್ಬ ಆಚರಣೆ ಸರಿಯಾಗಿ ಮಾಡಿಲ್ಲ ಮತ್ತು ಈ ವರ್ಷ ಮಳೆ ನಿಗದಿತ ಸಮಯಕ್ಕೆ ಬರದೆ ಹಬ್ಬ ಆಚರಿಸುವ ಸಮಯದಲ್ಲಿ ಇನ್ನೂ ಭತ್ತ ಬಿತ್ತುವದರಲ್ಲಿ ಇದ್ದಾರೆ. ಇನ್ನೂ ಮುಂದಾದರೂ ದೇವರು ಭತ್ತದ ಬೆಳೆಗೆ ಬೇಕಾಗುವಷ್ಟು ಮಳೆಯನ್ನು ನಿಗದಿತ ಸಮಯಕ್ಕೆ ಸುರಿಸಿ ನಮಗೆ ಅನ್ನದಾತರಾದ ರೈತರು ಈ ಹಬ್ಬವನ್ನು ಅದ್ದೂರಿಯಾಗಿ ಮಾಡಲಿ ಎಂದು ಪ್ರಾರ್ಥಿಸೋಣ.

 

– ಡಾ. ನಾರಾಯಣ ಬಿಲ್ಲವ

Leave a Reply