ಹುಟ್ಟಿದ್ದು ಬಾಗಲಕೋಟೆ, ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಧಾರವಾಡ. ಬಾಳ ಸಂಗಾತಿಯ ಆಯ್ಕೆ ಹಾಗೂ ಜೀವನ ಸಾಗಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ನದಿ ಎಲ್ಲಿಯೋ ಹುಟ್ಟಿ, ಮತ್ತೆಲ್ಲಿಯೋ ಹರಿದು ಸಮುದ್ರ ಸೇರುವ ತೆರದಿ ಮಹಿಳೆಯರ ಬದುಕು. ಹೀಗೆಂದು ಹೇಳಿದವರು ಲೇಖಕಿ, ರಂಗ ನಿರ್ದೇಶಕಿ, ನಟಿ ಜಯಶ್ರೀ ಹೆಗಡೆ.ತಮ್ಮ ಪತಿ ಪ್ರೊ.ಶ್ರೀಪಾದ ಹೆಗಡೆಯವರ ಜತೆ ಬಾಳಿನ ಸಂಧ್ಯಾಕಾಲದಲ್ಲಿ ವಾಸಿಸಲು ಆಯ್ಕೆ ಮಾಡಿಕೊಂಡದ್ದು ಮೈಸೂರು, ಇಲ್ಲಿಯೇ ಅಂತರಂಗದ ಆಶಯಗಳಿಗೆ ಮೂರ್ತ ಸ್ವರೂಪ ಕೊಡುವುದರ ಜತೆಗೆ, ರಂಗಭೂಮಿಯಲ್ಲಿ ನೆಲೆ ಕಂಡುಕೊಂಡವರು.ಆಡಿದ ಮೊದಲ ನಾಟಕದಲ್ಲೇ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದ ಜಯಶ್ರೀ. ತಂದೆ ಹನುಮಂತಾಚಾರ್ಯ ಕೆರೂರು ಹಾಗೂ ತಾಯಿ ಕಮಲಾ ಅವರ ಆರು ಮಕ್ಕಳಲ್ಲಿ ಇವರೇ ಕೊನೆಯವರು. ಕೆರೂರು ವಾಸುದೇವಾಚಾರ್ಯರ ಮನೆತನದವರೆಂದು ಹೇಳುವ ಜಯಶ್ರೀಯವರು ಸಾಹಿತ್ಯ ಹಾಗೂ ರಂಗಭೂಮಿಯ ಪೂರ್ವವಾಸನೆ ವಂಶವಾಹಿನಿಯಾಗಿ ಬಂದದ್ದನ್ನು ನೆನಪಿಸಿಕೊಳ್ಳುತ್ತಾರೆ.ಚಂದ್ರಶೇಖರ ಪಾಟೀಲರ ‘ಟಿಂಗರ ಬುಡ್ಡಣ್ಣ’ ಇವರು ಆಡಿದ ಮೊದಲ ನಾಟಕ. ಕಿಕ್ಕಿರಿದು ತುಂಬಿದ್ದ ಹುಬ್ಬಳ್ಳಿಯ ಸವಾಯಿಗಂಧರ್ವ ಕಲಾ ಮಂದಿರದಲ್ಲಿ ಪ್ರೇಕ್ಷಕರ ಕರತಾಡನ ಜತೆಗೆ ಉತ್ತಮ ನಟಿ ಪ್ರಶಸ್ತಿ. ನಂತರ ಹೆಸರಾಂತ ರಂಗ ನಿರ್ದೇಶಕ ಬಸವಲಿಂಗಯ್ಯ ಅವರು ಧಾರವಾಡದಲ್ಲಿ ನಡೆಸಿಕೊಟ್ಟ ರಂಗ ತರಬೇತಿ ಶಿಬಿರದಲ್ಲಿ ಭಾಗಿಯಾಗಿ ‘ಸಂತ್ಯಾಗ ನಿಂತಾನ ಕಬೀರ’ ಮತ್ತು ‘ಕೆರೆಗೆ ಹಾರ’ ನಾಟಕಗಳಲ್ಲಿ ಅಭಿನಯ.ವೈಯಕ್ತಿಕ ಕಾರಣಗಳಿಂದ ಹತ್ತು ವರ್ಷ ಬದುಕಿನಿಂದ ವಿಮುಖರಾಗಿದ್ದ ಜಯಶ್ರೀ ಅವರನ್ನು ಮರಳಿ ಜೀವನದ ಮುಖ್ಯ ವಾಹಿನಿಗೆ ತಂದಿದ್ದು ರಂಗಭೂಮಿ. ಹೀಗಾಗಿ ರಂಗಭೂಮಿಯನ್ನು ಅತ್ಯಂತ ಗೌರವದಿಂದ ನೆನೆದುಕೊಳ್ಳುತ್ತಾರೆ. ಬದುಕಿನ ಜಂಜಾಟದ ನಡುವೆ ಕಾರ್ಯಕ್ಷೇತ್ರದಿಂದ ದೂರವಿದ್ದ ಜಯಶ್ರೀಯವರು ಫಿನಿಕ್ಸ್ ಪಕ್ಷಿಯಂತೆ ಗರಿಗೆದರಿ ಕವನ ಸಂಕಲನ, ನಾಟಕಗಳು, ಲಲಿತ ಪ್ರಬಂಧಗಳನ್ನು ಕೃತಿ ರೂಪದಲ್ಲಿ ಹೊರತಂದರು. ‘ಅಭಿನವ ಶಾಕುಂತಲ’ ನಾಟಕ ರಚಿಸಿ ಮೈಸೂರಿನಲ್ಲಿ ಪ್ರದರ್ಶಿಸಿದರು. ಹೆಸರಾಂತ ರಂಗ ನಿರ್ದೇಶಕ ಗಂಗಾಧರಸ್ವಾಮಿಯವರ ನಿರ್ದೇಶನದಲ್ಲಿ ನಡೆದ ಪ್ರದರ್ಶನ ಯಶಸ್ವಿಯಾದದ್ದನ್ನು ಹೆಮ್ಮೆಯಿಂದ ನೆನೆಸಿಕೊಳ್ಳುತ್ತಾರೆ.ಬಂಗಾಲಿ ಭಾಷೆಯ ಖ್ಯಾತ ಲೇಖಕಿ ಮಹಾಶ್ವೇತಾದೇವಿಯವರ ‘ಸಾವಿರದ ಎಂಬತ್ನಾಕರ ತಾಯಿ’ ಕಾದಂಬರಿಯನ್ನು ಸಾಹಿತಿ ಆರ್.ವಿ.ಭಂಡಾರಿಯವರೊಂದಿಗೆ ರಂಗರೂಪಕ್ಕೆ ತಂದು, ರಂಗ ಪ್ರಯೋಗ ಮತ್ತು ಅಭಿನಯ ಮಾಡಿದ್ದು ಇವರ ಹೆಗ್ಗಳಿಕೆ. ಭೀಷ್ಮ ಸಹಾನಿಯವರ ‘ಪರಿಹಾರ್’ ಹಿಂದಿ ನಾಟಕದ ನಿರ್ದೇಶನ, ಖ್ಯಾತ ತಮಿಳು ಲೇಖಕ ಶಂಕರ ಅವರ ‘ಸುಜಾತ ಮತ್ತು ಕಾಡಾನೆ’ ಕಥೆಯನ್ನು ರಂಗಕ್ಕೆ ಅಳವಡಿಸಿ ಪ್ರದರ್ಶನ, ‘ಗುಡ್ಡದ ನವಿಲು’ ಹಾಗೂ ರಷ್ಯನ್ ಕಥೆ ‘ಪ್ಲಮ್ ನದಿಯ ತೀರದಲ್ಲಿ’ ಕಥೆಯನ್ನು ರಂಗರೂಪಕ್ಕೆ ತಂದು, ನಿರ್ದೇಶನ ಹಾಗೂ ಪ್ರಯೋಗ ಮಾಡಿದ್ದು ಇವರ ಸಾಧನೆಯ ವಿಶೇಷ. ಹೀಗಾಗಿ ನಿರ್ದೇಶನ ಹಾಗೂ ಅಭಿನಯದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ.ಮೈಸೂರಿನ ‘ಸಮತೆಂತು’ ತಂಡದವರು ಪ್ರಯೋಗಿಸಿದ ‘ಹುಲಿಯ ನೆರಳು’, ‘ಜೀವಯಾನ’, ‘ಟೊಳ್ಳುಗಟ್ಟಿ’, ‘ರುಡಾಲಿ’ ನಾಟಕಗಳಲ್ಲಿ ಅಭಿನಯಿಸಿದ್ದು ಸುರುಚಿ ರಂಗ ಮನೆಯಲ್ಲಿ ’ಧರ್ಮಕೊಂಡದ ಕಥೆ’, ’ಮಕರಂದಿಕಾ ಪರಿಣಯ’ ದಲ್ಲಿ ನಟಿಸಿದರು. ಪರಸ್ಪರ ತಂಡದ ’ಅಂಧಯುಗ’, ‘ಮಧ್ಯಮ ವ್ಯಾಯೋಗ’, ಅಭಿಯಂತರು ತಂಡದ ‘ಮಾಯಾಲೋಕ’, ‘ಆನೆ ಕಾಣದಾಗಿದೆ’, ಜಾನಪದ ಕಥೆಯ ‘ಕೊಣವೆಗೌಡ’, ಏಕತಾರಿ ತಂಡದ ‘ಶರೀಫ್’ ಪ್ರಜ್ಞಾ ಟ್ರಸ್ಟ್ ಪ್ರಯೋಗಿಸಿದ ಸುಜಾತಾ ಅಕ್ಕಿಯವರ ‘ಪ್ರಜಾರಾಜ’, ಜಿ.ಪಿ.ಐ.ಆರ್ ತಂಡದ ‘ಅಣ್ಣಾವಾಲಿ’ ಜನಮನ ತಂಡದ ‘ನಿಯಮ ನಿಯಮಗಳ ನಡುವೆ’, ಪ್ರತಿಬಿಂಬ ತಂಡದ ಜತೆ ‘ಭಾರತೀಯ ನಾರಿ 1951’ ರಂಗಾಂತರಂಗ ತಂಡದಿಂದ ‘ಮುಟ್ಟಿಸಿಕೊಂಡವರು’, ‘ಮುಳುಗಡೆ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಜನ ಮನ್ನಣೆಗಳಿಸಿದ್ದಾರೆ.ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಮಾನ ಪ್ರತಿಭೆ ಮೆರೆಯುತ್ತಿರುವ ಜಯಶ್ರೀಯವರು ಅಭಿನಯಕ್ಕೆ ಮೊದಲ ಪ್ರಶಸ್ತಿ ಹಾಗೂ ಬರೆದ ಲೇಖನಕ್ಕೂ ಪ್ರಶಸ್ತಿ ಪಡೆದಿರುವ ಸವ್ಯಸಾಚಿಗಳು. ಪ್ರಸ್ತುತ ಹಲವು ಸಂಘ ಸಂಸ್ಥೆಗಳೊಡನೆ ಉತ್ತಮ ಬಾಂಧವ್ಯ ಹೊಂದಿ ಎರಡೂ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದಾರೆ.
courtsey:prajavani.net
https://www.prajavani.net/artculture/art/theater-gave-intellectual-639962.html