ನಾನು ಲೇಖಕನಾಗುವುದು ಹೇಗೆ. ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ, ಎಲ್ಲ eನವೂ ಸಂಪತ್ತಿನ ಸಂಪಾದನೆಯ ಮೂಲ ಎಂದು ನಂಬಿರುವ ದಿನಗಳಲ್ಲಿ ಇದು ಮುಖ್ಯ ಅಲ್ಲ ಅಂತ ಬಹಳಷ್ಟು ಮಂದಿಗೆ ಅನ್ನಿಸಬಹುದು. ಆದರೆ ಏಕಾಂತ ಎಂಬುದೊಂದು ಎಲ್ಲರನ್ನೂ ಆವರಿಸುತ್ತದೆ. ಅಂಥ ಹೊತ್ತಲ್ಲಿ ಸಂಪತ್ತಾಗಲೀ, ಅಧಿಕಾರವಾಗಲೀ ಉಪಯೋಗಕ್ಕೆ ಬರುವುದಿಲ್ಲ. ಆ ನೆರವಾಗುವುದು ಕೇವಲ ನಮ್ಮ ಸೃಜನಶೀಲತೆ. ಅದರಲ್ಲೂ ದ್ವೀಪಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಅಂಥದ್ದೊಂದು ಅದಮ್ಯ ಆಸೆ ಮೂಡಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಅವರ ಭಾವನೆಗಳಿಗೆ ಅಲ್ಲಿ ಹೊರದಾರಿಗಳೇ ಇರುವುದಿಲ್ಲವಲ್ಲ.
ಅಂಥ ಹೊರದಾರಿಗಳಿಲ್ಲದ ಆ ಅಧಿಕಾರಿಯ ಹೆಸರು ಲೆಡರರ್. ಅವನು ಚುಂಗ್ಕಿಂಗ್ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದ. ಆಗಿನ್ನೂ ಅವನಿಗೆ ಹದಿಹರೆಯ. ಅನೇಕ ಗೆಳೆಯರು. ಮೋಜು, ಸುತ್ತಾಟ, ವಾರಾಂತ್ಯದಲ್ಲಿ ಮದ್ಯ ಸೇವನೆಯೇ ಖಯಾಲಿಯಾಗಿದ್ದ ಅವನಿಗೆ ಬರೆಯುವ ಹುಚ್ಚು.ಎಲ್ಲ ಮೋಜು ಮಸ್ತಿಗಳು ಮುಗಿದ ನಂತರ ಅವನನ್ನು ಭೀಕರವಾದ ನಿರಾಶೆ ಕಾಡುತ್ತಿತ್ತು. ಏನಾದರೂ ಅದ್ಭುತವಾದದ್ದು ಮಾಡಬೇಕು. ಈ ಜೀವನ ಹೀಗೆಯೇ ಸೋರಿ ಹೋಗುತ್ತದೆ ಅಂತ ಅನ್ನಿಸುತ್ತಿತ್ತು. ಏನು ಮಾಡಬೇಕು ಅನ್ನುವ ಕಿಂಚಿತ್ ದಾರಿಯೂ ಅವನಿಗೆ ತೋಚುತ್ತಿರಲಿಲ್ಲ .ಆಗ ಬರಹವೊಂದೇ ತನ್ನ ಹೊರದಾರಿ ಅಂತ ಅವನಿಗೆ ಅನ್ನಿಸುತ್ತಿತ್ತು.
ಆದರೆ ಹೇಗೆ ಬರೆಯಬೇಕು ಎಂದು ಹೇಳಿಕೊಡುವವರು ಯಾರೂ ಇರಲಿಲ್ಲ. ಬರೆದದ್ದು ಸರಿಯಾಗಿದೆಯೇ ಚೆನ್ನಾಗಿದೆಯೇ ಎಂದು ಹೇಳುವವರು ಇರಲಿಲ್ಲ. ಆ ದ್ವೀಪದ ತುಂಬ ಇದ್ದದ್ದು ಕಳ್ಳರು, ಕಡಲುಗಳ್ಳರು, ಬ್ರೋಕರುಗಳು ಮತ್ತು ತಲೆಹಿಡುಕರು. ಅವರ ನಡುವೆ ಇವನೊಬ್ಬ ವಿಚಿತ್ರ ಪ್ರಾಣಿಯಂತೆ ಕಾಣುತ್ತಿದ್ದ.
ಅವನಿದ್ದ ಆ ಪುಟ್ಟ ದ್ವೀಪದಂಥ ಊರಲ್ಲಿ ಮದ್ಯಕ್ಕೆ ಬರ. ಒಳ್ಳೆಯ ಸ್ಕಾಚ್ವಿಸ್ಕಿ ಸಿಗಬೇಕು ಅಂದರೆ ಒದ್ದಾಟ. ಆ ಕಾಲಕ್ಕೆ ಹಡಗಿನ ಕಟ್ಟೆಯ ಬಳಿ,ಕಡಲುಗಳ್ಳರಿಂದ ವಶಪಡಿಸಿಕೊಂಡ ಮಾಲುಗಳನ್ನು ಹರಾಜು ಹಾಕುತ್ತಿದ್ದರು. ಆ ಹರಾಜನ್ನು ಬ್ಲೈಂಡ್ ಆಕ್ಷನ್ ಎಂದು ಕರೆಯಲಾಗುತ್ತಿತ್ತು.ಸೀಲು ಮಾಡಲಾಗಿದ್ದ ಪೆಟ್ಟಿಗೆಗಳನ್ನು ಹರಾಜಿಗೆ ಇಡುತ್ತಿದ್ದರು. ಅದರೊಳಗೆ ಏನಿದೆ ಅನ್ನುವುದು ಯಾರಿಗೂ ಗೊತ್ತಿರುತ್ತಿರಲಿಲ್ಲ. ಅದನ್ನು ಹರಾಜಿನಲ್ಲಿ ಕೊಂಡುಕೊಂಡವರ ಅದೃಷ್ಟ ಚೆನ್ನಾಗಿದ್ದರೆ ಒಳ್ಳೆಯ ಮಾಲು ಸಿಗುತ್ತಿತ್ತು.
ಲೆಡರರ್ಗೆ ಹಾಗೆ ಹರಾಜಿನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸುವ ಚಟವಿತ್ತು. ಅನೇಕ ಬಾರಿ ಅವನಿಗೆ ಅದೃಷ್ಟ ಕೈ ಕೊಟ್ಟಿದ್ದರೂ ಮತ್ತೆ ಮತ್ತೆ ಏನನ್ನಾದರೂ ಅವನು ಕೊಳ್ಳುತ್ತಿದ್ದ. ಈ ಬಾರಿ ಅವನು ಕೊಂಡ ಪೆಟ್ಟಿಗೆಯ ಒಳಗೆ ಎರಡು ಡಜನ್ ಸ್ಕಾಚ್ ವಿಸ್ಕಿಯ ಬಾಟಲುಗಳು ಸಿಕ್ಕವು.ಅವನು ಅದು ತನ್ನ ಅದೃಷ್ಟವೆಂದೇ ಭಾವಿಸಿದ. ಎಲ್ಲರಿಗೂ ವಿಸ್ಕಿ ಬೇಕಾಗಿದ್ದುದರಿಂದ ಮತ್ತು ವಿಸ್ಕಿ ದುರ್ಲಭವಾದ್ದರಿಂದ ಅವನಿಗೆ ಸಿಕ್ಕ ಹತ್ತು ಪಟ್ಟು ಬೆಲೆಗೆ ಅನೇಕರು ಅದನ್ನು ಕೊಳ್ಳಲು ಮುಂದೆ ಬಂದರು. ಲೆಡರರ್ ಅದನ್ನು ತಾನು ಮಾರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ.
ಅದೇ ಸಮಯಕ್ಕೆ ಚುಂಗ್ಕಿಂಗ್ಗೆ ಲೇಖಕ ಹೆಮಿಂಗ್ವೇ ಬಂದಿದ್ದರು. ಒಂದು ತಿಂಗಳ ಭೇಟಿಗಾಗಿ ಬಂದ ಹೆಮಿಂಗ್ವೇ ವಿಸ್ಕಿ ಪ್ರಿಯರು. ಅವರಿಗೆ ಅಲ್ಲಿ ಸ್ಕಾಚ್ವಿಸ್ಕಿ ಸಿಗುವುದಿಲ್ಲ ಎಂದು ಗೊತ್ತಾಯಿತು. ಅವರ ಗೆಳೆಯರು ಲೆಡರರ್ ಬಳಿ ವಿಸ್ಕಿ ಇರುವುದಾಗಿ ಹೇಳಿದರು. ಆದರೆ ಆತ ಅದನ್ನು ಯಾರಿಗೂ ಮಾರುವುದಿಲ್ಲ ಎಂದುಬಿಟ್ಟರು. ತಾನೇ ಪ್ರಯತ್ನಿಸುವುದಾಗಿ ಹೇಳಿ ಹೆಮಿಂಗ್ವೇ ಒಂದು ಬೆಳಗ್ಗೆ ಲೆಡರರ್ ಮನೆಗೆ ಬಂದೇಬಿಟ್ಟರು.
ಲೆಡರರ್ಗೆ ಸಂತೋಷದಿಂದ ಪ್ರಾಣ ಬಿಡುವುದಷ್ಟೇ ಬಾಕಿ. ತನ್ನ ಮೆಚ್ಚಿನ ಲೇಖಕ ತನ್ನನ್ನೇ ಹುಡುಕಿಕೊಂಡು ಬಂದುಬಿಟ್ಟಿದ್ದಾನೆ. ಹೆಮಿಂಗ್ವೇ ತನಗೆ ವಿಸ್ಕಿ ಬೇಕು ಅಂದರು. ಎಷ್ಟು ಬೇಕಾದರೂ ದುಡ್ಡು ಕೊಡುವುದಾಗಿ ಹೇಳಿದರು. ಲೆಡರರ್ ತನಗೆ ದುಡ್ಡು ಬೇಡ ಎಂದೂ ಕತೆ ಬರೆಯುವುದನ್ನು ಹೇಳಿಕೊಡಬೇಕೆಂದೂ ಕೇಳಿಕೊಂಡ. ಹೆಮಿಂಗ್ವೇ ದುಡ್ಡು ತಗೊಂಡು ಮಜಾ ಮಾಡು. ಅದೆಲ್ಲ ಆಗದ್ದು ಅಂದರು. ಲೆಡರರ್ ಹಠ ಬಿಡಲಿಲ್ಲ. ಕೊನೆಗೆ ಆರು ಬಾಟಲಿ ವಿಸ್ಕಿಗೆ, ಕತೆ ಬರೆಯುವುದನ್ನು ಹೇಳಿಕೊಡುವುದಕ್ಕೆ ಹೆಮಿಂಗ್ವೇ ಒಪ್ಪಿಕೊಂಡರು. ಉಳಿದ ಆರು ಬಾಟಲಿಗೆ ಒಳ್ಳೆಯ ಬೆಲೆ ಕೊಟ್ಟು ಕೊಂಡುಕೊಂಡರು. ಅಷ್ಟೂ ದಿನ ಬ್ಲೈಂಡ್ ಆಕ್ಷನ್ನಲ್ಲಿ ಕಳಕೊಂಡ ಹಣ ಲೆಡರರ್ಗೆ ಬಂದೇ ಬಿಟ್ಟಿತು.ಹೆಮಿಂಗ್ವೇ ವಿಸ್ಕಿ ಬಾಟಲಿಯನ್ನು ಹೊತ್ತುಕೊಂಡು ಹೊರಟು ಹೋದರು.
ಮಾರನೇ ದಿನದಿಂದ ಲೆಡರರ್ ಹೆಮಿಂಗ್ವೇ ಜೊತೆ ಓಡಾಡತೊಡಗಿದ. ಹೆಮಿಂಗ್ವೇ ಹೇಗೆ ಗಮನಿಸುತ್ತಾರೆ, ಹೇಗೆ ಮಾತಾಡುತ್ತಾರೆ ಅನ್ನುವುದನ್ನು ಗಮನಿಸುತ್ತಿದ್ದ. ತಾನು ಲೇಖಕ ಎಂಬುದನ್ನು ಅವರು ತೋರಿಸಿಕೊಳ್ಳುತ್ತಲೇ ಇರಲಿಲ್ಲ. ಯಾವುದನ್ನೂ ಅವರು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದಾರೆ ಎಂದು ಅವನಿಗೆ ಅನ್ನಿಸಲಿಲ್ಲ. ಎಲ್ಲವನ್ನೂ ಉಡಾಪೆಯಿಂದ ನೋಡುತ್ತಾ, ನಿರಾಕರಿಸುತ್ತಾ, ಎದುರಿಗೆ ಸಿಕ್ಕ ಸಣ್ಣಪುಟ್ಟ ಮನುಷ್ಯರ ಜೊತೆ ಮಾತಾಡುತ್ತಾ, ಅವರಿಗೆ ತಮಾಷೆ ಮಾಡುತ್ತಾ, ಅವರಿಂದ ಬೈಸಿಕೊಳ್ಳುತ್ತಾ ಅವರು ತಾನೇನೂ ಅಲ್ಲ ಎಂಬಂತೆ ಇದ್ದರು.
ಲೆಡರರ್ ಇವತ್ತಿನ ಪಾಠ ಏನು ಎಂದು ಕೇಳಿದ. ಮನಸ್ಸನ್ನು ಕನ್ನಡಿಯ ಹಾಗಿಟ್ಟುಕೋ ಎಂದರು ಹೆಮಿಂಗ್ವೇ. ಮಾರನೇ ದಿನ ಅವನು ಬಂದಾಗ ಹೆಮಿಂಗ್ವೇ ನಿನ್ನ ಬಳಿ ಇದ್ದ ವಿಸ್ಕಿ ಕುಡಿದೆಯಾ ಎಂದು ಕೇಳಿದರು. ಲೆಡರರ್ ಇಲ್ಲ, ಅದನ್ನು ಒಂದು ಪಾರ್ಟಿಗೋಸ್ಕರ ಇಟ್ಟುಕೊಂಡಿದ್ದೇನೆ. ಈಗಲೇ ಕುಡಿಯುವುದಿಲ್ಲ ಎಂದ. ಹೆಮಿಂಗ್ವೇ ನಕ್ಕರು. ಪಾಠ ಎರಡು- ಲೇಖಕನಾದವನು ಯಾವುದನ್ನೂ ನಾಳೆಗೆಂದು ಇಟ್ಟುಕೊಳ್ಳಬಾರದು.
ಲೆಡರರ್ ಅವರಿಗೆ ಲೇಖಕ ಆಗೋದು ಹೇಗೆ ಎಂದು ಹೇಳಿ ಎಂದು ಒತ್ತಾಯಿಸಿದ. ಅವರು ಅದನ್ನೆಲ್ಲ ಹೇಳಿಕೊಡಲಿಕ್ಕೆ ಕಷ್ಟ ಅಂತ ಆವತ್ತೇ ಹೇಳಿದ್ದೇನೆ. ಆದರೂ ಒಂದು ಮಾತು ಹೇಳ್ತೀನಿ ಕೇಳು. ಒಳ್ಳೆಯ ಬಾಳು ನಡೆಸುವುದಕ್ಕೆ ಏನೇನು ಸೂತ್ರಗಳಿವೆಯೋ ಲೇಖಕ ಆಗುವುದಕ್ಕೂ ಅವೇ ಸೂತ್ರಗಳು. ಒಳ್ಳೆಯ ಮನುಷ್ಯ ಅಂತಿಮವಾಗಿ ಒಳ್ಳೆಯ ಲೇಖಕ ಆಗುತ್ತಾನೆ. ಸಜ್ಜನ, ಸುಸಂಸ್ಕೃತ, ಮಿತಭಾಷಿ, ತನ್ನ ಹಾಗೆ ಇನ್ನೊಬ್ಬರು ಎಂದು ಭಾವಿಸುವುದು ಮತ್ತು ಪ್ರಾಮಾಣಿಕವಾಗಿ ಹಾಗೆ ತಿಳಿಯುವುದು ಲೇಖಕನಾಗುವ ಮೊದಲ ಮೆಟ್ಟಲು ಅಂದರು. ಲೆಡರರ್ ಅವರ ಬಳಿ ವಾದಕ್ಕಿಳಿದ. ಲೇಖಕನಾಗಲು ಅದ್ಯಾವುದೂ ಮುಖ್ಯ ಲಕ್ಷಣ ಅಂತ ನನಗೆ ಅನ್ನಿಸುತ್ತಿಲ್ಲ ಅಂದ. ಹೆಮಿಂಗ್ವೇ ಸುಮ್ಮನೆ ನಕ್ಕರು.ಅವರ ಬಳಿ ಇನ್ನಷ್ಟು ಸಂಗತಿಗಳನ್ನು ಕೇಳಬೇಕು ಅಂದುಕೊಂಡ ಲೆಡರರ್ ಹೇಗಾದರೂ ಮಾಡಿ ಅವರ ಬಾಯಿ ಬಿಡಿಸಬೇಕು ಎಂದು ತೀರ್ಮಾನಿಸಿಬಿಟ್ಟಿದ್ದ.
ಆದರೆ, ಮೂರನೇ ದಿನ ಹೆಮಿಂಗ್ವೇ ಹೊರಟುಬಿಟ್ಟರು. ತಿಂಗಳು ಇರಲೆಂದು ಬಂದವರಿಗೆ ಮೂರೇ ದಿನಕ್ಕೆ ಮರಳಿ ಬರಬೇಕೆಂದು ಕರೆಬಂತು. ಲೆಡರರ್ಗೆ ನಿರಾಶೆಯಾಯಿತು. ಹೆಮಿಂಗ್ವೇ ಮುಂದೊಂದು ದಿನ ಬಂದಾಗ ಪಾಠ ಮುಂದುವರಿಸುತ್ತೇನೆ ಎಂದು ಹೇಳಿ ಹೊರಟು ನಿಂತರು. ಅವನು ಪಾಠ ಹೇಳುವ ಶುಲ್ಕವೆಂದು ಕೊಟ್ಟಿದ್ದ ಆರು ಬಾಟಲಿ ವಿಸ್ಕಿಯ ದುಡ್ಡನ್ನು ಅವನ ಕೈಗಿಟ್ಟರು. ನಾನು ಪಾಠ ಹೇಳಿಕೊಡಲಾಗಲಿಲ್ಲ. ನೀನು ನಷ್ಟ ಮಾಡಿಕೊಳ್ಳಬಾರದು ಅಂದರು. ಹೊರಡುವ ಮುನ್ನ ಕೊನೆಯ ಪಾಠ ಹೇಳಿದರು- ಲೇಖಕ ತನ್ನಲ್ಲಿರುವ ವಿಸ್ಕಿಯನ್ನು ರುಚಿ ನೋಡದೇ ಬೇರೆಯವರಿಗೆ ನೀಡಬಾರದು. ವಿಸ್ಕಿ ಕೆಟ್ಟದಾಗಿದ್ದರೂ ಒಳ್ಳೆಯತನ ಬಿಡಬಾರದು.
ಲೆಡರರ್ಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಬಂದು ಸುಮ್ಮನೆ ಕೂತ. ನಾಲ್ಕೈದು ದಿನ ಯೋಚಿಸಿದ. ಅವನು ಆಯೋಜಿಸಿದ್ದ ಪಾರ್ಟಿ ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ ಹೆಮಿಂಗ್ವೇ ಹೇಳಿದ ಕೊನೆಯ ಪಾಠ ನೆನಪಾಗಿ ವಿಸ್ಕಿ ಬಾಟಲು ತೆಗೆದು ರುಚಿ ನೋಡಿದ.
ಕಳ್ಳರು ವಿಸ್ಕಿ ಬಾಟಲಿಯೊಳಗೆ ಟೀ ತುಂಬಿಸಿಟ್ಟಿದ್ದರು. ಎಲ್ಲ ಬಾಟಲಿಗಳಲ್ಲೂ ಬರೀ ಕಹಿ ಟೀ ಇತ್ತು.
ಲೆಡರರ್ ಬರೆದುಕೊಳ್ಳುತ್ತಾನೆ. ಹೆಮಿಂಗ್ವೇ ಕಲಿಸಿದ ಪಾಠವನ್ನು ನಾನು ಯಾವತ್ತೂ ಮರೆಯಲಾರೆ. ಅವರು ಟೀ ಬಾಟಲ್ಲಿಗೆ ಕೈ ತುಂಬ ದುಡ್ಡು ಕೊಟ್ಟಿದ್ದರು. ಯಾವತ್ತೂ ಅದರ ಬಗ್ಗೆ ಕೊರಗಲಿಲ್ಲ. ನನ್ನ ಅವಿವೇಕವನ್ನು ಆಡಿಕೊಳ್ಳಲಿಲ್ಲ. ನನ್ನ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ.ಒಳ್ಳೆಯತನ ಎಂದರೇನು ಎಂದು ಹೇಳಿಕೊಟ್ಟರು.
ನಾನು ಲೇಖಕನಾದೆ.
ಒಳ್ಳೆಯ ಲೇಖಕನಾದವನು ಒಳ್ಳೆಯ ಮನುಷ್ಯನೇನೂ ಆಗಿರಬೇಕಿಲ್ಲ ಎಂದು ಸಾಬೀತು ಪಡಿಸಿದವರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಬಾಳುವುದಕ್ಕಿರುವ ಸೂತ್ರಗಳೇ ಲೇಖಕನಾಗುವುದಕ್ಕೂ ಸಾಕು ಎಂದ ಹೆಮಿಂಗ್ವೇ ಕೂಡ ಹಾಗೇ ಬಾಳಿದ್ದನ್ನು ನೋಡಿದಾಗ ಬೆರಗಾಗುತ್ತೇವೆ.ಎಲ್ಲರಂತೆ ಓಡಾಡಿಕೊಂಡು, ಕೆಲಸ ಮಾಡಿಕೊಂಡು, ಲೇಖಕ ಎಲ್ಲರಂತೆ ಸಾಮಾನ್ಯ, ಬರೆಯುವ ಹೊತ್ತಲ್ಲಿ ಮಾತ್ರ ಅವನು ದಾರ್ಶನಿಕವಾಗುತ್ತಾನೆ ಎಂದು ತೋರಿಸಿಕೊಟ್ಟವರು ಅವರು.
ಎಲ್ಲ ತರುಣ ಬರಹಗಾರು ಹಿಡಿಯಬೇಕಾದ ದಾರಿ ಯಾವುದು ಎಂದು ಕೇಳಿದರೆ ನಾನು ಹೆಮಿಂಗ್-ವೇ ಅನ್ನುತ್ತೇನೆ.