ಬೆಂಕಿ-ಬೆರಳಲ್ಲಿ ಕೊಟ್ಟ ಕವಿತೆಗೆ ಸಂಧ್ಯಾ ವಂದನೆ!
ಗುಡ್ಡ ಕಡಿದು ರಸ್ತೆ ಮಾಡಿದ ರಸ್ತೆಯಂತಿರುವ ಈ ಮಾತುಗಳ ಮೂಲಕ ಹಾದು ಹೋಗುವುದೆಂದರೆ ನನಗೆ ಅಂತಹ ಉತ್ಸಾಹವೇನೂ ಇಲ್ಲ.
ದಾರಿಯಿಲ್ಲದ ದಟ್ಟ ಕಾಡಿನಲ್ಲಿ ಹಕ್ಕಿ ಕೂಗಿನಂತಿರುವ ಕವಿತೆಯ ಹಾದಿ ನನಗೆ ಯಾವತ್ತೂ ತುಂಬ ಕುತೂಹಲಕರ.
***
ಸ್ನಾನದಲ್ಲಿ ಕದ್ದು ಕಿವಿಯೊಳಗೆ ಹೊಕ್ಕಿದ
ನೀರಿನ ಬಿಂದು ಜೀವಗೊಂಡು.
ದುಂಬಿಗಾನದ ಹಾಗೆ
ಗುಂಗುಂ ಎಂಬ ನಾದ
ಈಗ ನನಗೆ ಬೇರೇನೂ ಕೇಳಿಸುವುದಿಲ್ಲ
ಕಿವುಡಿ ಎನ್ನುತ್ತಿದ್ದಾರೆ ಎಲ್ಲರೂ
ನಾದದ ಕಡಲಿನಲ್ಲಿ ತೇಲುವ
ನಾನು ಒಂದು ಹಡಗು.
***
ಇದು ಪುತ್ತೂರಿನ ಸಂಧ್ಯಾದೇವಿ ಬರೆದ ಪದ್ಯ ಮತ್ತು ಗದ್ಯ. ಹಾಗೂ ಇರಬಹುದು ಗದ್ಯ ಮತ್ತು ಪದ್ಯ. ಮೇಲಿನ ಕವಿತೆಯಲ್ಲಿ `ಕಿವುಡಿ ಎನ್ನುತ್ತಿದ್ದಾರೆ ಎಲ್ಲರೂ’ ಎಂಬ ಸಾಲು ಇಲ್ಲದೇ ಹೋಗಿದ್ದರೆ ಎಂದು ಆಸೆಪಡುವ ಹೊತ್ತಿಗೇ ಮತ್ತೊಂದು ಕಪಟವಿಲ್ಲದ ಕವಿತೆ ಎದುರಾಗುತ್ತದೆ;
ಅವನಿಂದಲೇ ಕಲಿತ ಮಾತನ್ನು
ಅವನಿಗೊಪ್ಪಿಸುವಾಗ
ಹೊಚ್ಚ ಹೊಸತೆಂಬಂತೆ
ಆಶ್ಚರ್ಯದಿಂದ ಹಾಗೂ ಆನಂದದಿಂದ
ಆಲಿಸುವವನು ದೇವರೊಬ್ಬನೇ.
ಇನ್ನೊಬ್ಬನು ಇದ್ದರೆ
ದೇವರ ಹಾಗಿರುವನು.
ಆಶ್ಚರ್ಯ ಮತ್ತು ಆನಂದದಿಂದ ದೇವರ ಹಾಗೆ ಆಲಿಸಬಲ್ಲ ಸಾಲುಗಳು ಇಲ್ಲಿವೆ. ಆದರೆ ಸಂಧ್ಯಾದೇವಿ ಒಪ್ಪಿಸುತ್ತಿರುವುದು ಯಾರಿಂದಲೂ ಕಲಿತ ಸಾಲುಗಳನ್ನು ಅಲ್ಲ. ಕವಿತೆಯನ್ನು ಓದಿ ಮರೆತಂಥ ಸ್ಥಿತಿಯಲ್ಲಿ ಈ ಕವಿತೆಗಳನ್ನು ಸಂಧ್ಯಾ ಬರೆದಿದ್ದಾರೇನೋ ಅನ್ನಿಸುವಂತೆ, ಬೇರೆ ಕವಿತೆಯನ್ನು ಓದಲೇ ಇಲ್ಲವೇನೋ ಎಂಬಂತೆ, ಇವು ಕವಿತೆಗಳೇ ಅಲ್ಲವೆಂಬಂತೆ, ಇವನ್ನು ಬರೆಯದೇ ಹೋಗಿದ್ದರೆ ಸಂಧ್ಯಾದೇವಿ ಇರುತ್ತಿರಲೇ ಇಲ್ಲವೇನೋ ಎಂಬಂತೆ- ಈ ಸಾಲುಗಳು ನಮ್ಮೊಳಗೆ ಪ್ರವೇಶಿಸುತ್ತಾ ಹೋಗುತ್ತವೆ.
ಯಾರಾದರೂ
ನಮ್ಮ ಸಂಕಟಕ್ಕೊಂದು ಸಮಾನ ಪದ
ಕೊಡದಿದ್ದರೆ ಬಹುಶಃ ಅದು
ಹಾಗೇ ಉಳಿದುಬಿಡುತ್ತದೆ
ಕೊನೆಯವರೆಗೆ.
ಕೊಡುವಾಗ ಒಬ್ಬ ತೆಗೆದುಕೊಳ್ಳುವವನಿರಬೇಕು
ಕೈಯೊಡ್ಡಿ
ಬೇಡುವಾಗ ಒಬ್ಬ ಕೊಡುವವನಿರಬೇಕು
ಕೈ ನೀಡಿ.
*****
ಕ್ಷಮಿಸಿ. ಇವು ಕವಿತೆಗಳಲ್ಲ. ನಾವೆಲ್ಲೋ ಓದಿದ ಕವಿತೆಗಳಂತೂ ಅಲ್ಲವೇ ಅಲ್ಲ. ಕವಿತೆಗೆ ಇರಬೇಕಾದ ಗುಣಲಕ್ಷಣಗಳು ಈ ಸಾಲುಗಳಿಗೆ ಇಲ್ಲ. ಇವು ಏನನ್ನೂ ಹೇಳುವುದಿಲ್ಲ; ಏನನ್ನೂ ಹೇಳದೇ ಇರುವುದೇ ಕವಿತೆ. ಏನನ್ನೂ ಹೇಳುವುದಿಲ್ಲ ಅನ್ನುವುದನ್ನಾದರೂ ಅವು ಹೇಳಲೇಬೇಕಲ್ಲ. ಸಂಧ್ಯಾದೇವಿಯ ಸಾಲುಗಳು ಅದನ್ನೂ ಹೇಳುವುದಿಲ್ಲ. ಅವು ಕಾಡಿನಲ್ಲಿ ಅರಳಿದ ಹೂವಿನ ಹಾಗೆ ಸುಮ್ಮನೆ ಇವೆ. ಅವನ್ನು ನೋಡುತ್ತಿದ್ದ ಹಾಗೆ ನಿಮ್ಮೊಳಗೆ ಏನಾದರೂ ಹೊಳೆದರೆ ಅದು ನಿಮ್ಮ ಭಾಗ್ಯ.
ನೀನು ಲೇಖನಿ ಕೊಟ್ಟೆ
ನನ್ನ ಕೈಯಲ್ಲಿ
ನಾನು ನನ್ನ ಭಾಗ್ಯವನ್ನು ಬರೆದುಕೊಂಡೆ.
ಸೂರ್ಯ ಚಂದ್ರರು ನಕ್ಕುಬಿಟ್ಟವು.
ಬದುಕು ಸಹಕರಿಸಿತು
ಒಂದು ಖಾಲಿ ಹಾಳೆಯೆಂಬಂತೆ.
ಎಳೆದ ರೇಖೆಗಳೆಲ್ಲ ನಾಳೆ ನಾಳೆ ಎಂದವು
ನೀನದನ್ನು ಎಳೆದು ಇವತ್ತೇ ತಂದೆ.
****
ಮಾತು ಚಿಟ್ಟೆ ಬೆಂಕಿ-ಬೆರಳು ಮುರಿದ ಮುಳ್ಳಿನಂತೆ ಜ್ಞಾನ- ಎಂಬ ಹೆಸರಿನ ಕವಿತಾಗುಚ್ಛದ ಆರಂಭದಲ್ಲೇ ಸಂಧ್ಯಾ `ಚಿಕ್ಕ ಬೆಂಕಿಚೂರನ್ನು ನನ್ನ ಕೈಗೆ ಕೊಟ್ಟ ಜ್ಞಾನಾಗ್ನಿ’ಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ. ಕವಿತೆಗಳಲ್ಲಿ ಬೆಳಕಿದೆ, ಬೆರಗೂ ಇದೆ. ಇದುವರೆಗೆ ನಾವು ಓದಿದ ಕವಿತೆಗಳನ್ನು ಮೀರಿದ ಸರಳತೆ ಇದೆ. ಎಷ್ಟೋ ಕವಿತೆಗಳನ್ನು ಓದಿದಾಗ ಏನೂ ಓದಿದ್ದೇವೆ ಅನ್ನಿಸುವುದಿಲ್ಲ. ಎಷ್ಟೋ ಕವಿತೆಗಳು ನೆನಪಲ್ಲಿ ಉಳಿಯುವುದಿಲ್ಲ. ನಮ್ಮನ್ನು ಯಾವುದು ಬದಲಿಸುವುದಿಲ್ಲವೋ ಅದು ಪದ್ಯ, ಬದಲಿಸಲು ಹೊರಟರೆ ಅದು ಪ್ರಾಪಗಂಡ, ಬದಲಾಯಿಸಿಯೇ ತೀರುತ್ತೇನೆ ಅಂತ ಹಠತೊಟ್ಟರೆ ಅದು ಮ್ಯಾನಿಫೆಸ್ಟೊ. ಸುಮ್ಮನಿರುವಂತೆ ಹೇಳಿದರೆ ಅದು ಆದೇಶ.
ಸಂಕೇತಗಳು ವಿದ್ಯುತ್ತಿನಂತೆ
ಮುಟ್ಟಿಸಿಕೊಂಡವರಿಗೆ ಮಾತ್ರವೇ ಮನದಟ್ಟಾಗುತ್ತದೆ
ಆ ಸಮಯ ಇನ್ನೂ
ನನ್ನೊಳಗಿನಿಂದ ಇಳಿದು ಹೋಗಲಿಲ್ಲವೆಂಬಂತೆ
ಅಲುಗಾಡುತ್ತಿದೆ ಸಣ್ಣ ಆಯಾಸ.
***
ಮುಟ್ಟಿದರೆ ನಲುಗುವ, ಜೋರಾಗಿ ಉಚ್ಚರಿಸಿದರೆ ಮುದುಡಿಕೊಳ್ಳುವ, ಮುಟ್ಟಿದರೆ ಮುನಿಯುವಂಥ ಸಾಲುಗಳನ್ನು ಸಂಧ್ಯಾ ಬರೆದಿದ್ದಾರೆ. ಸುಮಾರು ನೂರೆಂಬತ್ತು ಪುಟಗಳ ತುಂಬ ಚೆಲ್ಲಿಕೊಂಡಿರುವ ಇನ್ನೂರೂ ಚಿಲ್ಲರೆ ಕವಿತೆಗಳಿಗೆ ಒಟ್ಟಾರೆಯಾಗಿ ಒಂದು ಕೇಂದ್ರವಿಲ್ಲ, ವಲಯವಿದೆ. ಆ ವಲಯ ಎಲ್ಲವನ್ನೂ ಒಳಗೊಳ್ಳುತ್ತದೆ. ಒಂದು ಕವಿತೆಯ ನೆರಳು ಮತ್ತೊಂದರಲ್ಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದರ ಮೇಲೂ ಚಿಂತನೆಗಳ ಭಾರವಿಲ್ಲ. ಕೆಲವೊಮ್ಮೆ ಕವಿತೆಯೇ ಒಂದು ರೂಪಕವಾಗಿದೆ ಅನ್ನುವುದನ್ನು ಬಿಟ್ಟರೆ ಚಿಟ್ಟೆಯಷ್ಟೇ ಹಗುರವಾದ ಕವಿತೆಗಳಿವು.
ಹಾಯ್ಕುಗಳನ್ನು ವಿಸ್ತರಿಸಿದಂತೆ, ಕೈಗೆ ಸಿಕ್ಕಿದ ವರ್ಣಗಳನ್ನೆತ್ತಿಕೊಂಡು ರಂಗೋಲಿ ಹಾಕಿದಂತೆ, ಬ್ರ್ನ ಬಿಡುಬೀಸು ಗೀಚಿನಂತೆ, ಗಾಳಿಗೆ ಬಾಳೆಯ ವನ ತೊನೆದಂತೆ ನಿರರ್ಥಕ ಸುಖ ಕೊಡುವ ಪದ್ಯಗಳ ಜೊತೆಗೇ, ಒಡಪಿನಂಥ ರಚನೆಗಳೂ ಇಲ್ಲಿವೆ. ಇದ್ದಕ್ಕಿದ್ದಂತೆ ಚೆರ್ರಿ ಮರದ ಹೆಸರು, `ನೋ’ ನೆನಪು ಎದುರಾಗುತ್ತದೆ. ಕವಿತೆಗಳು ನವಿಲುಗಳಂತೆ ಗರಿಬಿಚ್ಚಿ ಕುಣಿಯಬೇಕು ಅನ್ನುತ್ತವೆ. ಕೊಂಚ ನೀತಿಬೋಧೆ ಮಾಡುತ್ತವೆ. ಉತ್ಕಟವಾಗುವ ಹೊತ್ತಲ್ಲೇ ನಿರಾಳವೂ ಆಗುತ್ತವೆ. ಪ್ರವಾದಿಯಂತೆ ಬೋಧಿಸುತ್ತವೆ:
ಈ ಲೋಕದಲ್ಲಿ ಸುಖ, ಸೌಭಾಗ್ಯ, ಸಂಪತ್ತು
ಮತ್ತು ಸ್ತುತಿಗಳು ಯಾರಿಗೆ ನಿಜಕ್ಕೂ
ಸ್ವಲ್ಪವೂ ಬೇಕಾಗಿಲ್ಲವೋ ಅವರಿಗೇ
ಎಲ್ಲವೂ ಸಲ್ಲುತ್ತವೆ.
***
ಸಂಧ್ಯಾದೇವಿ ಇವನ್ನೆಲ್ಲ ಪುತ್ತೂರಿನಂಥ ಪುಟ್ಟೂರಿನಲ್ಲಿ ಕೂತು ಬರೆದಿದ್ದಾರೆ. ತಮ್ಮ ಸಂತೋಷಕ್ಕೋ ದುಃಖಕ್ಕೋ ಏಕಾಂತಕ್ಕೋ ಸಾಂಗತ್ಯಕ್ಕೋ ಬರೆದುಕೊಂಡಿದ್ದಾರೆ. ಇದನ್ನು ಅವರು ಯಾಕಾದರೂ ಬರೆದರೋ ಅನ್ನಿಸುವಷ್ಟು ನೋವು, ಇನ್ನಷ್ಟು ಬರೆಯಲಿ ಅನ್ನುವ ಸಂತೋಷ- ಎರಡನ್ನೂ ಈ ಕವಿತೆಗಳು ಕೊಡುತ್ತವೆ. ಮತ್ತೆ ಮತ್ತೆ ಓದಿದಾಗ ಇವುಗಳು ಮತ್ತೊಂದು ಥರ ಪರಿಭಾವಿಸಿಕೊಳ್ಳುತ್ತವೆಯೋ ಅನ್ನುವುದನ್ನು ಕಾಲಕ್ರಮೇಣ ತಿಳಿದುಕೊಳ್ಳಬೇಕಿದೆ.
ಒಂದು ನೋವಿನ ಜೊತೆ ಮಲಗಿದೆ.
ಎಲ್ಲರಂತೆ. ನೋವೇ ಹುಟ್ಟಿತು
ಸಂಧ್ಯಾದೇವಿಗೆ ಕವಿತೆಯ ಕೂಗಿನಂತಿರುವ ಅಸ್ಪಷ್ಟ ಹಾದಿಯೇ ಇಷ್ಟ.