ಬದುಕಿಗೆ ಭಗವದ್ಗೀತೆ – ವ್ಯಥೆಗೆ ವಶನಾಗದ ಸಮಚಿತ್ತದ ಧೀರ
‘ಅನಿತ್ಯವೂ ಪರಿವರ್ತನಶಿಲವೂ ಆದ ಜೀವನಾನುಭವಗಳನ್ನು ಸಹಿಸಿಕೊ!” ಎಂದು ಹೇಳಿದ ಶ್ರೀಕೃಷ್ಣನು ಮುಂದುವರೆಸುತ್ತಾನೆ- ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭI ಸಮದುಃಖಸುಖಂ ಧೀರಂ ಸೋಽಮೃತತ್ವಾಯ ಕಲ್ಪತೇ II“ಹೇಅರ್ಜುನ ! ಯಾವ ವ್ಯಕ್ತಿಯನ್ನು ಇವು (ಈ ಬದಲಾಗುವ ಸನ್ನಿವೇಶಗಳು) ವ್ಯಥೆಗೊಳಿಸಲಾರವೋ, ಯಾವನು ಸುಖದುಃಖಗಳಲ್ಲಿ ಸಮವಾಗಿವರ್ತಿಸುವನೋ, ಅಂತಹ ‘ಧೀರನು’ ಅಮೃತತ್ವಕ್ಕೂ (ಮೋಕ್ಷಕ್ಕೂ) ಅರ್ಹನಾಗುತ್ತಾನೆ.
ದೇಹದಲ್ಲಿ ಹುಟ್ಟಿಬಂದಮೇಲೆ ವ್ಯಕ್ತಿಯು ವಿದ್ಯೆ-ಗುಣ-ಪ್ರತಿಭೆಗಳನ್ನು ಬೆಳೆಸುತ್ತ ಬಳಸುತ್ತ ಸಾಫಲ್ಯವನ್ನು ಪಡೆದು ಧನ್ಯನೆನಿಸಬೇಕು, ಬಂಧುಮಿತ್ರರೊಂದಿಗೆ ಸುಖಿಸಬೇಕು, ನಿಜ. ಆದರೆ ‘ಇವು ಶಾಶ್ವತವಲ್ಲ’ ಎನ್ನುವ ಕಟುಸತ್ಯವನ್ನೂ ನೆನಪಿಟ್ಟುಕೊಳ್ಳಬೇಕು! ಮರೆತರೆ, ಮರುಕ್ಷಣದಿಂದಲೇ ಸಮಸ್ಯೆ ಪ್ರಾರಂಭ! ಏಕೆಂದರೆ ಈ ಜೀವನವೆಂಬ lifetime Packageನಲ್ಲಿ ಸುಖ-ದುಃಖ, ಕೀರ್ತಿ-ನಿಂದೆ, ಸಾಫಲ್ಯ-ನಿರಾಶಗಳೆಂಬ ದ್ವಂದ್ವಾನುಭವಗಳೇ ತುಂಬಿರುವುದು!ನಾವು ನಮ್ಮ ಸ್ಥಿತಿಗತಿಗಳನ್ನು ಅದೆಷ್ಟೇ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತ ಹೋದರೂ, ಅಪಮಾನ-ವಿಯೋಗ-ರೋಗ-ಮುಪ್ಪು-ಮರಣಗಳು ಅದರೊಳಗೆ ನುಸುಳುವುದು ತಪ್ಪದು. ಇದು ಜೀವನದ ಸ್ವರೂಪ. ಹೀಗಿರುವಾಗ, ಮಾನಸಿಕ ಸಿದ್ಧತೆಮಾಡಿಕೊಂಡಿರುವುದು ಲೇಸಲ್ಲವೆ? ತನ್ಮೂಲಕ, ಜೀವನದ ತಿರುವು ಮುರುವುಗಳನ್ನು ಎದುರಿಸುವ ಛಲಬಲಗಳನ್ನು ಬೆಳೆಸಿಕೊಳ್ಳಬಹುದಲ್ಲವೆ?
ಮನುಷ್ಯನು ಎಲ್ಲಿ ಎಡವುತ್ತಾನೆ ಗೊತ್ತೆ? -ಒಂದಷ್ಟುಸಿದ್ಧಿ-ಯಶಸ್ಸುಗಳನ್ನು ಆಸ್ವಾದಿಸುವಾಗ! ಬಂಧುಮಿತ್ರರು ಅನುಕೂಲವಾಗಿರುವಾಗ! ಬಯಸಿದ್ದೆಲ್ಲ ಕೈಗೆ ದಕ್ಕುತ್ತಿರುವಾಗ! ’ಆ ಸಂತಸದ ಬಿಸಿಯಲ್ಲಿ ಪಿತ್ತ ನೆತ್ತಿಗೇರುತ್ತದೋ ಏನೋ! ಬುದ್ಧಿ ಆಲೋಚಿಸುವುದನ್ನೇ ಬಿಟ್ಟುಬಿಡುತ್ತದೆ! ಇದೆಲ್ಲ ಹೀಗೆಇರುತ್ತವೆ!” ಎಂಬ ಅನೈಜವಾದ ‘ನೆಮ್ಮದಿಯ ಭ್ರಾಂತಿ’ ಹುಟ್ಟುತ್ತದೆ! ಮುಂದೆ ಆಗಬಹುದಾದ ಬದಲಾವಣೆಗಳ ಕಡೆಗೆ ಎಚ್ಚರ ತಪ್ಪುತ್ತದೆ! ಆದರೆ ಜೀವನ ಬದಲಾಗದೇ ಇದ್ದೀತೆ? ದಕ್ಕಿದ್ದು ಕೈತಪ್ಪೀತು! ರೋಗಮುಪ್ಪುಗಳು ಆವರಿಸಿಯಾವು! ಪ್ರಾಣಪ್ರಿಯರೇ ದೂರವಾದಾರು! ಏನುಬೇಕಾದರೂ Turn of events ಆಗಬಹುದು! ಸುಖದ ಅಮಲಿನಲ್ಲಿ ಮೈಮರೆತು ಜೀವನ ಸ್ವರೂಪದ ವಿಮರ್ಶೆಯನ್ನು ಕೈಬಿಟ್ಟರೆ, ಕಂಗಾಲಾಗುವುದು ತಪ್ಪೀತೇ? ಅಲ್ಲಿಗೆ ಮನಸ್ಸು ಮುದುಡುತ್ತದೆ, ಮತಿಯು ಮಂಕಾಗುತ್ತದೆ, ಮೈಯಿ ಕುಗ್ಗುತ್ತದೆ, ಜೀವನವೆ ದುರ್ಭರವೆನಿಸುತ್ತದೆ!
ಆದರೆ ಜೀವನವನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡ ಜಾಣನ ರೀತಿಯೇ ಬೇರೆ. ಮನದಲ್ಲಿ ’ಎಲ್ಲಕ್ಕೂ ತಯಾರಿರುವ’ ಪೂರ್ವಸಿದ್ಧತೆ ಅವನಿಲ್ಲಿರುತ್ತದೆ. ಹಾಗಾಗಿ ಜೀವನದ Turn of eventsನಿಂದ ಆತನಿಗೆ ತುಂಬ ಆಘಾತವಾಗದು. ಅಂತಹವನು ಒಂದೆಡೆ ಜೀವನ-ವಿಮರ್ಶೆ ಮಾಡುತ್ತಿರುತ್ತಾನೆ. ಮತ್ತೊಂದೆಡೆ, ತನ್ನ ಧರ್ಮಕರ್ಮಗಳನ್ನು ಎಚ್ಚರದಿಂದ ಮಾಡುತ್ತ, ಸ್ವಹಿತ-ಲೋಕಹಿತಗಳನ್ನು ಸಾಧಿಸುತ್ತಾನೆ. ಹೊರಗಡೆಯ ಸೋಲು-ಗೆಲುವು, ನೋವು-ನಲಿವುಗಳನ್ನೇ ನೆಚ್ಚಿಕೊಳ್ಳುತ್ತ ಭಾವುಕನಾಗದೆ ಸಮತ್ವವನ್ನು ಸಾಧಿಸುವ ‘ಧೀರ’ನೆನಿಸುತ್ತಾನೆ. ಸ್ವಲ್ಪ ಆಲೋಚಿಸಿ ನೋಡೋಣ- ಸುಖವಾಗಲಿ ದುಃಖವಾಗಲಿ ಅನಿರೀಕ್ಷಿವಾಗಿ ಬಂದೊದಗುತ್ತವೆ. ನಾವು ವ್ಯಕ್ತಿ-ವಸ್ತು-ಸಾಫಲ್ಯಗಳ ಬಗ್ಗೆ ಕಟ್ಟಿಕೊಳ್ಳುವ ಕನಸುಗಳು ನನಸಾಗಬಹುದು, ಆಗದೆಯೂ ಇರಬಹುದು! ಊಹಿಸಿರದ ಸುಖ-ಸಂಪದ-ಕೀರ್ತಿಗಳು ಬಾಗಿಲಿಗೇ ಬಂದು ನಿಲ್ಲಬಹುದು! ಅಥವಾ ‘ತನ್ನವರೇ’ ಕೈಬಿಟ್ಟು ಆಘಾತ ಉಂಟುಮಾಡಬಹುದು! ನಿರೀಕ್ಷಿಸದ ಮೂಲದಿಂದ ಸಹಾಯಹಸ್ತ ಬಂದೊದಗಬಹುದು. ಅಥವಾ ’ಬೇಕಾದವರು’ ಬೇಡವಾಗಬಹುದು! ‘ಬೇಡ’ವೆನಿಸಿದವರೇ ಬೇಕಾದವರಾಗಲೂಬಹುದು! -ಇವೆಲ್ಲ ಜೀವನ ನಾಟಕದ ಅಂಕಗಳು. ಇವುಗಳ ಮೇಲೆ ಯಾರಿಗೂ ನಿಯಂತ್ರಣವಿರದು. ಆದರೆ ಇವುಗಳನ್ನು ಅರ್ಥಮಾಡಿಕೊಂಡು ಜಾಣ್ಮೆಯಿಂದ ಮೀರಿ ನಿಲ್ಲುವ ತಾಕತ್ತಂತೂ ಎಲ್ಲರಲ್ಲೂ ಇದೆ! ವ್ಯಕ್ತಿಯು ಈ ತಾಕತ್ತನ್ನು ತನ್ನೊಳಗೆ ತಾನೆ ಸಾಕ್ಷಾತ್ಕರಿಸಿಕೊಂಡಾಗ ‘ಯಾರೋ ಒಲಿಯಲಿಲ್ಲ’, ‘ಯಾವುದೋ ಸಿಗಲಿಲ್ಲ’ವೆಂದು ಹತಾಶನಾಗುವುದಿಲ್ಲ, ಹಗೆಯನ್ನೂ ಸಾಧಿಸುವುದಿಲ್ಲ, ಆತ್ಮಹತ್ಯೆಗೂ ಶರಣಾಗುವುದಿಲ್ಲ, Sympathyಗಾಗಿಯೂ ಇದಿರು ನೋಡುವುದಿಲ್ಲ, ಮಾನಸಿಕ-ಖಿನ್ನತೆಗೂ ವಶವಾಗುವುದಿಲ್ಲ. ಒಂದಷ್ಟು ನೋವು ನಿರಾಶೆಗಳಾದರೂ, ‘ಇದು ಜೀವನದ ಆಟ’ ಎಂದೊಪ್ಪಿಕೊಂಡು, ಕಣ್ಣೊರೆಸಿಕೊಂಡು, ಜೀವನ ಧ್ಯೇಯದತ್ತ ಮುನ್ನಡೆಯುವ ಛಲಬಲಗಳನ್ನು ಮರಳಿ ಪಡೆಯುತ್ತಾನೆ!
ಜೀವನದಲ್ಲಿ ಸೋಲುವುದು, ಗೆಲ್ಲುವುದು ಎಂದರೆ ಇಷ್ಟೇತಾನೆ! ಜೀವನದ ಘಟನಾವಳಿಗಳನ್ನು ನಿಯಂತ್ರಿಸಲಾಗದಿದ್ದರೂ, ಅವುಗಳ ಪ್ರಭಾವದಿಂದ ಮೇಲೆದ್ದು ನಿಲ್ಲಬಲ್ಲೆವು. ಆಗ ಮಾತ್ರ ನಮ್ಮ ಭಾವುಕತೆ ಕುಗ್ಗಿ, ವಿವೇಕೋದಯವಾಗಿ, ಜೀವನ ಅರ್ಥಪೂರ್ಣವಾಗುತ್ತದೆ.
ಯಾವುದೋ ಅಂಗಾಂಗವನ್ನೋ, ಆಸ್ತಿಯನ್ನೋ, ಪ್ರೀತಿಪಾತ್ರರನ್ನೋ ಕಳೆದುಕೊಂಡರೆಂದೋ ಅಥವಾ ಪರೀಕ್ಷೆಯಲ್ಲಿನ ಪಾಸಾದರೆಂದೋ, ಪ್ರೇಯಸಿ/ಪ್ರಿಯತಮ ಪ್ರತಿಸ್ಪಂದಿಸಲಿಲ್ಲವೆಂದೋ ಹತಾಶರಾಗಿ ಆತ್ಮಹತ್ಯೆ ಅಥವಾ ಮಾನಸಿಕ ಕಾಯಿಲೆಗಳಿಗೆ ಸಿಲುಕುವವರ ಪ್ರಸಂಗಗಳನ್ನು ನೋಡುತ್ತಿರುತ್ತೇವೆ. ಅಂತಹವರು ’ಜೀವನವೆಂದರೆ‘ ಕೇವಲ ಆ ಲಾಭ-ನಷ್ಟಗಳು’ ಎಂಬ ಭ್ರಾಂತಿಯವರು. ಆದರೆ ಮತ್ತೆ ಕೆಲವರಿರುತ್ತಾರೆ-ದೇಹದಲ್ಲಿ ದೊಡ್ಡ ಊನಗಳೂ ರೋಗಗಳೂ ಇದ್ದೂ, ಆಸ್ತಿ-ಬಂಧು-ಮಿತ್ರರನ್ನೆಲ್ಲ ಕಳೆದುಕೊಂಡಿದ್ದೂ, ಕಷ್ಟ-ನಷ್ಟ-ಅಪಕೀರ್ತಿಗಳಲ್ಲಿ ಸಿಲುಕಿದ್ದೂ, ತಾಳ್ಮೆಯಿಂದ ಜೀವನವನ್ನು ಮತ್ತೆಮತ್ತೆ ಕಟ್ಟಿಕೊಳ್ಳುತ್ತಲೇ ಇರುತ್ತಾರೆ! ಅವರಿಗೆ ನೋವಾಗುವುದಿಲ್ಲವೆಂದಲ್ಲ, ಆದರೆ ನೋವಿನ ಮೇಲೇರಿ ನಿಲ್ಲುವ ಸ್ಥೈರ್ಯ ಅವರಲ್ಲಿ ಇರುತ್ತದೆ! ಕಾರಣವೇನು ಗೊತ್ತೆ? ಅವರ ಪಾಲಿಗೆ ಹೊರಗಡೆಯ ಲಾಭನಷ್ಟಗಳಿಗಿಂತ ತಮ್ಮೊಳಗಿನ ’ಚೈತನ್ಯದ ಧ್ಯಾನವೇ ಹೆಚ್ಚು! ಅಂತಹ ಧೀರರು ಮಾತ್ರ ‘ಸಮಚಿತ್ತ’ರಾಗಲು ಸಾಧ್ಯ.
ಕಾಲಾಂತರದಲ್ಲಿ ಅವರ ಈ ಸ್ಥೈರ್ಯವೇ ಅವರನ್ನು ಅಮೃತತ್ವಕ್ಕೂ ಒಯ್ಯಬಲ್ಲುದು.
ಹೀಗೆ ‘ಮನೋವಿಜ್ಞಾನಿ’ಯಾದ ಶ್ರೀಕೃಷ್ಣನ ಮಾತಿನಲ್ಲಿ ನಮ್ಮ ಜೀವನಕ್ಕೆ ಪೋಷಕವಾದ ಅದೆಷ್ಟೆಲ್ಲ ಇಂಗಿತಾರ್ಥಗಳು ಧ್ವನಿಸುತ್ತವೆಯೋ !
ಡಾ ಆರತೀ ವಿ ಬಿ
ಕೃಪೆ : ವಿಜಯವಾಣಿ