ಬದುಕಿಗೆ ಭಗವದ್ಗೀತೆ – ರಣರಂಗದಲ್ಲೇಕೆ ತತ್ವೋಪದೇಶ?
ಕೃಷ್ಣನು ಅರ್ಜುನನ ಬುದ್ಧಿಯನ್ನು ಹೇಗೆ ಉನ್ನತೋನ್ನತ ತತ್ವಾನುಸಂಧಾನದತ್ತ ಎಳೆದೊಯ್ಯುತ್ತಿದ್ದಾನೆ ಎಂಬುದನ್ನು ಗಮನಿಸಿದಿರಾ? “ಅಲ್ಲ, ಬಂಧುಗಳನ್ನು ಕೊಲ್ಲಲ್ಲಾರೆ’ ಎಂದು ಭಾವುಕನಾದಾಗ ಅರ್ಜುನನಿಗೆ ಕರ್ತವ್ಯಬೋಧೆಯನ್ನು ಮಾಡಿದ್ದು ಸಮಂಜಸವಾಗಿದೆ!ಆದರೆ ಶಾಂತ ಪರಿಸರದಲ್ಲಿ ಚರ್ಚಿಸಬೇಕಾದ ತತ್ವವಿಚಾರಗಳನ್ನು ಘೋರವಾದ ರಣರಂಗದಲ್ಲೇಕೆ ಎತ್ತಬೇಕಾಗಿತ್ತು? ಉಭಯಸೈನ್ಯಗಳೂ ಸನ್ನದ್ಧವಾಗಿವೆ! ಶಂಖಗಳನ್ನೂ ಊದಿಯಾಗಿದೆ! ಇನ್ನೇನು ಶಸ್ತ್ರಾಸ್ತ್ರಗಳು ಹಾರಾಡಲಿವೆ! ಶವಗಳು ಉದುರಲಿವೆ!—ಇಂತಹ ರೌದ್ರ-ಭೀಭತ್ಸ ರಸಗಳ ಕೂಟದಲ್ಲಿ ಶಾಂತರಸವನ್ನು ಹರಿಯಿಸುವ ‘ಔಚಿತ್ಯ’ವಾದರೂ ಏನು? ಯುದ್ಧಮುಗಿದ ಬಳಿಕ ಸಮಾಧಾನವಾಗಿ ಇದನ್ನೆಲ್ಲ ಚರ್ಚಿಸಬಹುದಿತ್ತು!” ಎಂದು ನಮ್ಮ ‘ಆ ದೂರದೃಷ್ಟಿ’ಯ ಬುದ್ಧಿಯು ವಾದಿಸಿದರೂ ಆಶ್ಚರ್ಯವಿಲ್ಲ!
ಸ್ವಲ್ಪ ಆಲೋಚಿಸಿ ನೋಡೋಣ- ಮುಖ್ಯವಾದ ಕೆಲಸವನ್ನು ಒಬ್ಬರಿಂದ ಹೇಗೋ ಏನೋ ಮನವೊಲಿಸಿ ತಕ್ಷಣಕ್ಕೆ ಮಾಡಿಸಿಬಿಡಬಹುದು. ಅದೇನೂ ದೊಡ್ಡ ವಿಚಾರವಲ್ಲ. ಆದರೆ ಈ ಪ್ರಸಂಗದಲ್ಲಿ ಕೃಷ್ಣನ ಉದ್ದೇಶವು ಅಷ್ಟೇ ಆಗಿತ್ತೇನು? ಖಂಡಿತ ಇಲ್ಲ. ಹಾಗೇನಾದರೂ ಇದ್ದಿದ್ದರೆ ಭಗವದ್ಗೀತೆಗೇ ಏನೂ ಮಾಹಾತ್ಮ್ಯವೇ ಇರುತ್ತಿರಲಿಲ್ಲ!
ಅರ್ಜುನನು ತನ್ನ ಧರ್ಮಕರ್ಮಗಳನ್ನು ಚೆನ್ನಾಗಿ ತಿಳಿದ ಸತ್ವಸಂಪನ್ನ ವ್ಯಕ್ತಿ. ಆದರೆ ಅತ್ಯಂತ ದುರ್ಭರವಾದ ಸ್ವಜನ ವಿಯೋಗವನ್ನು ಎದುರಿಸಬೇಕಾದ ಕ್ಷಣಗಳಲ್ಲಿ ಭಾವುಕನಾದ. ಅವನಿಗೆ ಆ ಕ್ಷಣಗಳಲ್ಲಿ ಬೇಕಾಗಿದ್ದು ಕೇವಲ ಸಾಂತ್ವನವೋ ಪ್ರೇರಣೆಯೋ ಅಲ್ಲ. ಅವನಿಗೆ ಬೇಕಾದದ್ದು ‘ತತ್ವನಿಶ್ಚಯ’. ಕೃಷ್ಣನಿಗದು ಗೊತ್ತು. ಅರ್ಜುನನ ಅಂತರಂಗದ ಕೆಲವು ಪ್ರಶ್ನೆಗಳಿಗೆ ಉತ್ತರಗಳು ಬೇಕಿವೆ. ಅವು ತಣಿಯದೆ, ಆತನ ಗೊಂದಲ ತೀರದು. ಗೊಂದಲ ತೀರದೆ, ಆತನಿಗೆ ಕರ್ತವ್ಯನ್ನು ಒಮ್ಮನದಿಂದ ಮಾಡಲಾಗದು. ಅರೆಮನಸ್ಸಿನಿಂದ ಹೇಗೋ ಮಾಡಿ ಮುಗಿಸಿ ಇತ್ತ ಬರುವ ಅಪ್ರಾಮಾಣಿಕನೂ ಅಲ್ಲ ಆತ.
ಧರ್ಮಪ್ರಜ್ಞೆಯು ಯಾರಲ್ಲಿ ಜಾಗೃತವಾಗಿ ಕೆಲಸ ಮಾಡಲಾರಂಭಿಸಿರುತ್ತದೋ, ಅಂತಹ ವ್ಯಕ್ತಿಯಲ್ಲಿ ಇಂತಹ ಪ್ರಶ್ನೆಗಳೂ ಗೊಂದಲಗಳೂ ಏಳುವುದು ಸಹಜವೇ. ಆದರೆ ಲೋಕದ ಫಲಾಫಲಗಳನ್ನಷ್ಟೇ ನೆಚ್ಚಿ ಕೆಲಸ ಮಾಡುವ ಸಾಮಾನ್ಯರಿಗೆ ಅಂತಹ ಗೊಂದಲವಿರದು ಬಿಡಿ! ಅವರ ಗೊಂದಲವೇನಿದ್ದರೂ ಮಾಡಿದಕರ್ಮಗಳ ಫಲಗಳನ್ನು ಅನುಭವಿಸಬೇಕಾದಾಗ ಭುಗಿಲೇಳುತ್ತದೆ! ಅರ್ಜುನನಲ್ಲಿ ಧರ್ಮಪ್ರಜ್ಞೆ ಮೂಡಿರದಿದ್ದರೆ, ಆತನಿಗೆ ಒಂದಷ್ಟು ಪ್ರೇರಣಾದಾಯಕ ನುಡಿಗಳಷ್ಟೇ ಸಾಕಾಗುತ್ತಿದ್ದವೇನೊ. ಏಕೆಂದರೆ ಸ್ವಂತ ಜಿಜ್ಞಾಸೆ ಬೆಳೆದಿಲ್ಲದವನಿಗೆ ತತ್ವವಿಚಾರವನ್ನು ಹೇಳಿದರೂ ಅರ್ಥವಾಗದು, ರುಚಿಸದು. ಯಸ್ಯ ನಾಸ್ತಿಸ್ವಯಂಪ್ರಜ್ಞಾಶಾಸ್ತ್ರಂ ತಸ್ಯ ಕರೋತಿಕಿಂ I ಲೋಚನಾಭ್ಯಾಂವಿಹೀನಸ್ಯ ದರ್ಪಣಃ ಕಿಂಕರಿಷ್ಯತಿII(ಸ್ವಯಂಪ್ರಜ್ಞೆ/ ಜಿಜ್ಞಾಸೆ/ ವಿವೇಚಿಸುವ ಶಕ್ತಿ ಇಲ್ಲದವನಿಗೆ ಶಾಸ್ತ್ರದಿಂದೇನು ಉಪಯೋಗ? ಕುರುಡನಿಗೆ ಕನ್ನಡಿಯಿಂದದೇನು ಪ್ರಯೋಜನ?) ಉಪದೇಶವನ್ನು ಕೊಡುವಾಗ ವ್ಯಕ್ತಿಯ ವಯಸ್ಸು, ಜಿಜ್ಞಾಸೆಯ ಮಟ್ಟ, ಸಮಯ-ಸಂದರ್ಭ ಹಾಗೂ ಸುಪ್ತ-ಧ್ಯೇಯೋದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು, ಆಗ ಮಾತ್ರ ‘ಯಾರಿಗೆ ಯಾವ ಮತನ್ನು ಯಾವಾಗ ಹೇಳಬೇಕೆಂಬ’ ಸ್ಪಷ್ಟತೆ ಗುರುವಿಗೆ ಮೂಡುತ್ತದೆ. ಔಷಧಿಯನ್ನು ಕೊಡುವಾಗ ಮಕ್ಕಳಿಗೆ child Dosage ಎಂದೂ ದೊಡ್ಡವರಿಗೂ adult dosage ಎಂದೂ ಭಿನ್ನಭಿನ್ನವಾಗಿ ಕೊಡುವುದಿಲ್ಲವೆ? ಹಾಗೆ!
ಅರ್ಜುನನಲ್ಲಿ ಧರ್ಮಪ್ರಜ್ಞೆ ಎದ್ದಿದೆ. ಜಿಜ್ಞಾಸೆ ಮೂಡಿದೆ. ದುಃಖ-ಧರ್ಮಸಂಕಟಗಳು ಎದುರಾದಾಗ ಆ ಪ್ರಜ್ಞೆ ಮತ್ತಷ್ಟು ಜಾಗೃತವಾಗಿ ಕೆಲಸ ಮಾಡುತ್ತಿದೆ! ನೋವಿನ ಪ್ರಸಂಗಗಳೇ ತಾನೆ ತತ್ವವಿಚಾರವನ್ನೂ ಹೆಚ್ಚಾಗಿ ನೆನಪಿಸುವುದು!ಜಗದ್ಗುರುವಾದ ಶ್ರೀಕೃಷ್ಣನಿಗೆ ಇದೆಲ್ಲವು ಚೆನ್ನಾಗಿ ಗೊತ್ತು. ಕಾದಾಗಲೇ ಕಬ್ಬಿಣವನ್ನು ಬಗ್ಗಿಸಲು ಸುಲಭ ಸಾಧ್ಯವಷ್ಟೇ? ಅರ್ಜುನನ ಅಂತರಂಗದ ಮೋಡಗಳನ್ನು ಚದುರಿಸಿ, ಆತನ ಬಹುಕಾಲದ ಜಿಜ್ಞಾಸೆಗೆ ಸೂಕ್ತ ಉತ್ತರಗಳನ್ನು ಹೊಳೆಯುವಂತೆ ಮಾಡಲು ಇದೇ ಸೂಕ್ತ ಸಮಯ ಎಂದು ಅರಿತ. ಕೃಷ್ಣನು ಮೊದಮೊದಲು ಅರ್ಜುನನಿಗೆ ಕರ್ತವ್ಯಬೋಧೆ, ಪ್ರೇರಣೆಗಳನ್ನೇ ಕೊಟ್ಟ. ಆದರೆ ಅರ್ಜುನನೇ ತತ್ವವಿಚಾರವನ್ನು ಎತ್ತಿದ್ದು-ಅದೂ ತನ್ನ ಗೊಂದಲದ ನಿರ್ಣಯಕ್ಕೆ ‘ಸಮರ್ಥನೆ’ಯಾಗಿ! ವ್ಯೋಮೋಹಜನ್ಯ ಭಾವನೆಗಳಿಗೆ ವಶನಾಗುವ ’ಅಪಂಡಿತ’ನಿಗೂ, ತತ್ವನಿಶ್ಚಯವನ್ನು ಪಡೆದು ನಿರ್ಮಮವಾಗಿ ಧರ್ಮಾಧರ್ಮಗಳನ್ನು ನಿಶ್ಚಯಿಸುವ ’ಪಂಡಿತ’ನಿಗೂ ಇರುವ ವ್ಯತ್ಯಾಸದ ಬಗ್ಗೆ ಅರ್ಜುನನಿಗೆ ಸ್ಪಷ್ಟತೆ ಇರಲಿಲ್ಲ. ಅದನ್ನು ಕೃಷ್ಣನು ಅರಿತ. ಹಾಗಾಗಿ ಅವನಲ್ಲಿ ‘ಋತ’ದ ಪರಿಜ್ಞಾನವನ್ನು ಮೂಡಿಸಲಾರಂಭಿಸಿದ.
ಮನುಷ್ಯನ ಎಲ್ಲ ನಡೆನುಡಿಗಳ ಮೂಲದಲ್ಲಿ ಒಂದು ’ವಿಚಾರದ ನೆಲೆ’ ಇರುತ್ತದೆ. ಆ ನೆಲೆಯು ’ಋತ’ದಲ್ಲಿ ಪ್ರತಿಷ್ಠಿತವಾಗಬೇಕು. ಆಗ ಮಾತ್ರ ಮಾತು-ಕೃತಿಗಳಲ್ಲಿ ಸತ್ಯ-ಧರ್ಮಗಳು ಸಹಜವಾಗಿ ಮೂಡಿಬರಲು ಸಾಧ್ಯ. ಋತವೆಂದರೆ ಸತ್ಯದ ನೇರ ಸಾಕ್ಷಾತ್ಕಾರ/ ಪಕ್ವವಾದ ಪ್ರಜ್ಞೆ ಎಂದು ಸರಳವಾಗಿ ಅರ್ಥಮಾಡಿಕೊಳ್ಳಬಹುದು. ‘ಋತ’ದ ನೆಲೆಗೆ ಏರಲಾಗದವರೆಗೂ ವ್ಯಾಮೋಹ-ಗೊಂದಲಗಳು ತಪ್ಪವು. ಶಾಸ್ತ್ರ ಚಿಂತನೆ-ಧ್ಯಾನ-ಯೋಗಸಾಧನೆಗಳ ಮೂಲೋದ್ದೇಶ ಈ ಋತದ ಸಾಕ್ಷಾತ್ಕಾರವೇ ಆಗಿದೆ. ಋತದಿಂದಲೇ ವಿವೇಕೋದಯ, ತತ್ವನಿಶ್ಚಯ.
ಕೃಷ್ಣನು ಅರ್ಜುನನಲ್ಲಿ ಈ ಋತದ ಪ್ರಜ್ಞೆಯನ್ನು ಜಾಗೃತಗೊಳಿಸಲು ಮುಂದಾಗಿದ್ದಾನೆ. ವ್ಯಾಮೋಹವನ್ನು ತ್ಯಜಿಸಿ ನಿಶ್ಚಲಮತಿಯಿಂದ ಧರ್ಮವನ್ನರಿತು ಆಚರಿಸುವ ಘನಮಾರ್ಗವನ್ನು ತೋರಿಸುತ್ತಿದ್ದಾನೆ. ಅದಕ್ಕಾಗಿ ಅತ್ಯುನ್ನತವಾದ ಸದಸದ್ವಿಚಾರಗಳ ಪ್ರಸ್ತಾಪವನ್ನು ಮಾಡಿದ್ದಾನೆ.
ನಾವು ಅರ್ಜುನನಂತಹ ಪ್ರಥಮಧಿಕಾರಿಗಳು ಅಲ್ಲದಿರಬಹುದು. ಆದರೆ ಅವನ ನಿಮಿತ್ತವಾಗಿ ಭಗವಂತನ ಅಮೃತನುಡಿಗಳು ಅಹೇತುಕ ಕೃಪೆಯಾಗಿ ನಮಗೂ ಹರಿದುಬರುತ್ತಿದೆ! ನಾವೇ ಧನ್ಯರಲ್ಲವೆ?!
ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ