ಬದುಕಿಗೆ ಭಗವದ್ಗೀತೆ – ಬುದ್ಧಿಯೋಗದ ಪ್ರಯೋಜನ
ತತ್ವಪಥದಲ್ಲಿ ಅಡ್ಡದಾರಿ (short cut) ಎಂಬುದೇ ಇಲ್ಲ, ಆತ್ಮಸಂಸ್ಕರಣವಾಗಿ ಮನೋಬುದ್ಧಿಗಳಲ್ಲಿ ಪಕ್ವತೆ ಬರುವತನಕ ಮುನ್ನಡೆಯಾಗದು. ಹಾಗಾಗಿ ಸಮಚಿತ್ತತೆಯ ಅಭ್ಯಾಸವನ್ನು ಮೊಟ್ಟಮೊದಲು ಹೇಳಿ ಆ ಬಳಿಕ ಜ್ಞಾನ-ಕರ್ಮಾದಿಗಳ ಚರ್ಚೆಗೆ ಸಾಗುತ್ತಾನೆ ಕೃಷ್ಣ-
ಏಷಾ ತೇಽಭಿ ಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು I
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ II
ಈ (ಸಮತ್ವದ) ವಿಷಯವನ್ನು, ಹಿಂದೆ, ಸಾಂಖ್ಯೆಯಲ್ಲೇ (ಜ್ಞಾನ-ಚರ್ಚೆಯ ಸಂದರ್ಭದಲ್ಲೇ) ಹೇಳಿಯಾಗಿದೆ. ಈಗ ‘ಬುದ್ಧಿಯೋಗದ’ ಬಗ್ಗೆ ಕೇಳಿಸಿಕೋ, ಇದರಿಂದ ನೀನು ಕರ್ಮಬಂಧನದಿಂದ ಕಳಚಿಕೊಳ್ಳಬಲ್ಲೆ.
ಈ ಹಿಂದೆ ಗತಾಸೂ ನಗತಾಸೂಂಶ್ಛ ನಾನು ಶೋಚಂತಿ ಪಂಡಿತಾಃ–, ಆಗಮಾಪಾಯಿ ನೋಽನಿತ್ಯಾಂಸ್ತಾಂಸ್ತಿತಿಕ್ಷಸ್ವ— , ಸಮದುಃಖ ಸುಖಂಧೀರಂ —,ಮುಂತಾದ ಶ್ಲೋಕಗಳಲ್ಲಿ ಈ ‘ಸಮತ್ವ’ದ ಮಹತ್ವ ಹಾಗೂ ಅಗತ್ಯಗಳನ್ನು ಭಗವಂತನು ಸಾರಿದ್ದ. ಮುಂದೆಯೂ ಇದರ ಪ್ರಸ್ತಾಪವನ್ನು ಮಾಡುತ್ತಲೇ ಇರುವುದನ್ನೂ ನೋಡಲಿದ್ದೇವೆ. ಈ ಸಮತ್ವವು ಅಷ್ಟು ಮುಖ್ಯ! ಬುದ್ಧಿಯೋಗದ ವಿವರಗಳಿಗೆ ಹೋಗುವ ಮುನ್ನ ಅದರ ಮಹತ್ವದ ಬಗ್ಗೆ ಹೀಗೆ ಹೇಳುತ್ತಿದ್ದಾನೆ ಕೃಷ್ಣ-
ನೇಽಹಾಭಿ ಕ್ರಮ ನಾಶೋsಸ್ತಿ ಪ್ರತ್ಯವಾಯೋ ನ ವಿದ್ಯತೇ I ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ II
ಇಲ್ಲಿ ಅಭಿಕ್ರಮವು ನಾಶವಾಗುವುದಿಲ್ಲ. ವಿರುದ್ಧ ಫಲಗಳೂ ಉಂಟಾಗಲಾರವು. ಇದನ್ನು ಸ್ವಲ್ಪವೇ ಆಚರಿಸಿದರೂ ಅದು ನಮ್ಮನ್ನು ಅಪಾರವಾದ ಭಯದಿಂದ ದಾಟಿಸುತ್ತದೆ.
ಈ ಬುದ್ಧಿಯೋಗವನ್ನು ಆಶ್ರಯಿಸುವುದರಿಂದಾಗಿ ಅಭಿಕ್ರಮವು, ಅರ್ಥಾತ್, ಮಾಡಿದ ಪ್ರಯತ್ನವು, ವ್ಯರ್ಥವಾಗುವುದಿಲ್ಲ, ವಿರುದ್ಧ ಫಲಗಳು, ಅರ್ಥಾತ್, ‘ಒಂದು ಮಾಡಲು ಹೋಗಿ ಪರಿಣಾಮ ಮತ್ತೊಂದಾಯಿತು’ ಎಂಬ ಸ್ಥಿತಿ ಒದಗುವುದಿಲ್ಲ.
ಭಾವಿಯನ್ನು ಅರ್ಧ ತೋಡಿಬಿಟ್ಟರೆ, ನೀರು ಸಿಗದೆ ಕೆಲಸ ವ್ಯರ್ಥವೆನಿಸುತ್ತದೆ. ಗೋಡೆಯನ್ನಷ್ಟೇ ಜೋಡಿಸಿ ಛಾವಣಿಯನ್ನು ಹಾಕದೆ ಬಿಟ್ಟರೆ ಮನೆಕಟ್ಟುವ ಕೆಲಸವೂ ಅಪೂರ್ಣವಾಗುತ್ತದೆ. ಹೀಗೆ ಕೆಲವು ಕೆಲಸಗಳು ಪೂರ್ಣವಾಗಿ ಮಾಡಿದರೆ ಮಾತ್ರ ಮುಗಿದು ಸಫಲವೆನಿಸುವುವು. ಆದರೆ ಈ ಬುದ್ಧಿಯೋಗವನ್ನು ಆಶ್ರಯಿಸಿ ಮಾಡುವ ಕರ್ಮದಲ್ಲಿ ಇಂತಹ ‘ಅಪೂರ್ಣತೆ’ ಎಂಬುದೇ ಇಲ್ಲ. ಸ್ವಲ್ಪ ಮಾತ್ರವೇ ಅಭ್ಯಸಿಸಿದರೂ ಅದರ ಪುಣ್ಯ, ಸಂಸ್ಕಾರ ಹಾಗೂ ಪರಿಣಾಮಗಳು ಸಾಕಷ್ಟು ಒಳಿತನ್ನೂ ಕೊಡುತ್ತದೆ.
ಪುರಾಣೇತಿಹಾಸಗಳಲ್ಲಿ ಇದಕ್ಕೆ ಹಲವಾರು ಉದಾಹರಣೆಗಳನ್ನು ನೋಡಬಹುದು. ಅತಿ ದೊಡ್ಡ ಶ್ರೀಮಂತನೂ ಉದ್ಯಮಿಯೂ ಆದಂತಹ Rock Feller ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಲು ಹೋದ. ಎಲ್ಲರ ಹಾಗೇ ಸ್ವಾಮಿಗಳೂ ತನ್ನ ಸಿರಿತನ ಅಂತಸ್ಥಿನ ಬಗ್ಗೆ ಅತಿಶಯವಾಗಿ ಮೆಚ್ಚುತ್ತಾರೆ ಎನ್ನುವುದು ಆತನ ನಿರೀಕ್ಷೆ. ಆದರೆ ‘ಅವನ ಆರ್ಥಿಕ-ಲಾಭದ ಕಿಂಚಿತ್-ಭಾಗವೂ ಸಮಾಜಕ್ಕೆ ಕೊಡುಗೆಯಾಗಿ ಹೋಗುತ್ತಿಲ್ಲ’, ಎನ್ನುವುದನ್ನು ವಿವೇಕಾನಂದರು ದಿಟ್ಟತನದಿಂದ ಎತ್ತಿತೋರಿಬಿಟ್ಟರು! Rock Fellerಗೆ ಮುಜುಗರವಾಯಿತು. ತಕ್ಷಣವೇ ಒಂದು ಸೇವಾಕಾರ್ಯಕ್ಕೆ ದೊಡ್ಡಮೊತ್ತದ Chequeನ್ನು ಬರೆದುಕೊಟ್ಟ, ಆ ಬಳಿಕ ಆತ ಪ್ರತಿಷ್ಠೆಗಾಗಿ ಆಗಾಗ ಸ್ವಲ್ಪಸ್ವಲ್ಪ ದಾನ ನೀಡುತ್ತಿದ್ದ. ಬರಬರುತ್ತ ಅದಕ್ಕಾಗಿ ದತ್ತಿಯೊಂದನ್ನು ಸ್ಥಾಪಿಸಿದ. ದಾನಮಾಡುವ ಸಂಸ್ಕಾರ ಹೆಚ್ಚುತ್ತ ಹೋಯಿತು, ಧನ್ಯನೆನಿಸಿದ!
ಸದಾ ಅಕ್ರಮ ಮಾರ್ಗದ ಚಪಲಕ್ಕೆ ಸೋತು ನಡೆಯುವ ದುರ್ಬಲ ಮಾನಸರು, ಅಪರೂಪಕ್ಕಾದರೂ, ಒಂದಿಷ್ಟು ನಿಃಸ್ವಾರ್ಥ-ಕರ್ಮವನ್ನು ಮಾಡಿದರೂ ಅದು ತರುವ ಸತ್ಸಂಸ್ಕಾರ ಹಾಗೂ ಅದರ ಪುಣ್ಯಫಲವು ಆ ವ್ಯಕ್ತಿಯನ್ನು ಸಾಕಷ್ಟು ಉದ್ಧರಿಸುತ್ತವೆ. ಮೋಹ-ದೌಷ್ಟ್ಯಗಳ ಕತ್ತಲು ತುಂಬಿದ ಅಂತರಂಗದಲ್ಲೂ ಧರ್ಮಪ್ರಜ್ಞೆಯ ಒಂದು ಸಣ್ಣಕಿರಣವನ್ನು ಮೂಡಿಸಿಯೇ ತೀರುತ್ತದೆ!ಹಾಗಾಗಿ ‘ಬುದ್ಧಿಯೋಗ’ವೆಂಬ ರಾಜಮಾರ್ಗದಲ್ಲಿ ನಡೆಯುವುದು ಸರ್ವಥಾ ಯೋಗ್ಯ. ಬುದ್ಧಿಯೋಗದ ಪಥದಲ್ಲಿ ಸಾಗುವ ಲಾಭವೇನೆಂಬುದನ್ನು ಕೃಷ್ಣನು ಮತ್ತಷ್ಟು ಹೇಳುತ್ತಾನೆ-
ವ್ಯವಸಾಯಾತ್ಮಿಕಾ ಬುದ್ಧಿ ರೇಕೇಹ ಕುರುನಂದನI ಬಹುಶಾಖಾ ಹ್ಯನಂತಾಶ್ಚ ಬುದ್ಧಯೋಽವ್ಯವಸಾಯಿನಾಮ್ II
ಇಲ್ಲಿ ವ್ಯವಸಾಯಾತ್ಮಿಕವಾದ ಬುದ್ಧಿ ಏಕವಾಗಿ ಇರುತ್ತದೆ. ಆದರೆ ಅವ್ಯವಸಾಯಿ ಬುದ್ಧಿಯು (ವಿವೇಕ ವಿಚಾರವನ್ನು ಮಾಡಲಾಗದ ಬುದ್ಧಿ) ಹತ್ತು ಹಲವು ಶಾಖೆಗಳನ್ನು ಹೊಂದಿರುತ್ತದೆ.
(ಈ ಯೋಗವನ್ನು ಸಿದ್ಧಿಸಿಕೊಂಡ) ಬುದ್ಧಿಯು ಏಕಮುಖವಾಗಿ ಇರುತ್ತದೆ. ಹಾಗಾಗಿ ಅದರ ನಿರ್ಣಯಗಳು ನಿಶ್ಚಿತವೂ ವಿವೇಕಪೂರ್ಣವೂ ಆಗಿರುತ್ತವೆ ಎನ್ನುವುದು ಈ ಮಾತಿನಸಾರ. ಆದರೆ ಅವ್ಯವಸಾಯಾತ್ಮಿಕವಾದ ಬುದ್ಧಿಯು, ಹಲವು ಮುಖವಾಗಿ (ಗೊಂದಲಗಳಿಂದ) ಇರುತ್ತದೆ. ಬುದ್ಧಿಯು ಸ್ಪಷ್ಟವಾಗಿ ಸ್ಥಿರವಾಗಿ ಆಲೋಚಿಸಲಾರದು. ನಿಮಿಷಕ್ಕೊಂದು ಭಾವನೆ ಭುಗಿಲೆದ್ದು ವಿಚಾರವನ್ನು ವಿಚಲಿತಗೊಳಿಸುತ್ತದೆ. ಆತ್ಮವೈರುಧ್ಯಗಳು (self-contradictions) ಏಳುತ್ತವೆ. ಅದರಲ್ಲೂ ತನ್ನ ಸುಖ-ಸ್ವಾರ್ಥಗಳಿಗೆ ’ಅಡ್ಡಿ’ ಎನಿಸುವಂತಹ ಆಪ್ರಿಯ ಕರ್ತವ್ಯಗಳನ್ನು ನಿರ್ವಹಿಸುವಾಗಲಂತೂ ಬುದ್ಧಿಯೂ ನೂರಾರು ವಾದಗಳನ್ನು ಮುಂದಿಟ್ಟು ಗೊಂದಲ-ದುಃಖಗಳನ್ನು ಮೂಡಿಸುತ್ತದೆ. ಆದರೆ ಈ ಬುದ್ಧಿಯೋಗದ ಮೂಲಕ ಬುದ್ಧಿಯ ಮೋಹವನ್ನು ತೊಲಗಿಸಿ, ಸತ್ಯದ ನೆಲೆಯಲ್ಲಿ ದಿಟ್ಟವಾಗಿ ಆಲೋಚಿಸುವ ಶಕ್ತಿ ಉದ್ಭವಿಸುತ್ತದೆ.
ನಿರಂತರ ವಸ್ತು-ವಿಷಯ-ವ್ಯಕ್ತಿಗಳ ಒಡನಾಟದ ನಿತ್ಯಜೀವನಕ್ಕಂತೂ ಈ ಬುದ್ಧಿಯೋಗವು ಕೊಡುವ ಶಕ್ತಿ ಹಾಗೂ ಜಾಣ್ಮೆ ಅಮೂಲ್ಯವಾದದ್ದು. ನಮ್ಮ ಬದುಕಿಗೆ ಬೆಳಕಾಗಬಲ್ಲ ಈ ಬುದ್ಧಿಯೋಗದ ವಿವರಗಳನ್ನು ಶ್ರೀಕೃಷ್ಣನು ಮುಂದೆ ಹೇಳುತ್ತ ಹೋಗುತ್ತಾನೆ.
– ಆರತೀ ವಿ ಬಿ
ಕೃಪೆ : ವಿಜಯವಾಣಿ