ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಶೋಕಿಸುವುದಿಲ್ಲ
ತನ್ನ ಮತಿಗೆ ಭ್ರಾಂತಿ ಕವಿದಿದೆ ಎಂದು ಒಪ್ಪಿಕೊಂಡ ಅರ್ಜುನ, ಕೃಷ್ಣನಲ್ಲಿ ಶರಣಾದ. ದಾರಿ ತೋರೆಂದು ಪ್ರಾರ್ಥಿಸಿದ. ಅದಾದ ಮೇಲೂ ತನ್ನ ಚಿತ್ತದ ಗೊಂದಲವನ್ನು ಕೃಷ್ಣನ ಮುಂದಿಟ್ಟು ನುಡಿದ – “ಕೃಷ್ಣ! ಯುದ್ಧದಿಂದಾಗಿ ರಾಜ್ಯದ ಭೋಗಗಳನ್ನೂ ಸ್ವರ್ಗದ ಸುಖವನ್ನೇ ಪಡೆಯಬಹುದು, ನಿಜ! ಆದರೆ ನನ್ನ ಸೋದರಪ್ರಾಯರನ್ನು ಕಳೆದುಕೊಂಡ ಶೋಕವನ್ನು ಗೆಲ್ಲುವ ಮಾರ್ಗವು ತೋಚುತ್ತಿಲ್ಲ”. ಬಂಧುಗಳನ್ನು ಕೊಂದು ಭೋಗಿಸುವ ಸುಖವು ಪಾಪಪ್ರಜ್ಞೆಯನ್ನು ಬಿತ್ತಿ ಬಾಧಿಸುತ್ತಲೇ ಇರುತ್ತದೆ ಎಂಬುದು ಅವನ ಮಾತಿನ ಸಾರ.
ಅರ್ಜುನ ಹೇಳುವ ಈ ಎಲ್ಲ ಮಾತುಗಳು ಚೆನ್ನಾಗಿಯೇ ಇವೆಯಾದರೂ, ಅವನ್ನು ಹೇಳುವಾಗ ಅವನ ಮನಸ್ಸು ಚೆನ್ನಾಗಿಲ್ಲ ಎನ್ನುವುದು ಗಮನೀಯ! ‘ಒಳ್ಳೆಯಮಾತ’ನ್ನು ಯಾರು ಬೇಕಾದರೂ ಆಡಬಹುದು. ಆದರೆ ಅದನ್ನಾಡುವವರ ಉದ್ದೇಶ, ಸಂದರ್ಭ ಮುಂತಾದವುಗಳನ್ನು ಪರಿಗಣಿಸದಿದ್ದರೆ, ಆ ಮಾತು ನಮಗೆ ಪೂರ್ಣವಾಗಿ ಅರ್ಥವಾಗದು, ಅಷ್ಟೇ ಅಲ್ಲ ದಾರಿ ತಪ್ಪಿಸೀತು ಕೂಡ! ಏಕೆಂದರೆ ಮಾತನಾಡುವ ವ್ಯಕ್ತಿಯ ವ್ಯಕ್ತಿತ್ವ, ಉದ್ದೇಶ ಹಾಗೂ ಆ ಸಂದರ್ಭಗಳ ವಿವೇಚನೆ ಇಲ್ಲದಿದ್ದರೆ ಆ ಮಾತುಗಳ ತಪ್ಪುಸರಿಗಳನ್ನೂ ಹಾಗೂ ಅದರ ಸಂಭಾವ್ಯ ಪರಿಣಾಮಗಳನ್ನು ಊಹಿಸುವುದು ಸಾಧ್ಯವಾಗುವುದಿಲ್ಲ. ಈ ವಿಷಯವಾಗಿ ಪಂಚತಂತ್ರದ ಒಂದು ಕಥೆ ಪಾಠ ಹೇಳುತ್ತದೆ- ಕುಟಿಲ ಬುದ್ಧಿಯ ನರಿಯು ಮುಗ್ಧರನ್ನು ವಂಚಿಸಿ ದಾರಿ ತಪ್ಪಿಸಲು “ಅಯಂ ನಿಜಪರೋವೇತಿ ಗಣನಾ ಲಘುಚೇತಸಾಂ ಉದಾರಚರಿತಾನಾಂತು ವಸುಧೈವ ಕುಟುಂಬಕಂ” (ನನ್ನವರೂ ಬೇರೆಯವರು ಎಂಬ ಲೆಕ್ಕಾಚಾರ ಸಣ್ಣ ಮನಸ್ಸಿನವರದು. ಉದಾರ ಮನಸ್ಕರಿಗೆ ಭೂಮಿಯೆಲ್ಲ ತನ್ನ ಕುಟುಂಬದಂತೆಯೇ) ಎಂಬಂತಹ ಸೊಗಸಾದ ನೀತಿಯನ್ನು ಹೇಳುತ್ತದೆ! ಆ ಮಾತು ಬಹಳ ಅರ್ಥಪೂರ್ಣವಾದರೂ, ಅದನ್ನು ಆಡುವ ನರಿಯ ಉದ್ದೇಶ ಸರಿಯಿಲ್ಲ. ಕಥೆಯಲ್ಲಿನ ನರಿಯಂತೆ ಅರ್ಜುನನು ದುಷ್ಟನಲ್ಲ. ಆದರೆ ಮೋಹವಶವಾದ ಆತನ ಮತಿಯು ಅವನ ಆಲೋಚನೆಗಳನ್ನು ಆವರಿಸಿವೆ. ಆತನ ಮಾತುಗಳು ಶಾಂತಿ – ಕ್ಷಮೆಗಳ ನುಡಿಮುತ್ತುಗಳಂತೆ ತೋರಿದರೂ, ಅವುಗಳನ್ನು ಆತ ಹೇಳುತ್ತಿರುವುದು ಮಾತ್ರ ’ಅಪ್ರಿಯ ಕರ್ತವ್ಯದಿಂದ ತಪ್ಪಿಸಿಕೊಳ್ಳುವ’ ಸಲುವಾಗಿ! ಜಾಣ ಕೃಷ್ಣನು ಅವನ ಮಾತಿನ ಶಬ್ದಾರ್ಥಗಳನ್ನು ಭೇದಿಸಿ ಅಂತರಂಗದ ದೋಷವನ್ನು ಗುರುತಿಸಿಬಿಟ್ಟ! ಅರ್ಜುನ ಈಗ ತನ್ನ ವಿವಶತೆಯನ್ನು ಹೇಳಿಕೊಳ್ಳುತ್ತ ’ನಾನು ಯುದ್ಧ ಮಾಡಲಾರೆ!….’ ಎಂದು ಕೈಚೆಲ್ಲಿ ಸುಮ್ಮನೆ ಕೂತುಬಿಟ್ಟ,
ಅರ್ಜುನ ಸುಮ್ಮನಾದ. ಆದರೆ ಅವನ ಮನಸ್ಸು ಮಾತ್ರ ಸುಮ್ಮನಾಗಲಿಲ್ಲ! ಪರಮ ಪ್ರಕ್ಷುಬ್ಧವಾಗಿಬಿಟ್ಟಿದೆ!
ಅವನ ದುರವಸ್ಥೆಯನ್ನು ಅರ್ಥಮಾಡಿಕೊಂಡು ನಸುನಗುತ್ತ ಕೃಷ್ಣನು ಹೇಳುತ್ತಾನೆ- “ಯಾರಿಗಾಗಿ ಶೋಕಿಸಬಾರದೋ ಅವರಿಗಾಗಿ ನೀನು ಶೋಕಿಸುತ್ತಿದ್ದೀಯೆ, ಆದರೂ ಮಹಾ ತಿಳಿದವನ ಹಾಗೆ ಮಾತನಾಡುತ್ತಿದ್ದೀಯಲ್ಲ!” ’ಪಂಡಿತನ ಧಾಟಿಯಲ್ಲಿ ಮಾತನಾಡುತ್ತಿದ್ದ ಅರ್ಜುನನು ನಿಜಕ್ಕೂ ‘ಪಂಡಿತ’ನಲ್ಲ” ಎನ್ನುವುದು ಕೃಷ್ಣನ ಮಾತಿನ ತಿವಿತ.
’ಪಂಡ’ ಎಂದರೆ ’ಜ್ಞಾನ’ ಎಂದರ್ಥ. ಜ್ಞಾನದಿಂದ ಹಣ್ಣಾದವನೇ ‘ಪಂಡಿತ’. ಅರ್ಜುನನು ಪಂಡಿತನಲ್ಲ ಎಂದರೆ ‘ವಿದ್ಯಾವಿಹೀನ’ ಎಂದಲ್ಲ. ಲೌಕಿಕ ವಿದ್ಯೆ ಹಾಗೂ ಯುದ್ಧ-ರಾಜನೀತಿಗಳಲ್ಲಿ ಆತ ಚೆನ್ನಾಗಿ ಪಳಗಿದವನೇ, ನ್ಯಾಯ-ಶಿಷ್ಟಾಚಾರಗಳನ್ನು ಚೆನ್ನಾಗಿ ತಿಳಿದವನು, ಪಾಲಿಸುವವನೂ ಹೌದು. ಸಂದೇಹವೇ ಇಲ್ಲ. ಆದರೆ “ತನ್ನನ್ನು ತಾನು ತಿಳಿಯುವ” ಜೀವನ ಪರೀಕ್ಷೆಯಲ್ಲಿ ಆತ ಇನ್ನೂ ಮಾಗಿಲ್ಲ. ಜೀವನದ ಪಾಠವೇ ಬೇರೆ. ಆ ಪರೀಕ್ಷೆಯಲ್ಲಿ ಒಬ್ಬೊಬ್ಬರಿಗೂ ಪ್ರತ್ಯೇಕ ಪ್ರಶ್ನೆಪತ್ರಿಕೆ ಇರುತ್ತದೆ! ಎಲ್ಲರಿಗೂ ನಾನಾಬಾಹ್ಯಾಂತರಿಕ ಅನುಭವಗಳ ಪಾಠ ನಡೆಯುತ್ತಲೇ ಇರುತ್ತದೆ! ಈ ಪರೀಕ್ಷೆಯಲ್ಲಿ ಬಡವ-ಬಲ್ಲಿದ, ವಿದ್ಯಾವಂತ-ಅವಿದ್ಯಾವಂತ ಎನ್ನದೆ ಎಲ್ಲರೂ ಪಳಗಿ ಮಾಗಿಯೇ ಹೊರಬರಬೇಕಾಗುತ್ತದೆ! ಈ ಪರೀಕ್ಷೆಯಲ್ಲಿ ಗೆದ್ದವನೇ ನಿಜವಾದ ’ಪಂಡಿತ’. ಅರ್ಜುನನು ಈ ಅರ್ಥದಲ್ಲಿ ಇನ್ನೂ ಪೂರ್ಣವಾದ ‘ಪಾಂಡಿತ್ಯ’ವನ್ನು ಸಂಪಾದಿಸಿಲ್ಲ ಎಂದರ್ಥ.
ಅದು ಹೇಗೆ? ಅದನ್ನೂ ಶ್ರೀಕೃಷ್ಣನೇ ವಿವರಿಸುತ್ತಾನೆ- “ಗತಾಸೂನ ಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ (ನಿಜವಾದ ಪಂಡಿತನು ಗತಿಸಿರುವ ಹಾಗೂ ಬದುಕಿರುವ ಜೀವಿಗಳಿಗಾಗಿ ಶೋಕಿಸುವುದಿಲ್ಲ) ಏನೀ ಮಾತಿನ ಅರ್ಥ? ಪಂಡಿತರೆಲ್ಲ ಜೀವರ ಭಾವನೆಗಳಿಗೆ ಸ್ಪಂದಿಸದ ಭಾವನಾ ಶೂನ್ಯರೆಂದೇ? ಹಾಗಲ್ಲ. ಇಲ್ಲಿ ಕೃಷ್ಣನು ಹೇಳುತ್ತಿರುವುದು ‘ಯಾವುದಾದರೂ ಕಲೆ-ವಿದ್ಯಾ ಪ್ರಕಾರಗಳಲ್ಲಿ ಪಳಗಿದ್ದು, ವ್ಯಾಖ್ಯಾನ ಕುಶಲರಾದ ಲೌಕಿಕ ಪಂಡಿತರ ಬಗ್ಗೆ ಅಲ್ಲ- ಜೀವನವಿದ್ಯೆಯಲ್ಲಿ ಪಕ್ವರಾದ ಜ್ಞಾನಿಗಳ ಬಗ್ಗೆ. ಸತತವಾಗಿ ಸುತ್ತುವ ಕಾಲಚಕ್ರದಲ್ಲಿ ಹುಟ್ಟುವ-ಬೆಳೆಯುವ-ಅಳಿಯುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಅದು ಸೃಷ್ಟಿಯ ಸ್ವಭಾವ, ಸ್ವರೂಪ. ಇದನ್ನು ತಿಳಿದ ಜ್ಞಾನಿಯು ಅದಕ್ಕೆ ಸ್ಪಂದಿಸುತ್ತಾನಾದರೂ, ಕಂಗಾಲಾಗುವುದಿಲ್ಲ, ಅತಿಯಾಗಿ ಪ್ರತಿಕ್ರಿಯಿಸದೇ ಶಾಂತನಾಗಿರುತ್ತಾನೆ. ಬಾಹ್ಯ ಘಟನಾವಳಿಗಳಲ್ಲಿನ ಧರ್ಮಾಧರ್ಮಗಳ ವಿವೇಚನೆ ಅವನಲ್ಲಿ ನಡೆಯುತ್ತಲೇ ಇರುತ್ತವೆ. ಆದರೂ ಅದರಿಂದ ಆತ ಹಿಗ್ಗುವುದಿಲ್ಲ, ಕುಗ್ಗುವುದಿಲ್ಲ, ಉದ್ರೇಕಗೊಳ್ಳುವುದಿಲ್ಲ, ‘ಏನು ಮಾಡಲಿ?’ ಎಂದು ದಿಗ್ಭ್ರಾಂತನಾಗುವುದಿಲ್ಲ. ಅಂತಹ ಮನುಷ್ಯನ ಮನಸ್ಸು-ಬುದ್ಧಿಗಳು ಸದಾ ತಿಳಿಯಾಗಿರುತ್ತವೆ, ಚುರುಕಾಗಿರುತ್ತವೆ. ಮೋಹ ಸಂಭ್ರಾಂತಿಗಳ ಅಡಚಣೆಗೊಳಗಾಗದೆ, ದೃಢವಾಗಿ ಸ್ಪಷ್ಟವಾಗಿ ಆಲೋಚಿಸುತ್ತ ಮುಂದಾಲೋಚನೆಯಿಂದ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲವನಾಗುತ್ತಾನೆ. ತತ್ಪರಿಣಾಮವಾಗಿ ಆತನ ನಡೆ-ನುಡಿಗಳೆಲ್ಲ ಉತ್ತಮವಾಗಿರುತ್ತವೆ, ಸಾಫಲ್ಯವನ್ನು ಪಡೆಯುತ್ತವೆ. ಇಂತಹವನೇ ಜೀವನಕಲೆಯಲ್ಲಿ ಪಳಗಿದ ’ಪಂಡಿತ’ನೆನಿಸುತ್ತಾನೆ!
ಶ್ರೀಕೃಷ್ಣನು ಹೇಳುತ್ತಿರುವುದು ಇಂತಹ ‘ಪಂಡಿತ’ನ ಬಗ್ಗೆ. ಹಾಗಾಗಿ ಇಲ್ಲಿ ಪಂಡಿತ ಎಂದರೆ- ಜೀವನದ ಅನಿಶ್ಚಿತಗತಿಯ ಸ್ವರೂಪವನ್ನು ಚೆನ್ನಾಗಿ ಗುರುತಿಸಿಕೊಂಡವನು. ಅದರ ವೈಪರೀತ್ಯಗಳಿಗೆ ವಶನಾಗಿ ಭಾವುಕತೆಗೆ ಒಳಪಡದವನು. ತನ್ನೊಳಗಡೆಯೇ ಶಾಂತಿ-ಸಮಾಧಾನ-ಪ್ರಸನ್ನತೆಗಳ ನೆಲೆಯನ್ನು ಕಂಡುಕೊಂಡು ದೃಢಮನಸ್ಕನಾಗಿರುವವನು.
ಅರ್ಜುನನು ಈಗಿನ ಪರಿಸ್ಥಿತಿಯಲ್ಲಿ ಈ ಯಾವ ಪ್ರೌಢಲಕ್ಷಣಗಳನ್ನೂ ಹೊಂದಿದ್ದಂತೆ ಕಾಣುತ್ತಿಲ್ಲ. ಹಾಗಾಗಿ ದಿಟ್ಟ ಗುರುವಾದ ಕೃಷ್ಣನು ಮುಲಾಜಿಲ್ಲದೆ ಅರ್ಜುನನಿಗೆ ಹೇಳುತ್ತಿದ್ದಾನೆ– “ನೀನು ಪಂಡಿತನಂತೆ ವರ್ತಿಸುತ್ತಿಲ್ಲ, ಆದರೆ ‘ಪಂಡಿತನೋ ಎಂಬಂತೆ’ ಮಾತುಗಳನ್ನು ಮಾತ್ರ ಆಡುತ್ತಿರುವೆ ಅಷ್ಟೆ! ನಿಜವಾದ ಪಂಡಿತನು ಶೋಕಿಸುವುದಿಲ್ಲ” ಎಂದು.
ಡಾ ಆರತೀ ವಿ ಬಿ
ಕೃಪೆ : ವಿಜಯವಾಣಿ