ಬದುಕಿಗೆ ಭಗವದ್ಗೀತೆ – ಆತ್ಮವನ್ನು ಸರ್ವಥಾ ಸಾಯಿಸಲಾಗದು
‘ನಮ್ಮ ಆತ್ಮಸ್ವರೂಪವು ಹುಟ್ಟುಸಾವುಗಳ ಪ್ರಕ್ರಿಯೆಗೊಳಪಡದೆ ನಿತ್ಯವಾಗಿರುವ ಅವಿಚ್ಛಿನ್ನ ಅಸ್ತಿತ್ವ’ ಎನ್ನುವ ವಿವರಗಳನ್ನು ಕೃಷ್ಣನು ಮುಂದುವರೆಸುತ್ತಾನೆ-
ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಂ ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಂ(ಭ, ೨, ೨೧) “ಈ ಅವಿನಾಶಿಯಾದ ಆತ್ಮಸ್ವರೂಪವನ್ನು ತಿಳಿದಂತಹವನು ಹೇಗೆ ತಾನೆ ಕೊಲ್ಲುವ ಅಥವಾ ಕೊಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಲು ಸಾಧ್ಯ?”
ದೇಹ ಮನ ಬುದ್ಧಿಗಳ ಆವರಣದ ಮಟ್ಟದಲ್ಲೇ ಜೀವಿಗಳನ್ನು ಗುರುತಿಸುವ ವ್ಯಕ್ತಿಗೆ ಪುರಸ್ಕಾರ-ತಿರಸ್ಕಾರ-ರಾಗ-ದ್ವೇಷಗಳುಂಟಾಗುವುದು ಅನಿವಾರ್ಯ. ಹಾಗಾಗಿ ಅಂತಹವರು ಆ ಭಾವಗಳನ್ನೇ ಅಭಿವ್ಯಂಜಿಸುವುದರಲ್ಲಿ ಆಶ್ಚರ್ಯವಿಲ್ಲ. ಹಗೆ-ದ್ವೇಷಗಳು ಮಿತಿಮೀರಿದಾಗ ಕೊಲ್ಲುವ ಅಥವಾ ಕೊಲ್ಲಿಸುವ ಮಟ್ಟಕ್ಕೂ ಹೋಗುತ್ತಾರೆ. ‘ನಾವು ಅವರನ್ನು ಕೊಂದು ‘ನಾಶ’ ಮಾಡಿದ್ದೇವೆ’ ಅಂತ ಭಾವಿಸುತ್ತಾರೆ. ಆದರೆ ನಿಜಾರ್ಥದಲ್ಲಿ ಅವರು ಕೊಂದದ್ದು ಅಥವಾ ಕೊಲ್ಲಿಸಿದ್ದು ‘ದೇಹ’ವನ್ನು ಮಾತ್ರವೆ ಹೊರತು,ಆತ್ಮವನ್ನಲ್ಲ!ಅಖಂಡ ಆತ್ಮದ ಚೈತನ್ಯವೇ ತನ್ನೊಳಗೂ ಇತರ ಜೀವಿಗಳಲ್ಲೂ ತುಂಬಿರುವುದೇ ಗುರುತಿಗೆ ಬಂದಾಗ, ವ್ಯಕ್ತಿಯಲ್ಲಿ ರಾಗದ್ವೇಷಗಳು ಉಳಿದಿರಲು ಸಾಧ್ಯವೇ ಇಲ್ಲ! ಹಾಗಾಗಿ ಆತ ಕೊಲ್ಲುವ-ಕೊಲ್ಲುಸಿವ ಪ್ರಕ್ರಿಯೆಯಲ್ಲಿ ತೊಡಗುವುದೂ ಅಸಾಧ್ಯ- ಇದು ಕೃಷ್ಣನ ಮಾತಿನ ಇಂಗಿತ.
ದೇಹಗಳು ಹುಟ್ಟಿ-ಸತ್ತರೂ ಅದರೊಳಗಿನ ಆತ್ಮವಸ್ತುವು ಏನೂ ಆಗದು ಎನ್ನುವುದನ್ನು ಸ್ಪಷ್ಟಪಡಿಸಲು ಕೃಷ್ಣನು ಕೊಡುವ ನಿದರ್ಶನವನ್ನು ನೋಡಿ-
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋಪರಾಣಿ I
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀII (ಭ, ೨, ೨೨)
(ಮನುಷ್ಯರು ಹಳೆಯ ಬಟ್ಟೆಗಳನ್ನು ಕಳಚಿ ಹೊಸಬಟ್ಟೆಯನ್ನು ಧರಿಸುವಂತೆ, ಜೀವಿಯು ಜೀರ್ಣವಾದ ದೇಹವನ್ನು ತ್ಯಜಿಸಿ ಹೊಸದೇಹವನ್ನು ಧರಿಸುತ್ತಾನೆ)
ಆತ್ಮವಸ್ತುವು ದೇಹದಲ್ಲಿರುವ ‘ದೇಹೀ’ ಎನಿಸುತ್ತದೆ. ಅದು ಸ್ವತಃ ಹುಟ್ಟದು. ಆದ್ದರಿಂದ ಅದಕ್ಕೆ ಸಾವೂ ಇಲ್ಲ! ಆದರೆ ಅದು ವಾಸಿಸುವ ‘ದೇಹ’ವು ಜನ್ಮ-ಮರಣ-ವೃದ್ಧಿ-ಹ್ರಾಸಾದಿಗಳನ್ನು ರೋಗ-ನಿಶ್ಶಕ್ತಿ ಮೊದಲಾದ ವಿಕಾರಗಳನ್ನೂ
ಹೊಂದುತ್ತದೆ. ಹುಟ್ಟಿದ ಮೇಲೆ ದೇಹ ಸಾವನ್ನಪ್ಪುವುದು ಅನಿವಾರ್ಯ. ‘ಸಾವು’ ಎನ್ನುವುದಾದರೂ ನಿಜಕ್ಕೂ ಏನು? ದೇಹಿಯು (ಆತ್ಮವು) ಜೀರ್ಣವಾದ ದೇಹವನ್ನು ತ್ಯಜಿಸುವುದು, ಅಷ್ಟೇ. ಅಲ್ಲಿಗೆ ಎಲ್ಲವೂ ಮುಗಿಯದು. ಆ ಆತ್ಮವು ಮತ್ತೆ ಹೊಸದೇಹವನ್ನು ತಳೆಯುತ್ತದೆ. ಅದೇ ಹೊಸ‘ಜನ್ಮ’. ಜನ್ಮಜನ್ಮಗಳ ಸಂಕಲ್ಪಗಳೆಲ್ಲ ತೃಪ್ತಿಕಂಡು ತಣಿದು ‘ವಾಸನಾ-ಕ್ಷಯ’ವಾಗುವತನಕ, ಹೀಗೆ ಆತ್ಮವು ದೇಹಾಂತರವನ್ನು ಪಡೆಯುತ್ತಲೇ ಇರುತ್ತದೆ. ‘ಮನುಷ್ಯನು ಹಳೆಯ ಕೊಳೆಯ ಬಟ್ಟೆಯನ್ನು ಕಳಚಿ ಹೊಸಬಟ್ಟೆಯನ್ನು ಧರಿಸಿದಂತೆ’ ಆತ್ಮವು ಜೀರ್ಣದೇಹವನ್ನಗಲಿ ಹೊಸ ದೇಹವನ್ನು ತಳೆಯುತ್ತದೆ ಎನ್ನುವ ನಿದರ್ಶನ ಮನೋಜ್ಞವಾಗಿದೆ. Computerನ Hardware ಹಳೆಯದೋ, ಶಿಥಿಲವೋ, ಆಯಿತೆಂದು, ಅದರಲ್ಲಿನ Softwareನ್ನು ತೆಗೆದು, ಬೇರೊಂದು Hardwareನೊಳಗೆ install ಮಾಡಿದಂತೆಯೇ ಇದೂ ಕೂಡ!
ಇಲ್ಲಿ ಗಮನಿಸಬೇಕಾದದ್ದೇನೆಂದರೆ, ಆತ್ಮವಸ್ತುವು ದೇಹಾಂತರವನ್ನು ಪಡೆದಾಗ ‘ಸಾವು’ ಆಗುವುದು ದೇಹಕ್ಕೆ ಮಾತ್ರವೇ ಹೊರತು ‘ದೇಹಿ’ಯಾದ ‘ಆತ್ಮ’ಕ್ಕಲ್ಲ. ಏಕೆಂದರೆ ಆತ್ಮದ ಸ್ವರೂಪವೇ ‘ಅವಿನಾಶಿತ್ವ’. ಇದನ್ನು ಕೃಷ್ಣ ಹೀಗೆ ಬಿಡಿಸಿ ಹೇಳುತ್ತಾನೆ –
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ I
ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ II(ಭ, ೨, ೨೩)
ಅಚ್ಚೇದ್ಯೋಯಮದಾಹ್ಯೋಽಯಮಕ್ಲೇದ್ಯೋಶೋಷ್ಯ ಏವ ಚ I (ಭ, ೨ , ೨೪)
‘ಈ ಆತ್ಮ ವಸ್ತುವನ್ನು ಶಸ್ತ್ರಗಳು ಇರಿಯಲಾರವು, ಬೆಂಕಿಯು ಸುಡಲಾಗದು, ನೀರು ತೋಯಿಸಲಾಗದು ಗಾಳಿಯು ಒಣಗಿಸಲಾಗದು. (ಅರ್ಥಾತ್) ಆತ್ಮವು ಅಚ್ಛೇದ್ಯವೂ, ಸುಡಲಾಗದ್ದೂ, ತೋಯಿಸಲಾಗದ್ದೂ ಹಾಗೂ ಒಣಗಿಸಲಾಗದ್ದೂ ಆಗಿದೆ’. ಭೌತಿಕವಾದ ಮಾಂಸಲದೇಹಗಳನ್ನು ‘ಇರಿದೋ, ಸುಟ್ಟೋ, ಮುಳುಗಿಸಿಯೋ ನಾಶಗೈಯಬಹುದು. ಆದರೆ ಪಂಚಭೂತಗಳಾದ ಭೂಮಿ-ನೀರು-ಆಕಾಶ-ಗಾಳಿ-ಬೆಂಕಿಗಳ ಪ್ರಭಾವವು ಪಂಚಭೂತಾತ್ಮಕವಾದ ಭೌತಿಕ ವಸ್ತುಗಳ ಮೇಲೆ ಮಾತ್ರ ಆಗಲು ಸಾಧ್ಯ. ಭೌತಿಕವಲ್ಲದ ‘ಚೈತನ್ಯೈಕ ಸ್ವರೂಪದ ಆತ್ಮ’ದ ಮೇಲೆ ಆಗಲು ಸಾಧ್ಯವಿಲ್ಲ. ಹಾಗಾಗಿ ಭೌತಿಕ ದೇಹಗಳನ್ನು ಇರಿದೋ, ಸುಟ್ಟೋ, ಮುಳುಗಿಸಿಯೋ ಸಾಯಿಸುವಂತೆ ಆತ್ಮವನ್ನು ‘ನಾಶ’ಗೈಯಲಾಗದು ಅನ್ನುವುದನ್ನೇ ಶ್ರೀಕೃಷ್ಣನು ‘ಆತ್ಮವು ಅಚ್ಛೇದ್ಯ, ಅದಾಹ್ಯ, ಅಕ್ಲೇದ್ಯ ಹಾಗೂ ಅಶೋಷ್ಯವಾದದ್ದು ಎಂಬ ಶಬ್ದಗಳಲ್ಲಿ ಪುನರುಚ್ಚರಿಸಿ ಸ್ಪಷ್ಟೀಕರಿಸುತ್ತಿದ್ದಾನೆ.
ಒಟ್ಟಿನಲ್ಲಿ, ನಮ್ಮ ದೇಹ ಮನ ಬುದ್ಧಿಗಳೆಂಬ ಆವರಣಗಳು ಜನ್ಮ-ಮರಣಗಳನ್ನು ಪಡೆಯುವುದರಿಂದ ‘ವಿಕಾರ’ವಾಗುತ್ತವೆ. ಆದರೆ ನಮ್ಮೊಳಗಿನ ಆತ್ಮತತ್ವವು ಎಲ್ಲಕ್ಕೂ ಸಾಕ್ಷಿಯಾಗಿ ಒಳಗಡೇ ನೆಲೆಸಿದ್ದು ನಿರ್ವಿಕಾರವಾಗಿ ಇರುತ್ತದೆ. ಅದನ್ನು ತಿಳಿದವನೇ ಪಂಡಿತ ಎನ್ನುವುದು ಕೃಷ್ಣನ ಸಂದೇಶದ ಸಾರ.
ಅಂತಹ ಪಂಡಿತನು ಧರ್ಮಾಧರ್ಮಗಳ ಮೀಮಾಂಸೆ ಮಾಡುವಾಗ ದೇಹಗಳ ಹುಟ್ಟುಸಾವುಗಳಿಗೆ ವಿಚಲಿತನಾಗಿ ಭಾವುಕನಾಗಿ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಆತ ಅಮರವಾದ ಆತ್ಮತತ್ವವನ್ನು ಗುರುತಿಸಿ, ನಿಃಸ್ಪೃಹ ನಿಶ್ಚಲಮತಿಯಿಂದ ಧರ್ಮವಿಚಾರವನ್ನು ಮಾಡುತ್ತ ಸಮಂಜಸವಾದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾನೆ. ದೇಹಭಾವದಲ್ಲಿ ನೆಲೆನಿಂತು ಆಲೋಚಿಸುವ ಷಂಡನಾಗಿ ವರ್ತಿಸದೆ, ಆತ್ಮಭಾವದಲ್ಲಿ ನೆಲೆನಿಂತು ಆಲೋಚಿಸುವ ’ಪಂಡಿತ’ನಾಗು ಎಂದು ಕೃಷ್ಣನು ಅರ್ಜುನನಿಗೆ ಮನಗಾಣಿಸುತ್ತಿದ್ದಾನೆ.
-ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ