ದಕ್ಷಿಣ ಕನ್ನಡ ಕಡಲಿನ ಒಡಲು. ಇದು ವಿಭಿನ್ನ ಜಾತಿ, ಮತ, ಭಾಷೆಗಳನ್ನು ಒಳಗೊಂಡ ಸೌಹಾರ್ದದ ತವರೂರು. ದೇವ–ದೈವಸ್ಥಾನಗಳ ನೆಲೆವೀಡಾದ ಇಲ್ಲಿನ ಸ್ಥಳೀಯ ಕಲೆಗಳಿಗೂ ವಿಶೇಷ ಸ್ಥಾನಮಾನವಿದೆ. ಹಾಗೆಯೇ, ಪತ್ರಿಯೊಂದು ಕಲೆಗೂ ಇಲ್ಲಿ ಗೌರವ ಮತ್ತು ಪುರಸ್ಕಾರ ದೊರೆಯುತ್ತಿದೆ. ಇಂತಹ ನಾಡಿನಲ್ಲಿ ಭರತನಾಟ್ಯಕ್ಕೆ ಭವ್ಯಯುತವಾದ ಪರಂಪರೆ ಇದೆ. ಇಂತಹ ಕಲೆಯನ್ನೇ ಜೀವವನ್ನಾಗಿಸಿಕೊಂಡವರು ಡಾ. ಚೇತನಾ ರಾಧಾಕೃಷ್ಣ.ಇವರು ಪ್ರಸಿದ್ಧ ಭರತನಾಟ್ಯ ಕಲಾವಿದೆ. ಭರತನಾಟ್ಯ ಶಿಕ್ಷಕಿಯಾಗಿ, ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ವಿವಿಧ ರೀತಿಯ ಸಾಧನೆಗಳನ್ನು ಮಾಡುತ್ತಲೇ ಉನ್ನತ ವ್ಯಕ್ತಿತ್ವ ಮತ್ತು ಸ್ಥಾನವನ್ನು ಅಲಂಕರಿಸಿರುವ ಇವರು, ‘ನೃತ್ಯ ತನ್ನ ಜೀವನದ ಒಂದು ಭಾಗ’ ಎಂದುಕೊಂಡವರು.ಚೇತನಾ ರಾಧಾಕೃಷ್ಣ ಅವರ ಭರತನಾಟ್ಯ ವೈಭವ ದೇಶ-ವಿದೇಶಗಳಲ್ಲಿ ಕೂಡ ಪ್ರಸಿದ್ಧಿ ಹೊಂದಿದೆ. ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಬೇರೆ ಬೇರೆ ರೀತಿಯ ನೃತ್ಯ ಕಾರ್ಯಕ್ರಮವನ್ನು ನೀಡಿ ಜನಪ್ರಿಯತೆ ಗಳಿಸಿರುವ ಇವರು, ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಕೂಡ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಂದ ಗೌರವ ಸ್ವೀಕರಿಸಿದ್ದಾರೆ.ಭರತನಾಟ್ಯದಲ್ಲಿನ ಗಣನೀಯ ಸೇವೆಗಾಗಿ 1998ರಲ್ಲಿ ಮಂಡ್ಯ ಜಿಲ್ಲಾ ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಚೇತನಾ ರಾಧಾಕೃಷ್ಣ ಅವರ ಮುಡಿಗೇರಿದೆ. ‘ನೃತ್ಯಾನ್ವೇಷಿಕಾ’, ‘ಕಲಾಶ್ರೀ ಕೌಸ್ತುಭ ರತ್ನ’ ಹೀಗೆ ಹಲವಾರು ಪುರಸ್ಕಾರಗಳನ್ನು ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಪಡೆದ ಹೆಮ್ಮೆ ಇವರದು.ಚೇತನಾ ರಾಧಾಕೃಷ್ಣ ಅವರು ನೃತ್ಯ ಕಲಾವಿದೆ ಮಾತ್ರವಲ್ಲ, ನುರಿತ ನೃತ್ಯ ಸಂಯೋಜಕಿಯೂ ಹೌದು. ಇವರು ನೂರಾರು ಮಕ್ಕಳಿಗೆ ಭರತನಾಟ್ಯವನ್ನು ಹೇಳಿಕೊಡುತ್ತಿದ್ದಾರೆ. ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿರುವುದರ ಜೊತೆಗೆ ಮಕ್ಕಳ ಮೇಲೆ ಇವರಿಗೆ ಇರುವ ಅತಿಯಾದ ಪ್ರೀತಿ, ವಿಶ್ವಾಸ ಇವರ ಈ ಎಲ್ಲಾ ಸಾಧನೆಗೆ ಶಕ್ತಿಯಾಗಿದೆ ಎಂದು ಹೇಳಬಹುದು.ಇವರ ವಿದ್ಯಾರ್ಥಿಗಳಲ್ಲಿ ಅನೇಕರು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದಾರೆ. ಜತೆಗೆ ವಿದೇಶದಲ್ಲಿರುವ ಅನೇಕ ಮಕ್ಕಳಿಗೆ ನೃತ್ಯ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ಇವರ ಈ ಎಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಅವರ ಪತಿ ರಾಧಾಕೃಷ್ಣ ಪಿ.ಎಂ. ಇವರು ಪ್ರಸುತ್ತ ಗುರು ದೇವಾ ಲಲಿತಕಲಾ ಅಕಾಡೆಮಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಚೇತನಾ ರಾಧಾಕೃಷ್ಣ ಅವರು ಪ್ರಸುತ್ತ ಸಂಗೀತ ವಿಶ್ವವಿದ್ಯಾಲಯದಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೃತ್ಯವೇ ದೇವರು ಅಂದುಕೊಂಡ ಇವರು ಈ ಕಲೆಯ ಬಗ್ಗೆ ಮನದ ಮಾತನ್ನು ಹಂಚಿಕೊಳ್ಳುವುದು ಹೀಗೆ: ‘ನೃತ್ಯ ಕೇವಲ ಮನರಂಜನೆಯ ಮಾಧ್ಯಮವಲ್ಲ. ಕಲಾವಿದರ ಜತೆಗೆ ಸಹೃದಯಿ ಪ್ರೇಕ್ಷಕರಿಗೂ ನೆಮ್ಮದಿಯ ಭಾವ ತಂದುಕೊಡುವ ಮಾಧ್ಯಮ. ಈ ಕಲೆಯನ್ನು ಮೈಗೂಡಿಸಿಕೊಳ್ಳಬೇಕಾದರೆ ನೃತ್ಯದ ಮೇಲೆ ಅತಿಯಾದ ನಂಬಿಕೆ, ಶ್ರದ್ಧೆ, ಮುಖ್ಯವಾಗುತ್ತದೆ. ಹೀಗಿದ್ದಾಗ ಮಾತ್ರ ಒಬ್ಬ ಕಲಾವಿದ ಉತ್ತಮ ನೃತ್ಯಕಾರನಾಗಲು ಸಾಧ್ಯ.ಭರತನಾಟ್ಯ ಕಲೆಯ ತೊಟ್ಟಿಲು. ಪತ್ರಿಯೊಂದು ಕಥೆಯನ್ನೂ ಅಕ್ಷರ ಅಕ್ಷರವಾಗಿ ನೃತ್ಯದ ಮೂಲಕ ತಿಳಿಸುವ ಸಾಮರ್ಥ್ಯ ಭರತನ್ಯಾಟಕ್ಕೆ ಇದೆ. ಭರತನಾಟ್ಯದ ವೈಭವವನ್ನು ಬಣ್ಣಿಸಲು ಸಾಧ್ಯವಿಲ್ಲ. ಇಂತಹ ಕಲೆಯ ಮೂಲಕ ಚೇತನಾ ರಾಧಾಕೃಷ್ಣ ಅವರು ಅಭಿಮಾನಿಗಳನ್ನು ಸೆಳೆದಿದ್ದಾರೆ.
courtset:prajavani.net
“author”: “ಧನುಷ್ ಕೊರಂಬಡ್ಕ.”,
https://www.prajavani.net/artculture/dance/bharathanatya-dancer-643356.html