ಫುಕುವೊಕ ಎಂಬ ಕೃಷಿ ಸಂತ

ಫುಕುವೊಕ ಎಂಬ ಕೃಷಿ ಸಂತ

– ಪ್ರಸನ್ನ

ಮಣ್ಣಿನ ಆರೋಗ್ಯವು ಮಣ್ಣಿನ ಮಕ್ಕಳ ಆರೋಗ್ಯವನ್ನು ನಿರ್ಣಯಿಸುತ್ತದೆ ಎಂಬುದು ಅವರ ಬಲವಾದ ನಂಬಿಕೆ. 

ನಾವು ಆಧುನಿಕರು, ಆಧುನಿಕತೆ ಹಾಗೂ ಪರಂಪರೆಗಳ ನಡುವಿನ ಸಂಬಂಧವನ್ನು ಜಗಳವಾಗಿ ನೋಡುವುದೇ ಹೆಚ್ಚು. ಅದಿರುವುದೂ ಹಾಗೆಯೇ ಅನ್ನಿ. ಹಿಂದಿನ ಯಾವ ಸಭ್ಯತೆಯಲ್ಲೂ ಇರದಷ್ಟು ತೀವ್ರತರ ಜಗಳ ಹಳತು– ಹೊಸತುಗಳ ನಡುವೆ ಇದೆ ಇಂದು. ‘ಪರಂಪರೆಯಲ್ಲಿ ಎಲ್ಲವೂ ಇತ್ತು, ಪರಂಪರೆ ಭವ್ಯವಾಗಿತ್ತು’ ಎಂದು ಬಲಪಂಥೀಯರು ತಲೆಹರಟೆ ಮಾಡಿದರೆ, ‘ಪರಂಪರೆಯೆಂಬುದು ಮೂಢನಂಬಿಕೆಗಳ ತವರು’ ಎಂದು ವಿಚಾರವಾದಿಗಳು ತರಲೆ ಮಾಡುತ್ತಾರೆ.

ಆದರೆ, ಆಶ್ಚರ್ಯದ ಸಂಗತಿಯೆಂದರೆ, ಇಷ್ಟೆಲ್ಲ ವೈರುಧ್ಯಗಳ ನಡುವೆಯೂ ಹಳತು– ಹೊಸತುಗಳನ್ನು ಸಮರ್ಥವಾಗಿ ನಿಭಾಯಿಸಿದ ಮಹಾನುಭಾವರ ಉದಾಹರಣೆಗಳು ಆಧುನಿಕ ಯುಗದಲ್ಲಿ ಸಾಕಷ್ಟು ಇವೆ. ಅಂತಹದ್ದೊಂದು ಅಸಾಧಾರಣ ಉದಾಹರಣೆ ಜಪಾನಿನ ಕೃಷಿ ಸಂತ ಫುಕುವೊಕನದ್ದು. ಫುಕುವೊಕ ತನ್ನ ಕೃಷಿ ಪ್ರಯೋಗಗಳ ಮೂಲಕ ಹೊಸತನ್ನು ಹಳತಾಗಿಸಿದ, ಹಳತನ್ನು ಹೊಸತಾಗಿಸಿದ. ಹೊಸ ಪವಾಡವೊಂದನ್ನು ಜರುಗಿಸಿದ. ಏನೂ ಮಾಡದೆ ಕೃಷಿ ಮಾಡಿದ. ಈ ಪವಾಡ ಸಾಧಿಸಲಿಕ್ಕೆ ದಶಕಗಳ ಸಾಧನೆ ಅಗತ್ಯವಾಯಿತು. ಅದೇ ಅವನ ತಪಸ್ಸು.

ಫುಕುವೊಕ ಒಬ್ಬ ಅಪ್ಪಟ ಆಧುನಿಕ ಮನುಷ್ಯ, ವಿಜ್ಞಾನಿ. ತನ್ನ ಕೃಷಿ ಪ್ರಯೋಗವನ್ನು ಕುರಿತು, ‘ಒಂದು ಹುಲ್ಲಿನ ಕ್ರಾಂತಿ’ ಎಂಬ ಒಂದು ಪುಸ್ತಕ ಬರೆದಿದ್ದಾನೆ. ಆ ಪುಸ್ತಕದಲ್ಲವನು ತನಗೆ ಸತ್ಯದರ್ಶನವಾದ ಸಂದರ್ಭವನ್ನು ಹೀಗೆ ವಿವರಿಸುತ್ತಾನೆ. ಆಗಿನ್ನೂ ಅವನು ಯುವಕ. ಯೋಕೋಹಾಮ ಬಂದರು ನಗರದಲ್ಲಿ ಕೃಷಿ ಸಂಶೋಧಕನಾಗಿ ಕೆಲಸ ಮಾಡುತ್ತಿರುತ್ತಾನೆ. ಕೈತುಂಬ ಸಂಬಳ ಬರುತ್ತಿರುತ್ತದೆ, ತುಂಬು ಯೌವನ ಹಾಗೂ ತುಂಟಾಟ, ಎಲ್ಲ ಯುವಕರಂತೆ ಅವನೂ ಸಹ. ಹೀಗಿರುವಲ್ಲಿ ನ್ಯುಮೋನಿಯ ಕಾಯಿಲೆಯಾಗುತ್ತದೆ ಅವನಿಗೆ. ಆಸ್ಪತ್ರೆಗೆ ಹಾಕುತ್ತಾರೆ. ಆಸ್ಪತ್ರೆಯಲ್ಲಿ ದಿನಕಳೆಯುತ್ತಿರುವಾಗ, ಆಸ್ಪತ್ರೆಯ ಯಾಂತ್ರಿಕ ವಾತಾವರಣ ಹಾಗೂ ಒಂಟಿತನಗಳಿಂದಾಗಿ ಮಾನಸಿಕ ಕ್ಲೇಷಕ್ಕೆ ಒಳಗಾಗುತ್ತಾನೆ.

ನ್ಯುಮೋನಿಯ ವಾಸಿಯಾಗುತ್ತದೆ, ಮಾನಸಿಕ ಕ್ಲೇಷ ವಾಸಿಯಾಗದೆ ಉಳಿಯುತ್ತದೆ. ಒಂದು ದಿನ, ಇಡೀ ರಾತ್ರಿ, ಯೋಕೋಹಾಮ ಬಂದರಿನ ಎದುರು ಬದಿಯ ಎತ್ತರದ ಸ್ಥಳವೊಂದರಲ್ಲಿ ಮರಗಳ ಕೆಳಗೆ ಕುಳಿತು ದುಗುಡ ಪರಿಹರಿಸಿಕೊಳ್ಳುವ ಯತ್ನ ನಡೆಸುತ್ತಾನೆ. ದುಗುಡ ಹರಿಯುವುದಿಲ್ಲ, ಬೆಳಕು ಹರಿಯುತ್ತದೆ. ಮರಕ್ಕೊರಗಿ ತೂಕಡಿಸುತ್ತಿದ್ದವನು ಹಾಗೆಯೇ ಕಣ್ಣು ತೆರೆಯುತ್ತಾನೆ. ಆಯಾಸ.

ಸೂರ್ಯ ಇನ್ನೂ ಮೇಲೆದ್ದಿಲ್ಲ. ಚುಮುಚುಮು ಬೆಳಕು. ಎದುರಿಗಿನ ಬಂದರು ಕಟ್ಟೆ ಬಂದರಿನ ಹಡಗುಗಳ ಹೊಗೆಕೊಳವೆಗಳು, ಕಟ್ಟಡಗಳ ಗಗನಚುಂಬಿಗಳು ಎಲ್ಲವೂ ದಟ್ಟ ಮಂಜನ್ನು, ಅದು ದುಗುಡವೋ ಎಂಬಂತೆ ಹೊದ್ದು ಮಲಗಿರುತ್ತವೆ. ಆಗ ಆಶ್ಚರ್ಯವೊಂದು ಘಟಿಸುತ್ತದೆ. ಬೆಳ್ಳಕ್ಕಿಯೊಂದು ಮಂಜಿನ ತೆರೆ ಹರಿದುಕೊಂಡು, ಬೆಳ್ಳಗಿನ ರೆಕ್ಕೆ ಪಟಪಟಿಸುತ್ತ ಹಾರಿ ದರ್ಶನ ನೀಡಿ ಮರೆಯಾಗುತ್ತದೆ. ಫುಕುವೊಕನ ಮುಖದಲ್ಲಿ ಮಂದಹಾಸ ಮೂಡುತ್ತದೆ. ಸೂರ್ಯನ ಕಾವಿಗೆ ಕರಗುವ ಮಂಜಿನ ತೆರೆಯಂತೆ ಅವನ ದುಗುಡ ಕರಗಿಹೋಗುತ್ತದೆ. ‘ಬದುಕಿಗೆ ಅರ್ಥವಿಲ್ಲ!’ ಎಂಬ ಉದ್ಗಾರ ಅವನ ಬಾಯಿಂದ ಹೊರಬೀಳುತ್ತದೆ.

ಎಂತಹ ವಿಚಿತ್ರ ನೋಡಿ! ಬದುಕಿಗರ್ಥವಿಲ್ಲ ಎಂದೆನ್ನಿಸಿದಾಗ, ನಮಗೆಲ್ಲ ದುಗುಡ ಆವರಿಸಿಕೊಳ್ಳುತ್ತದೆ. ಫುಕುವೊಕನಿಗಾದರೋ ದುಗುಡ ಹರಿಯುತ್ತದೆ. ಬದುಕಿಗರ್ಥವಿಲ್ಲ ಎಂಬ ಅರಿವೇ ಫುಕುವೊಕನಿಗಾದ ಜ್ಞಾನೋದಯ. ಆ ಅರಿವನ್ನೇ ಅವನು, ಮುಂದೆ ತನ್ನ ಕೃಷಿ ಪ್ರಯೋಗಗಳಲ್ಲಿ ಅಳವಡಿಸಿಕೊಂಡ. ನಾವೋ ಬದುಕಿನುದ್ದಕ್ಕೂ, ಅರ್ಥ ಹುಡುಕಿಕೊಂಡು ವ್ಯರ್ಥ ಅಲೆಯುವವರು. ನಮ್ಮ ಕತೆ– ಕಾದಂಬರಿಗಳಲ್ಲಿ, ತತ್ವಶಾಸ್ತ್ರದ ಗ್ರಂಥಗಳಲ್ಲಿ, ಚಳವಳಿಗಳ ಪ್ರಣಾಳಿಕೆಗಳಲ್ಲಿ ಎಲ್ಲದರಲ್ಲೂ ಬದುಕಿಗೊಂದು ವಿಶೇಷ ಅರ್ಥ ಹಚ್ಚುವ ಪ್ರಯತ್ನ ನಡೆಸಿರುತ್ತೇವೆ. ಅಷ್ಟೇ ಏಕೆ ಯುದ್ಧ ಮಾಡುವಾಗ, ಮದುವೆ ಮಾಡಿಕೊಳ್ಳುವಾಗ, ಮಕ್ಕಳೊಟ್ಟಿಗೆ ಜಗಳವಾಡುವಾಗ, ಕ್ರಾಂತಿ ಮಾಡುವಾಗ, ದೇವರನ್ನರಸಿ ಅಲೆಯುವಾಗ ಕೂಡ ಇಲ್ಲದ ಅರ್ಥಗಳನ್ನು ಹಚ್ಚಿಕೊಂಡು ಬಡಿದಾಡುತ್ತಿರುತ್ತೇವೆ.

ಫುಕುವೊಕನಿಗೆ ಅಂದಿನ ಬೆಳಗು ಬೆಳ್ಳಕ್ಕಿ ಹೇಳಿದ್ದೇನೆಂದರೆ– ‘ನನ್ನಂತೆ ನೀನೂ  ಸರಳ ಪ್ರಾಣಿ, ನನ್ನ ಬದುಕಿಗಿರುವಷ್ಟೇ ಸರಳ ಅರ್ಥ ನಿನ್ನ ಬದುಕಿಗೂ ಇದೆ’ ಎಂದು. ಮಾನವರ ಬದುಕಿಗೆ ಪ್ರತ್ಯೇಕವಾದ ಹಾಗೂ ವಿಶೇಷವಾದ ಅರ್ಥವೆಂಬುದಿಲ್ಲ ಎಂಬ ಸತ್ಯವನ್ನು ಅಂದು ಫುಕುವೊಕ ಮನಗಂಡ. ಮನಗಂಡು ಸರಳವಾಗಿ ಬದುಕುವ ನಿರ್ಧಾರ ಮಾಡಿದ. ‘ಉಣ್ಣುವುದು ಬದುಕಿನ ಪ್ರಾಥಮಿಕ ಅಗತ್ಯವಾದ್ದರಿಂದ ನನ್ನ ಆಹಾರವನ್ನು ನಾನೇ ಬೆಳೆದುಕೊಂಡು ಉಣ್ಣುತ್ತೇನೆ, ಕೃಷಿಕನಾಗುತ್ತೇನೆ’ ಎಂದು ನಿರ್ಧಾರ ಮಾಡಿದ. ‘ಪ್ರಕೃತಿಗೆ ಅಪಚಾರವೆಸಗದಂತೆ ಕೃಷಿ ಮಾಡುತ್ತೇನೆ’ ಎಂದು ಕೂಡ ನಿರ್ಧಾರ ಮಾಡಿದ. ಮುಂದೊಂದು ದಿನ ಅಪಾರ ಖ್ಯಾತಿ ಪಡೆದ ಅವನ ಸಹಜಕೃಷಿ ವಿಧಾನ ಅಥವಾ ಏನೂ ಮಾಡದೆ ಕೃಷಿ ಮಾಡುವ ವಿಧಾನ ಜನಿಸಿದ್ದು ಹೀಗೆ.

ಏನೂ ಮಾಡದೆ ಕೃಷಿ ಮಾಡುವುದೆಂದರೇನು? ಪ್ರಕೃತಿಗೆ ತೊಂದರೆ ಕೊಡದೆ, ಪ್ರಾಕೃತಿಕ ಸಮತೋಲನಕ್ಕೆ ಭಂಗ ತಾರದೆ ಕೃಷಿ ಮಾಡುವುದು ಎಂದರ್ಥ. ‘ಫಲ’ವನ್ನಷ್ಟೇ  ಸ್ವೀಕರಿಸಿ, ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವ ಪುರಂದರದಾಸರಂತೆ, ಮಿಕ್ಕೆಲ್ಲವನ್ನೂ ಪ್ರಕೃತಿಗೇ ಹಿಂದಿರುಗಿಸುವುದು ಎಂದರ್ಥ. ಭತ್ತದ ಸಸ್ಯವಾದರೆ ಕಾಳು, ಹಣ್ಣಿನ ಸಸ್ಯವಾದರೆ ಹಣ್ಣು, ಆಲೂಗಡ್ಡೆಯಾದರೆ ಗಡ್ಡೆ ಮಾತ್ರ ಸ್ವೀಕರಿಸುವುದು; ಹುಲ್ಲು, ರೆಂಬೆ, ಬಳ್ಳಿ, ಬೊಡ್ಡೆ ಇತ್ಯಾದಿ ಮಿಕ್ಕೆಲ್ಲವನ್ನೂ ಪ್ರಕೃತಿಗೇ ಹಿಂದಿರುಗಿಸುವುದು ಎಂದರ್ಥ. ನೇಗಿಲು, ಗುದ್ದಲಿ, ಪಿಕಾಸಿ ಇತ್ಯಾದಿ ಆಯುಧಗಳನ್ನು ಭೂತಾಯಿಯ ಮಡಿಲಿಗೆ ನೆಟ್ಟು ಆಕೆಯನ್ನು ಹಿಂಸಿಸದೆ ಕೃಷಿ ಮಾಡುವುದು ಎಂದರ್ಥ. ಏನೂ ಮಾಡದೆ ಕೃಷಿ ಮಾಡುವುದೆಂದರೆ ಸೋಮಾರಿತನ ಖಂಡಿತಾ ಅಲ್ಲ ಅಥವಾ ಅಪ್ಪನ ಆಸ್ತಿ ಕರಗಿಸುತ್ತ, ಉಡಾಳನಾಗಿ ಬದುಕುವುದಲ್ಲ. ಫುಕುವೊಕ ಸೋಮಾರಿಯಾಗಿರಲಿಲ್ಲ. ಇಡೀ ತೊಂಬತೈದು ವರ್ಷ ಶ್ರಮಜೀವಿಯಾಗಿ ಬದುಕಿದನು ಅವನು.

ನಾವು, ಏನೆಲ್ಲ ಮಾಡಿ ಮಾಡಿ ಅಭ್ಯಾಸವಾಗಿರುವ ಮಾನವರು. ಏನೂ ಮಾಡದೆ ಬದುಕುವುದು ಸುಲಭವಲ್ಲ. ಚಡಪಡಿಕೆಯಾಗುತ್ತದೆ. ಕೃಷಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕೃಷಿಯ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲ ಮಾಡುತ್ತೇವೆ. ಭೂಮಿ ತಲೆಕೆಳಗು ಮಾಡುತ್ತೇವೆ. ಮಣ್ಣು ಕೆದರುತ್ತೇವೆ, ಹರಿಯುವ ನೀರು ಹಿಡಿದು ಅಣೆಕಟ್ಟು ನಿರ್ಮಿಸುತ್ತೇವೆ, ರಸಗೊಬ್ಬರ– ಕೀಟನಾಶಕ– ಕಳೆನಾಶಕ, ಪ್ಲಾಸ್ಟಿಕ್ಕಿನ ಬೇಸಾಯದಮನೆ… ಏನೆಲ್ಲ ಬಳಸುತ್ತೇವೆ. ಟ್ರ್ಯಾಕ್ಟರು, ಟಿಲ್ಲರು, ಕೊಳವೆಬಾವಿ ಬಳಸುತ್ತೇವೆ, ತಳಿಗಳನ್ನು ತಲೆಕೆಳಗು ಮಾಡುತ್ತೇವೆ, ನಿರ್ಬೀಜಫಲ ಬೆಳೆಯುತ್ತೇವೆ, ಒಳತಿನ ಹೆಸರಿನಲ್ಲಿ ಕೆಡುಕು ಮಾಡುತ್ತೇವೆ.

ಫುಕುವೊಕನಿಗೂ ಸಹಜತೆ ಸುಲಭವಾಗಲಿಲ್ಲ. ತಂದೆಯ ಹತ್ತಿರ ಹೋಗಿ ‘ಕೃಷಿ ಮಾಡುತ್ತೇನೆ’ ಎಂದು ಹೇಳಿ ಜಮೀನು ಬೇಡಿದ. ತಂದೆ, ಫಲ ಬರುತ್ತಿದ್ದ ಎರಡೆಕರೆ ಕಿತ್ತಲೆತೋಟವನ್ನು ಮಗನಿಗೆ ವಹಿಸಿಕೊಟ್ಟ. ಅಲ್ಲಿ ಫುಕುವೊಕ ತನ್ನ ಪ್ರಯೋಗ ಆರಂಭಿಸಿದ. ಪ್ರಯೋಗ ಹಾಳಾಯಿತು. ತೋಟವೂ ಹಾಳಾಯಿತು. ಕಿತ್ತಲೆಗಿಡಗಳು, ಪಾಪ, ಅವೂ ಸಹ ಮನುಷ್ಯರಂತೆ ಏನೆಲ್ಲ ಮಾಡಿಸಿಕೊಂಡು ಅಭ್ಯಾಸವಾಗಿದ್ದ ಗಿಡಗಳು ಏನೂ ಮಾಡದೆ ಬಿಟ್ಟಾಗ ಸತ್ತೇ ಹೋದವು. ಪ್ರೂನಿಂಗ್ ಮಾಡಿ ಬೆಳೆಸಿದ್ದ ಗಿಡಗಳು ಪ್ರೂನ್ ಮಾಡದೆ ಬಿಟ್ಟಾಗ, ರೆಂಬೆಗಳೆಲ್ಲ ಒಮ್ಮೆಗೇ ಚಿಗುರಿ, ಒಂದಕ್ಕೊಂದು ಹೆಣೆದುಕೊಂಡು ಕಗ್ಗಂಟಾಗಿ, ಹಸಿರೆಲೆಗಳು ಉಸಿರುಕಟ್ಟಿಸಿದಂತಾಗಿ, ಕೀಟದಬಾಧೆಗೆ ಬಲಿಯಾಗಿ, ಸತ್ತೇ ಹೋದವು. ಮಗನ ಮೂರ್ಖತನ ಕಂಡು, ಶಪಿಸಿ ವಾಪಸು ನಗರಕ್ಕೆ ನೌಕರಿಗೆ ಅಟ್ಟಿದ ತಂದೆ.

ನಿಸರ್ಗ ತಿಳಿಯದು ಎಂದು ತಿಳಿಯಿತು ಫುಕುವೊಕನಿಗೆ. ತಾಳ್ಮೆಯಿಂದ ನಿಸರ್ಗ ಗಮನಿಸಿದ. ಅದೇ ಅವನ ಧ್ಯಾನವಾಯಿತು. ಅದ್ಭುತ ಪ್ರಪಂಚವೊಂದು ಅವನೆದುರಿಗೆ ನಿಧಾನವಾಗಿ ತೆರೆದುಕೊಂಡಿತು. ಆಹಾ! ಒಂದು ದಿನವಿದ್ದಂತೆ ಮತ್ತೊಂದು ದಿನವಿಲ್ಲ, ಒಂದು ಗಿಡವಿದ್ದಂತೆ ಮತ್ತೊಂದು ಗಿಡವಿಲ್ಲ, ಒಂದು ಕೀಟವಿದ್ದಂತೆ ಮತ್ತೊಂದು ಕೀಟವಿಲ್ಲ. ಆದರೂ, ಎಲ್ಲವೂ ಅದರದರ ಭಾವಕ್ಕೆ ಅದರದರ ಭಕುತಿಗೆ ತಕ್ಕಂತೆ ಸಹಬಾಳ್ವೆ ನಡೆಸಿವೆ! ಪ್ರತ್ಯೇಕವಿದ್ದೂ ಪ್ರತ್ಯೇಕತೆ ಇರದ ವಿಶ್ವವಿದು ಈ ಭೂಮಿ ಎಂದರಿತ. 
ಒಂದು ಬೆಳಗು ಮನೆಯಿಂದ ತಲೆ ಹೊರಹಾಕುತ್ತಾನೆ, ಏನಾಶ್ಚರ್ಯ! ಇಡೀ ಹೊಲ ಬೆಳ್ಳಿತೆರೆಯಂತೆ ಫಳ ಫಳ ಹೊಳೆಯುತ್ತ ಮಿನುಗುತ್ತಿದೆ! ಹೋಗಿ ನೋಡಿದರೆ ಕೋಟ್ಯಂತರ ಜೇಡಗಳು, ಅದೆಲ್ಲಿಂದ ಬಂದಿದ್ದವೋ ಕಾಣೆ, ಹೊಲದ ತುಂಬ ಆವರಿಸಿಕೊಂಡು ಬಲೆ ಹೆಣೆದಿವೆ.  ಮತ್ತೆರಡು ದಿನಕ್ಕೆ ಜೇಡ ಮಂಗಮಾಯ. ತೆನೆಗಳು ಬಲೆ ಹರಿದುಕೊಂಡು ತಲೆಯಾಡಿಸುತ್ತಿವೆ ಗಾಳಿಗೆ. ಸಸ್ಯಾಹಾರಿ ಕೀಟಗಳನ್ನು ತಿಂದು ಬದುಕುವ ಮಾಂಸಾಹಾರಿ ಕೀಟಗಳನ್ನು ಕಂಡ. ಮಾಂಸಾಹಾರಿ ಕೀಟಗಳೇ ಕ್ರಿಮಿನಾಶಕಗಳ ಕೆಲಸ ಮಾಡುತ್ತವೆ, ತಾನೇನೂ ಮಾಡುವ ಅಗತ್ಯವಿಲ್ಲ ಎಂದು ಕಂಡುಕೊಂಡ. ಇನ್ನೂ ಏನೇನೋ ಕಂಡುಕೊಂಡ.

ಒಂದು ದಿನ ಭತ್ತದ ಹುಲ್ಲಿನ ಒಂದು ದಳವನ್ನು ಕಂಡ. ಸಣ್ಣದೊಂದು ಸತ್ಯದರ್ಶನವಾಯಿತು. ತಾನು ತಿನ್ನುವ ಆಹಾರ ಮೂಲತಃ ಹುಲ್ಲಿನ ಬೀಜಗಳು ಎಂದು ಅರಿವಾಯಿತು. ಅಕ್ಕಿ, ರಾಗಿ, ನವಣೆ, ಸಾವೆ, ಸಜ್ಜೆ, ಗೋಧಿ ಇತ್ಯಾದಿ ಏಕದಳ ಧಾನ್ಯಗಳೆಲ್ಲವೂ ವಿವಿಧ ಜಾತಿಯ ಹುಲ್ಲಿನ ಬೀಜಗಳೇ ಹೌದು ಎಂದು ಅರಿವಾಯಿತು. ವಿಚಾರ ಮಾಡಿದ. ‘ಹೌದಲ್ಲವೇ! ಹುಲ್ಲು ಬೆಳೆಯುತ್ತದೆ, ತಂತಾನೆ ಬೆಳೆಯುತ್ತದೆ, ಹಟ ಹಿಡಿದು ಬೆಳೆಯುತ್ತದೆ… ನೆಲದ ತುಂಬೆಲ್ಲ ಹುಲ್ಲು ಮಾತ್ರವೇ ತುಂಬಿ ಬೆಳೆಯುವಂತೆ ಮಾಡುವುದಷ್ಟೇ ಕೃಷಿ’ ಎಂದನ್ನಿಸಿತು. ಹುಲ್ಲು ಬೆಳೆದಾದ ಮೇಲೆ, ಅದೇ ಜಾಗದಲ್ಲಿ, ಅಳಿದುಳಿದ ತೇವದಲ್ಲಿ, ಚಳಿಗಾಲದ ಬೆಳೆಯಾಗಿ, ದ್ವಿದಳ ಧಾನ್ಯಗಳನ್ನು ಬೆಳೆಯುವುದು ಜಾಣತನ ಎಂದನ್ನಿಸಿತು. ಪೂರ್ವದೇಶಗಳ ಹಳೆಯ ಅರಿವು, ಹೀಗೆ ಹೊಸ ಕಾಣ್ಕೆಯಾಗಿ ಕಂಡಿತು ಅವನಿಗೆ.

ಅರ್ಥಗಳೂ ಸಹ ವಿಪರೀತ ಬೆಳೆದು ಕಗ್ಗಂಟಾದ ಕಿತ್ತಲೆ ಗಿಡಗಳಂತೆ ಸಾಯುತ್ತವೆ ಎಂದು ಅರಿವಾಯಿತು. ಅರ್ಥಗಳ ಗಂಟು ಬಿಚ್ಚುತ್ತ ಬಿಚ್ಚುತ್ತ ನಡೆದು ಕಡೆಗೊಮ್ಮೆ ಕೃಷಿಯ ಮೂಲಾರ್ಥಕ್ಕೆ ಆಗ, ನಿಸರ್ಗದ ಸರಳ ನಿಯಮಗಳು ಗಮನಕ್ಕೆ ಬರತೊಡಗಿದವು. ಸರಳ ನಿಯಮಗಳನ್ನು, ವೃಥಾ ಸಂಕೀರ್ಣಗೊಳಿಸುತ್ತದೆ ಯಂತ್ರನಾಗರಿಕತೆ ಎಂಬ ಅರಿವಾಯಿತು.

ಮಣ್ಣನ್ನು ಗಮನಿಸತೊಡಗಿದ. ಮಣ್ಣೇ ಜೀವನಾಡಿ ಎಂದು ಕಂಡುಕೊಂಡ. ನಿಸರ್ಗವು ಮಣ್ಣನ್ನು, ಅದು ತನ್ನ ಕೌಮಾರ್ಯವೋ ಎಂಬಂತೆ ಹಸಿರಿನಿಂದ ಮುಚ್ಚಿಡುತ್ತದೆ ಎಂದು ಕಂಡುಕೊಂಡ. ರೇಪಿಸ್ಟರಂತೆ ನಾವು ಅಗೆದಗೆದು ಮಣ್ಣನ್ನು ಗೋಳು ಹುಯ್ದುಕೊಳ್ಳುತ್ತೇವೆ ಎಂದು ಕಂಡುಕೊಂಡ. ನೇಗಿಲಿನ ಕ್ರೌರ್ಯವನ್ನು ನಿಲ್ಲಿಸಿದ.

ಮುಂದೆ, ಅಂತರರಾಷ್ಟ್ರೀಯ ಖ್ಯಾತಿ ಬಂದಾಗ ಎಲ್ಲರೂ ಅವನನ್ನು ಕರೆಯುವವರೇ! ‘ಬನ್ನಿ, ನಮ್ಮ ದೇಶ ಹಸಿರಾಗಿಸಿ’ ಎಂದು ಬೇಡುವವರೇ. ಫುಕುವೊಕ ತುಂಬ ಓಡಾಡಿದ. ಯಾವುದೇ ದೇಶಕ್ಕೆ ಹೋಗಲಿ, ಆತ ಮೊದಲು ಗಮನಿಸುತ್ತಿದ್ದದ್ದು ಅಲ್ಲಿನ ಮಣ್ಣನ್ನು. ಮಣ್ಣಿನ ಆರೋಗ್ಯವು ಮಣ್ಣಿನ ಮಕ್ಕಳ ಆರೋಗ್ಯವನ್ನು ನಿರ್ಣಯಿಸುತ್ತದೆ, ಮಣ್ಣಿನ ಮಕ್ಕಳ ಆರೋಗ್ಯವು ದೇಶದ ಆರೋಗ್ಯವನ್ನು ನಿರ್ಣಯಿಸುತ್ತದೆ ಎಂದು ಬಲವಾಗಿ ನಂಬಿದ್ದ ಫುಕುವೊಕ.

ಸ್ವಭಾವತಃ ಕೃಷಿಕ ಆತ. ದುರಂತವೆಂದರೆ, ಕೃಷಿಕರೂ ಸೇರಿದಂತೆ ಇಂದಿನ ಆಧುನಿಕರೆಲ್ಲ ಸ್ವಭಾವತಃ ವಣಿಕರಾಗಿದ್ದಾರೆ ಅಥವಾ ಬ್ರಾಹ್ಮಣರು ಅಥವಾ ಕ್ಷತ್ರಿಯರು. ಮತ್ತೆ ಶೂದ್ರರಾಗಬೇಕಿದೆ ನಾವು.

Courtesy : Prajavani.net

http://www.prajavani.net/news/article/2017/07/08/504481.html

Leave a Reply