ಪುಣೆಯ ಕ್ರಾಂತಿಕಿಡಿಗಳು : ಚಾಪೇಕರ್ ಸಹೋದರರು
ಚಾಪೇಕರ್ ಸಹೋದರರು: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಕಥೆ ರೋಮಾಂಚನಕಾರಿ. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ್ ಚಾಪೇಕರ್ ತಮ್ಮ ಅಪ್ರತಿಮ ಶೌರ್ಯ ಹಾಗೂ ದೇಶಭಕ್ತಿಯಿಂದಾಗಿ ಕ್ರಾಂತಿಯ ಕಹಳೆ ಮೊಳಗಿಸಿ ಬಲಿದಾನಗೈದ ಕಥೆ ಇತಿಹಾಸದಲ್ಲಿ ಅಪರೂಪದ ಸಂಗತಿ. ದೇಶದ ಇತರ ಕ್ರಾಂತಿಕಾರಿಗಳ ಹೋರಾಟದ ಯಶೋಗಾಥೆಯನ್ನು, ಬಲಿದಾನದ ಸಾಹಸಕಥೆಯನ್ನು ಕೇಳುತ್ತಲೇ ಬೆಳೆದ ಚಾಪೇಕರ್ ಸಹೋದರರಿಗೆ ತಾವೂ ದೇಶದ ದಾಸ್ಯ ವಿಮುಕ್ತಿಗೆ ಹೋರಾಡಬೇಕೆಂಬ ಕನಸು ಹುಟ್ಟಿತು. ಇಂಗ್ಲಿಷರ ದರ್ಪ ದಬ್ಬಾಳಿಕೆಯ ವಿರುದ್ಧ ಹೋರಾಡಲು ಶರೀರಬಲ ಬೇಕು, ಸಂಘಟನೆ ಬೇಕು ಎಂದು ನಿರ್ಧರಿಸಿದ ಚಾಪೇಕರ್ ಸಹೋದರರು ದಿನನಿತ್ಯ ಕಠಿಣ ವ್ಯಾಯಾಮ ಯೋಗಾಭ್ಯಾಸದಲ್ಲಿ ನಿರತರಾದರು. ಮದುವೆಯಾಗಿ ಮಕ್ಕಳಾಗಿ ಹೊಸ ಜವಾಬ್ದಾರಿಗಳು ಬಂದರೂ ಅವರ ಸ್ವಾತಂತ್ರ್ಯದ ಕನಸು ದೂರಾಗಲಿಲ್ಲ. ಕ್ರಾಂತಿಕಾರಿ ಕೆಲಸಗಳಿಗಾಗಿ, ಸ್ವಾತಂತ್ರ್ಯಕ್ಕೋಸ್ಕರ ಬಲಿದಾನ ಮಾಡಲು ಹಿಂಜರಿಯದ ೧೦-೨೦ ಮಂದಿ ಅರಿಸಿದ ಯುವಕರನ್ನು ಸೇರಿಸಿ ‘ಚಾಪೇಕರ್ ಕ್ಲಬ್’ ಆರಂಭಿಸಿದರು. ಅದೇ ಸಂದರ್ಭದಲ್ಲಿ ಚಾಪೇಕರ್ ಸಹೋದರರಿಗೆ ಲೋಕಮಾನ್ಯ ತಿಲಕರ ನಿಕಟ ಪರಿಚಯವಾಯಿತು. ಅವರು ಲೋಕಪ್ರಿಯಗೊಳಿಸಿದ ಶಿವಾಜಿ ಮತ್ತು ಗಣೇಶ ಉತ್ಸವಗಳಲ್ಲಿ ಈ ಸಹೋದರರು ಭಾಗವಹಿಸಿದರು. ಸ್ಫೂರ್ತಿ ಹಾಗೂ ವೀರಾವೇಶದಿಂದ ಕೂಡಿದ ಹಾಡುಗಳನ್ನು ಕಟ್ಟಿ ಹಾಡಿದರು. ಲೋಕಮಾನ್ಯರ ’ಕೇಸರಿ’ ಪತ್ರಿಕೆಯಲ್ಲೂ ಅವರು ಪ್ರಕಟವಾದವು. ಈ ಕವನಗಳಲ್ಲಿ ಸ್ವದೇಶಾಭಿಮಾನ ತುಂಬಿ ತುಳುಕುತ್ತಿತ್ತು. ಪಾರತಂತ್ರ್ಯದ ವಿಷಯದಲ್ಲಿ ಧಿಕ್ಕಾರ ತುಂಬಿರುತ್ತಿತ್ತು. ಅದೇ ಸಮಯದಲ್ಲಿ ಪೂನಾ ನಗರದಲ್ಲಿ ಪ್ಲೇಗ್ ರೋಗವು ಹಬ್ಬಿತು. ಜನಗಳನ್ನು ಹಿಂಸಿಸಲು ಮತ್ತು ತುಳಿಯಲು ಈ ಸಂದರ್ಭವನ್ನು ಬ್ರಿಟಿಷ್ ಸರ್ಕಾರ ಉಪಯೋಗಿಸಿಕೊಂಡಿತು ಮತ್ತು ಜನತೆಯನ್ನು ಹತ್ತಿಕ್ಕಲು ರ್ಯಾಂಡ್ ಎಂಬ ಇಂಗ್ಲಿಷ್ ಅಧಿಕಾರಿಯನ್ನು ನೇಮಿಸಿತು. ಈತ ದರ್ಪಕ್ಕೆ, ದಬ್ಬಾಳಿಕೆಗೆ, ಕ್ರೌರ್ಯಕ್ಕೆ ಪ್ರಸಿದ್ಧ, ಭಾರತೀಯರನ್ನು ಕಂಡರೆ ಆತನಿಗೆ ತುಂಬ ರೋಷ. ಪ್ಲೇಗ್ ಬಂದ ಸಂಶಯದ ಮೇಲೆ ದೊಡ್ಡ ದೊಡ್ಡ ಮನೆಗಳನ್ನು ಸುಡುವುದು. ಅಲ್ಲಿ ಪ್ಲೇಗ್ ರೋಗ ಬಂದಿರಲೇಬೇಕೆಂದಿಲ್ಲ. ಇಲಿಗಳು ಸತ್ತು ಬೀಳುತ್ತಿವೆಯೆಂದು ಮನೆಗಳಿಗೆ ನುಗ್ಗುವುದು. ಮನೆಗಳನ್ನು ಒಡೆದು ಬೆಲೆಬಾಳುವ ವಸ್ತುಗಳನ್ನು ಕೊಳ್ಳೆ ಹೊಡೆಯುವುದು. ದೇವರ ಮನೆಗೆ ಬೂಟುಕಾಲಿನಲ್ಲಿ ನುಗ್ಗುವುದು ವಿಗ್ರಹಗಳನ್ನು ಒದೆಯುವುದು. ಹೆಂಗಸರಿರುವ ಕೋಣೆಗಳನ್ನೂ ಬಿಡದೆ ಒಳಹೊಕ್ಕು ಶೋಧಿಸುವುದು. ಕೆಲವು ಬಾರಿ ಹೆಂಗಸರ ಮೇಲೆ ಅತ್ಯಾಚಾರ. ಪ್ಲೇಗಿನಿಂದ ಸತ್ತಿರುವ ಮತ್ತು ಸಾಯುತ್ತಿರುವವರನ್ನು ಸಾಗಿಸುವ ನೆಪದಲ್ಲಿ ಪ್ರತ್ಯೇಕವಾಗಿ ಇಟ್ಟು ಉಪಚಾರ ಮಾಡುವ ಆಸ್ಪತ್ರೆ ಶಿಬಿರಗಳಿಗೆ ಬದುಕಿರುವವರನ್ನು ಬಲವಂತವಾಗಿ ಎಳೆದುಹಾಕುವುದು- ಆ ಕರಾಳ ಶಾಸನದ ನೆಪದಲ್ಲಿ ಇವು ರ್ಯಾಂಡ್ ಮಾಡುತ್ತಿದ್ದ ಪಾಪಕೃತ್ಯಗಳು. ರಕ್ಷಕರಾಗಿ ಬಂದಿದ್ದ ಈ ಬ್ರಿಟಿಷ್ ಅಧಿಕಾರಿಗಳು ಪೂನಾ ನಗರದ ಭಕ್ಷಕರಾಗಿ ಮೆರೆದರು. ದೇಶಭಕ್ತರಾದ ಚಾಪೇಕರ್ ಸಹೋದರರಿಗೆ ಇದನ್ನು ಸಹಿಸಲಾಗಲಿಲ್ಲ. ದುಷ್ಟ ರ್ಯಾಂಡ್ ನನ್ನ ಮುಗಿಸಿ ಜನರಿಗೆ ನೆಮ್ಮದಿ ತರಬೇಕೆಂದು ನಿಶ್ಚಯಿಸಿದ ಅವರು ವಿಕ್ಟೊರಿಯಾ ರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವ ದಿನದಂದೇ ರ್ಯಾಂಡ್ ನನ್ನು ಹತ್ಯೆಮಾಡಿದರು. ಈ ಹತ್ಯೆ ಇಂಗ್ಲೆಂಡ್ ನವರೆಗೆ ಸದ್ದು ಮಾಡಿತು. ಬ್ರಿಟಿಷ್ ಸರ್ಕಾರದ ಜಂಘಾಬಲವನ್ನೇ ಉಡುಗಿಸಿತು. ಆದರೆ ದುರದೃಷ್ಟವಶಾತ್ ಜತೆಗಿದ್ದವರೇ ದುಡ್ಡಿನ ಆಸೆಗೆ ಚಾಪೇಕರ್ ಸಹೋದರರ ಸುಳಿವು ಕೊಟ್ಟಿದ್ದಕ್ಕಾಗಿ ಅವರು ಸಿಕ್ಕಿಬಿದ್ದರು. ವಿಚಾರಣೆಯ ನಾಟಕದ ನಂತರ ಅವರಿಗೆ ಸಿಕ್ಕಬಹುಮಾನ ಮರಣದಂಡನೆ. ಒಂದೇ ಕುಟುಂಬಕ್ಕೆ ಸೇರಿದ ಮೂವರೂ ಸಹೋದರರು ಭಾರತ ಸ್ವಾತಂತ್ರ್ಯಕ್ಕಾಗಿ ಗಲ್ಲುಗಂಬವೇರಿದ್ದು ಹೋರಾಟದ ಇತಿಹಾಸದಲ್ಲಿ ಒಂದು ಉಜ್ವಲ ಮಾದರಿ. ಅವರು ಬೆಳಗಿದ ಸ್ವಾತಂತ್ರ್ಯ ಜ್ಯೋತಿ ಮುಂದೆ ಅನೇಕ ಕ್ರಾಂತಿಕಾರಿಗಳಿಗೆ ಹೋರಾಟಗಾರರಿಗೆ ಸ್ಫೂರ್ತಿ ತುಂಬಿತು. ಆ ಧೀರೋದಾತ್ತ ಸಹೋದರರಿಗೆ ಭಾವಪೂರ್ಣ ನಮನ.