ಪಾಠ ಕಲಿತ ವೀರು
ಶಿವಪುರ ಅನ್ನೋ ಒಂದು ಊರು. ಆ ಊರಲ್ಲಿ ಒಂದು ಪುಟ್ಟ ಕುಟುಂಬ ಇತ್ತು. ಅಪ್ಪ, ಅಮ್ಮ ಹಾಗು ಮಗ . ಮಗನ ಹೆಸರು ವೀರು. ವೀರುನ ಅಮ್ಮ ತುಂಬಾ ಬುದ್ದುವಂತೆ. ಮನೆಯಲ್ಲಿ ಎಲ್ಲಾ ಕೆಲಸ ಮಾಡುತ್ತಿದ್ದಳು. ಅಡಿಗೆ ಮಾಡಿದರೂ ರುಚಿಯಾಗಿ, ಎಷ್ಟು ಬೇಕೋ ಅಷ್ಟನ್ನೇ ಮಾಡಿ ಉಳಿದು ಚೆಲ್ಲಲಾರದಂತೆ ನೋಡಿಕೊಳ್ಳತ್ತಿದ್ದಳು. ಆದರೆ ವೀರು ಅಮ್ಮನ ಹಾಗೆ ಇರಲಿಲ್ಲ. ಆಕೆ ಎಷ್ಟು ಹೇಳಿದರೂ, ಎಷ್ಟು ಒಳ್ಳೆಯ ಗುಣ ಕಲಿಸ ಬೇಕೆಂದರೂ ಆತ ಮತ್ತೆ ಬೇಶಿಸ್ತಿನಿಂದ ನಡೆದುಕೊಳ್ಳುತ್ತಿದ್ದ. ಅಮ್ಮಳಿಗೆ ಯಾವುದೇ ಕೆಲಸದಲ್ಲಿ ನೆರವಾಗುತ್ತಲೇ ಇರಲಿಲ್ಲ. ಶಾಲೆಯಿಂದ ಬಂದ ತಕ್ಷಣ ಪುಸ್ತಕ ಬ್ಯಾಗು, ತಿಂಡಿ ಚೀಲ ಎಲ್ಲಾ ರೊಯ್ಯನೆ ಚೆಲ್ಲಿ ಆಡಲು ಓಡಿ ಹೋಗಿಬಿಡುತ್ತಿದ್ದ. ಪಾಪ ಅಮ್ಮ ‘ವೀರೂ….ವೀರೂ….ಎಲ್ಲಿ ಹೋಗಿದ್ದೀ’ ಎಂದು ಅಕ್ಕ ಪಕ್ಕದ ಮನೆಗಳಿಗೆ ಹುಡುಕಲು ಹೋಗಿ ಎಳೆದು ಕರೆತರುತ್ತಿದ್ದಳು. ಇವನ ಈ ರೀತಿಯ ವರ್ತನೆಯಿಂದ ಅಪ್ಪ,ಅಮ್ಮರಿಗೆ ತುಂಬಾ ಕಾಳಜಿಯಾಗಿ, ಹೀಗೆ ಯೋಚಿಸಿದರು,”ಗಿಡವಾಗಿ ಬಗ್ಗದ್ದು ಮರವಾಗಿ ಹೇಗೆ ಬಗ್ಗುತ್ತದೆ? ಎಂದು ಯೋಚಿಸಿ ಚಿಂತೆಗೊಳಗಾದರು. ಅಮ್ಮ ಎಲ್ಲಾ ದೇವರ ಗುಡಿಗೆ ಹೋಗಿ ನನ್ನ ಮಗನಿಗೆ ಒಳ್ಳೆ ಬುದ್ದೀ ಕೊಡು ದೇವರೇ ಅಂತ ಪ್ರಾರ್ಥನೆ ಮಾಡುತ್ತಿದ್ದಳು. ಒಂದಿನ ಇದ್ದಕ್ಕಿದ್ದ ಹಾಗೆ ಒಬ್ಬ ಭಕ್ಷುಕ ಮನೆ ಬಾಗಿಲಿಗೆ ಬಂದು, “ಅಮ್ಮಾ ತಾಯಿ ತಿನ್ನಲು ಏನಾದರೂ ಇದ್ದರೆ ಕೊಡಮ್ಮಾ, ಮೂರು ದಿನದಿಂದ ಏನೂ ತಿಂದಿಲ್ಲಾ” ಅಂತ ದೀನನಾಗಿ ಬೇಡಿಕೊಂಡ. ಆಗ ವೀರುನ ಅಮ್ಮ, ಅಯ್ಯೋ ಪಾಪ ಈ ಭಕ್ಷುಕ ತುಂಬಾ ಹಸಿವಿನಿಂದ ಬಂದಂತೆ ಕಾಣುತ್ತಿದೆ. ಆದರೆ ನಾನು ಮೂರೇ ಜನರಿಗೆ ಆಗುವಷ್ಟು ಮಾತ್ರ ಅಡಿಗೆ ಮಾಡಿದಿನಲ್ಲಾ! ಎಂದು ಯೋಚಿಸಿ,ಕೊನೆಗೆ ತನ್ನ ಪಾಲಿನ ಚಪಾತಿಯನ್ನೇ ಆತನಿಗೆ ಕೊಟ್ಟಳು. ಇದನ್ನೆಲ್ಲಾ ವೀರು ನೋಡತಾ ಒಂದು ಕಡೆ ನಿಂತಿದ್ದ. ಹಾಗೇ ಮೊನ್ನೆ ಆದ ಒಂದು ಘಟನೆಯನ್ನು ನೆನಪಿಸಿಕೊಂಡ. ಅದೇನೆಂದರೆ, ಒಂದಿನ ವೀರುಗೆ ಯಾಕೋ ಇಡ್ಲಿ ವಡಾ ತಿನ್ನುವ ಆಸೆ ಅತಿಯಾಗಿತ್ತು. ಆದರೆ ಅಮ್ಮ ಆ ದಿನ ಇಡ್ಲೀವಡೆ ಮಾಡಿರಲಿಲ್ಲ. ಮೊದಲೇ ಅಡಿಗೆಯೂ ಮುಗಿದು ಹೋಗಿತ್ತು. ಅದಕ್ಕಾಗಿ ಆಕೆ ಇಡ್ಲಿವಡೆ ಮಾದುವುದು ಅಥವಾ ಹೊರಗಿನಿಂದ ತರಿಸುವುದನ್ನು ನಿರಾಕರಿಸಿದಳು. ಅದಕ್ಕಾಗಿ ವೀರು ಆ ದಿನ ತಿಂಡಿಯೂ ತಿನ್ನದೆ, ಊಟವೂ ಮಾಡದೆ ಹಸಿವಿನಿಂದ ಹಾಗೇ ಮಲಗಿದ. ಸಂಜೆಯಾದಂತೆ ಅವನಿಗೆ ತಲೆ ಸುತ್ತುವುದು, ಕಣ್ಣು ಮಂಜಾಗುವುದು ಶುರುವಾಯಿತು. ಆಗ ಆತನ ತಾಯಿಗೆ ಸಮಾಧಾನ ಆಗದೇ ಪ್ರೀತಿಯಿಂದ ಮುದ್ದಾಡಿ ಊಟ ಮಾಡಿಸಿದಳು. ಮರುದಿನವೇ ಎಡ್ಲಿ ವಡೆ ಮಾಡಿ ತಿನಿಸಿದಳು. ಆಗ ವೀರುವಿಗೆ ತುಂಬಾ ಸಂತೋಷವಾಯಿತು. ಆದರೆ ಈಗ ವೀರು ನೋಡುತ್ತಿರುವ ದೃಶ್ಯ ಅವನ ಮನಸ್ಸನ್ನು ಕಲಕಿತು. ಈ ಭಿಕ್ಷುಕ ಹೇಗೆ ಮೂರು ದಿನಗಳಿಂದ ಏನೂ ತಿನ್ನದೇ ಹೀಗೆ ನಿಂತಿದ್ದಾನೆ? ಅಯ್ಯೋ ಪಾಪ ಇವನಿಗೂ ನನ್ನಂತೆ ತಲೆ ಸುತ್ತುತ್ತಿರಬಹುದಲ್ಲಾ! ಕಣ್ಣು ಮಂಜಾಗಿರಬಹುದಲ್ಲಾ! ಎಂದು ಯೋಚಿಸಿ ತುಮಬಾ ನೊಂದುಕೊಂಡ. ಆಗ ಅವನಿಗೆ ಅನ್ನದ ಮಹತ್ವ ತಿಳಿಯಿತು. ಇದಕ್ಕಾಗಿಯೇ ಅಮ್ಮ ಊಟ ಚೆಲ್ಲುವುದಿಲ್ಲಾ ಎಂಬುದು ಮನವರಿಕೆಯಾಯಿತು.
ಮುಂದೊಂದು ದಿನ ವೀರುವಿಗೆ ಮತ್ತೊಂದು ಕಲಿಕೆ ಸಾಧ್ಯವಾಯಿತು. ಅದೇನೆಂದರೆ ಒಂದು ದಿನ ವೀರುವಿನ ಅಮ್ಮ ಕೆಲಸ ಮಾಡಿ ಮಾಡಿ ಬಳಲಿಕೆಯಿಂದ ಜ್ವರ ಬಂದು ಮಲಗಿದಳು. ಆ ದಿನ ಆಕೆಗೆ ಮೇಲೇಳುವುದೇ ಸಾಧ್ಯವಾಗಲಿಲ್ಲ. ಅಡಿಗೆ ಊಟ ಎಲ್ಲಾ ಹೇಗೆ? ಎಂದು ಯೋಚಿಸುತ್ತಾ ಮಲಗಿಕೊಂಡಿದ್ದಳು. ಸ್ವಲ್ಪ ಹೊತ್ತಿಗೆ ವೀರು ಅಲ್ಲಿಗೆ ಬಂದ. ಆಗ ಅಮ್ಮ ನರಳುತ್ತಿರುವುದನ್ನು ನೋಡಿ ತುಂಬಾ ನೊಂದುಕೊಂಡು, “ಅಮ್ಮಾ, ಏನಾಗಿದೆ? ಎಂದು ಕೇಳಿದ. ಆಗ ಅಮ್ಮ ಹೇಳಿದಳು, ವೀರು ಈ ದಿನ ನನಗೆ ಯಾಕೋ ತುಂಬಾ ಜ್ವರ ಬಂದಿದೆ. ಏಳುವುದೇ ಸಾಧ್ಯವಾಗುತ್ತಿಲ್ಲ ಎಂದು ಹೇಳಿದಳು. ವೀರು ಮನಸ್ಸಿನಲ್ಲೇ ಬಹಳ ನೊಂದು, ನಾನು ಅಮ್ಮನಿಗೆ ಏನಾದರೂ ಸಹಾಯ ಮಾಡಲೇ ಬೇಕು ಎಂದು ನಿರ್ಧರಿಸಿ,”ಅಮ್ಮಾ, ನಾನು ಏನಾದರೂ ತಿಂಡಿ ಮಾಡಿ ಕೊಡುತ್ತೇನೆ. ನೀನು ಮಲಗಿಯೇ ನನಗೆ ಸಲಹೆ ನೀಡು ಎಂದು ಹೇಳಿದ.” ಕೂಡಲೇ ಅಮ್ಮಳಿಗೆ ತುಂಬಾ ಸಂತೋಷವಾಗಿ ವೀರು ನೀನು ಒಂದು ಪಾತ್ರೆಯಲ್ಲಿ ನೀರು ತಂದು ಕೊಡು. ರವೆ ಡಬ್ಬಿ ಅಲ್ಲೇ ಪಕ್ಕದಲ್ಲಿದೆ ಅದನ್ನು ಕೊಡು, ಹಾಗೇ ಒಲೆ ಹಚ್ಚಿ ನೀರು ಕಾಯಲು ಇಡು ಎಂದು ಹೇಳಿದಳು. ಆ ದಿನ ವೀರು ಅಮ್ಮ ಹೇಳಿದ ಎಲ್ಲಾ ಕೆಲಸ ಮಾಡಿ ಮುಗಿಸಿದ. ನಾನು ಮೊದಲೇ ಹೀಗೆ ಅಮ್ಮಳಿಗೆ ಸಹಾಯ ಮಾಡಿದ್ದರೆ ಈ ದಿನ ಅಮ್ಮ ಜ್ವರದಿಂದ ನರಳುತ್ತಿರಲಿಲ್ಲ. ಇನ್ನು ಮುಂದೆ ನಾನು ಪ್ರತಿದಿನ ಅಮ್ಮಳಿಗೆ ಒಂದು ಕೆಲಸದಲ್ಲಿ ನೆರವಾಗಲೇ ಬೇಕು ಎಂದು ನಿರ್ಧರಿಸಿದ. ವೀರುವಿನ ಅಮ್ಮ ಕೂಡ ಸಮಯ ಸಂದರ್ಭ ಮಕ್ಕಳಿಗೆ ಪಾಠ ಕಲಿಸಿಯೇ ಬಿಡುತ್ತದೆ ಎಂದು ತಿಳಿದು ನಿಶ್ಚಿಂತೆಯಿಂದ ಇದ್ದಳು. ಮುಂದೆ ವೀರು ಎಲ್ಲರಿಗೂ ಸಹಾಯ ಮಾಡುವ ಗುಣ ಬೆಳೆಸಿಕೊಂಡು ಒಳ್ಳೆಯ ಹುಡುಗ ಎನಿಸಿಕೊಂಡ.