ಪರಾಕ್ರಮಿ ಸದ್ಗುರು ರಾಮಸಿಂಗ್ ಕೂಕಾ
ಸದ್ಗುರು ರಾಮಸಿಂಗ್ ಕೂಕಾ : ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಪಂಜಾಬಿ ಸಿಖ್ಖರ ಪಾತ್ರ ಬಹಳ ದೊಡ್ಡದು. ಅಪ್ರತಿಮ ದೇಶಭಕ್ತರ ಸಂಪ್ರದಾಯವದು. ಇಂದಿಗೂ ಭಾರತೀಯ ಸೈನ್ಯದಲ್ಲಿ ಸಿಖ್ಖ ರೆಜಿಮೆಂಟ್ ಎಂದರೆ ಪರಮ ಪರಾಕ್ರಮಿಗಳ ದಂಡು. ಅಂತಹ ಪಂಜಾಬಿ ಸಿಖ್ಖರ ‘ನಾಮಧಾರಿ ಸಂಪ್ರದಾಯ’ ಅಥವಾ ‘ಕೂಕಾ ಪಂಥ’ ದ ಸ್ಥಾಪಕ ಸದ್ಗುರು ರಾಮಸಿಂಗ್ ಕೂಕಾ. ಮೂಲತಃ ಬಡಗಿ ವೃತ್ತಿಯ ಕುಟುಂಬದ ರಾಮಸಿಂಗ್ ತಾನೂ ತನ್ನ ತಂದೆಯ ಬಡಗಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ನೆರವಾಗುತ್ತಿದ್ದ. ಆದರೆ ಮಿತಿಮೀರಿದ ಬ್ರಿಟಿಷರ ದೌರ್ಜನ್ಯ ಹಾಗೂ ಅಲ್ಲಿಯ ಜನರ ನಿರಭಿಮಾನ ಅವನನ್ನು ರೊಚ್ಚಿಗೆಬ್ಬಿಸಿತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಮಿಷನರಿಗಳು ಮತಾಂತರದಲ್ಲಿ ನಿರತರಾಗಿದ್ದವು. ಇದನ್ನೆಲ್ಲಾ ಕಂಡ ರಾಮಸಿಂಗ್ ಜನರನ್ನು ಆಧ್ಯಾತ್ಮಿಕವಾಗಿ ಮೇಲ್ಮಟ್ಟಕ್ಕೆ ಒಯ್ಯುವ, ಅವರೊಳಗೆ ದೇಶಾಭಿಮಾನ ಬೆಳೆಸುವ, ಧಾರ್ಮಿಕ, ಸಾಮಾಜಿಕ, ರಾಜಕೀಯ ಜನಜಾಗೃತಿ ನಿರ್ಧಾರದಿಂದ ಕೂಕಾ ಪಂಥವನ್ನು ಆರಂಭಿಸಿದ. ರಾಮಸಿಂಗ್ ಸದ್ಗುರು ರಾಮಸಿಂಗ್ ಆದ. ರಾಮಸಿಂಗ್ ನ ಕೂಕಾ ಪಂಥದ ಪ್ರಸಿದ್ಧಿ ಎಲ್ಲೆಡೆಗೆ ಹರಡಿ ಸಾವಿರಾರು ಜನ ಈ ಪಂಥಕ್ಕೆ ಸೇರ್ಪಡೆಯಾದರು. ಪಂಜಾಬ ಪ್ರಾಂತದ ೨೧ ಜಿಲ್ಲೆಗಳಲ್ಲೂ ಕೂಕಾಗಳ ಚಟುವಟಿಕೆಗಳ ಜಾಲ ಹಬ್ಬಿತು. ಸದ್ಗುರು ರಾಮಸಿಂಗ್ ರು ಬ್ರಿಟಿಷರ ದಬ್ಬಾಳಿಕೆಯನ್ನು ತಮ್ಮ ಶಕ್ತಿಯುತ ಮಾತುಗಳಿಂದ ಖಂಡಿಸಲಾರಂಭಿಸಿದರು. ಅವರ ವಾಣಿ ದಾಸ್ಯದಲ್ಲಿ ಬಿದ್ದಿದ್ದ ಜಡಜನತೆಯನ್ನು ತಟ್ಟಿ ಎಬ್ಬಿಸಿತು. ಸದ್ಗುರು ರಾಮಸಿಂಗ್ ರು ತಮ್ಮ ಅನುಯಾಯಿಗಳ ಮೂಲಕ ಕಾಶ್ಮೀರ ಹಾಗೂ ನೇಪಾಳ ರಾಜ್ಯಗಳೊಂದಿಗೆ ಸಂಬಂಧ ಬೆಳೆಸಿದರು. ಸಮಯ ಬಂದಾಗ ಅವರ ಸಹಾಯದ ಭರವಸೆಯನ್ನೂ ಪಡೆದರು. ಇಷ್ಟಕ್ಕೇ ನಿಲ್ಲದೆ ರಾಮಸಿಂಗ್ ರ ದೂತರು ರಷ್ಯಾಕ್ಕೂ ಹೋದರು. ನಮ್ಮ ದೇಶದ ಸ್ವಾತಂತ್ರ್ಯ ಪ್ರಾಪ್ತಿಗೆ ಹೊರದೇಶ ದವರ ಸಹಾಯವನ್ನು ಪಡೆಯಲು ಹೊರಟವರಲ್ಲಿ ಮೊದಲಿಗರಾದರು. ಗುಪ್ತಚರರ ಕಿರುಕುಳದ ನಡುವೆಯೂ ಕೂಕಾಗಳ ಸಂಖ್ಯೆ ದಿನದಿನವೂ ಬೆಳೆಯಿತು. ೧೮೭೧ರ ವೇಳೆಗೆ ಅದು ೪,೩೦,೦೦೦ವನ್ನು ಮುಟ್ಟಿತು. ಪಂಜಾಬಿನಾದ್ಯಂತ ಕ್ರಾಂತಿಯ ಕಹಳೆ ಮೊಳಗಿಸಿದ ಈ ಕ್ರಾಂತಿ ಸೇನೆ ಹಲವು ಕಡೆಗಳಲ್ಲಿ ಬ್ರಿಟಿಷರ ಬಗ್ಗುಬಡಿಯಿತು. ಕೊನೆಗೂ ರಾಮಸಿಂಗ್ ಕೂಕರನ್ನು ಮೋಸದಿಂದ ಸೆರೆಹಿಡಿದ ಬ್ರಿಟಿಷರು ಬರ್ಮಾದ ರಂಗೂನ್ ಜೈಲಿಗೆ ಕಳಿಸಿದರು. ಸುಮಾರು ೧೪ ವರ್ಷಗಳ ಕಾಲ ಕರಾಳ ಜೈಲುವಾಸವನ್ನು ಅನುಭವಿಸಿ ೧೮೮೫ ರಲ್ಲಿ ಸದ್ಗುರು ರಾಮಸಿಂಗ್ ರು ನಿಧನ ಹೊಂದಿದರು. ಕೂಕಾಪಂಥದ ಅನೇಕ ವೀರ ಹೋರಾಟಗಾರರನ್ನು ವಿಚಾರಣೆ ಇಲ್ಲದೆ ಬಹಿರಂಗವಾಗಿ ತೋಪಿಗೆ ಕಟ್ಟಿ ಉಡಾಯಿಸಲಾಯಿತು. ಕೂಕಾ ಪಂಥದ ಈ ಎಲ್ಲ ಮಹಾತ್ಮರ ವೀರಗಾಥೆ ಜಾನಪದ ಹಾಡಾಗಿ ಇಂದಿಗೂ ಪಂಜಾಬಿನಲ್ಲಿ ಅನುರಣಿಸುತ್ತಿದೆ.