ಪಂಜರದ ಗಿಳಿ
ಪಂಜರದೊಳೊಂದು ಗಿಳಿ
ಮೂಕ ವೇದನೆಯಿಂದಲಿ
ಬಾನ ತುದಿಯನೆ ನೋಡುತಲಿರೆ
ಬಳಗಗಳೆದರ ಕೂಡಿ ಬಾನಲಿ ಹಾರುತಿರೆ
ಒಂಟಿ ತಾನೆನ್ನುವ ಭಾವದಲಿ
ಮುಗಿಲ ತಾಯಿಯ ಸ್ಮರಿಸಿ ದುಃಖದಲಿ
ಗಿಡ, ಮರ, ಪೊಟರೆ ಗೂಡು
ಆಹಾ! ಎಂಥ ಸುಖಕರ ಆ ಜೀವನವು.
ಪಂಜರದೊಳು ನಾನಿಂದು
ಕಾನನದ ಸೊಬಗು ಕಾಣೆ
ವನದ ಹಣ್ಣು, ಪುಷ್ಪ ಕಾಣೆ
ಹಸಿರು ಆನಂದದ ಸಿರಿ ಕಾಣೆ
ಬೇಡದ ಭಕ್ಷ್ಯ
ನಿತ್ಯ ಶಬ್ದಕೆ ರೋಸಿದೆ ಮನ
ಕಲ್ಮಷ ಗಾಳಿ, ನೀರು
ಬಂದಿಹೆ ನಾನಾವ ನರಕಕ್ಕಿಂದು
ನೆನಪಾಗಿದೆ ಹುಳ, ಕೀಟಗಳಿಂದು
ಗುಟುಕುಗಳ ಬಾಯಿಗಿಟ್ಟ ಆ ಪ್ರೀತಿ!
ಮುದ ನೀಡುವ ಬಳಗದ ಕಲರವ
ನಾ ಹಾರುವಾಸೆ ನಾ ಹಾರುವಾಸೆ
ಈ ಪಂಜರವೆನಗೇಕೆ?
ನಾ ಹಕ್ಕಿ ಗಿಡ ಮರ ಕಾನನ
ಹೊಲ ಗದ್ದೆ ಎನ್ನ ಜೀವನ
ಪಂಜರವೆನಗೆ ಸೆರೆಯಲ್ಲವೆ?
ಬಂಧಿಸಿಡುತಿರೆ ನಾ ಅಪರಾಧಿಯೇ?
ಎನ್ನ ನೆಲೆ ಅಲ್ಲಿಹುದು!
ಇಲ್ಲೆಂಥ ಉತ್ಸಾಹವಿಹುದು!
ಖಗ ಮೃಗಗಳಿಗುಂಟು ಕಾಡು
ಮನುಜಂಗುಂಟು ನಾಡು
ನನಗೇಕೆ ಈ ಪಾಡು
ಬಿಟ್ಟು ಬಿಡು ಮನುಜ
ಬಿಟ್ಟು ಬಿಡು ಮನುಜ
ಪಂಜರದಿಂದೆನ್ನ ಬಾನೆಡೆಗೆ ಬಿಟ್ಟು ಬಿಡು