ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು- ಡಾ. ನಾರಾಯಣ ಬಿಲ್ಲವ

ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಮಹಿಳಾ ಸಬಲೀಕರಣ: ಸಮಸ್ಯೆಗಳು ಮತ್ತು ಸವಾಲುಗಳು

21ನೇ ಶತಮಾನದಲ್ಲಿ ಲಿಂಗ ಸಮಾನತೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ರಾಜಕೀಯ ಅಸಮಾನತೆ ಮತ್ತು ಬಡತನ ನಿರ್ಮೂಲನೆ ಮಾಡಲು ಮಹಿಳಾ ಸಬಲೀಕರಣ ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಸುಮಾರು 68 ವರ್ಷಗಳು ಕಳೆದಿವೆ. ಆದರೂ ಸಹ ಪುರುಷ ಮತ್ತು ಮಹಿಳಾ ನಡುವಿನ ಲಿಂಗ ತಾರತಮ್ಯ ಇನ್ನೂ ಮುಂದುವರೆದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಮಹಿಳೆಯರಿಗೆ ವಿಶೇಷ ಸವಲತ್ತುಗಳು ಮತ್ತು ವಿವಿಧ ರಂಗಗಳಲ್ಲಿ ಮೀಸಲಾತಿಯನ್ನು ನೀಡಿದೆ. ಅದರಲ್ಲೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿರುವುದು ಒಂದು ಮುಖ್ಯವಾಗಿದೆ. 73ನೇ ತಿದ್ದುಪಡಿ ಜಾರಿಗೆ ಬಂದು ಸುಮಾರು 22 ವರ್ಷ ಅಂದರೆ 4ನೇ ಹಂತದ ಚುನಾವಣೆ ಅವಧಿ ಮುಗಿದು 5ನೇ ಹಂತದ ಚುನಾವಣೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾರಂಭದಲ್ಲಿದೆ. ಕರ್ನಾಟಕ ಸರ್ಕಾರ ಇತ್ತೀಚಿಗೆ 5ನೇ ಹಂತದ ಚುನಾವಣೆ ಮುಗಿಸಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ (ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್) ಮಹಿಳಾ ಮೀಸಲಾತಿಯನ್ನು 50 ಪ್ರತಿಶತಕ್ಕೆ ಏರಿಸಿದೆ. ಇದಲ್ಲದೇ 2001ರಲ್ಲಿ ಮಹಿಳಾ ಸಬಲೀಕರಣ ಸಲುವಾಗಿ ರಾಷ್ಟ್ರೀಯ ನೀತಿಯನ್ನು ಮತ್ತು 2008ರಲ್ಲಿ ಯು.ಎನ್. ಮಹಿಳಾ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ರಾಜಕೀಯವಾಗಿ ಉತ್ತೇಜಿಸಲು ಮಹತ್ವ ನೀಡಲಾಗಿದೆ. ಇದಲ್ಲದೇ ಮಹಿಳಾ ಸಬಲೀಕರಣವನ್ನು ‘ಸುಸ್ಥಿರ ಅಭಿವೃದ್ಧಿ ಗುರಿ’ಯಲ್ಲಿ 3ನೇ ಪ್ರಮುಖ ಗುರಿಯನ್ನಾಗಿ ಸೇರ್ಪಡೆಗೊಳಿಸಲಾಯಿತು.

ಮಹಿಳಾ ಸಬಲೀಕರಣ ಎಂದರೆ ಶಿಕ್ಷಣ, ಉದ್ಯೋಗ, ಸ್ವಂತ ನಿರ್ಧಾರ ತೆಗೆದುಕೊಳ್ಳುವಿಕೆ, ರಾಜಕೀಯದಲ್ಲಿ ಭಾಗವಹಿಸುವಿಕೆ, ಸಾಮಾಜಿಕ ಅಭಿವೃದ್ಧಿ, ಆರೋಗ್ಯ ಮತ್ತು ಅರಿವು ಮೂಡಿಸುವ ಮೂಲಕ ಮಹಿಳೆಯ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದು ಆಗಿದೆ. ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರು “ಯಾವಾಗ ಒಬ್ಬ ಮಹಿಳೆಯು ನಿರ್ಭಯವಾಗಿ ಮಧ್ಯರಾತ್ರಿ ಸಂಚರಿಸುತ್ತಾಳೋ, ಅಂದು ನಿಜವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಹಾಗೇ” ಎಂದು ತಿಳಿಸಿದ್ದಾರೆ. ಭಾರತದಂತಹ ಪುರುಷ ಪ್ರಧಾನ ದೇಶದಲ್ಲಿ ಮಹಿಳಾ ಸಬಲೀಕರಣ ಸಾಧಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಿಳಾ ಶೋಷಣೆ, ಅತ್ಯಾಚಾರ, ಹೆಣ್ಣುಮಕ್ಕಳ ವ್ಯಾಪಾರ, ಭ್ರೂಣ ಹತ್ಯೆ ಮತ್ತು ಹೆಣ್ಣು ಮಕ್ಕಳು ಅಡುಗೆಮನೆಗಷ್ಟೇ ಸೀಮಿತ ಎನ್ನುವ ದುರ್ಬಲ ಮನೋಭಾವನೆ ಇದಕ್ಕೆ ಸಾಕ್ಷಿಯಾಗಿದೆ. ಭಾರತದಲ್ಲಿ ಮಹಿಳಾ ಶೋಷಣೆಯು ಪುರಾತನ ಕಾಲದಿಂದಲೂ ನಡೆದುಬಂದಿದೆ. ಮಹಾಭಾರತ, ರಾಮಾಯಣಗಳ ಕೆಲವೊಂದು ಪಾತ್ರಗಳು ಅದನ್ನು ಪುಷ್ಠೀಕರಿಸುತ್ತದೆ. ಅಲ್ಲದೇ ಇತ್ತೀಚೆಗೆ ನಡೆಯುತ್ತಿರುವ ಸಾಮೂಹಿಕ ಅತ್ಯಾಚಾರ ಹಾಗೂ ಹೆಚ್ಚುತ್ತಿರುವ ಮಹಿಳಾ ಶೋಷಣೆ ಪ್ರಕರಣಗಳಿಂದ ಇಡೀ ದೇಶ ತಲೆ ತಗ್ಗಿಸುವಂತಾಗಿದೆ. ಹೀಗೆ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಹ ಮಹಿಳೆಯರು ಸಮಾನತೆ ಸಾಧಿಸಲು ಪ್ರತಿನಿತ್ಯ ಹೋರಾಡುತ್ತಲೇ ಇದ್ದಾರೆ. ಈಗಾಗಲೇ ಶಿಕ್ಷಣ, ಆರೋಗ್ಯ, ರಾಜಕೀಯ, ಉದ್ಯಮ ವಲಯ ಹಾಗೂ ಸಾಮಾಜಿಕ ಸೇವೆಗಳಲ್ಲಿ ಗುರುತಿಸಿ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದ್ದಾರೆ. ಅಲ್ಲದೇ ಒನಕೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮ, ಮದರ್ ಥೆರೇಸಾ, ಇಂದಿರಾಗಾಂಧಿ, ಸರೋಜಿನಿ ನಾಯ್ಡು, ಮೇಧಾ ಪಾಟ್ಕರ್, ಸೋನಿಯಾಗಾಂಧಿ, ಜಯಲಲಿತಾ, ಮಮತಾ ಬ್ಯಾನರ್ಜಿ, ಕಿರಣ್ ಬೇಡಿಯಂತಹ ಮಹಿಳೆಯರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ದಿಟ್ಟತನ ತೋರಿಸಿ ದೇಶವೇ ಬೆರಗಾಗುವಂತೆ ಮಾಡಿದ್ದಾರೆ.

ರಾಜಕೀಯ ಮತ್ತು ಮಹಿಳಾ ಸಬಲೀಕರಣ

ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಭಾಗವಹಿಸುವಿಕೆ ನೋಡಿದರೆ, ಲೋಕಸಭಾ, ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಗಳಲ್ಲಿ ಅವರ ಭಾಗವಹಿಸುವಿಕೆ ಕೇವಲ ಬೆರಳೆಣಿಕೆಯಷ್ಟಿದೆ. ಆದರೆ ಗ್ರಾಮೀಣ ಸ್ಥಳೀಯ ಸಂಸ್ಥೆ (ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಮತ್ತು ಗ್ರಾಮ ಪಂಚಾಯತ್)ಗಳಲ್ಲಿ ಅವರ ಭಾಗವಹಿಸುವಿಕೆಯ ಚುನಾವಣಾ ಅವಧಿಯಂತೆ ಅವಧಿಗೆ ತುಂಬಾ ವಿಸ್ತರಣೆಗೊಳ್ಳುತ್ತದೆ. ಸ್ವಾತಂತ್ರ್ಯ ಬಂದು ಸುಮಾರು 35 ವರ್ಷ ಕಳೆದರೂ ಪಂಚಾಯತ್ ವ್ಯವಸ್ಥೆಯ ಮೀಸಲಾತಿ ನೀಡುವ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿರಲಿಲ್ಲ. ಆದರೆ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1985ರಲ್ಲಿ ಮೊದಲಬಾರಿಗೆ ಮಹಿಳಾ ಮೀಸಲಾತಿಯನ್ನು 25 ಪ್ರತಿಶತದಷ್ಟು ನಿಗದಿಗೊಳಿಸಿತು. ಇದರಿಂದ ಇಡೀ ದೇಶದಲ್ಲಿ ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆ ಪ್ರಾಮುಖ್ಯತೆ ಪಡೆದುಕೊಂಡಿತು. ಆದರೆ 1993ರಲ್ಲಿ ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನಿಗದಿಪಡಿಸಿದ್ದು ದೇಶದಲ್ಲೇ ಒಂದು ಮೈಲಿಗಲ್ಲು ಆಗಿದೆ. ಇದಲ್ಲದೇ ಇತ್ತೀಚೆಗೆ ಅದನ್ನು 50 ಪ್ರತಿಶತಕ್ಕೆ ಏರಿಸಿರುವುದು, ಈಗಾಗಲೇ ಕೆಲವು ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಕರ್ನಾಟಕ ಸರ್ಕಾರ ಇತ್ತೀಚಿಗೆ 5ನೇ ಹಂತದ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು 50 ಪ್ರತಿಶತಕ್ಕೆ ಏರಿಸಿದೆ.
ಈಗಾಗಲೇ ಶೇ.50ರಷ್ಟು ಮೀಸಲಾತಿ ಇದ್ದರೂ ಸಹ ಅದಕ್ಕಿಂತಲೂ ಹೆಚ್ಚು ಮಹಿಳಾ ಗ್ರಾಮ ಪಂಚಾಯತ್ ಸದಸ್ಯರು ಕರ್ನಾಟಕದಲ್ಲಿ ಇದ್ದಾರೆ. ಅಲ್ಲದೇ ಅವುಗಳಲ್ಲಿ ಅತೀ ಹಿಂದುಳಿದ ಹಾಗೂ ಶೋಷಣೆಗೆ ಒಳಗಾದ ಸಾಮಾಜಿಕ ವರ್ಗವಾದ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಿದ್ದರೂ ಸಹ ಅವರು ಗಂಡನ ಅಥವಾ ಕುಟುಂಬದ ಸದಸ್ಯರ ನಿರ್ಧಾರಕ್ಕೆ ಮಣಿದು ಮತ್ತು ಅವರ ಮಾತುಗಳಿಂದ ತಮ್ಮ ಸ್ವ-ನಿರ್ಧಾರ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಹೆಚ್ಚಿನ ಮಹಿಳೆಯರು ಕೃಷಿ ಮೇಲಿನ ಅವಲಂಬನೆ, ಅಡುಗೆ ಮನೆ ಮತ್ತು ಕೃಷಿಯೇತರ ಕೂಲಿ, ಅವಿದ್ಯಾವಂತತೆ, ರಾಜಕೀಯದಲ್ಲಿ ಕಡಿಮೆ ಇಚ್ಛಾಶಕ್ತಿ, ಕಡಿಮೆ ತಿಳುವಳಿಕೆ, ಕುಟುಂಬದ ಮೇಲಿನ ಅವಲಂಬನೆಗಳಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ವರ್ಷದ ಚುನಾವಣಾ ಅವಧಿಯಿಂದ ಶೇ.50 ರಷ್ಟು ಮೀಸಲಾತಿ ಸಿಗುವುದರಿಂದ ಮಹಿಳೆಯರು ಪಂಚಾಯತ್ ಮಟ್ಟದಲ್ಲಿ ತಮ್ಮ ಪ್ರಾಬಲ್ಯ ತೋರಿಸಬಹುದು. ಅಲ್ಲದೇ ತಮ್ಮ ಗ್ರಾಮ ಮಟ್ಟದಲ್ಲಿ ಮಹಿಳಾ ಸಂಬಂಧಿತ ಸಮಸ್ಯೆಗಳಾದ ಕುಡಿಯುವ ನೀರು, ಶೌಚಾಲಯಗಳು ಮತ್ತು ಇತರೇ ಮಹಿಳಾ ಸೌಲಭ್ಯಗಳ ಬಗ್ಗೆ ಹೆಚ್ಚು ಒತ್ತು ನೀಡಿ ಸ್ಥಳೀಯ ಪಂಚಾಯತ್ ಗಳ ಮೂಲಕ ತಮ್ಮ ರಾಜಕೀಯ ಸಬಲೀಕರಣವನ್ನು ತೋರಿಸಲು ಇದು ಒಂದು ವೇದಿಕೆಯಾಗಿದೆ.

ಸಿ.ಎಮ್.ಡಿ.ಆರ್. ಸಂಸ್ಥೆಯ ಅಧ್ಯಯನ
ಸಿ.ಎಮ್.ಡಿ.ಆರ್. ಸಂಸ್ಥೆಯ ಅಬ್ದುಲ್ ನಜೀರಸಾಬ್ ಪಂಚಾಯತ್ ರಾಜ್ ಅಡಿಯಲ್ಲಿ 2005-10 ರ ಅವಧಿಯಲ್ಲಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳ ಕುರಿತು ಒಂದು ಅಧ್ಯಯನ ನಡೆಸಲಾಯಿತು . ಸುಮಾರು 140 ಮಾಜಿ ಅಧ್ಯಕ್ಷರುಗಳನ್ನು ಅಧ್ಯಯನಕ್ಕಾಗಿ ಬಳಸಿಕೊಂಡು ಸುಮಾರು 50 ಪ್ರತಿಶತದಷ್ಟು ಮಹಿಳಾ ಮತ್ತು ಪುರುಷ ಮಾಜಿ ಅಧ್ಯಕ್ಷರನ್ನು ಸಮೀಕ್ಷೆ ನಡೆಸಲಾಯಿತು. ಹೆಚ್ಚಿನ ಮಹಿಳಾ ಪಂಚಾಯತ್ ಅಧ್ಯಕ್ಷರುಗಳು ಗ್ರಾಮ ಪಂಚಾಯತ್ ನ ಚಟುವಟಿಕೆಗಳನ್ನು ಕೈಗೊಳ್ಳಲು ಅವರ ಸಂಗಾತಿ, ಕುಟುಂಬ ಸದಸ್ಯರು ಅಥವಾ ಪುರುಷ ಜನ ಪ್ರತಿನಿಧಿಗಳನ್ನು ಅವಲಂಬಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಹೆಚ್ಚಿನ ಮಹಿಳೆಯರು ಕುಟುಂಬ ಸದಸ್ಯರು ಮತ್ತು ಸಂಗಾತಿಗಳ ಒತ್ತಾಯದ ಜೊತೆಗೆ, ರಾಜಕೀಯ ಪಕ್ಷದ ಹಾಗೂ ಗ್ರಾಮದ ಮುಖಂಡರ ಒತ್ತಾಯದಿಂದ ಮೊದಲ ಬಾರಿಗೆ ಪಂಚಾಯತ್ ಸದಸ್ಯರಾಗಿ ಬಂದವರಾಗಿರುತ್ತಾರೆ. ಹೀಗೆ ಬಂದಂತಹ ಮಹಿಳಾ ಪ್ರತಿನಿಧಿಗಳು ಪ್ರಾರಂಭದ ದಿನಗಳಲ್ಲಿ ಪಂಚಾಯತ್ ಚಟುವಟಿಕೆಗಳಲ್ಲಿ ಭಾಗವಹಿಸಲು ತಮ್ಮ ಸಂಗಾತಿ ಅಥವಾ ಕುಟುಂಬದ ಸದಸ್ಯರುಗಳ ಮೇಲೆ ಹೆಚ್ಚು ಅವಲಂಬಿಸಿದ್ದು, ನಂತರ ದಿನಗಳಲ್ಲಿ ತಾವೇ ತರಬೇತಿಗಳಲ್ಲಿ ಭಾಗವಹಿಸಿ ಪಂಚಾಯತ್ ನಲ್ಲಿ ತಮ್ಮ ಪಾತ್ರ ಜವಾಬ್ದಾರಿಗಳ ಬಗ್ಗೆ ಅರಿತು ಪಂಚಾಯತ್ ಚಟುವಟಿಕೆಗೆ ತಾವೇ ನೇರವಾಗಿ ಭಾಗವಹಿಸಲು ಅಥವಾ ಪಾಲ್ಗೊಳ್ಳುತ್ತಿದ್ದಾರೆ. ಅನೇಕ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಗ್ರಾಮ ಪಂಚಾಯತ್ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದರಿಂದ ಪಂಚಾಯತ್  ಗಳ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ. ಕೇವಲ 5 ಪ್ರತಿಶತದಷ್ಟು ಮಹಿಳಾ ಮಾಜಿ ಅಧ್ಯಕ್ಷರುಗಳೇ ಈಗ ಪಂಚಾಯತ್  ಗಳಲ್ಲಿ ಪ್ರತಿನಿಧಿಗಳಾಗಿ ಮುಂದುವರೆದಿದ್ದಾರೆ. ಹೆಚ್ಚಿನ ಮಹಿಳಾ ಜನ ಪ್ರತಿನಿಧಿಗಳಿಗೆ ಪಂಚಾಯತ್ ಚುನಾವಣೆಯಲ್ಲಿ ಗೆದ್ದುಬಂದ ನಂತರ ಗ್ರಾಮ ಪಂಚಾಯತ್ ಯೋಜನೆಗಳ ಬಗ್ಗೆ ಹೆಚ್ಚಿನ ಜ್ಞಾನ ಹಾಗೂ ಸಾರ್ವಜನಿಕರೊಂದಿಗೆ ಮಾತನಾಡುವ ಧೈರ್ಯ ಬಂದಿದೆ ಎಂದು ತಿಳಿಸಿದ್ದಾರೆ. ಇದಲ್ಲದೇ ಮಹಿಳಾ ಅಧ್ಯಕ್ಷರುಗಳು ಕುಡಿಯುವ ನೀರು, ಗ್ರಾಮ ನೈರ್ಮಲೀಕರಣದಂತಹ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚು ಒತ್ತು ನೀಡಿರುತ್ತಾರೆ. ಪಂಚಾಯತ್ ಪ್ರತಿನಿಧಿಯಾದ್ದರಿಂದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದಸ್ಯರುಗಳ ಪಾತ್ರ, ಸರ್ಕಾರದ ವಿವಿಧ ಯೋಜನೆಗಳು, ಪಂಚಾಯತ್ ನ ಹಣಕಾಸು ಮೂಲ ಹಾಗೂ ���ದಸ್ಯರ ಜವಾಬ್ದಾರಿಗಳ ಬಗ್ಗೆ ತಿಳುವಳಿಕೆ ಮೂಡಿದೆ ಎಂದು ತಿಳಿಸಿದ್ದಾರೆ. ಇದಲ್ಲದೇ ಪಂಚಾಯತ್ ಸದಸ್ಯರಾದ್ದರಿಂದ ಮಾಜಿ ಸದಸ್ಯರು ಎಂದು ಸಮಾಜದಲ್ಲಿ ಗೌರವ ನೀಡುತ್ತಾರೆ. ಮತ್ತು ಸ್ವ-ನಿರ್ಧಾರವನ್ನು ಮನೆಯ ಕೆಲಸಗಳಲ್ಲಿ ತೆಗೆದುಕೊಳ್ಳಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪಂಚಾಯತ್ ಚುನಾವಣೆಯಲ್ಲಿ ನಿಲ್ಲುವ ಮನಸ್ಸು ಹೆಚ್ಚಿನವರಿಗೆ ಇದೆ ಎಂದು ತಿಳಿಸಿದ್ದಾರೆ. ಹೀಗಿದ್ದರೂ ಸಹ ಮಹಿಳಾ ಸದಸ್ಯರುಗಳಿಗೆ ಕುಟುಂಬ ಜೀವನದ ನಿರ್ವಹಣೆ, ಅಡುಗೆ ಕೆಲಸ, ಕಡಿಮೆ ರಾಜಕೀಯ ತಿಳುವಳಿಕೆಯಿಂದ ಪಂಚಾಯತ್ ಕಾಯ್ದೆ ಬಗ್ಗೆ ಕಡಿಮೆ ಜ್ಞಾನ, ತಿಳುವಳಿಕೆ, ಕಡಿಮೆ ಸ್ವ ನಂಬಿಕೆಗಳಿಂದ ಹೆಚ್ಚು ರಾಜಕೀಯವಾಗಿ ಸಬಲೀಕರಣ ಹೊಂದಲು ಸಾಧ್ಯವಾಗುತ್ತಿಲ್ಲ. ಅವರ ಸಂಸ್ಕೃತಿ, ಪುರುಷ ಪ್ರಾಧಾನ್ಯತೆ ಮತ್ತು ಅವಲಂಬನೆ, ಗ್ರಾಮ ಮಟ್ಟದಲ್ಲಿ, ತಾಲೂಕ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಡ್ಡಿಯಾಗುವುದು ಅಲ್ಲಗಳೆಯಲಾಗದು, ಪ್ರಸ್ತುತ ಸ್ಥಿತಿಯನ್ನು ನೋಡಿದರೆ, ಮಹಿಳೆಯರು ರಾಜಕೀಯವಾಗಿ, ಆರ್ಥಿಕವಾಗಿ, ಸ್ವ-ನಿರ್ಧಾರ ತೆಗೆದುಕೊಳ್ಳಲು ಇನ್ನೂ ಕೆಲವು ಸಮಯ ಬೇಕಾಗುವುದು.

ಮಹಿಳಾ ಮೀಸಲಾತಿ ಮತ್ತು ಪಂಚಾಯತ್ ಚುನಾವಣೆ

ಮಹಿಳಾ ಮೀಸಲಾತಿ ನೀತಿಯಿಂದ ಮಹಿಳೆಯರು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಭಾಗವಹಿಸಲು ಧನಾತ್ಮಕವಾಗಿದೆ. ಈ ವರ್ಷದಿಂದ ಶೇ. 50 ರಷ್ಟು ಹೆಚ್ಚುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಸದಸ್ಯರು ಪಂಚಾಯತ್ ನಲ್ಲಿ ತಮ್ಮ ಪ್ರಾಬಲ್ಯ ಮೆರೆಯಬಹುದು. ಹೀಗೆ ಗ್ರಾಮ ಮಟ್ಟದಿಂದ ರಾಜಕೀಯದಲ್ಲಿ ಧುಮುಕಿ ಹೆಸರುವಾಸಿಯಾದರೆ ಮುಂದಿನ ಹಂತಗಳಲ್ಲಿ ಅವರು ಸುಲಭವಾಗಿ ಗುರುತಿಸಿಕೊಳ್ಳಬಹುದು. ಮಹಿಳೆಯರು ರಾಜಕೀಯವಾಗಿ ಸಬಲೀಕರಣ ಹೊಂದುವಲ್ಲಿ ಅವರ ವಿದ್ಯಾಭ್ಯಾಸದ ಅರ್ಹತೆ, ವಯಸ್ಸು, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಜೊತೆಗೆ ರಾಜಕೀಯ ಹಿನ್ನೆಲೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನ ಮಹಿಳೆಯರು ಮೀಸಲಾತಿ ಪದ್ಧತಿಯಿಂದ ಪಂಚಾಯತ್ ಸದಸ್ಯರಾಗಿದ್ದರೂ ಸಹ ತಮ್ಮ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಕೆಲವು ಮಹಿಳಾ ಸದಸ್ಯರು ಸ್ವ-ಸಹಾಯ ಗುಂಪಿನಲ್ಲಿ ಭಾಗವಹಿಸಿದ್ದರಿಂದ ರಾಜಕೀಯದಲ್ಲಿ ಸಾರ್ವಜನಿಕರೊಂದಿಗೆ ವ್ಯವಹರಿಸಲು ಸಹಾಯವಾಯಿತು. ಇದಲ್ಲದೇ ಮಹಿಳಾ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ನೀಡಲು ಈ ರಾಜಕೀಯ ಸೇವೆ ಅನುಕೂಲ ಮಾಡಿಕೊಟ್ಟಿದೆ.
ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಗ್ರಾಮ ಪಂಚಾಯತ್ ಚಟುವಟಿಕೆಗಳಲ್ಲಿ ಭಾಗವಹಿಸಿರುವುದರಿಂದ ಕೇರಳ ಪಂಚಾಯತ್ ವ್ಯವಸ್ಥೆ ಈಗಾಗಲೇ ದೇಶದಲ್ಲಿ ಮಾದರಿಯೆನಿಸಿದೆ. ಹಾಗೆಯೇ ಕರ್ನಾಟಕದಲ್ಲಿಯೂ ಕೂಡಾ ಪಂಚಾಯತ್ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಿ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಸುಮಾರು 400 ಮತದಾರರನ್ನು ಪ್ರತಿನಿಧಿಸುವ ಮಹಿಳಾ ಸದಸ್ಯರು ತಮ್ಮ ವಾರ್ಡಿನ, ಓಣಿಯ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಹೆಚ್ಚು ಆಸಕ್ತಿ ವಹಿಸಬೇಕು. ಇದರಿಂದ ಮಹಿಳೆಯರಲ್ಲಿ ಪಂಚಾಯತ್ ಚಟುವಟಿಕೆ ಬಗ್ಗೆ ಹೆಚ್ಚು ಜಾಗೃತಿ, ಅರಿವು ಮೂಡಿ ಹೆಚ್ಚು ಹೆಚ್ಚು ಭಾಗವಹಿಸುವಂತೆ ಉತ್ತೇಜಿಸುತ್ತದೆ. ಇದಕ್ಕಾಗಿ ಪ್ರತಿ ಮಹಿಳಾ ಉಮೇದುವಾರಿ ಪ್ರತಿನಿಧಿಗಳು ರಾಜಕೀಯದ ಬಗ್ಗೆ ಧನಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವುದರ ಜೊತೆಗೆ, ಪುರುಷರ ಮೇಲೆ ಅವಲಂಬನೆ ಹೊಂದದೇ ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು.
ಒಟ್ಟಾರೆಯಾಗಿ ಸುಮಾರು 50 ಪ್ರತಿಶತಕ್ಕಿಂತ ಹೆಚ್ಚು ಮಹಿಳಾ ಪ್ರತಿನಿಧಿಗಳು ಪ್ರತಿ ಪಂಚಾಯತ್ ಗಳನ್ನು ಮೇ, 2015 ರ ಚುನಾವಣೆಯಲ್ಲಿ ಪ್ರತಿನಿಧಿಸುವುದರಿಂದ ಮಹಿಳಾ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಂಡು ಹಿಡಿಯಲು, ರಾಜಕೀಯವಾಗಿ ಉತ್ತಮ ಹಾಗೂ ಪರಿಣಾಮಕಾರಿಯಾದ ನಾಯಕತ್ವವನ್ನು ಗ್ರಾಮೀಣ ಪ್ರದೇಶದಲ್ಲಿ ಒದಗಿಸಬಹುದು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ “ಮೈ ಚಾಯ್ಸ್” ಚಿತ್ರದಂತೆ ಮಹಿಳೆಯರು ರಾಜಕೀಯದಲ್ಲಿ ಪುರುಷರನ್ನು ಅವಲಂಬಿಸದೇ ಜನರಿಗೆ ಯಾವುದು ಮುಖ್ಯವೋ ಆ ಅಭಿವೃದ್ಧಿ ಕಾರ್ಯ ಮಾಡಲು ಮುಂದಾಗಬೇಕು. ಹಾಗೇ ಸ್ವ ನಿರ್ಧಾರ ಕೈಗೊಳ್ಳಬೇಕು. ಇದಲ್ಲದೇ ರಾಜಕೀಯ ಸಬಲೀಕರಣಕ್ಕೆ ಅವರ ಯಜಮಾನರ, ಕುಟುಂಬದವರ ಪ್ರೋತ್ಸಾಹದ ಜೊತೆಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಹೆಚ್ಚು ಪ್ರೋತ್ಸಾಹಿಸಬೇಕಾಗಿದೆ. ಕೇವಲ ಮಹಿಳಾ ಸದಸ್ಯರನ್ನು ಒಂದು ಪಂಚಾಯತ್ ಹೊಂದಿದ್ದರೆ ಅವರಿಗೆ ವಿಶೇಷ ಪ್ರೋತ್ಸಾಹ ಮತ್ತು ಸವಲತ್ತುಗಳನ್ನು ಸರ್ಕಾರದಿಂದ ನೀಡಬೇಕು. ಈಗಾಗಲೇ ಗುಜರಾತ್, ಆಂಧ್ರಪ್ರದೇಶಗಳಂತಹ ರಾಜ್ಯಗಳಲ್ಲಿ ಇದು ಜಾರಿಯಲ್ಲಿದೆ. ಹೀಗೆ ಸುಮಾರು ಜನಪ್ರತಿನಿಧಿಗಳಿಂದ, ಮಹಿಳಾ ಸದಸ್ಯರಿಂದ ಮಹಿಳಾ ಸಬಲೀಕರಣದ ಗುರಿಯನ್ನು ಬೇಗನೇ ತಲುಪಬಹುದು. ಈಗಾಗಲೇ ಮಹಿಳಾ ಗುಂಪು, ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಭಾಗಿಯಾಗಿರುವುದು ಅವರ ಆರ್ಥಿಕ, ಸಾಮಾಜಿಕ, ಅಭಿವೃದ್ಧಿ ಹೊಂದಲು ಮತ್ತು ಇತರೇ ಸಂಘಟನೆಗಳಲ್ಲಿ ತಮ್ಮನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ತಮ್ಮ ಸಬಲೀಕರಣಗೊಳಿಸಲು ಹೋರಾಡುತ್ತಿರುವಂತೆ ಸುಮಾರು 50% ಮತದಾನ ಹೊಂದಿರುವ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಇದು ಒಂದು ವೇದಿಕೆಯಾಗಿದೆ. ರಾಜಕೀಯದಲ್ಲಿ ಇಚ್ಛೆಯುಳ್ಳ ವಿದ್ಯಾವಂತ ಯುವತಿಯರು ಹಾಗೂ ಮಹಿಳೆಯರು ಈ ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿ ಗ್ರಾಮಾಭಿವೃದ್ಧಿ ಬಗ್ಗೆ ಕಾಳಜಿವಹಿಸಬೇಕು. ಇದಕ್ಕೆ ಮಾಧ್ಯಮಗಳು, ಪತ್ರಿಕಾರಂಗಗಳು ಮಹಿಳಾ ಪ್ರಾತಿನಿಧ್ಯದ ಬಗ್ಗೆ ಹೆಚ್ಚು-ಹೆಚ್ಚು ಚರ್ಚಿಸಬೇಕು. ಅಲ್ಲದೇ ಉತ್ತಮ ನಾಯಕತ್ವ ಗುಣ ಹೊಂದಿರುವ, ಉತ್ಸಾಹಿ ಯುವತಿಯರನ್ನು, ಎನ್.ಜಿ.ಓ ಮತ್ತು ಸ್ವ-ಸಹಾಯ ಗುಂಪಿನಲ್ಲಿ ಅನುಭವ ಇರುವ ಮಹಿಳೆಯರನ್ನು ಪಂಚಾಯತಿ ರಾಜಕೀಯದಲ್ಲಿ ಆಸಕ್ತಿ ಹೊಂದುವಂತೆ ಮಾಡಬೇಕು. ಒಂದು ಪಂಚಾಯತ್ ಮಹಿಳಾ ಸದಸ್ಯರನ್ನು ಹೆಚ್ಚು ಹೆಚ್ಚು ಹೊಂದುವುದರಿಂದ, ಮಹಿಳಾ ಸಬಲೀಕರಣದ ಗುರಿಯ ಜೊತೆಗೆ ತಳಮಟ್ಟದ ಸರ್ಕಾರ ಎನಿಸಿದ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿಯಾದರೆ ರಾಜ್ಯದ ಸಮಗ್ರ ಅಭಿವೃದ್ಧಿ ಆಗುವುದರ ಜೊತೆಗೆ ಪ್ರತಿ ರಾಜ್ಯವೂ ರಾಮರಾಜ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಡಾ. ನಾರಾಯಣ ಬಿಲ್ಲವ

 ಸಂಶೋಧಕರು

 ಅಬ್ದುಲ್ ನಜೀರ್ ಸಾಬ್ ಪಂಚಾಯತ್ ರಾಜ್ ಪೀಠ

 ಸಿ. ಎಮ್. ಡಿ. ಆರ್. ಸಂಶೋದನಾ ಸಂಸ್ಥೆ ಧಾರವಾಡ

 ಮೊಬೈಲ್ ನಂಬರ್ :  9740467379

ಇಮೇಲ್ : [email protected]

2 Comments

  1. ನಿಮ್ಮ ಲೇಖನ ಬಹು ಸೊಗಸಾಗಿ ಮೂಡಿಬಂದಿದೆ.
    ಮಹಿಳಾ ಸಬಲೀಕರಣದ ನೆಪದಲ್ಲಿ ಅಬಲೀಕರಣ ಹೆಚ್ಚಾಗುತ್ತಿದೆ. ಅದಕ್ಕೆಂದು ಮಹಿಳೆಗೆ ಚುನಾವಣೆಯಲ್ಲಿ ಮೀಸಲಾತಿ ನೀಡಿದರೆ ಅವಳ ಗಂಡ ಅಧಿಕಾರವನ್ನು ನಡೆಸುತ್ತಾನೆ. ಇದು ವಿಪರ್ಯಾಸ ಅಲ್ವ…

  2. ಲೇಖನ ಆಳವಾದ ಅಧ್ಯಯನ, ಚೆನ್ನಾಗಿದೆ.
    ಮೀಸಲಾತಿ ಇರದ್ದಿದ್ದರೂ ಮಹಿಳೆಯರು ಯಶಸ್ಸು ತೋರಿಸಿದ್ದ ಇನ್ನೊಂದು ಕ್ಷೇತ್ರ ಕಾರ್ಪೊರೇಟ್ ಜಗತ್ತು, ಮಹಿಳೆಯರು ಇಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

Leave a Reply