ಎನ್ನೊಳಗೆ ಹುದುಗಿದ್ದ ನಿರೀಕ್ಷೆಗಳನಿಂದು
ಎಳೆ ಎಳೆಯಾಗಿ ಭಿತ್ತರಿಸುವೆ
ಬೇಸರಿಸದಿರು ಕ್ಷಮೆ ಇರಲಿ ಎನಗೆ ಓ ಗೆಳೆಯ
ಎಲ್ಲೊ ಇರುವ ಬಂಧಕೆ
ಬೆಸೆಯುವ ನಿರೀಕ್ಷೆ
ಜನ್ಮ ಜನ್ಮಗಳ ಅನುಬಂಧವಿದೆಂದು
ಸಪ್ತ ಪದಿಯಲಿ ಹೆಜ್ಜೆಯ ಮೇಲೆ
ಹೆಜ್ಜೆಯನಿಟ್ಟು ನಡೆವಾಗ
ನೂರು ನಿರೀಕ್ಷೆಗಳ ಹೊತ್ತು ನಾ ಬಂದೆ
ಪ್ರೀತಿ ಅಂಕುರಿಸುವ ನಿರೀಕ್ಷೆ
ನಿನ್ನೊಲವಿನ ಉಡುಗೊರೆಗಳ ನಿರೀಕ್ಷೆ
ಬಂಧಗಳ ಸರಪಳಿಯಲಿ ಬಿಗಿದು
ನನ್ನದು ನನ್ನದೆಂಬ ಭ್ರಮೆಯಲಿ
ಹೊತ್ತು ನಾ ತಂದೆ ಹಲವು ನಿರೀಕ್ಷೆ
ಕೈ ಕೈ ಹಿಡಿದು ಜಗವೆಲ್ಲ ಸುತ್ತಲು ನಿನ್ನೊಡನೆ
ಜನ್ಮ ಜನ್ಮಗಳ ಅನುಬಂಧವೆಂದು ಬಗೆದು
ಹೆತ್ತವರ ಅಗಲಿಕೆಯ ದುಃಖದಲ್ಲೂ
ನೀನುಂಟೆಂಬ ಭರವಸೆಯ ನಿರೀಕ್ಷೆ
ಉಲ್ಲಾಸದ ಉಯ್ಯಾಲೆಯಲ್ಲಿ ನಿನ್ನೊಡನೆ
ಜೀಕುವ ನಿರೀಕ್ಷೆ
ನೀನೆಲ್ಲೊ ಹುಟ್ಟಿ ನಾನೆಲ್ಲೊ ಹುಟ್ಟಿ
ಭುವಿಗೆ ಬಂದರೂ ಗೆಳೆಯ
ಬಳಸಿನಿಂತ ಲತೆಯಂತೆ
ಸಹಕಾರ ಬಯಸುವ ನಿರೀಕ್ಷೆ
ನಿರೀಕ್ಷೆಯ ಸುಳಿಯಲ್ಲಿ
ಕಳಚಿದ ಅನಿರೀಕ್ಷಿತ
ಕನಸುಗಳ ನಾ ಕಲ್ಪಿಸಲಿಲ್ಲ
ಮನ ಕದಡುವ ನಿರೀಕ್ಷೆ ನಾ ಮಾಡಲಿಲ್ಲ
ನೀನಿಲ್ಲದಾಗ ಕಳೆದ ಸವಿದಿನಗಳ
ನೆನಹುದಾಗಲಿಲ್ಲ
ಎನ್ನ ನಿರೀಕ್ಷೆಗಳೆಲ್ಲ ಪರೀಕ್ಷೆಯಾಗಿ
ನನ್ನುತ್ತೀರ್ಣಕೆ ಕಾರಣ ನೀ ಇದನೂ
ನಾ ನಿರೀಕ್ಷಿಸಿರಲಿಲ್ಲ
ನೀ ಕೊಟ್ಟ ನೋವೆಲ್ಲ ಬಲವು ಎನಗಾಯ್ತು
ಕಣ್ಣೀರೆಲ್ಲ ಧೈರ್ಯ ಎನಗಾಯ್ತು
ಹಂತ ಹಂತದ ಸಂದರ್ಭವೆಲ್ಲ
ಅಡಿಗಡಿಗೂ ಅನುಭವದ
ಆಕರಗಳಾಯ್ತು ಇದಾವುದು ನಾ
ನಿರೀಕ್ಷಿಸಿರಲಿಲ್ಲ
ಮನುಜನಿಗೆ ಪ್ರತಿ ಘಳಿಗೆಯು ಅನಿರೀಕ್ಷಿತ
ಭವಿಷ್ಯದ ಕನಸುಗಳೇಕೆ ಬೇಕು?
ಎನ್ನ ನಿರೀಕ್ಷೆಗಳಿಂದೆನಗೆ ಬರೆ
ನಿರೀಕ್ಷೆಗಳು.
-ಉಮಾ ಭಾತಖಂಡೆ