ನಿಮಗೂ ವಯಸ್ಸಾಯಿತು…! ಯಾರಾದರು ಅಂದರೆ ನಖಶಿಖಾಂತ ಉರಿ ಹೊತ್ತಿಕೊಳ್ಳುತ್ತದೆ.
ವಯಸ್ಸಾಗುವುದೆಂದರೆ ನಾವು ಮುದುಕರಾಗುತ್ತಿದ್ದೇವೆ ಎಂದೇ ಅರ್ಥ. ಹಾಳಾದ್ದು ಪ್ರತಿ ನಿತ್ಯ ಕನ್ನಡಿ ನೋಡಿಕೊಳ್ಳುತ್ತೇವೆ, ಪ್ರತಿದಿನ ಶೇವ್ ಮಾಡಿಕೊಳ್ಳುತ್ತೇವೆ, ಕೂದಲಿಗೆ ಬಣ್ಣ ಹಚ್ಚಿಕೊಂಡರೂ ಎರಡು ದಿನ ಬಿಟ್ಟು ಕನ್ನಡಿ ನೋಡಿದಾಗ ಅದರ ಬುಡ ಬಿಳಿಯ ಬಣ್ಣದ್ದಾಗಿರುತ್ತದೆ! ನಮ್ಮ ಮುಖದ ಮೇಲೆ ನಾವು ಗುರುತಿಸಿರುವ, ನಾವೊಪ್ಪದ ಮುದಿತನದ ರೇಖೆಗಳನ್ನು ಮರೆಮಾಚುವುದಕ್ಕೆ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಆದರೂ ನಿಮಗೂ ‘ವಯಸ್ಸಾಯಿತು…! ಹೀಗೊಂದು coment ಬಂದಾಗ ಗಂಭೀರವಾಗಿಯೇ ಯೋಚನೆಯಲ್ಲಿ ಬಿದ್ದೆ.
ಹೌದಲ್ಲ, ನನಗಿದು ಇತ್ತೀಚೆಗೆ ಖಾತ್ರಿ ಆಗಿದೆ, ಹೇಗೆಂದರೆ…
ಮೊನ್ನೆ ಹೀಗಾಯಿತು…ಎಲ್ಲಿಗೋ ಹೊರಟವನು ಬಸ್ಸೇರಿದೆ. ಎಲ್ಲ ಆಸನಗಳು ಭರ್ತಿ. ನಲವತ್ತು ನಲವತ್ತೈದರ ನಡು (ಬಡ ನಡುವಿನ)ವಿನ ತಲೆಯಲ್ಲಿ ಒಂದೆರಡು ಬೆಳ್ಳಿ ಕೂದಲನ್ನು ಹೊಂದಿದ ಯುವತಿ ಎದ್ದು ನಿಂತು ಬನ್ನಿ ಅಂಕಲ್ ಇಲ್ಲಿ ಕುಳಿತುಕೊಳ್ಳಿ ಅಂದಳು. ಇಲ್ಲಮ್ಮಾ ಪರವಾ ಇಲ್ಲ, ನೀನು ಕುಳಿತುಕೊಳ್ಳು ಅಂದೆ. ಇಲ್ಲ ಅಂಕಲ್ ನನಗಿಂತ ನಿಮಗೆ ಈ ಸೀಟಿನ ಅವಶ್ಯಕತೆ ಬಹಳವಿದೆ ಅಂದಳು..! ಅಂದಿಗೆ ನನಗೂ ಖಾತ್ರಿಯಾಯಿತು, ನಾನು ಮುದುಕನಾಗುತ್ತಿದ್ದೇನೆ ಎಂದು. ನಮಗೆ ನಿಮಗೆಲ್ಲ ನಾವು ಮುದುಕರಾಗುತ್ತಿರುವ ಬಗೆಗೆ ಸೂಚನೆಗಳು ಬರುತ್ತಲೇ ಇದ್ದವು. ನಾವುಗಳು ಅದನ್ನು ಗಮನಿಸಲಿಲ್ಲ, ಈಗಲಾದರೂ…
1) ನಮ್ಮ ಆಹಾರದ ಮೆನುಗಿಂತ ನಮ್ಮ ಮಾತ್ರೆಗಳ ಮೆನು ಜಾಸ್ತಿಯಾದಾಗ.
2) ಹಜಾಮ ನಮಗಿರುವ ಒಂದು ಹಿಡಿ ಕೂದಲನ್ನು ಹೇಗಾದರೂ ಕತ್ತರಿಸಲಿ ಎಂದುಕೊಂಡಾಗ.
3) ಸಮಾರಂಭಗಳಲ್ಲಿ ಬನ್ನಿ.. ಸರ್……ಬನ್ನಿ ಎಂದು ಕೈಹಿಡಿದೆಳೆದು ಮುಂದಿನ ಸಾಲಿನ ಕುರ್ಚಿಯಲ್ಲಿ
ನಮ್ಮನ್ನು ಕುಳ್ಳಿರಿಸಿದಾಗ.
4) ರಸ್ತೆಯಲ್ಲಿ ಬಿದ್ದಿರುವ ಹತ್ತು ರೂಪಾಯಿಯ ನೋಟನ್ನು ಎತ್ತಲು ಧೈರ್ಯವಿಲ್ಲದೇ ಹೋದಾಗ
(ಬಗ್ಗಿದರೆ ಮತ್ತೆಲ್ಲಿ ನೇರವಾಗಿ ನಿಲ್ಲುವುದಕ್ಕೆ ಅಸಾಧ್ಯ ಎಂದು ಮನವರಿಕೆಯಾಗಿ)
5) ಕೆಳಗಿನ ಅಥವಾ ಮೇಲಿನ ಒಂದಸ್ತಿಗೆ ಹೋಗಲು ಲಿಫ್ಟ್ ಬೇಕೆಂದು ಅನಿಸತೋಡಗಿದಾಗ.
6) ಮದುವೆ ಸಮಾರಂಭದಲ್ಲಿ ಆಕಾಲ. ಈ ಕಾಲ, ನಮ್ಮ ಕಾಲ ಎಂದು ಗಂಟೆಗಟ್ಟಲೆ ಕೊರೆದು ಮನೆಗೆ
ಬಂದು ಹೆಂಡತಿಯೊಡನೆ ನನ್ನ ಹತ್ತಿರ ಬಹಳಷ್ಟು ಮಾತಾಡಿದರಲ್ಲ, ಯಾರವರು ಎಂದು
ಕೇಳಿದಾಗ!!
7) ನಮ್ಮ ಆರೋಗ್ಯದ ಬಗೆಗೆ ಉಪಯುಕ್ತ ಮಾಹಿತಿಗಳನ್ನು ನೀಡುವ ಟಿವಿ ಚಾನಲ್ ಗಳ
ಕಾರ್ಯಕ್ರಮಗಳು ನಮಗಿಷ್ಟವಾಗತೊಡಗಿದಾಗ.
8) ನೂರ್ ಜಹಾನ್, ಸುರಯ್ಯಾ, ಹೊನ್ನಪ್ಪ ಭಾಗವತರ್, ಘಂಟಸಾಲಾ ಮುಂತಾದವರ ಸಿನೆಮಾ
ಹಾಡುಗಳು ,ಇಷ್ಟವೆನಿಸತೊಡಗಿದಾಗ.
9) ಭೂತಕಾಲ ಮತ್ತು ಭವಿಷ್ಯತ್ತಿನ ಚಿಂತನೆಗಳಿಗಿಂತ ವರ್ತಮಾನವೇ ಪ್ರಿಯವಾದಾಗ.
10) ನಮ್ಮ ಜನುಮ ದಿನಕ್ಕೆಂದು ತಂದ ಕ್ಯಾಂಡಲ್ ಗಳ ಬಿಲ್ಲು ನಮ್ಮ ಹುಟ್ಟುಹಬ್ಬಕ್ಕೆಂದು ತಂದ
ಕೇಕ್ ನ ಬೆಲೆಗಿಂತ ಜಾಸ್ತಿಯಾದಾಗ.
11) ಹೆಂಡತಿಯ ಕಣ್ತಪ್ಪಿಸಿ ಸಿಂಗಾರಿಯರೆಡೆ ದಿಟ್ಟಿ ಹಾಯಿಸಿದ ಸಂದರ್ಭ ಹೆಂಡತಿ ಮೆಲ್ಲನೆ ಚಿವುಟಿ
ನಿಮಗೆ ವಯಸ್ಸಾಗಿದೆಯೆಂದು ಗೊತ್ತಲ್ಲ ಎಂದು ಪಿಸುಗುಟ್ಟಿದಾಗ!!!
ಹೀಗಂತ…ನನಗೇನೂ ಅಂತಹ ವಯಸ್ಸಾಗಿಲ್ಲ ಬಿಡಿ!!!
ಗೆಳೆಯರೇ, ವೃದ್ಧಾಪ್ಯ ಬದುಕಿನ ಒಂದು ಸ್ಥಿತಿ. ಅದನ್ನೊಪ್ಪಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳೋಣ. ಏನಂತಿರಿ..?