ನಮ್ಮೊಳಗಿನ ಕಾಮವೇ ವೈರಿ
‘ಗೊತ್ತಿದ್ದರೂ, ಮನಸ್ಸಿಲ್ಲದಿದ್ದರೂ ಮನುಷ್ಯನು ಯಾವುದರ ಬಲವಂತದ ಪ್ರಚೋದನೆಯಿಂದಾಗಿ ಪಾಪವೆಸಗುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ; ‘ರಜೋಗುಣದಿಂದ ಹುಟ್ಟುವ ಕಾಮ ಅಥವಾ ಕ್ರೋಧವೆನ್ನುವ ವೈರಿಯು ಮುಗಿಯದ ಭೋಗೇಚ್ಛೆಯನ್ನು ಹುಟ್ಟಿಸಿ ಮನುಷ್ಯನಿಂದ ಪಾಪವನ್ನು ಮಾಡಿಸುತ್ತದೆ’ ಎಂದು.
ಕಾಮವು ಪೂರೈಕೆಯಾದರೂ, ಆಗದಿದ್ದರೂ ಮನುಷ್ಯನನ್ನು ದಾರಿ ತಪ್ಪಿಸುವುದುಂಟು. ಬಯಕೆ ಪೂರ್ತಿಯಾದರೆ ಮತ್ತಷ್ಟು ಬೇಕೆಂಬ ‘ಲೋಭ’ ಹುಟ್ಟುತ್ತದೆ! ಪಡೆದ ಮೇಲೆ ಅದನ್ನೆಲ್ಲ ಶಾಶ್ವತವಾಗಿ ಉಳಿಸಿಕೊಳ್ಳುವ ಹಂಬಲ ಮೂಡುತ್ತದೆ! ಕಾಮವು ನನಸಾಗದಿದ್ದರೆ? ‘ಅವರಿಂದಾಗಿ ಬಯಸಿದ್ದು ಕೈಗೆ ದಕ್ಕಲಿಲ್ಲ’ ಎನ್ನುತ್ತ ಅವರಿವರ ಮೇಲೆ ಕ್ರೋಧವುಕ್ಕಲಾರಂಭಿಸುತ್ತದೆ! ನಮಗೆ ಸಿಕ್ಕದ ಭೋಗ ಮತ್ತೊಬ್ಬರಿಗೆ ಸಿಕ್ಕಿತೆಂದರೆ ‘ಮಾತ್ಸರ್ಯ’ ಶುರುವಾಗುತ್ತದೆ! ಅಥವಾ ನಮಗೆ ಸಿಕ್ಕ ಭೋಗವೇ ಮತ್ತೊಬ್ಬರಿಗೂ ಸಿಕ್ಕಿತೆಂದರೂ ಸಾಕು, ಅದಕ್ಕೂ ಹೊಟ್ಟೆಕಿಚ್ಚು! ಹೀಗೆ ಅನಿಯಂತ್ರಿತ ಕಾಮವೇ ಮನುಷ್ಯನನ್ನು ಪಾಪವೆಸಗುವತ್ತ ಸೆಳೆದುಹಾಕುವುದು.
ಕೃಷ್ಣನು ಈ ಕಾಮವನ್ನು ಮಹಾಶನಃ (ತುಂಬ ತಿನ್ನುವಂತಹದ್ದು) ಎಂದು ಹೆಸರಿಸಿರುವುದು ಅರ್ಥಪೂರ್ಣವಾಗಿದೆ! ಕಾಮವೆನ್ನುವುದು ‘ತಳವಿಲ್ಲದ ಬುಟ್ಟಿ’ ಇದ್ದಂತೆ! ಎಂದೂ ತುಂಬಲೊಲ್ಲದು! ಅದೇನನ್ನೇ ಭೋಗಿಸಿದರೂ, ಎಷ್ಟೇ ಭೋಗಿಸಿದರೂ ‘ತೃಪ್ತಿ’ ಮಾತ್ರ ಬಾರದು! ಮಹಾಭಾರತದ ಉಪಕಥೆಯೊಂದರಲ್ಲಿ ಯಯಾತಿ ಎಂಬ ಮಹಾರಾಜನು ಸಂಸಾರ-ಸಾಮ್ರಾಜ್ಯಗಳ ಸರ್ವಭೋಗಗಳನ್ನು ಅನುಭವಿಸುತ್ತಿರುತ್ತಾನೆ. ಆದರೆ ಇದಕ್ಕಿದ್ದ ಹಾಗೆ ಶುಕ್ರಾಚಾರ್ಯರ ಶಾಪಕ್ಕೊಳಗಾಗಿ ‘ಅಕಾಲ ವೃದ್ಧಾಪ್ಯ’ವನ್ನು ಅನುಭವಿಸಬೇಕಾಗುತ್ತದೆ. ಇನ್ನೂ ಅಪೂರ್ಣ-ಕಾಮಗಳಿರುವುದರಿಂದ ಯಯಾತಿಯು ನವಯುವಕನಾದ ಮಗ ಪುರುವಿನಿಂದ ಅವನ ಯೌವನವನ್ನು ಎರವಲು ಪಡೆಯುತ್ತಾನೆ. ಎಲ್ಲ ಭೋಗದಾಸೆಗಳನ್ನೂ ಪೂರೈಸಿಕೊಳ್ಳಲು ಮುಂದಾಗುತ್ತಾನೆ. ಆದರೆ ಎಷ್ಟು ಕಾಲ ಭೋಗಿಸಿದರೂ, ಅವನಿಗೆ ‘ಸಾಕು’ ಎನಿಸದೇ ಇರುವುದು ಅವನ ಗಮನಕ್ಕೇ ಬರುತ್ತದೆ! ಕೊನೆಗೆ ಅರಿವು ಮೂಡಿ ಮಗನಿಗೆ ಯೌವನವನ್ನು ಹಿಂದಿರುಗಿಸುತ್ತ ಹೇಳುತ್ತಾನೆ; ‘ಬೆಂಕಿಯನ್ನು ತೃಪ್ತಿಪಡಿಸಲು ತುಪ್ಪವನ್ನು ಸುರಿದಷ್ಟೂ ಅದು ಮತ್ತಷ್ಟು ಪ್ರಜ್ವಲವಾಗಿಯೇ ಉರಿಯತೊಡಗುತ್ತದೆ! ಹಾಗೆಯೇ ಕಾಮವನ್ನು ಪೂರೈಸಿಕೊಳ್ಳಲು ಭೋಗವನ್ನು ಒದಗಿಸುತ್ತಿದ್ದಷ್ಟೂ ಅದು ಹೆಚ್ಚಾಗುತ್ತಲೇ ಹೋಗುತ್ತದೆ!’ ಎಂದು!
ಪಾಪವನ್ನೇ ಮಾಡದೇ ಸನ್ಮಾರ್ಗದಿಂದಲೇ ಬಯಕೆಗಳನ್ನು ಪೂರ್ತಿ ಮಾಡಿಕೊಳ್ಳಲು ಯತ್ನಿಸುತ್ತೇವೆಂದೇ ಇಟ್ಟುಕೊಳ್ಳೋಣ. ಅಷ್ಟು ಸುಲಭಸಾಧ್ಯವಲ್ಲ. ಏಕೆಂದರೆ, ಕಾಮವು ಸನ್ಮಾರ್ಗದಿಂದ ಸಿಗಲಾರದಂತಹದ್ದನ್ನೆಲ್ಲ ಬಯಸುತ್ತಿರುತ್ತದೆ! ಉದಾಹರಣೆಗೆ – ಭೂರಿಭೋಜನವನ್ನು ತಿನ್ನಬೇಕೆನ್ನುವ ಆಸೆ ಕೆಲವೊಮ್ಮೆ ನೆನಸಾಗಬಹುದು. ಅರಮನೆಯ ಸುಪ್ಪತ್ತಿಗೆಯ ಮೇಲೆ ಮಲಗುವ ಆಸೆಯೂ ಒಮ್ಮೊಮ್ಮೆ ನನಸಾದೀತು. ಆದರೆ ‘ಅರಮನೆಯಲ್ಲೇ ವಾಸಿಸುತ್ತ ಮೂರು ಹೊತ್ತೂ ಭೂರಿ ಭೋಜನವನ್ನೇ ತಿನ್ನುತ್ತ ಸರ್ವೋಪಚಾರಗಳನ್ನು ಅನುಭವಿಸುತ್ತಲೇ ಇರಬೇಕು’ ಎನ್ನುವ ಬಯಕೆ ಇದ್ದಕ್ಕಿದ್ದಂತೆ ಭುಗಿಲೆದ್ದರೆ? ಅದನ್ನು ಪಡೆಯಲು ಸನ್ಮಾರ್ಗವು ಖಂಡಿತವಾಗಿ ಅನುಕೂಲಿಸದು. ಆಗ ಮನುಷ್ಯ ಮೋಸ, ಲಂಚ, ಅಡ್ಡದಾರಿಗಳಿಗಿಳಿಯುತ್ತಾನೆ. ಹೀಗೆ ಕಾಮವು ಇರುವ ತನಕವೂ ಕ್ರೋಧ-ಲೋಭಾದಿ ಅರಿಷಡ್ವರ್ಗಗಳತ್ತ ನಾವು ವಾಲುವ ಅಪಾಯವಿದ್ದೇ ಇರುತ್ತದೆ.
ಗಮನಿಸಿ ನೋಡಿದರೆ, ಜಗತ್ತಿನ ಎಲ್ಲ ಪಾಪಕರ್ಮಗಳ ಹಿಂದಿರುವುದು ಒಂದಲ್ಲ ಒಂದು ಬಗೆಯ ‘ಕಾಮ’ವೇ. ಕಾಮವು ಮನುಷ್ಯನನ್ನು ಕೀಲುಗೊಂಬೆಯಂತೆ ಆಡಿಸುತ್ತ ಪಾಪವನ್ನು ಮಾಡಿಸುತ್ತದೆ. ಅದಕ್ಕೇ ಕೃಷ್ಣನು ಹೇಳಿದ್ದು – ವಿದ್ಯೇನಮಿಹವೈರಿಣಮ್ (ಇದನ್ನೇ ವೈರಿಯೆಂದು ತಿಳಿ) ವೈರಿ ಹೊರಗೆಲ್ಲೂ ಇಲ್ಲ! ನಮ್ಮೊಳಗೇ ಹುಟ್ಟಿ, ನಮ್ಮೊಳಗೇ ಇದ್ದುಕೊಂಡು, ನಮ್ಮನ್ನೇ ದಾರಿತಪ್ಪಿಸುವ ‘ಕಾಮ’ವೇ ನಮ್ಮ ಶತ್ರು! ಹಿತಶತ್ರು!
ಹಾಗಾದರೆ ಉಪಾಯವೇನು? ಈ ಕಾಮವನ್ನು ಧರ್ಮದ ಚೌಕಟ್ಟಿನೊಳಗೇ ಅನುಭವಿಸಬೇಕು. ಹೇಳುವುದು ಸುಲಭ, ಮಾಡುವುದು ಕಷ್ಟ. ಆದರೆ ವೈರಿಯನ್ನು ಗೆಲ್ಲಬೇಕೆಂದರೆ ಮಾಡಿಯೇ ತೀರಬೇಕು!
ಡಾ. ಆರತೀ ವಿ. ಬಿ.
ಕೃಪೆ : ವಿಜಯವಾಣಿ