ಧಾರವಾಡ ಮಳೆ
ಹತ್ತೇ ಹತ್ತಿತು ಮಳೆ
ಕೊಚ್ಚಿ ಹೋಯಿತು ಧರೆಯ ಕೊಳೆ
ಹಚ್ಚ ಹಸಿರಾಗಿ ಥಳ ಥಳಿಸಿದಳು ಇಳೆ
ರೈತನ ಮುಖದಲ್ಲಿ ಬಂತಲ್ಲಾ ಕಳೆ
ಆದರೇನು ಮಾಡುವುದು ಹತ್ತಿದ ಮಳೆ ಬಿಡಲಿಲ್ಲ
ಇಳೆಗೆ ಹತ್ತಿದ ನೆಗಡಿ ನಿಲ್ಲಲಿಲ್ಲ
ಬಾಗಿಬಾಗಿ ನೆಲಕಚ್ಚಿದವು ಗಿಡಗಳೆಲ್ಲ
ಹಿಡಿದಿಡಲು ನೀರು ಬೇಸರವಾಯ್ತು ಬೇರುಗಳಿಗೆಲ್ಲಾ
ರವಿಕಿರಣ ಭುವಿಗೆ ಸ್ಪರ್ಷಿಸುವುದಾಗಿರೆ ವಿರಳ
ಭಾಸ್ಕರನದು ವರುಣನೊಡನೆ ಜೋರು ಜಗಳ
ತುಂಬಿ ಹರಿದು ಕೋಡಿ ಬಿದ್ದಿರೆ ನದನದಿ,ಕೆರೆ,ಕೊಳ್ಳ
ಜಲಪಾತ ಧುಮುಕಿ ಉಕ್ಕಿ ಹರಿದಿರೆ ಕಣ್ಣಿಗೆ ಥಳಥಳ
ಜಿಟಿಜಿಟಿ ಬಿಡದೆ ಹಿಡಿದಿದೆ ಮಳೆ ಅನಾಯಾಸ
ನೆಗಡಿ,ಕೆಮ್ಮು,ಜ್ವರ ತಂದಿರೆ ಬೇಸರದ ತ್ರಾಸ
ವೈದ್ಯನ ಮನೆಯಲ್ಲಿ ಕುಬೇರವಾಸ
ಬೇಡವೇ ಬೇಡ ಈ ಮಳೆ ಸಹವಾಸ
ಪ್ರವಾಹ ನುಗ್ಗಿ ಊರಿಗೆ ಊರೇ ಮುಳುಗಿ
ಜನ ಜಾನುವಾರುಗಳೆಲ್ಲಾ ಕಂಗಾಲಾಗಿ
ಗುಡ್ಡಗಳೆಲ್ಲಾ ಕುಸಿದು ಪಾತಾಳಕೆ ಹೋಗಿ
ಮಾಧ್ಯಮಗಳಿಗಿದೊ ಸುದ್ದಿಯ ಸುಗ್ಗಿ
ಥೂಥೂ ಸಾಕುಮಾಡು ಏ ವರ್ಷಾ
ಬೇಸರವಾಯ್ತು ಬಿಟ್ಟುಬಿಡದ ನಿನ್ನ ಸ್ಪರ್ಷ
ಹೊರಗಡಿಯಿಡಲಾರದೆ ಕುಂದಿದೆ ಹರ್ಷ
ಮತ್ತೆ ಬಾ ನೀ ಮುಂದಿನ ವರ್ಷ.
– ಉಮಾ ಭಾತಖಂಡೆ.