“ದೈವದಲ್ಲಿ ಮಣ್ಣಾದವರು”,

‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ ಜಾತ್ರಿ ಮಂದಿಯ ಜೊತಿಗೆ ಊರುಮಂದಿನೂ ನೆರಿದಿತ್ತು..ಮಲ್ಲಿಕಾರ್ಜುನನ ಗೋಪುರದ ಮೇಲಿನ ಮೈಕಿನೊಳಗಿನಿಂದ ‘ಶ್ರೀಶೈಲ ಯಾತ್ರೆಗೆ ಹೋಗಣ್ಣಡಿ.. ಈ ಜಗದ ಭವವನ್ನ ಕಳಿಯೋಣ್ಣಡಿ…’ ಅಂತ ಶೀನಪ್ಪ ಹಾಕಿದ್ದ ಭಜನಾ ಪದ ಲಯವಾಗಿ ಕೇಳಿಬರುತ್ತಿತ್ತು. ಶೀನಪ್ಪನ ಮುತುವರ್ಜಿ ಕಾರಣದಿಂದಲೋ ಏನೋ, ಬನ್ನೂರಲ್ಲಿ ಶ್ರೀಶೈಲ ಮಲ್ಲಿಕಾರ್ಜುನನಿಗೆ ಭಕ್ತರು ಭಾಳ ಆಗಿದ್ದರು. ಮಲ್ಲಿಕಾರ್ಜುನನ ಮೂರ್ತಿಮಾಡಿ ಗುಡಿನೂ ಕಟ್ಟಿಸಿದ್ದರು. ಪ್ರತಿವರ್ಷ ಹಂಪಿ ಹುಣಿವಿ ದಿನ ಜಾತ್ರಿ. ಜಾತ್ರಿದಿನ ಪಲ್ಲಕ್ಕಿ ಸಾಗಿಸುವುದು, ನಂದಿಕೋಲು ಕುಣಿಯುವುದು, ಒಡಪು ಹೇಳಿಸುವುದು ವಿಜೃಂಭಣೆಯಿಂದ ನಡೆಯುತಿತ್ತು. ಜಾತ್ರಿಯೆಲ್ಲಾ ಮುಗಿದಮೇಲೆ ಊರುಮಂದಿ ಮಲ್ಲಿಕಾರ್ಜುನನ ಸೇವೆಮಾಡಿದ ಶೀನಪ್ಪನಿಗೆ ಕಾಳುಕಡಿ ಕೊಡಲು ಬರುತ್ತಿದ್ದರು. ಶೀನಪ್ಪನ ಮಗ ಮಲ್ಲೇಶಿ, ಕಂಠಪಾಠ ಮಾಡಿದ ಬಸವಾದಿ ಶರಣರ ಹತ್ತಾರು ವಚನಗಳನ್ನು ತನ್ನ ಕಂಚಿನ ಕಂಠದಿಂದ ಪಟಪಟನೇ ಹೇಳಿ ವಾರಮಂದಿಗೆ ಇಷ್ಟಾಗಿದ್ದ. ‘ನಿಮ್ಮವ್ವ ಇದ್ದಿದ್ರ ನಿನ್ ವಚ್ನಕೇಳಿ ಅದೆಷ್ಟು ಹಿಗ್ಗುತಿತ್ತೇನು ಖೋಡಿ.. ನಿಮ್ಮವ್ವ ಸತ್ತು ಹತ್‍ವರ್ಸನ ಆಗಾಕ್‌ ಬಂತು’ ಎಂದು ಅವರು ಹೇಳುವಾಗ ಶೀನಪ್ಪನ ಎದೆ ಮತ್ತಷ್ಟು ಬೇಯುತ್ತಿತ್ತು. ಶೀನಪ್ಪ ಕಣ್ಣೀರು ಹಾಕಿ ಹೆಣ್ತಿ ಜೊತೆ ನಾಲ್ಕುದಿನ ಬಾಳಿದ್ದನ್ನು ಮತ್ತೆ ನೆನಪಿಸಿಕೊಳ್ಳತೊಡಗಿದ.ಶೀನಪ್ಪ ಮದ್ವೆಯಾಗಿ ವರ್ಷ ಕಳೆದರೂ ಚಂದ್ರಿಗೆ ಮಕ್ಕಳು ಆಗಿರಲಿಲ್ಲ. ಹತ್ತಾರು ದೇವ್ರನ್ನ, ಸ್ವಾಮೇರನ್ನ ಕೇಳಿ, ಕಂಡ ಕಂಡ ದೇವ್ರಿಗೆ ಬ್ಯಾಟಿಯನ್ನೂ ಮಾಡಿಸಿ ಇದ್ದುಬದ್ದ ರೊಕ್ಕವನ್ನೆಲ್ಲ ಕಳಕೊಂಡು ಪ್ಯಾಲಿಯಾಗಿದ್ದ. ಕೊನೆಗೆ ಸಾಕಾಗಿ ಮಕ್ಕಳ ಸಲುವಾಗಿ ಇನ್ನೊಂದು ಮದ್ವೆ ಮಾಡಿಕೊಳ್ಳುವುದಕ್ಕೆ ಮಠದ ಲಿಂಗಯ್ಯಸ್ವಾಮಿ ಹತ್ತಿರ ಪಂಚಾಂಗ ಕೇಳಾಕ ಹೋಗಿದ್ದ. ಲಿಂಗಯ್ಯಸ್ವಾಮಿದು ಊರಾಗ ಚೆನ್ನಾಗಿ ನಡೀತಿತ್ತು. ಸುತ್ತಮುತ್ತಲ ಊರುಗಳಿಂದ ಈತನ ಕೈಗುಣ ಬೇಸೈತೆಂದು ಒಳ್ಳೆದು, ಕೆಟ್ಟುದು ಕೇಳಾಕಂತಲೇ ಬಂದು ವಾರವಾರ ಅಂತ್ರ-ಮಂತ್ರ ಕಟ್ಟಿಸಿಕೊಂಡು ಮುಗ್ಗಲಾಗಿ ಹೋಗಿದ್ದರು. ಅವತ್ತು ವಾರ ಬೇಸಿದ್ದರಿಂದ ಲಿಂಗಯ್ಯಸ್ವಾಮಿ ಪಂಚಾಂಗದಾಗ ನಾಕು ಬೆಳ್ಳಾಡಿಸಿ, ಏನೇನೋ ಗುನುಗಾಡಿ ‘ಯಾದೇವ್ರು ಹೇಳೈತೆಪಾ.. ನಿನ್ನೆಣ್ತಿಗೆ ಮಕ್ಳು ಆಗಲ್ಲಂತ..’ ಮಿಕಿಮಿಕಿ ನೋಡುವ ಶೀನಪ್ಪನ ಬೈಯ್ತಾಬೈದು, ‘ಮೂರುವರ್ಸ ಶ್ರೀಶೈಲ ಮಲ್ಲಯ್ಯಗ ಪಾದಯಾತ್ರಿ ಮಾಡಿ, ಅಮ್ಯಾಗ ನಂತಾಕ ಬಾ..’ ಅಂತ ಕಡ್ಡಿಮುರುದಂತೆ ನುಡಿದ. ಇದನ್ನ ನಂಬಿದ ಶೀನಪ್ಪ ತನ್ನ ತುಂಬಿದ ಬೆಳ್ಳನ ಆಕಳವನ್ನು ಲಿಂಗಯ್ಯಸ್ವಾಮಿಗೆ ಹರಿಕಿಗೆಂದು ಕೊಟ್ಟು, ಮೈಯ್ಯಾಗ ರಕ್ತ ಚಿಮ್ಮಿದಂತೆ ಹಿಗ್ಗಿ ಮೂರು ವರ್ಸ ಪಾದಯಾತ್ರಿ ಮಾಡಿದ. ಆದ್ರೆ ಚಂದ್ರಿಗೆ ಏನೇನೂ ಆಗಿಲ್ಲವೆಂದು ಬೇಸತ್ತು ‘ಯಾವ್ ಮಲ್ಲಯ್ಯನಿಲ್ಲ.. ಸುಡುಗಾಡಿಲ್ಲ.. ಎಲ್ಲಾ ಮಣ್ಣುಮುಸಿ..’ ಎಂದು ಗೋಳಾಡತೊಡಗಿದ.ಚಂದ್ರಿ ಗುಡಿಸಿಲ ಮರೆ ನಿಂತು, ಬಗಲಮನಿ ಲಲೀತವ್ವನ ಮುಂದ ‘ನಿಂತಂಗೈತಿ’ ಅಂತ ನಾಚಿ ಮೈಹೊಂದಿಸಿ ಹೇಳುತ್ತಿರುವುದನ್ನು ಕೇಳಿಸಿಕೊಂಡವನೇ ಹಿಗ್ಗಿ-ಹೀರಿಕಾಯಾಗಿ ‘ರಾಮನಂಥ ಮಗ ಹುಟ್ಲಿ’ ಅಂತ ಮೈಯ್ಯಾಗ ಮತ್ತಷ್ಟು ಸತುವು ಬಿಗಿದುಕೊಂಡ. ಚಂದ್ರಿಗೆ ಗಂಡು ಕೂಸಾಯ್ತು. ‘ಶ್ರೀಶೈಲ ಮಲ್ಲಯ್ಯನ ಹೂವಿನ ಬಾಣಕ್ಕ, ಚಿನ್ನದಂಥ ಮಗ ಹುಟ್ಯಾದವ್ವ’ ಅಂತ ಬಗಲಮನಿ ಲಲೀತವ್ವ ಕುರ್‌ಕುರ್‌ ‘ಮಲ್ಲೇಶಿ’ ಅಂತ ತೊಟ್ಲಪದ ಹಾಡಿ ನಾಮಕರಣ ಮುಗಿಸಿದಳು. ಆವತ್ತಿನಿಂದ ಶೀನಪ್ಪ, ಶ್ರೀಶೈಲ ಮಲ್ಲಯ್ಯನ ಪರಮಭಕ್ತನಾಗಿ ಹಗಲು ಹನ್ನೆರಡು ತಾಸು ಮಲ್ಲಯ್ಯ.. ಮಲ್ಲಯ್ಯ.. ಅಂತ ಮಲ್ಲಿಕಾರ್ಜುನ ಗುಡಿಯೊಳಗೆ ಕಸ ಬಳಿಯುತ್ತ, ಮೈಕ್ ಹಾಕುತ್ತ ಕಾಲ ಕಳಿಯತೊಡಗಿದ.ಈ ಕಡೆ ಮಲ್ಲೇಶಿ ಬೀದಿಕೂಸು ಬೆಳೆದಂತೆ, ಉಂಡು-ತಿಂದು ಕೈಗೆ ಬಂದು ಮೆಲ್ಲಕ ಅಂಗನವಾಡಿಯಿಂದ ಶಾಲೆಗೆ ಹೋಗತೊಡಗಿತು. ಅವತ್ತೊಂದಿನ ಚಂದ್ರಿ ‘ಮನ್ಯಾಗ ಎಲ್ರು ಕೂತು ತಿಂದ್ರ ಹೆಂಗ್ ಬರ್ತೈತಿ’ ಅಂದು ಅದ್ಯಾರದೋ ಹೊಲ್ದಾಗ ಕೂಲಿಗೆಂದು ಹೋದಳು. ಅಲ್ಲಿ ರಗಡಿಸಿ ಜ್ವಾಳ ಕೊಯ್ಯುವಾಗ ಕಸದಾಗಿನ ಹಾವು ಸಿಟ್ಟಿಲೇ ಮುಟ್ಟಿತ್ತು. ಚಂದ್ರಿ ಬಾಯಾಗಿನಿಂದ ನೊರೆನೊರೆ ಬುರುಗು ಬೀಳುತ್ತಿರುವುದನ್ನು ನೋಡಿ ಓಡೋಡಿ ಬಂದು ನಲುಗಿದ ಶೀನಪ್ಪ. ‘ಗುಣಾದ್ರ ಶ್ರೀಶೈಲಕ್ಕ ಇನ್ನಾ ಮೂರು ವರ್ಸ ಚಂದ್ರಿನ ಕರಕಂಡೇ ಪಾದಯಾತ್ರಿ ಮಾಡ್ತೀನಿ’ ಎಂದು ಹರಿಕಿ ಹೊತ್ತ. ಊರಲ್ಲಿದ್ದ ಮಂದಿ ಎಲ್ಲದಕ್ಕ ದೇವ್ರು ದೇವ್ರು ಅನ್ನುವ ಶೀನಪ್ಪನ ಬಾಯಿಗೆ ಬಂದ್ಹಂಗ ಬೈದು, ತಾವೇ ಆಸ್ಪತ್ರೆಗೆ ತೋರಿಸಿ ಚಂದ್ರಿನ ಗುಣಪಡಿಸಿದರು. ‘ನಾನು ಹರಿಕಿ ಹೊತ್ತಿದ್ರಿಂದಲೇ ಹೆಣ್ತಿಗೆ ಗುಣಾಗೈತಿ’ ಅಂತ ಶೀನಪ್ಪ ತನ್ನ ಮೊಂಡುಚಾಳಿ ಬಿಡದೆ ಮರುವರ್ಷನೇ ಚಂದ್ರಿನ ಕರಕೊಂಡು ಪಾದಯಾತ್ರೆಗೆ ಹೊಂಟ. ಸಣ್ಣವನಿದ್ದ ಮಲ್ಲೇಶಿಯನ್ನು ಜಾತ್ರಿಗದ್ಲ ಬ್ಯಾಡೆಂದು ಬಗಲಮನಿ ಲಲಿತವ್ವನ ಹತ್ತಿರ ಬಿಟ್ಟುಹೋದ.ಚಂದ್ರಿ ಪಾದಯಾತ್ರೆ ಮಾಡಿದವಳು, ಗುಡಿ-ಗುಂಡಾರಗಳನ್ನು ಕಣ್‍ತುಂಬಾ ನೋಡಿ, ದರುಶನ ಮಾಡಿ, ಕೊನೆದಿನ ರೊಕ್ಕದ ಮುಡ್ಪು ಸಲ್ಲಿಸಲು ತೆಕ್ಕಿಡಿದಿರುವ ಅಷ್ಟು ಮಂದ್ಯಾಗ ಗಂಡನ ಹೆಗಲಿಡಿದು ನಿಂತಳು. ಇನ್ನೇನು ಕಾಣಿಕಿ ಡಬ್ಬಿ ಹತ್ತಿರವಾಗುತಿದ್ದಂತೆ, ಉಡ್ಯಾಗಿನಿಂದ ಮುಡ್ಪು ತೆಗೆತ್ನ್ಯಾಗ ಎರಡು ಸಾವಿರದ ನೋಟು ಅದ್ಹೇಗೋ ಪುಸುಕ್ಕನ ಜಾರಿಬಿತ್ತು. ‘ಅಯ್ಯಯ್ಯ ಇದೇನೆ ರೊಕ್ಕಬಿತ್ತು! ಅಂತ ಚಂದ್ರಿ ಚಿಟ್ಟನಚೀರಿ ರಗಡಿಸಿ ಬಗ್ಗಿ ಕುಂತುಗನವತ್ತಿಗೆ ಯಾವನೋ ಒಬ್ಬ ಅವಸರಗೇಡಿ ಪ್ರಸಾದಕ್ಕೆಂದು ಧಬಾಸಿ ಬಂದವನೆ, ಬೆನ್ನಿನ ಮೇಲೆ ಕಾಲಿಟ್ಟು ಒತ್ತಿ, ತುಳಿದ. ಎಪ್ಪಾ.. ಎವ್ವೊ.. ಅಂತ ಚಂದ್ರಿ ಮಂದ್ಯಾಗ ಬಿದ್ದು ಒದ್ದಾಡಿದಳು. ‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ ಜಾತ್ರಿ ಮಂದಿಯ ಜೊತಿಗೆ ಊರುಮಂದಿನೂ ನೆರಿದಿತ್ತು. ‘ಪುಣ್ಯದ್ ಸಾವು. ಎಲ್ರಿಗೆ ಇಂಥ ಸಾವು ಬರಲ್ಲ.. ಪುಣ್ಯಾ ಮಾಡ್ಯಾಳ ಚಂದ್ರಿ..’ ಎಂದು ಏನು ಕಿಸಿಲಾರದ ಮಂದಿ ಶೀನಪ್ಪನಿಗೆ ಸಮಾಧಾನ ಹೇಳಿ, ನಾಲ್ಕು ಕಣ್ಣೀರಾಕಿ ‘ಈಕಿನ ಊರಿಗೆ ಒಯ್ಯದ ಬ್ಯಾಡ.. ಮಲ್ಲಯ್ಯನಲ್ಲೇ ಇರ‍್ಲಿ.. ದೇವ್ರು ಆಗ್ಯಾಳ..’ ಎಂದು ಮಣ್ಣುಮಾಡಿ ಊರಿಗೆ ಬಂದಿದ್ರು.ಊರಲ್ಲಿ ಲಿಂಗಯ್ಯಸ್ವಾಮಿ ಶೀನಪ್ಪನ ಕರೆದು ‘ನೋಡಪಾ.. ಹೋಗಾಕಿ ಹೋಗಿಬಿಟ್ಟಾಳ..! ಹೋಗರಿಂದ ಯಾರ್ ಹೋಗಾಕ ಬರಲ್ಲ. ಮಲ್ಲೇಶಿನ ನೋಡಿಯಾದ್ರು ಬದ್ಕು, ಇನ್ನೊಂದು ಮದ್ವಿಬ್ಯಾರಿ ವಲ್ಲೆಂತಿದಿ. ಮಲ್ಲಿಕಾರ್ಜುನುಗ ನೀನಾ ಸೇವಾಮಾಡು. ಸುಗ್ಗ್ಯಾಗ ಕಾಳುಕಡಿನು ಸಿಗುತಾವು’ ಅಂತ ಲಿಂಗಯ್ಯಸ್ವಾಮಿ ದೈವ ಒಪ್ಪುವಂತೆ ಮಾತಾಡಿದ. ಎಲ್ಲಾ ಮಂದಿ ಸ್ವಾಮಿ ಹೇಳಿದಮ್ಯಾಲ ನಮ್‍ದೇನೈತಿ’ ಅಂತ ಹೂಂಗುಟ್ಟಿದರು.ಅಂದಿನಿಂದ ಶೀನಪ್ಪ ಹೆಣ್ತಿ ಗುಂಗುಬಿಟ್ಟು ಮಲ್ಲಿಕಾರ್ಜುನ ಗುಡಿಯೇ ಮನೆ-ಮಠವೆಂದು ನೆಲೆಯೂರಿಬಿಟ್ಟ. ದಿನಾ ಶಾಲೆಗೆ ಹೋಗಿಬರುತ್ತಿದ್ದ ಮಲ್ಲೇಶಿ. ಊರಲ್ಲಿ ‘ತಾಯಿಲ್ದ ಮಗ’ ಎಂದು ಅವರಿವರು ರೊಟ್ಟಿ-ಕಾಳುಪಲ್ಯ ಎಂದಿನಂತೆ ಕೊಡುತಿದ್ದರು. ಇದನ್ನೇ ಉಂಡುತಿಂದು ಬೆಳೆದು ಶಾಲೆಯಿಂದ-ಕಾಲೇಜಿಗೂ ಹೋಗಲು ಶುರುಮಾಡಿದ. ಚಿಗುರಮೀಸೆ ಮೆಲ್ಲನೆ ಮೂಡತೊಡಗಿದವು. ಅಪ್ಪನಂತೆ ಗುಡಿಗುಂಡಾರದ ಊರುಸೇವೆಗೆ ನಿಲ್ಲದೆ, ಕಾಲೇಜಿನಲ್ಲಿ ನಡೆವ ಭಾಷಣ-ಉಪನ್ಯಾಸಗಳನ್ನು ಕೇಳಿ, ಹತ್ತಾರು ಪುಸ್ತಕಗಳನ್ನೂ ಓದಿ ಹುಷಾರಾಗತೊಡಗಿದ. ಶಾಲೆಯಿಂದ ಕಾಲೇಜಿನವರೆಗೂ ಕೇಳುತ್ತ, ಕಂಠಪಾಠ ಮಾಡುತ್ತಾ ಬಂದಿದ್ದ ಬಸವಾದಿ ಶರಣರ ಹತ್ತಾರು ವಚನಗಳನ್ನು ಈಗ ಅರ್ಥೈಸಿಕೊಳ್ಳುತ್ತ ಒಡಪಿನ ರೂಪದಲ್ಲಿ ಹೇಳುವುದನ್ನೂ ಕಲಿತ. ಅದ್ಹೇಕೋ ಬರುವ ಜಾತ್ರೆಯಲ್ಲಿ ಹೇಳಬೇಕೆನಿಸಿತು. ಇದನ್ನು ನೋಡಿ, ಪುರಾಣ ಪುಣ್ಯಕತೆಗಳನ್ನು ಸಣ್ಣವನಿದ್ದಾಗಿನಿಂದಲೇ ಮಲ್ಲೇಶಿಗೆ ಹೇಳುತ್ತಾ ಬಂದಿದ್ದ ಶೀನಪ್ಪನಿಗೆ ಇರುಸು-ಮುರುಸಾಗತೊಡಗಿತು.ಮಲ್ಲೇಶಿ ಮತ್ತಷ್ಟು ವಚನಗಳನ್ನು ಕಲಿತಿದ್ದರಿಂದ ಆತನೊಳಗೆ ಬದಲಾವಣೆಯ ಗಾಳಿ ಬೀಸಿತು. ತನ್ನ ವಾರಿಗೆಯವರ ಮುಂದೆ, ಹಿರಿ-ಕಿರಿಯವರ ಮುಂದೆ ‘ಜಾತಿ-ಮತ, ದೇವ್ರು-ದಿಂಡ್ರು, ಪೂಜೆ-ಪುನಸ್ಕಾರ, ಹರಕೆ-ಬಲಿ ಇವೆಲ್ಲ ದೇವ್ರ ಹೆಸ್ರಲ್ಲಿ ಮಾಡೋದು ಮೂಢನಂಬಿಕಿ.. ಅಂಥ ಈ ವಚನಗಳು ಜಗತ್ತಿಗೆ ಸಾರಕತ್ಯಾವ.. ನಾವ್ಯಾಕ ಇನ್ನಾದ್ರೂ ಇವುಗಳಿಂದ ಹೊರಬರಾಕ್‌ ವಲ್ಲಿವಿ..’ ಎಂದು ಮಲ್ಲೇಶಿ ವಚನಗಳನ್ನು ಬಿಡಿಬಿಡಿಸಿ ಮೇಷ್ಟ್ರು ಪಾಠ ಮಾಡಿದಂತೆ ಹುರುಪಿನಿಂದ ಹೇಳತೊಡಗಿದ. ತನ್ನ ವಾರಿಗೆಯವರು ವಾಉವಾಹ್ಹ್‌ ಎಂದು ಹುಬ್ಬಿಸಿ, ವಿಡಿಯೊ ಮಾಡುತ್ತ ಮುಸುಮುಸು ನಗತೊಡಗಿದರು. ಇನ್ನುಳಿದವರು ‘ಇವೆಲ್ಲಾ ಹಳ್ಳ್ಯಾಗ ನಡೆಲ್ಲ ಶಾಲೆ-ಕಾಲೇಜಿನ್ಯಾಗಷ್ಟೇ..’ ಎಂದು ಆಸ್ಯಾಡತೊಡಗಿದರು. ಇದರಿಂದ ಮಲ್ಲೇಶಿಗೆ ಬೇಸರವಾಗಿ ತನ್ನ ವಾರಿಗೆಯವರ ಸಂಘಬಿಟ್ಟು, ಅಡವಿ-ಅರಣ್ಯ ತಿರುಗತೊಡಗಿದ. ಜೊತಿಗೆ ಒಂದೆರಡು ಪುಸ್ತಕಗಳು ಇರುತಿದ್ದವು. ಏಕಾಂತವಾಗಿ ಕುಂತು ಸುಮಾರು ದಿನಗಳವರೆಗೆ ಓದತೊಡಗಿದ. ಒಂದಿನ ತನ್ನವ್ವ ಬೆಟ್ಟದ ತುದಿಮೇಲೆ ನಿಂತು ಅಳುತ್ತ ಕೈಮಾಡಿ ಕರೆದಂತಾಯ್ತು. ಆಗ ತನ್ನವ್ವ ತುಂಬಾ ನೆನಪಾಗಿ ದಳದಳ ಕಣ್ಣೀರು ಸುರಿಸಿ ಮನೆಗೆ ಬಂದ. ‘ನನ್ನವ್ವ ಸತ್ತಿದ್ದು ಅಪ್ಪನ ದೇವ್ರು-ದಿಂಡ್ರಿನ ಹುಚ್ಚಿನಿಂದಲೇ..’ ಅಂತನಿಸಿ ಶೀನಪ್ಪನ ಒದ್ದು ಬಿಡುವಷ್ಟು ಸಿಟ್ಟುಬಂದು ಕೊನೆಗೆ ಮಾತು ಬಿಡತೊಡಗಿದ.ಪ್ರತಿ ವರ್ಷದಂತೆ ಮಲ್ಲಿಕಾರ್ಜುನನ ಜಾತ್ರೆ ನಡೆಯಿತು. ಊರೆಂಬುದು ಸುಣ್ಣ-ಬಣ್ಣ ತೋರಣಗಳಿಂದ ರಾರಾಜಿಸತೊಡಗಿತು. ಅದು ಇಳಿಸಂಜೆ. ತೇರು ಅಲಂಕಾರ ತೊಟ್ಟು ಜೈಕಾರದಿಂದ ಸಾಗಿತ್ತು. ಇದರ ಹಿಂದೆ ಹೂಹಾರಗಳಿಂದ ಪಲ್ಲಕ್ಕಿ ಸೇವಾನೂ ನಡೆದಿತ್ತು. ಮುಂದೆ ಹತ್ತಾರು ಹರೇದ ಹುಡುಗರು ನಂದಿಕೋಲು ಹಿಡಿದು ಜೋರು ಕುಣಿಯತೊಡಗಿದ್ದರು. ತೇರಿನ ಹಿಂದೆ, ಪಲ್ಲಕ್ಕಿಯ ಮುಂದೆ ಲಿಂಗಯ್ಯಸ್ವಾಮಿ ತನ್ನ ಬೋಳುತಲೆಗೆ ಕಾವಿಯ ದುಪ್ಪಟ್ಟು, ಹಣೆಮೇಲೆ ಉದ್ದನೆಯ ವಿಭೂತಿ ಪಟ್ಟಾ, ಕೊರಳಿಗೆ ರುದ್ರಾಕ್ಷಿ, ಕಾಲಲ್ಲಿ ಕರಿಪಾದುಕೆ ತೊಟ್ಟು ನೂರಾರು ಮಂದಿನ ಮಡಿಯಿಂದಲೇ ತನ್ನ ಪಾದಕ್ಕೆ ಬೇಕಾಬಿಟ್ಟಿ ಎರಗಿಸಿಕೊಳ್ಳುತ್ತಾ ಸಾಗಿದ್ದ. ಲಿಂಗಯ್ಯಸ್ವಾಮಿಯ ಮುಂದೆ ಬೆಳಕು ಮತ್ತಷ್ಟು ವಿಸ್ತರಿಸಲೆಂದು ಟ್ಯೂಬ್‍ಲೈಟು ಎತ್ತರೆತ್ತರವಾಗಿ ಹಿಡಿದ ಶೀನಪ್ಪ ಮುಂದೆಮುಂದೆ ಓಡುತ್ತಲೇ ಇದ್ದ.ಅದೆಲ್ಲಿಂದಲೋ ಕರೆಸಿದ್ದ ಒಡಪು ಹೇಳುವ ಪುರೋಹಿತರು ಮಲ್ಲಿಕಾರ್ಜುನನ ಹತ್ತಾರು ಪವಾಡಗಳನ್ನು ಒಡಪಿನಲ್ಲಿ ಹೇಳತೊಡಗಿದರು. ಅವರ ಪ್ರತಿ ಒಡಪಿಗೆ ಕಣಿ ನುಡಿಸುವ ಭಕ್ತಾದಿಗಳು ‘ಓಂ ನಮಃ ಶಿವಾಯ.. ಓಂ ನಮಃ ಶಿವಾಯ’ ಅಂತ ಬಿರುಸಾಗಿ ನುಡಿಯುತಿದ್ದರು. ಅಲ್ಲೇ ಸುಳಿದಾಡುತಿದ್ದ ಮಲ್ಲೇಶಿ ಸುತ್ತಮುತ್ತ ಜನಜಾತ್ರಿ ನೋಡತೊಡಗಿದ. ತನ್ನ ವಾರಿಗೆಯವರು ಇಷ್ಟಗಲದ ತಿಲಕಧಾರಿಗಳಾಗಿ, ಏಕಾ ಬಟ್ಟೆತೊಟ್ಟು ಸೆಲ್ಫಿ-ವಿಡಿಯೊ ಮಾಡುವುದರಲ್ಲಿ ಬಿಸಿಯಾಗಿದ್ದರು. ಆಕಡೆ ದೊಡ್ಡವರು ದೊಡ್ಡವರಾಗಿಯೇ ಡೌಲು-ದೌಲತ್ತಿನಿಂದ ಬೆಳ್ಳಗ ನಿಂತಿದ್ದರು. ಇವರ ಹಿಂದಮುಂದೆ ಸಣ್ಣವರು ಸಣ್ಣವರಾಗಿಯೇ ಹರಕಲು ಅಂಗಿ, ಕುರುಚಲು ಗಡ್ಡ, ಒಣ ಕಟಿಗಿಯಂಥ ಮೈಮಾರಿಗೆ ಭಂಡಾರ, ಕುಂಕುಮ ಬಳಿದುಕೊಂಡು ಕರ‍್ರಗೆ ನಿಂತಿದ್ದರು. ಮಲ್ಲೇಶಿಗೆ ಇದನ್ನೆಲ್ಲಾ ನೋಡಿ, ಏನೋ ಹೇಳಬೇಕೆನಿಸಿ ಮನಸ್ಸು ಕುದಿಯತೊಡಗಿ, ಒದ್ದಾಡಿದ. ಒಡಪು ಹೇಳುವ ಪುರೋಹಿತರು ಕೊನೆಸಾಲು ಮತ್ತೊಂದು ಸಾರಿ ಹೇಳಿ ಮುಗಿಸುತ್ತಿದ್ದಂತೆ, ಮಲ್ಲೇಶಿ ಒಮ್ಮೆಲೆ ಒಡಪು ಹೇಳುವಲ್ಲಿ ಜಿಗಿದ. ಅಹಹ ರುದ್ರಾ.. ಆಹಹ ಭೀರಾ.. ಎಂದ. ಮೈ ಬೆವೆತಿತ್ತು. ಸುತ್ತ ನೆರಿದಿದ್ದ ಕಣಿ ನುಡಿಸುವ ಭಕ್ತರು ನಿಬ್ಬೆರಗಾಗಿ ಏನೋ ಹೇಳಬಹುದೆಂದು ಜೈಕಾರ ಹಾಕತೊಡಗಿದರು. ಮಲ್ಲೇಶಿ ಒಂದೇ ಉಸಿರಿಗೆ,ಕಟ್ಟಿದ ಲಿಂಗವನ್ನು ಬಿಟ್ಟು,ಬೆಟ್ಟದ ಲಿಂಗಕ್ಕೆ ಹೋಗಿ,ಹೊಟ್ಟೆಯಡಿಯಾಗಿ ಬೀಳುವವನ ಕಂಡಿಹರೆ ಮೆಟ್ಟಿದ ಪಾದರಕ್ಷೆ ತಕ್ಕೊಂಡು ಲಟಲಟನೇ ಹೊಡಿ..’ ಎಂದ ನಮ್ಮ ಅಂಬಿಗರ ಚೌಡಯ್ಯ..ಅಂತ ಕಿಡಿನುಡಿಯನ್ನು ಬಿರುಸಾಗಿಯೇ ಹೇಳಿದ. ಬರುಬರುತ್ತ ‘ಓಂ ನಮಃ ಶಿವಾಯ‘ ಎಂಬುದು ಪೂರಾ ಕ್ಷೀಣವಾಗಿ ಇಡೀ ಜಾತ್ರಿಗೆ ಲಕ್ವ ಹೊಡಿದಂತೆ ಮೌನವಾಗತೊಡಗಿತು. ಮತ್ತೆ ಬಿಡದೆ,‘ಪೂಜೆ-ಅರ್ಚನೆ ನೇಮವಲ್ಲ ಧೂಪ-ದೀಪಾರತಿ ನೇಮವಲ್ಲ..’ ಅಂತ ಜೋರಾಗಿ ಹೇಳತೊಡಗಿದ. ತನ್ನ ವಾರಿಗೆಯವರು ವಿಚಿತ್ರವಾಗಿ ನಕ್ಕು ಗುಸುಗುಸು ಮಾತನಾಡತೊಡಗಿದರು. ಲಿಂಗಯ್ಯಸ್ವಾಮಿ ದಿಗ್ಗನ ಬಂದವನೇ ‘ಸಾಲಿ ಕಲಿತ ಆಚಾರ-ಇಚಾರ ಇಲ್ದವರನ್ನ ಯಾಕ ಒಳ್ಗ ಬಿಟ್‍ಕೊಂಡ್ರಿ.. ನಾಲ್ಕೇಟು ಕೊಡಿಸ್ರಿ..’ ಅಂತ ಇದ್ದಬದ್ದ ತನ್ನ ಭಕ್ತಾದಿಗಳಿಗೆ, ಸಿಟ್ಟಿಗೇರಿ ಬಯ್ಯತೊಡಗಿದ. ಅಲ್ಲಿದ್ದವರು ಒಮ್ಮೆಲೆ ಮಲ್ಲೇಶಿಯ ಸುತ್ತ ಮುಗಿಬಿದ್ದರು. ಟ್ಯೂಬ್‍ಲೈಟು ಹಿಡಿದುಕೊಂಡಿದ್ದ ಶೀನಪ್ಪ ‘ಊರ್‍ಮಂದಿ ಸೇರಿ ಮಗನ ಕೊಲ್ತಾರ..’ ಅಂತ ಎದೆ ರುಮ್ಮೆಂದು ಕೈಯ್ಯುಲ್ಲಿದ್ದ ಟ್ಯೂಬ್‍ಲೈಟ್ ಪಸಕ್ಕನ ಬಿಟ್ಟ. ಅದು ಡಬ್ಬೆಂದು ಒಡೆದು ಸುತ್ತಲು ಕತ್ತಲು ಆವರಿಸತೊಡಗಿತು. ಶೀನಪ್ಪ, ಮಲ್ಲೇಶಿ..ಮಲ್ಲೇಶಿ.. ಎಂದು ಮಂದ್ಯಾಗ ಕೌಡತ್ತಿ ಹುಡುಕತೊಡಗಿದ. ಮತ್ತಷ್ಟು ಗದ್ದಲ ಹೆಚ್ಚಾಗತೊಡಗಿತು. ಒಮ್ಮೆಲೆ ಶ್ರೀಶೈಲ ಮಲ್ಲಯ್ಯನ ಜಾತ್ರೆಯಲ್ಲಿ ಚಂದ್ರಿ ನೆಲಮುಗಿಲು ಒಂದಾಗಿ ಅರಚಿದಂತೆ, ಅಲ್ಲೆಲ್ಲೋ ಮಲ್ಲೇಶಿಯೂ ಬೋರಾಡಿ ಅರಚಿದಂತಾಗಿ ಒಮ್ಮೆಲೆ ಸ್ತಬ್ಧಗೊಂಡಿತು. ಆಗ ಪಶ್ಚಿಮ ದಿಕ್ಕಿನ ಕಡೆ ಸೂರ್ಯ ತಣ್ಣಗೆ ಮುಳುಗಿದ. ಅದು ಯಾಕೋ ಕಳ್ಳನಂತೆ ಒಮ್ಮೆಲೆ ಮರೆಯಾದಂತೆ ಕಂಡಿತು.ಅಗೋ.. ಸುತ್ತಲಿನ ಕತ್ತಲಿನಲ್ಲಿ ಒಂದು ಚುಕ್ಕಿ ಹುಟ್ಟಲು ಕೊಸರಾಡಿದಂತೆ ಮಿಣುಕಾಡತೊಡಗಿತ್ತು.

courtsey;prajavani.net

“author”: “ನಾಗರಾಜ ಕೋರಿ”,

https://www.prajavani.net/artculture/short-story/dhaivadalli-mannadavaru-short-645575.html