ತೊರೆದು ಜೀವಿಸಬಹುದೇ…!?
ಪ್ರಿಯ ಹಂದಿಗೋಡು ವೆಂಕಟಗಿರಿ ಭಟ್ಟರಿಗೆ, ನೀವಿಲ್ಲದ ಈ ಹೊತ್ತಿನಲ್ಲೂ ನೋವಿನ ನರಳಿಕೆಯೊಂದು ನನ್ನನ್ನು ಕಾಡುತ್ತಿದೆಯೆಂದಾಗ, ನಿಮ್ಮ ಪ್ರಭಾವಲಯ ನನ್ನೊಳಗನ್ನು ಆಕ್ರಮಿಸಿ ವಿಸ್ತರಿಸಿದ ಪರಿಗೆ ವಿಸ್ಮಯಗೊಂಡಿದ್ದೇನೆ. ಬಿಡದೇ ಕಾಡುವ ನಿಮ್ಮ ಒಡನಾಟದ ನೆನಪುಗಳಿಗೆ ಅಕ್ಷರರೂಪ ನೀಡುತ್ತಿದ್ದೇನೆ. ನಿಮ್ಮ ವ್ಯಕ್ತಿತ್ವಕ್ಕೆ ಅಕ್ಷರಶಃ ತಾಳೆಯಾಗುವ
‘ಮಣಿಯದಿಹ ಮನವೊಂದು, ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ, ಪ್ರೇಮಕ್ಕೆ ಚಿರತೆರೆದ ಎದೆಯೊಂದು’
ಎನ್ನುವ ಕವಿ ವಿ.ಸೀತಾರಾಮಯ್ಯನವರ ‘ಅಭೀಃ’ ಕವಿತೆಯ ಸಾಲು ನಿಮ್ಮ ನೆನಪಿನೊಟ್ಟಿಗೆ ಮನಸ್ಸನ್ನು ತುಂಬಿಕೊಳ್ಳುತ್ತದೆ.
ಮೊದಲ ನೋಟಕ್ಕೆ ಯಾವ ದಾಕ್ಷಿಣ್ಯವೂ ಇಲ್ಲದೆ ನೇರಾನೇರವಾಗಿ ಆಡುವ ಮಾತು ಆ ಕ್ಷಣಕ್ಕೆ ಒರಟ ಎಂಬ ಭಾವನೆ ಹುಟ್ಟುಹಾಕಿದರೂ, ನೀವು ಹೃದಯದಲ್ಲಿ ಎಷ್ಟು ಕೋಮಲವಾಗಿದ್ದೀರಿ ಎಂದು ಕಂಡುಕೊಂಡಾಗ ಮೆಚ್ಚುಗೆ ಸ್ಥಾಯಿಯಾಗಿ ನಿಲ್ಲುತ್ತದೆ. ಸರಿ ಕಾಣದ್ದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವುದೆಂತೋ ಅಂತೇ, ಸರಿ ಕಂಡದ್ದನ್ನು ಕೂಡಾ ಗಟ್ಟಿ ಮಾತುಗಳಲ್ಲಿ ಸಮರ್ಥಿಸಿರುವುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಜೀವನದ ಮೌಲ್ಯಗಳನ್ನು ಪ್ರತ್ಯಕ್ಷ ಆಚರಣೆಯಿಂದ ಬಿಂಬಿಸಿದಿರಿ. ಸತ್ಯವನ್ನು ಹೇಳುವ ಕ್ರಿಯೆ ಯಾವಾಗಲೂ ಸುಲಭವಲ್ಲ; ಆದರೆ ಅದು ಕೊಡುವ ಸಮಾಧಾನ ಮಾತ್ರ ದೊಡ್ಡದು.
ಅಳೆದೂ-ಸುರಿದೂ ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ ಮಾತನಾಡುವ ನಯಗಾರಿಕೆ, ಮೃದು ಮಾತಿನ ಮೋಡಿ ಕೊನೆಗೂ ನಿಮಗೆ ದಕ್ಕಲೇ ಇಲ್ಲ. ಈ ದೊರಗುತನದಿಂದಾಗಿಯೇ! ವಿರೋಧಿಗಳೆಂತೊ, ಗೆಳೆಯರನ್ನೂ ಕಟ್ಟಿಕೊಂಡಿರಿ. ನಿಮಗೆ ಸವಾಲುಗಳನ್ನು ಹಾಕಿಕೊಳ್ಳುವ ದಿಟ್ಟತನವಿತ್ತು; ಹಾಗೇ ಸವಾಲುಗಳನ್ನು ಸ್ವೀಕರಿಸುವ ಮನೋಬಲವಿತ್ತು. ನಿಮ್ಮ ನಡವಳಿಕೆಗಳೆಲ್ಲ ನಿಮ್ಮ ಸಹಜ ಸ್ವಭಾವವೇ ಹೊರತು ಪ್ರಯತ್ನಪೂರ್ವಕ ಕ್ರಿಯೆಯಾಗಿರಲಿಲ್ಲ. ಯಾವುದೇ ಘಟನೆಯನ್ನು ಭಾವಾವೇಶದಿಂದ ನೋಡದೆ, ಸಮಚಿತ್ತದ ನೆಲೆಗಟ್ಟಿನ ಮೇಲೆ ವೀಕ್ಷಿಸುತ್ತಿದ್ದುದು ನಿಮ್ಮ ದೊಡ್ಡಸ್ತಿಕೆಯೇ ಸರಿ.
‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ ಎಂಬಂತೆ ಅಂತರಂಗದ ಸವಿ, ಮೃದುತ್ವವನ್ನೆಲ್ಲ ಕಾಠಿಣ್ಯದ ಹೊರಕವಚವೊಂದು ಆವರಿಸಿಕೊಂಡಿತ್ತು. ಮೇಲುಮೇಲಕ್ಕೆ ನಿಷ್ಠುರವಾದಿ, ಖಡಕ್ ಮಾತುಗಾರ. ಒಳಗೆಲ್ಲ ಮೃದು ಮಧುರ. ಹಾಗಂತ ಮುಖದಲ್ಲಿ ಘನಗಾಂಭೀರ್ಯವನ್ನೋ, ಔದಾರ್ಯವನ್ನೋ ಪ್ರದರ್ಶಿಸುವ ಮನಃಸ್ಥಿತಿ ನಿಮ್ಮದಲ್ಲ. ಇನ್ನು ವೈಯಾರದ ಮಾತಂತೂ ದೂರವೇ ಉಳಿಯಿತು. ಹಾಗಾಗಿ ನಿಮ್ಮನ್ನು ದೂರದಿಂದ ದರ್ಶಿಸಿದವರ ಬಾಯಿಂದ ಹೊರಟ ವ್ಯಾಖ್ಯಾನಗಳು, ಅಂಧರಿಗಾದ ಆನೆಯ ಬಾಹ್ಯ ಅನುಭವಕ್ಕಷ್ಟೇ ಸೀಮಿತ.
ತುಂಬ ಅಪರೂಪ ಎನ್ನಿಸುವಂಥ ಯೋಚನಾಕ್ರಮ, ವಿಷಯ ಸಮೃದ್ಧಿ, ನಿರೂಪಣಾ ಶೈಲಿ ನಿಮ್ಮದಾಗಿತ್ತು. ಇಟಲಿಯ ಗ್ಯಾರಿಬಾಲ್ಡಿಯ ಕುರಿತೋ, ಹಿಟ್ಲರ್, ಮುಸಲೋನಿಯ ಜೊತೆಜೊತೆಗೆ ಐನ್ ಸ್ಟೀನ್ ಮತ್ತು ರಾಮಕೃಷ್ಣ ಪರಮಹಂಸರ ಬಗ್ಗೆ ಹೇಳುತ್ತಲೇ, ಆ ಕ್ಷಣಕ್ಕೆ ಷೇಕ್ಸ್ ಪಿಯರ್ ನ ಕಾವ್ಯದೊಟ್ಟಿಗೆ ಶರತ್ ಚಂದ್ರರ, ಬಂಗಾಳಿ ಸಾಹಿತ್ಯದ ಕುರಿತು ಮಾತನಾಡುವಾಗ ನಿಮ್ಮ ಜ್ಞಾನದ ಅಗಾಧತೆಗೆ ನಮೋ ಅಂದಿದ್ದೇನೆ. ನಿಮ್ಮ ಆಂಗಿಕ ಮತ್ತು ಅಭಿವ್ಯಕ್ತಿಯ ವೈಖರಿ ನಿಜಕ್ಕೂ ಬೆರಗು ಮೂಡಿಸುವಂಥದ್ದು. ರಾಮ, ಕೃಷ್ಣರ ನಡೆಯನ್ನು ಆ ಹೊತ್ತಿನ ರಾಜಕೀಯದಲ್ಲಿ ಗುರುತಿಸುತ್ತ ಮಾತನಾಡುತ್ತಿದ್ದುದನ್ನು ಕಂಡು ಆ ಕಾಲದ ಸಾಹಿತ್ಯ, ರಾಜಕೀಯದ ಕುರಿತಾಗಿ ನಿಮ್ಮ ಜ್ಞಾನದ ಹರವಿಗೆ ವಿಸ್ಮಯಗೊಂಡಿದ್ದೆ.
ಅತ್ಯಂತ ಶುದ್ಧ ಹೃದಯವನ್ನು ಇಟ್ಟುಕೊಂಡವರ ಬಗ್ಗೆ ನನಗೆ ಒಮ್ಮೊಮ್ಮೆ ದಿಗಿಲಾಗುತ್ತದೆ. ಕಾರಣ ಅಂಥವರು ವಿಪರೀತ ಒದ್ದಾಡಬೇಕಾಗುತ್ತದೆ. ಆದರೆ ಮಾನವೀಯತೆ ಅರಳೋದೇ ಅಲ್ಲಿ. ಕೆಲವೇ ಕೆಲವರಿಗಾದರೂ ಆಪ್ತನಾಗಿ ಬದುಕುವ ಸಾಧ್ಯತೆ ಅಲ್ಲಿ ಮಾತ್ರ ಇದೆ. ಆದರೆ ಲೋಕದ ಕಣ್ಣಲ್ಲಿ ‘ಮೂಟಕ’ನಾಗಿ ಕಾಣುವ ವಿಪರ್ಯಾಸವನ್ನು ಮಾತ್ರ ಎದುರಿಸಬೇಕಾಗುತ್ತದೆ. ಬಹುಶಃ ಅದರ ಒಡನಾಟದಲ್ಲೇ ಅದನ್ನು ಮೀರುವ ಕಲೆ ನಿಮಗೆ ಸಿದ್ಧಿಸಿತು.
ಪರರ ಉಸಾಬರಿಯ ಚಿಂತೆ ನಮಗೇಕಯ್ಯಾ? ಅಂತ ಶಿವಾ-ರಾಮ ಎಂದು ಲಗಾಮು ಹಾಕಿಕೊಂಡು ಕೂತುಬಿಡುವ ಆಸಾಮಿ ನೀವಲ್ಲ. ಸೋಲೋ-ಗೆಲುವೋ; ಹೋರಾಟ ಮಾತ್ರ ನಿರಂತರ ಚಾಲ್ತಿಯಲ್ಲಿತ್ತು. ಪರರ ಕಣ್ಣೀರಿಗೆ, ಕಷ್ಟಕ್ಕೆ ನೆರವಾಗಲು ಸದಾ ತೆರೆದ ಮನಸ್ಸು. ತುತ್ತೂರಿಯ ಬಾಯಿಗೆ ಬೀಳದಂತೆ ಕಾಯ್ದ ಎಚ್ಚರದಿಂದಾಗಿಯೇ ನಿಮ್ಮ ಸಾಧನೆಯಾಗಲೀ, ಚಿಂತನೆಗಳಾಗಲೀ ಅಂತರಂಗದ ಆತ್ಮೀಯ ಬಳಗದ ಹೊಸಿಲಿನಾಚೆಗೆ ಅಪರಿಚಿತವಾಗಿಯೇ ಉಳಿದುಬಿಟ್ಟಿತು. ಕುಗ್ರಾಮದಲ್ಲಿದ್ದೂ ಹೊಸ ಹೊಸ ಅರಿವನ್ನು ಸಂಪಾದಿಸುತ್ತಾ ‘ಅಪ್ ಡೇಟ್’ ಆಗುತ್ತಿದ್ದುದರ ಗುಟ್ಟು ಕೊನೆಗೂ ರಟ್ಟಾಗಲೇ ಇಲ್ಲ.
ಇನ್ನು ನಿಮ್ಮ ಆತಿಥ್ಯದ ಪರಿಯೋ…! ಅದನ್ನು ಮಾತಿನಲ್ಲಿ ಬಣ್ಣಿಸಲು ಹೋದರೆ ಸಪ್ಪೆ ಅನ್ನಿಸೀತು. ನಿಮ್ಮ ಮನೆಯ ಆತಿಥ್ಯ ಅದು ನಿಮ್ಮ ಪ್ರೀತಿಯೊಡನೆ ಸೇರಿಕೊಂಡು ನಿಮ್ಮ ಮನೆಯ ಭೇಟಿಯನ್ನು ಸಿಹಿಯಾಗಿಸಿರುವುದು ನನ್ನ ನೆನಪಲ್ಲಿ ಇದ್ದೇ ಇದೆ. ಎಷ್ಟೋ ಸಲ ಉಂಡಿದ್ದು ನಮ್ಮ ಹೊಟ್ಟೆ; ತೇಗಿದ್ದು ನಿಮ್ಮ ಹೃದಯ.
‘ದುಃಖ ನಮ್ಮದು; ಸುಖ ನಮ್ಮದಲ್ಲ, ಅದಕ್ಕಾಗಿಯೇ ಸುಖ ಹಂಚಿಕೊಳ್ಳಬೇಕು, ದುಃಖವನ್ನು ಮಾತ್ರ ನಮ್ಮೆದೆಯಲ್ಲೇ ಬಚ್ಚಿಟ್ಟಕೊಳ್ಳಬೇಕು’ ಎನ್ನುವ ನಿಮ್ಮ ಮಾತುಗಳಿಗೆ ಸಾಕ್ಷಿಯಾಗಿರುವ ಈ ಪ್ರಸಂಗವನ್ನು ಸಾಮಾಜಿಕ ಸಜ್ಜನಿಕೆಗಳು ನಶಿಸುತ್ತಿರುವ ಈ ಹೊತ್ತಿನಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅಗತ್ಯವಿದೆ. ‘ಅಲ್ಲ ಭಟ್ರೆ…, ನೀವು ಅವ್ರಿಗೆ ಅಷ್ಟೆಲ್ಲ ಮಾಡಿದ್ರಲ್ಲ, ಅವರು ನಿಮ್ಮ ಬೆನ್ನು ಕಟ್ಟಿ ಬರೋದಿರ್ಲಿ, ಸಣ್ಣ ಉಪಕಾರವನ್ನೂ ನೆನಪಿಸಿಕೊಳ್ತಾ ಇಲ್ವಲ್ರಿ’ ಎಂದು ಹಳವಳಿಸಿದ ವ್ಯಕ್ತಿಯೊಬ್ಬನ ಮಾತಿಗೆ, ನೀವು ಧ್ವನಿಯಾದದ್ದು ಹೀಗೆ…!
ಇರಲಿ; ಈಗ ನೀನೇ ನೋಡು, ತಾಯಿ ಮಕ್ಕಳ ಏಳ್ಗೆಗೆ ಏನೆಲ್ಲ ಮಾಡ್ತಾಳೆ, ಅವರಿಗಾಗಿ ಎಷ್ಟೆಲ್ಲ ಏಗ್ತಾಳೆ. ಆದ್ರೆ ‘ಯಾವತ್ತಾದ್ರೂ ಒಬ್ಬ ತಾಯಿ ತನ್ನ ಮಕ್ಳು ತನಗೆ ಇದು ತೊಡಿಸಲಿ, ಅದು ಬಡಿಸಲಿ ಎಂದು ಕಾದು ನಿಂತಿದ್ದಾಳಾ….? ಅದು ಮಾಡ್ಲಿಲ್ಲ, ಇದು ತರ್ಲಿಲ್ಲ ಅಂತ ಬಾಯಿ ಬಾಯಿ ಬಡ್ಕೊಂಡಿದ್ಲಾ….? ಕೊನೆಪಕ್ಷ ಮನಸ್ಸಲ್ಲಾದರೂ ಆಸೆಯ ಸಣ್ಣದೊಂದು ಮಿಂಚು ಸುಳಿದ ಗುರುತಿದೆಯಾ…? ಹಂಗೇಯಾ. ನಮ್ಮಿಂದ ಏನಾದರೂ, ಯಾರಿಗಾದರೂ ಕಿಂಚಿತ್ತು ಒಳ್ಳೇದು ಮಾಡಲಿಕ್ಕಾದರೆ ಮಾಡಿಬಿಡಬೇಕು. ಅದಷ್ಟೇ ನಮ್ಮದು, ನಂತರದ್ದು ಅವರ ಮತಿಗೆ ಬಿಟ್ಟದ್ದು ಎಂದು ಆಕಾಶದೆಡೆಗೆ ಕೈ ಚಾಚಿದರು.
ಸಮಾಜವಾದಿ ಚಿಂತನೆಯ ಮೂಸೆಯಲ್ಲಿ ಬೆಳೆದವರು ನೀವು, ಆ ತಲೆಮಾರಿನ ಅಪ್ಪಟ ಸಮಾಜವಾದಿ. ಆ ತತ್ವ, ಸಿದ್ಧಾಂತಗಳು ನಿಜಜೀವನದಲ್ಲೂ ಜಾರಿಯಲ್ಲಿತ್ತು. ಅಚ್ಚರಿ ಎಂದರೆ ವಿಪರೀತ ಎನ್ನುವ ನಿಮ್ಮ ಅಂದಿನ ಸೋವಿಯತ್ ರಷ್ಯಾ ಕುರಿತಾದ ವ್ಯಾಮೋಹ. ಆ ಕಾರಣಕ್ಕೇ ಇರಬೇಕು, ರಷ್ಯಾದಲ್ಲಿ ಆನಂತರ ನಡೆದ ಆಂತರಿಕ ವಿದ್ಯಾಮಾನ, ವಿಘಟನೆಗಳಿಂದ ನಿಮ್ಮ ಮನಸ್ಸು ಕೊಂಚ ವಿಹ್ವಲವಾದಂತೆ ಕಂಡಿತು. ಈ ಕುರಿತಾದ ಬೇಸರ ನಿಮ್ಮ ಕೊನೆಗಾಲದವರೆಗೆ ಬಾಧಿಸಿದ್ದು ನಿಮ್ಮ ಮಾತುಗಳಿಂದಲೇ ವ್ಯಕ್ತವಾಗುತ್ತಿತ್ತು.
ಎಲ್ಲ ವಯೋಮಾನದವರನ್ನೂ ಸಮನಾಗಿ ಸ್ವೀಕರಿಸುತ್ತಾ, ಚಿಂತನೆಯ ಹೊಸ ದಾರಿ ತೋರುತ್ತಾ, ಸುತ್ತಲಿನವರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಾ, ನನ್ನನ್ನೂ ಒಳಗೊಂಡಂತೆ ಹಲವರನ್ನು ಹಲವು ಪರಿಯಲ್ಲಿ ಆವರಿಸಿಕೊಂಡಿರಿ. ಹೀಗಾಗಿ ಮೊದಲಿನಿಂದಲೂ ಬೆಳೆದ ನಿಮ್ಮೊಂದಿಗಿನ ಆ ಬಾಂಧವ್ಯದ ಗಂಟು ಒಮ್ಮೆಯಾದರೂ ಸಡಿಲವಾಗಿದ್ದರೆ ಕೇಳಿ. ಭೌತಿಕವಾಗಿ ನೀವಿಲ್ಲದಿದ್ದರೂ, ನಿಮ್ಮೆಡೆಗಿನ ನನ್ನ ಅಪಾರ ಪ್ರೀತಿ, ಗೌರವ, ವಿಶ್ವಾಸಗಳನ್ನು ಇಂದಿಗೂ ಕಾಪಿಟ್ಟುಕೊಂಡಿದ್ದೇನೆ.
ನಿಮ್ಮೊಂದಿಗೆ ಮಾತನಾಡಲೇಬೇಕಾದ ಒಂದಿಷ್ಟು ವಿಷಯಗಳಿದ್ದವು. ನಿಮ್ಮೊಂದಿಗೆ ಕೆಲಕಾಲ ಕಲೆತು ಒಂದಿಷ್ಟು ಉತ್ಸಾಹ, ಸ್ಫೂರ್ತಿ, ನಂಬಿಕೆ, ಕನಸುಗಳನ್ನು ತುಂಬಿಕೊಳ್ಳುವ ತವಕದಲ್ಲಿರುವಾಗಲೇ, ಮಾತಿನ ಮಧ್ಯೆ ಏನೊಂದು ಸುದ್ದಿಯನ್ನು ಕೊಡದೆ ಎದ್ದು ಹೋಗಿಬಿಟ್ಟಿರಿ, ಮತ್ತೆ ಬಾರದ ಲೋಕಕ್ಕೆ. ಆಡಲೇಬೇಕಿದ್ದ ಮಾತುಗಳ ನನ್ನಲ್ಲೇ ಉಳಿಸಿ ನಿರುಮ್ಮಳವಾಗಿಬಿಟ್ಟಿರಿ, ಇದು ಸರೀನಾ? ಅಥವಾ ಬದುಕಿನ ವಾಸ್ತವಗಳ ಪರಿಯೇ ಹೀಗಾ!?
ಪ್ರೀತಿಯಿಂದ ನಿಮ್ಮವ,
ಹೊಸ್ಮನೆ ಮುತ್ತು