ತಿಳಿಯೆ ಏಕೆ ಹೀಗೆ?

ತಿಳಿಯೆ ಏಕೆ ಹೀಗೆ?

ಮೊದಲ ನೋಟ ನಾ ನಿನ್ನ ನೋಡಿದಾಗ
ಕಣ್ಣರೆಪ್ಪೆ ಅಗಲಿ ತಿರುತಿರುಗಿ ಕತ್ತು ಹೊರಳಿ
ಎಡವಿ ಮುಗ್ಗುರಿಸಿ ಹಿಡಿದದ್ದೆಲ್ಲ ಚೆಲ್ಲಾಪಿಲ್ಲಿಯಾಗಿ
ಮರಳಿದ್ದೆ ಮನೆಗೆ ಗಾಭರಿಯಾಗಿ

ನಿನಗೂ ಹೀಗೇ ಆಗಿದೆಯಾ ಗೆಳತಿ?
ನಿನ್ನಂತರಂಗ ನಾ ಅರಿಯಲು ಬೇಕು ಸಮಯ
ಮೊದಲ ನೋಟದ ಪ್ರೀತಿ ಇದೇ ಇರಬಹುದೇ?
ಗೊಂದಲವು ಮನದಲ್ಲಿ ಯಾವುದೂ ನಾನರಿಯೆ!

ಮತ್ತೆ ಕಾಣುವ ಕಾತರವು ಎಂದು ಸಿಗುವೆಯೊ ನೀನೆಂದು
ಆ ದಿನದ ಆ ಗುಡಿಯ ಬಳಿ ನಿಂತು ನಿಂತು
ಕಡೆಗೂ ನೀ ಬಂದೆ ನಾನೆಣಿಸಿದಂತೆ
ನಿನ್ನದೂ ಓರೆ ನೋಟ! ನನ್ನದೂ ಓರೆನೋಟ!

ಎದುರೆದುರು ಮುಖಾ ಮುಖಿ ನಾವಿಬ್ಬರೂ ನಿಂತಾಗ
ನನ್ನ ನಿನ್ನ ಉಸಿರಾಟ ವೇಗದಿ ಸಾಗುತಿರಲು
ಹೃದಯದಾ ಸದ್ದು ಕಿವಿಯಲ್ಲಿ ಲಬ್ ಡಬ್ ಕೇಳುತಿರೆ
ಕಣ್ಣುಗಳು ತಂತಾನೆ ಮುಗುಳು ನಗುತಿರೆ

ದಿನದಿನವು ಹೀಗೆ ನಯನದಲಿ ಮಾತಾಡಿ
ಇಬ್ಬರಲೂ ಮೌನದಲಿ ನೂರು ಸಂಭಾಷಣೆ ನಡೆದಿದೆ
ಒಂದರೆಗಳಿಗೆ ನೀ ಕಾಣದಿರೆ ನಾ ಚಡಪಡಿಸಿ
ಎಲ್ಲಾ ಕಳಕೊಂಡಂತೆ ನಿಸ್ತೇಜನಾಗಿ ಬಳಲಿದೆ

ನೀನೆಂದು ಮೌನ ಮುರಿಯುವೆಯೋ ಎಂಬ ಕಾತರ
ನಿನ್ನಲ್ಲೂ ಅದೇ ಆತುರ ನಾ ಗಮನಿಸಿದೆ
ರಂಗೋಲಿ ಕಾಲಲಿ ನೀ ಗೇಚಿದಾಗ ಖಾತರಿಯು ನನಗೆ
ಕೆಂಗುಲಾಬಿ ನಾನೇ ನೀಡಿದೆ ಅಂದು ನಿನಗೆ

ಒಂದೇ ಕ್ಷಣದ ನೋಟ, ಮನಸನಾವರಿಸಿತು
ದೈವ ಗಂಧರ್ವ ಲೋಕದಲ್ಲೇ ಕೂಡಿಸಿದ್ದ ಜೋಡಿ
ಎಲ್ಲ ನೋಟಕೂ ಮರುಳಾಗದು ಪ್ರೀತಿ
ನಿಜ ಪ್ರೇಮ ನೆಲೆಸುವುದು ಹೃದಯದಲ್ಲಿ

ಕುಂತಲ್ಲಿ ನಿಂತಲ್ಲಿ ನಿನ್ನ ಧ್ಯಾನ
ಕಂಡದ್ದೆಲ್ಲ, ನಡೆದಲ್ಲೆಲ್ಲ ಏನೇ ನೋಡಲಿ ಎಲ್ಲವೂ ನೀನೆ
ನೂರಕ್ಕೊಂದು ಹೀಗಾಗುವುದಂತೆ ಅದೇ ಪ್ರೇಮ ಜ್ವರವಂತೆ
ಈಗರಿತೆ ಏಕೆ ಹೀಗೆಂದು!
   

  – ಉಮಾ ಭಾತಖಂಡೆ.

Leave a Reply