ತಿಮ್ಮಜ್ಜನ ನೆರಳು
ಪೋಕು….! ಪೋಕು…! ಹೀಗೆನ್ನುತ್ತಾ ಗದ್ದೆಯಿಂದ ಮನೆಗೆ ಬರುವಾಗಲೆಲ್ಲಾ ನಮಗೆ ಎದುರಾಗುತ್ತಿದ್ದವ ನಮ್ಮೂರ ತಿಮ್ಮಜ್ಜ. ಆ ಹೊತ್ತಿಗೆ ತಿಮ್ಮಜ್ಜನಿಗೆ ಸುಮಾರು ಎಂಬತ್ತರ ಪ್ರಾಯ. ಆದರೂ ಗಟ್ಟಿ ಆಸಾಮಿ. ಬಹಳ ಸರಳ ವ್ಯಕ್ತಿಯಾದ ತಿಮ್ಮಜ್ಜ ಯಾವುದೇ ಕಾಲದಲ್ಲಾದರೂ ಉಡುವುದು ಮುಂಡು ಸಾಟಿ ಪಂಚೆ, ಹೊದ್ದುಕೊಳ್ಳಲು ಅಂತಹದೇ ಮತ್ತೊಂದು ದಟ್ಟಿ. ಗಾಂಧಿಯನ್ನು ಹೋಲುವ ತಿಮ್ಮಜ್ಜ ಅಷ್ಟೇ ಸರಳ ಸಜ್ಜನ. ಬಿಸಿಲಲ್ಲಿ ಹುಡುಗರಾದ ನಾವು ಗದ್ದೆಯಿಂದ ಮನೆಗೆ ಬರುವಾಗ ಎಲ್ಲಾದರೂ ತಿಮ್ಮಜ್ಜ ಜೊತೆಯಾದನೆಂದರೆ ಸಾಕು. ಮಾಣಿ.. ಪೋಕು.. ಪೋಕು..! ಈ ಬಿಸಿಲಲ್ಲಿ ‘ಕಾಲ್ ಸುಡ್ತು, ನೆತ್ತಿಗ್ ಬಿಸಿಲಟ್ತು’ ಪಾರ್ರು ನಿಂಗ್ಳೆಲ್ಲಾ ಪೋಕು.. ಪೋಕು..! ಅನ್ನುತ್ತಿದ್ದ. (ತಿಳುವಳಿಕೆ ಇಲ್ಲದವ ಎಂಬುದು ಆ ಮಾತಿನ ಅರ್ಥ) ಹೀಗೆನ್ನುತ್ತಲೇ ತನ್ನ ಮೈಮೇಲಿದ್ದ ಕುರುಗೋಡು ಪಂಚೆಯನ್ನೇ ನಮ್ಮ ನೆತ್ತಿಯ ಮೇಲೆ ಹಿಡಿದು ಬಿಸಿಲ ಝಳ ತಾಗದಂತೆ ನೆರಳು ಮಾಡಿ ತಲೆ ಕಾಯುತ್ತಾ ಮನೆ ಹತ್ತಿರದವರೆಗೂ ಜೊತೆಯಾಗುತ್ತಿದ್ದ.
ಎಷ್ಟೋ ಸಲ ಆತ ಬೇರೆಲ್ಲಿಗೋ, ಯಾವ ಕೆಲಸದ ನಿಮಿತ್ತವೋ ಹೊರಟವನಿದ್ದರೂ, ಬಿಸಿಲಲ್ಲಿ ನಡೆವ ಮಕ್ಕಳ ಕಂಡರೆ ಆತನದು ನೆರಳು ನೀಡುವ ನಿಷ್ಕಾಮ ಕರ್ಮ. ತಿಮ್ಮಜ್ಜ ನಮಗೇ ಅಂತ ಅಲ್ಲ. ಹಾದಿಯಲ್ಲಿ ಸಿಕ್ಕ ಯಾವ ಮಕ್ಕಳಿಗಾದರೂ ಆತನದು ಅದೇ ಸಕ್ಕರೆಯ ಮಾತು, ಮತ್ತದೇ ಅಕ್ಕರೆಯ ನೆರಳ ಕಾಯಕ. ಉರಿ ಬಿಸಿಲ ಸಮಯ ಬಿಟ್ಟು ಬೇರೆ ಹೊತ್ತಿನಲ್ಲಿ ಹಳ್ಳಿ ದಾರಿಯಲ್ಲಿ ಎದುರಾಗುವ ಮಕ್ಕಳು ರಸ್ತೆಯ ಪಕ್ಕ ನಡೆದು ಹೋಗುತ್ತಿದ್ದರಂತೂ ಬಿಡಿ, ಪೋಕು..! ಪೋಕು…! ಹಾದಿ ಹೊದ್ದಿನಲ್ಲಿ ಮುಳ್ಳು ಇದ್ದಾವು, ನಡು ರಸ್ತೆಯಲ್ಲೇ ಹೋಗಿ ಎಂಬ ತಾಕೀತು.
ಇಂತಿಪ್ಪ ತಿಮ್ಮಜ್ಜನ ಮತ್ತೊಂದು ಪರೋಪಕಾರಿ ಕಾಯಕ ಗಮನಕ್ಕೆ ಬಂದದ್ದು, ಮಾವಿನ ಹಣ್ಣಿನ ಸುಗ್ಗಿ ಕಾಲದಲ್ಲಿ. ಆ ಹೊತ್ತಿನಲ್ಲಿ ಆತ ಎತ್ತ ಹೊರಟರೂ, ರಸ್ತೆಯಲ್ಲಿ ಬಿದ್ದ ಮಾವಿನ ಹಣ್ಣಿನ ಗೊರಟೆ ಆಯ್ದುಕೊಳ್ಳುತ್ತಾ, ಹಾಗೇ ರಸ್ತೆ ಮೇಲೆ ಬಿದ್ದ ಸಗಣಿಯನ್ನು ಎತ್ತಿ ಹೊಂಬಾಳೆಯಲ್ಲಿ ತುಂಬಿಕೊಳ್ಳುತ್ತಿದ್ದ. ಹೀಗೆ ಗೊರಟೆ ಆಯ್ದುಕೊಂಡು ಹೊರಟವ, ರಸ್ತೆ ಅಕ್ಕ-ಪಕ್ಕ ಇರುವ ಚಿಕ್ಕ-ಪುಟ್ಟ ಮಣ್ಣ ಕುಣಿಯಲ್ಲಿ ಗೊರಟೆ ಹಾಕಿ ಅದರ ಮೇಲಷ್ಟು ಸಗಣಿ ತುಂಬಿ, ಮೇಲೆ ಕೋಲಿನಿಂದ ಅಷ್ಟು ಮಣ್ಣು ಕೆರೆದು ಮುಚ್ಚಿ ಮುಂದೆ ಸಾಗುತ್ತಿದ್ದ.
ಮಳೆಗಾಲ ಬರುವವರೆಗೂ ಆತನದು ಇದೇ ಕಾಯಕ. ಮುಂದೆ ಮಳೆಗಾಲ ಬಂದೊಡನೆ ಎಷ್ಟೋ ಗೊರಟೆಗಳು ಸಸಿಯಾಗಿ, ಮುಂದೆ ಸಾಲು ಮರಗಳಾಗಿ ಅರಳಿ ನಿಂತು ಜನ-ಜಾನುವಾರುಗಳಿಗೆ ನೆರಳು ನೀಡಿದ್ದಿದೆ. ಹುಳಿಯೋ….., ಸಿಹಿಯೋ…, ಅವು ಫಲ ಹೊತ್ತು ತೊನೆದಾಡಿದ್ದಿವೆ. ಜನಸಂಖ್ಯೆ ಬೆಳೆದಂತೆ ಹಳ್ಳಿಗಳು ನಗರೀಕರಣಕ್ಕೆ ಮೈ ಒಡ್ಡಿಕೊಂಡಿದ್ದರಿಂದ, ಮನುಷ್ಯನ ದುರಾಸೆಗಳಿಗೆ ಮರಗಳು ಬಲಿಯಾಗತೊಡಗಿದವು. ಈಗ ತಿಮ್ಮಜನೂ ಇಲ್ಲ. ಎಲ್ಲಾ… ಅದಲೂ ಬದಲು ಕಂಚಿನ ಕದಲು…!
ನಾಗರೀಕತೆಯ ಸೋಂಕಿಲ್ಲದ ಹಳ್ಳಿಗಾಡಿನಲ್ಲಿದ್ದುಕೊಂಡೇ, ಬದುಕನ್ನ ಹಲವಾರು ಪ್ರಯೋಗಗಳಿಗೆ ಇಡುಮಾಡಿ ಕಂಡುಕೊಂಡ ಸತ್ಯಗಳು, ಇಂದಿನ ಆಧುನಿಕ ವಿದ್ಯಾಭ್ಯಾಸ ಕಲಿಸಿದ ಗುಣಗಳಿಗಿಂತ ಬಹಳ ಮಹತ್ತರವಾದುದು. ತನ್ನ ಪ್ರೀತ್ಯಾದರದ ಮಾತುಗಳಿಂದ, ನಡವಳಿಕೆಗಳಿಂದ ತಿಮ್ಮಜ್ಜ ಒಂದು ಆರೋಗ್ಯಕರ ಸಂಸ್ಕೃತಿಯನ್ನೇ ಹುಟ್ಟು ಹಾಕಿದ. ಇಂಥಾ ಸಂಸ್ಕಾರವಂತರನ್ನು ನೋಡಿ ಇಂದಿನ ಯುವ ಪೀಳಿಗೆ ರೂಢಿಸಿಕೊಳ್ಳುವಂತಹದ್ದು ಬಹಳಷ್ಟಿವೆ. ಇದೆಲ್ಲ ಗಮನಿಸಿದಾಗ ನಮಗೆ ವೇದ್ಯವಾಗುವುದು, ಒಬ್ಬ ವ್ಯಕ್ತಿ ಎಷ್ಟೆಲ್ಲಾ ಪ್ರಾಮಾಣಿಕನಾಗಿಯೂ, ಪರೋಪಕಾರಿಯಾಗಿಯೂ ಬದುಕಬಲ್ಲನೆಂಬುದು.
ನಾವು ನೋಡುತ್ತಿರುವ ಈ ಹೊತ್ತಿನಲ್ಲಿ ಭ್ರಷ್ಟತೆ, ನೈತಿಕ ಅಧಃಪತನಗಳು ಆಧುನಿಕ ವಿದ್ಯಾಭ್ಯಾಸ ಪಡೆದು ಬುದ್ಧಿವಂತರೆಂದು ಬೀಗುವವರಿಂದಲೇ ಆಗುತ್ತಿರುವುದು ವಿಪರ್ಯಾಸದ ಸಂಗತಿ. ದೊಡ್ಡತನ, ಸಾಚಾತನ, ನಿಸ್ಪೃಹತೆಗಳು ನಮ್ಮ ವ್ಯಕ್ತಿತ್ವದಿಂದಲೇ ಮಾಯವಾಗತೊಡಗಿದೆ. ಹೊರ ಜಗತ್ತಿಗೆ ಪರಿಚಿತರಾಗದೇ ಸದ್ದು-ಸುದ್ದಿಯಿಲ್ಲದೇ ವನಸುಮದಂತೆ ಬಾಳಿ ಹೊರಟು ಹೋದ ಇಂತಹಾ ದೊಡ್ಡ ವ್ಯಕ್ತಿತ್ವದವರು, ಪರಹಿತ ದೃಷ್ಟಿ ಉಳ್ಳವರೂ, ಮೌಲ್ಯಗಳಿಗೆ ಪ್ರಾಶಸ್ತ್ಯವಿತ್ತವರೂ ಹಾಗೂ ಲೋಕೋಪಕಾರಿಗಳು ಎಷ್ಟು ಜನವೋ…? ಅವರ ಅನುಭವದ ಬೆಳಕು ನಮ್ಮ ಬಾಳನ್ನಷ್ಟು ಹೊಳಪುಗೊಳಿಸಬೇಕು.