ತರುಣ ಬಲಿದಾನಿ ಖುದಿರಾಮ್ ಬೋಸ್
ಖುದಿರಾಮ್ ಬೋಸ್ (ಡಿಸೆಂಬರ್ 3, 1889 – ಆಗಸ್ಟ್ 11, 1908) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕ ವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ‘ಕಿಂಗ್ಸ್ ಫೊರ್ಡ್’ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ ಮೇಲೆ ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆ ಹಾಡಬೇಕೆಂದು ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ. ಆದರೂ ಆ ಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲು ಶಿಕ್ಷೆಯಾಯ್ತು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈ ಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು ಮಾಡಿದ ಈ ಕೆಲಸದ ರೂವಾರಿ ಹತ್ತೊಂಭತ್ತರ ಹುಡುಗ ಖುದಿರಾಮ್ ಬೋಸ್. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಬಾರಿಗೆ ಬಾಂಬ್ ಬಳಸಿದ್ದು ಕೂಡ ಇದೇ ಖುದಿರಾಮ್ ಬೋಸ್!. ಮೊದಲ ಬಾರಿಗೆ ಇಡೀ ಬ್ರಿಟೀಷ್ ಸಾಮ್ರಾಜ್ಯದ ನರನಾಡಿಗಳಲ್ಲಿ ಭಯ ಆವರಿಸಿತು, ಅಲ್ಲಿಯವರೆಗು ಉನ್ಮತ್ತರಾಗಿದ್ದ ಬ್ರಿಟೀಷ್ ಅಧಿಕಾರಿಗಳಿಗೆ ಭಾರತದ ಕ್ರಾಂತಿಕಾರಿಗಳ ವಿಶ್ವರೂಪದರ್ಶನವಾಯಿತು. ೧೯೦೮ರ ಆಗಸ್ಟ್ ೧೧ರಂದು ಖುದಿರಾಮ್ ಬೋಸ್ ನಗುನಗುತ್ತಲೇ ನೇಣಿಗೇರಿ ತಾಯಿ ಭಾರತೀಯ ಪದತಲದಲ್ಲಿ ತನ್ನನ್ನು ಅರ್ಪಿಸಿಕೊಂಡ. ಅಂತಹ ಮಹಾನ್ ದೇಶಭಕ್ತನ ಸ್ಮರಣೆ ನಮ್ಮೆಲ್ಲರ ಕರ್ತವ್ಯ.