ಜೋಗದ ಸಿರಿಜ್ಞಾನ ಜಲಪಾತ
“ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯೋದರಾಗ ನೋಡು ಒಮ್ಮೆ ಜೋಗದ್ಗುಂಡಿ” ರಾಜ್ಕುಮಾರ್ ಅಣ್ಣಾವ್ರು ಹಾಡಿದ ಹಾಡು ಇತ್ತೀಚೆಗೆ kle ಟೆಕ್ನಾಲಜಿಕಲ್ ವಿಶ್ವವಿದ್ಯಾಲಯದಲ್ಲಿ ನಡೆದ ಎರಡು ದಿನದ ಆಂತರಿಕ ಸಮಾವೇಶದಲ್ಲಿ ಪ್ರಾಧ್ಯಾಪಕರ ಹೊಸ ಜ್ಞಾನ ವಿಚಾರ ಚಿಂತನ ಮಂಥನ ನೋಡಿದಾಗ ನೆನಪಾಯಿತು. ಹೀಗೆ ನಮ್ಮ ಉಳಿದ ವಿಶ್ವವಿದ್ಯಾಲಯಗಳು, ಕಾಲೇಜುಗಳು ಆಕಸ್ಮಿಕವಾಗಿ ಒಳ್ಳೆಯದನ್ನು ಮಾಡಿದರೆ ನಮ್ಮ ಭಾರತೀಯ ಶಿಕ್ಷಣ ಸಂಸ್ಥೆಗಳು ಖಂಡಿತವಾಗಿ ವಿಶ್ವಮಾನ್ಯ ಪಟ್ಟಿಯಲ್ಲಿ ಬರುತ್ತವೆ. ಪ್ರಾಚೀನ ಭಾರತದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳಾದ ನಳಂದಾ, ತಕ್ಷ ಶೀಲಾ ಸುವರ್ಣ ಕಾಲ ಮತ್ತೆ ಮರುಕಳಿಸಬಲ್ಲದು. ಸದ್ದುಗದ್ದಲಗಳು, ಪ್ರಚಾರ, ಯಾವುದರ ಭರಾಟೆ ಇಲ್ಲದೆ ಸತತ ಏಳು ವರ್ಷಗಳಿಂದ ಆಂತರಿಕವಾಗಿ ಚಾಚೂ ತಪ್ಪದೆ ನಡೆಯುತ್ತಿರುವ ಈ ಫ್ಯಾಕಲ್ಟಿ ಕಾಂಕ್ಲೇವ ಬಹುಜನ ಪ್ರಾಧ್ಯಾಪಕರು ಆಯ್ಕೆ ಮಾಡಿ, ಆಧಾರ ಮಾಡಿಕೊಂಡ, ಮಾನ್ಯತೆ ಗಳಿಸಿದ 400ಕ್ಕೂ ಹೆಚ್ಚು ಪ್ರಬಂಧಗಳು, ಪ್ರಾಧ್ಯಾಪಕರು ತಮ್ಮ ತಮ್ಮ ವರ್ಗಗಳಲ್ಲಿ, ಪ್ರಯೋಗ ಮಾಡಿದ, ಅದರ ಪರಿಣಾಮಗಳ ತುಲನಾತ್ಮಕ ಅಧ್ಯಯನ ಮಾಡಿದ ಪ್ರಬಂಧಗಳನ್ನು ವಿವರ, ದಾಖಲೆಗಳೊಂದಿಗೆ ಪ್ರಸ್ತುತಪಡಿಸುವದು ಬಹಳ ಚೇತೋಹಾರಿ ಮತ್ತು ಕಲಿಕೆ ಬೋಧನೆಗಳಲ್ಲಿ ಆವಿಷ್ಕಾರದ ಹೊಸ ಮಜಲುಗಳನ್ನು ಹುಟ್ಟಿಸುವ ವಿಸ್ಮಯ ಬೆರಗುಗೊಳಿಸುವಂಥಹದು. ಅದರಲ್ಲೂ ಯುವ ಪ್ರಾಧ್ಯಾಪಕ ವೃಂದ ತಮ್ಮ ಹೊಸ ಹುರುಪು ಉತ್ಸಾಹಗಳೊಂದಿಗೆ ಹೊಸ ಪೆಡಗಾಗಿಕಲ್ (ಕಲಿಕೆ ಬೋಧನೆ ವಿಧಿ ವಿಧಾನಗಳು) ಪ್ರಯೋಗಗಳ ಮಂಡಿಸುವ ಪರಿಯೇ ಜ್ಞಾನದ ಜಲಪಾತ. ರಜಾ ದಿನಗಳ ಮುಂಗಾರು ಮಳೆಯ ಅನುಭವ ಜ್ಞಾನ ಸಿಂಚನ ವರ್ಷವಿಡಿ ವಿದ್ಯಾರ್ಥಿಗಳನ್ನು ಹೊಸ ಕಲಿಕೆಯ ಲೋಕಕ್ಕೆ ಕರೆದೊಯ್ಯುತ್ತದೆ. ವರ್ಷವಿಡೀ ಬೋಧನೆ ಕಲಿಕೆಯ ಅನುಭವ ರಜಾದಿನಗಳಲ್ಲಿ ಮೋಡ ಪ್ರಬಂಧಗಳಾಗಿ ಮರೆಯಲಾಗದ ಮುಂಗಾರು ಮಳೆಯಾಗಿ ಜ್ಞಾನದ ಕೃಷಿಗೆ ಇಡೀ ವಿಶ್ವವಿದ್ಯಾಲಯ ತಯಾರಾಗುವ ಉದಾಹರಣೆ ಬೇರೆ ಯಾವುದೇ ವಿಶ್ವವಿದ್ಯಾಲಯ ಮತ್ತು ಋಣಗಳಲ್ಲಿ ಸಹ ಸಿಗುವದಿಲ್ಲ. ನಚಿಕೇತ ಯಮರಾಜನಿಗೆ ಕೇಳಿದ ಹಾಗೆ, ಯಕ್ಷ, ಧರ್ಮರಾಜನಿಗೆ ಕೇಳಿದ ಹಾಗೆ, ಶ್ರೀಕೃಷ್ಣ ಸಮರ ಸಮಯದಲ್ಲಿ ಹೇಳಿದ ಗೀತೆಯ ಹಾಗೆ, ವಿಕ್ರಮ ರಾಜ ಬೇತಾಳಕ್ಕೆ ನಿರ್ಣಯ ಕೊಟ್ಟ ಹಾಗೆ ಈ ಸಮಾವೇಶಗಳಲ್ಲಿ ಬೌದ್ಧಿಕ ಚರ್ಚೆ, ಸಂದೇಹ ಪರಿಹಾರ, ಅಲ್ಲಿ ಪ್ರತಿಕ್ಷಣ ಹಾಜರ್ ಇದ್ದು ಕುತೂಹಲಭರಿತ ಪ್ರಶ್ನೆ ಕೇಳತಾನೇ, ಮಹತ್ವದ ಅನುಷ್ಠಾನದ ನಿರ್ಧಾರ ಪ್ರಕಟಿಸುವ ಹುರುಪಿನಿಂದ ಇರುವ ಕುಲಪತಿ ಅಶೋಕ ಶೆಟ್ಟರ್ ಮಧ್ಯದಲ್ಲಿ ನಡೆಯುವ ಈ ಸಮಾವೇಶ ಬಹಳ ಮಹತ್ವದ್ದು ಮತ್ತು ಮೆಚ್ಚುವಂಥಹದು. ಹಿರಿಯ ಪ್ರಾಧ್ಯಾಪಕರು, ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದು ಕೂಡಾ ಗಮನಾರ್ಹ. ಈ ಕಾನ್ಕ್ಲೇವ್ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಕೆಲವು ಆಂಧ್ರದ, ಮಹಾರಾಷ್ಟ್ರದ ಕೆಲವು ಕಾಲೇಜುಗಳಲ್ಲಿ ಆರಂಭಿಸಿರುವದು ಸಹ ಒಂದು ಧನಾತ್ಮಕ ಬದಲಾವಣೆ. ಇಂಡೋ ಅಮೆರಿಕನಾಭಿಯಂತ್ರಕ ಶಿಕ್ಷಣ ಮತ್ತು ಸಂಶೋಧನೆ ಸಂಘಟನೆ ಈ ಕಾನ್ಕ್ಲೇವ್ಗೆ ಒಂದು ಮಹತ್ತರವಾದ ಮನ್ನಣೆ ನೀಡಿದ್ದು ಪ್ರಶಂಸನೀಯ. ಇದರ ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ kle ಟೆಕ್ನಾಲಜಿಕಲ್ ವಿಶ್ವವಿದ್ಯಾಲಯ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿಗೊಳ್ಳಬೇಕೆನ್ನುವ ಕಾಲೇಜುಗಳಿಗೆ ಶಿಕ್ಷಣದ ಯಾತ್ರಾಸ್ಥಳವಾಗಿ ಕಳೆದ ಸಾಲಿನಲ್ಲಿ ಸುಮಾರು 24 ಕಾಲೇಜು ಇಲ್ಲಿ ಬಂದು, ನೋಡಿ ಮೆಚ್ಚುಗೆ ನೀಡಿದ್ದಾರೆ. ನಿಸಾರ್ ಅಹಮ್ಮದರ “ಜೋಗದ ಸಿರಿ ಬೆಳಕಿನಲ್ಲಿ…..ನಿತ್ಯೋತ್ಸವವಾಗಿದೆ” ಪ್ರತಿ ಕಲಿಕೆಯು ಹೊಸದಿ. ಪ್ರತಿ ಹೊಸದರಲ್ಲಿ ಕಲಿಕೆಯೇ. ಕಲಿ ನಲಿ ಬಲಿಯುತ್ತ ವಿದ್ಯಾರ್ಥಿಗಳು ತಮ್ಮ ಜೀವನದ ರೂಪುರೇಷೆಗಳನ್ನು ಗುರುತಿಸಿಕೊಳ್ಳುವದು ಮಹತ್ವದ ಭಾಗವಾಗಿದೆ. ಪ್ರತಿ ಕಾಂಕ್ಲೇವ ಪ್ರತಿವರ್ಷ ಹೊಸ ವಿಚಾರಗಳನ್ನು, ಹೊಸ ಆಶಯಗಳನ್ನು, ಹೊಸ ಪರಿಣಾಮಗಳನ್ನು ತರುತ್ತದೆ. ಹೀಗಾಗಿ ಈ ವಿಶ್ವವಿದ್ಯಾಲಯದಲ್ಲಿ ಜ್ಞಾನದ ಚಿಲುಮೆ ಯಾವಾಗಲೂ ಚಿಮ್ಮುತ್ತ ಜ್ಞಾನ ಸರೋವರ ನಿರ್ಮಿಸುತ್ತ, ಪ್ರಪಾತದತ್ತ ಜಂಗಮವಾಗುತ್ತ ವಿಹಂಗಮ ದೃಶ್ಯವನ್ನು ನಿರ್ಮಿಸುವ ಜ್ಞಾನ ಜಲಪಾತವಾಗುವ ಪರಿಯೇ ಮತ್ತೆಲ್ಲೂ ನೋಡಲು ಸಿಗದು. ಯಾವ ಜಲಪಾತವಾದರೇನು? ಅದು ಸಮಾಜವನ್ನು ಬೆಳಗುವ ವಿದ್ಯುಚ್ಛಕ್ತಿಯಾಗಬೇಕಾದರೆ, ಆ ಜಲಪಾತದ ರಭಸದ, ವೇಗದ ನೀರು ಪೈಪಿನಲ್ಲಿ ಹರಿದು ಟರ್ಬೈನ್ ವಿದ್ಯಾರ್ಥಿ ಸಮುದಾಯದಲ್ಲಿ ಬ್ಲೇಡ್ಗಳಿಗೆ ಬಡಿದು ಚಕ್ರ ತಿರುಗಿದಾಗ ಲೇ ವಿದ್ಯುತ್ ಶಕ್ತಿ ಹುಟ್ಟುವದು ಜಗತ್ತು ಬೆಳಗುವದು. ಸಮಾಜ, ಉದ್ದಿಮೆ, ದೇಶಕ್ಕೆ ಏನು ಬೇಕೋ ಅದು ಸಿಗುವದು ಎಂಥಾ ಪೈಪು, ಎಷ್ಟು ಆಳಕ್ಕೆ ಟರ್ಬೈನ್ ಇಡಬೇಕು, ತಿರುಗುವ ಬ್ಲೇಡು ಹೇಗಿರಬೇಕು ಇತ್ಯಾದಿ ಸಂಗತಿಗಳನ್ನು ನಿರ್ಧರಿಸುವದೇ ಪಠ್ಯಕ್ರಮ ವಿನ್ಯಾಸ. ಇದೊಂದು ಉದಾಹರಣೆ ಮಾತ್ರ ಹೀಗೆ ಎಲ್ಲ ವಿಷಯಗಳಿಗೂ ಅನ್ವಯ ಮಾಡಬಹುದು. ಎಲ್ಲ ಮಾಡಲು ಜ್ಞಾನದ ಜಲಪಾತ ಬೇಕೇ ಬೇಕು. ಇಂತಹ ಮನೋನಿರ್ಧಾರ ಕುಲಪತಿ ಡಾ. ಅಶೋಕ ಶೆಟ್ಟರ್ ಅವರ ಬತ್ತಳಿಕೆಯಿಂದ ಹೊರಬಿದ್ದುದು. ಈ ಹೊಸ ಪ್ರಯತ್ನಗಳ ಫಲ ಕ್ಯಾಂಪಸ್ ನೇಮಕಾತಿಗಳಲ್ಲಿ, ಉದ್ದಿಮೆದಾರರ ಭೇಟಿಗಳಿಂದ, ಉದ್ದಿಮೆಗಳಿಗೆ ಹೇಗೆ ಬೇಕೋ ಹಾಗೆ ವಿದ್ಯಾರ್ಥಿಗಳು ತಯಾರಾಗುತ್ತ ಇಂದು ಶೇ.97 ಮುಟ್ಟಿದೆ ಅಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇನ್ನೂ ಮೂರು ಪ್ರತಿಶತ ಸ್ನಾತಕೋತ್ತರ ಅಧ್ಯಯನ ಮಾಡುತ್ತಾರೆ. ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ಇಲ್ಲಿ ನಡೆಯುವದೇ ವಿಶಿಷ್ಟವಾದುದು, ಬೇರೆಲ್ಲೂ ಅದರಲ್ಲೂ ಭಾರತದಲ್ಲಿ ಇಲ್ಲ. ಪ್ರಾಧ್ಯಾಪಕರು ಸಂಶೋಧನೆ ಮಾಡುತ್ತ ಬೋಧನೆಯನ್ನು ಮಾಡುತ್ತಿದ್ದರೆ, ಶಿಕ್ಷಣದ ಗುಣಮಟ್ಟ ಖಂಡಿತವಾಗಿ ಹೆಚ್ಚುತ್ತದೆ. ಅದಕ್ಕಾಗಿ ಸಾವಕಾಶವಾಗಿ ಉದ್ದಿಮೆಗಳು ಬಂಡವಾಳ ಹೂಡುತ್ತವೆ. ಪರದೇಶದ ಖ್ಯಾತ ವಿಶ್ವವಿದ್ಯಾಲಯಗಳ ತಜ್ಞರನ್ನು ಇಂತಹ ಕನ್ಕ್ಲೇವ್ಗಳಿಗೆ ಆಹ್ವಾನಿಸಿದಾಗ ಸಂಬಂಧಗಳು ಬೆಳೆಯುತ್ತವೆ. ಸಂಬಂಧಗಳ ಪೋಷಣೆ ಬೆಳೆ ಯಾವುದು ಸಮಾನ ಆಸಕ್ತಿ, ಜ್ಞಾನಕ್ಕಾಗಿ ಇಂತಹ ಭೇಟಿಗಳು, ಸಂವಾದಗಳು, ಚರ್ಚೆಗಳು ಮುಕ್ತ ವಾತಾವರಣದಲ್ಲಿ ಲಭ್ಯವಿದ್ದಾಗ ಮಾತ್ರ. ಸರ್ಕಾರಿ ವ್ಯವಸ್ಥೆಯಲ್ಲಿ ಇಂತಹದೊಂದು ಆಗುವದು ಖಚಿತ. ಅದರಲ್ಲಿ ಬ್ಯುರೋಕ್ರಸಿ ಸಂಪೂರ್ಣ ಆವರಿಸಿಕೊಂಡಿರುವ ಕಾರಣ ಜ್ಞಾನದ ಜಲಪಾತವಾಗದೆ ನಿಂತ ನೀರಿನ ಕೆರೆಯಾಗಿರುತ್ತದೆ. ಕೆರೆಯ ನೀರು ಕುಡಿಯಲು ಯೋಗ್ಯವಿರದಿದ್ದರೂ, ಪಶುಪಕ್ಷಿಗಳಿಗೆ ಮತ್ತು ಅಂತರ್ಜಲ ಹೆಚ್ಚಿಸುವದಕ್ಕೆ ಅನುಕೂಲ. ಹರಿಯುತ್ತಾ ಜಂಗಮವಾಗಿರುವ ನೀರು ಸ್ವಯಂ ಶುದ್ಧೀಕರಣಗೊಳ್ಳುವ ಸಾಮಥ್ರ್ಯ ಬರುವದೇ ನಿಸರ್ಗದಲ್ಲಿರುವ ವೈವಿಧ್ಯತೆಯಿಂದಾಗಿ. ಅದಕ್ಕಾಗಿ ಮಾನವ ಸಂಪನ್ಮೂಲದಲ್ಲಿ ವೈವಿಧ್ಯವನ್ನು ತರುವದು ಅಷ್ಟೇ ಮುಖ್ಯವಾಗಿದೆ. ಅದು ಪ್ರಾಧ್ಯಾಪಕರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಅನ್ವಯಿಸುತ್ತದೆ.
ಕೃಪೆ :ಸಂಯುಕ್ತ ಕರ್ನಾಟಕ