ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ, ಪ್ರಖರ ವೈಚಾರಿಕ ನಿಲುವಿನ ಸಾಹಿತಿ ಡಾ. ಜಿ.ರಾಮಕೃಷ್ಣ ಅವರು ನಾಡಿನ ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಜಿ. ಆರ್. ಎಂದೇ ಹೆಸರಾದವರು. ಎಂಬತ್ತು ವಸಂತವನ್ನು ಪೂರೈಸಿದ ಸಂದರ್ಭದಲ್ಲಿ ಅವರೊಂದಿಗೆ ಭಾನುವಾರದ ಪುರವಣಿ ನಡೆಸಿದ ಆಪ್ತವಾದ ಸಂವಾದ ಇಲ್ಲಿದೆ.ಮಾಗಡಿಯ ಕೆಂಪಸಾಗರ ಹಳ್ಳಿಯ ಪ್ರೈಮರಿ ಶಾಲೆಯ ಮಾಸ್ತರ ಮಗ ಜಿ.ರಾಮಕೃಷ್ಣ ವಾರಾನ್ನ, ಭಿಕ್ಷಾನ್ನ ಮಾಡಿಕೊಂಡು ಕಷ್ಟಪಟ್ಟು ಓದಿ, ಮೈಸೂರು ನಗರಕ್ಕೆ ಹೋಗಿ ಸಂಸ್ಕೃತ, ವೇದ, ತತ್ವಶಾಸ್ತ್ರಗಳನ್ನು ಕಲಿತು ಪಂಡಿತರಾದರು. ದೂರದ ಪುಣೆ, ವೇಲ್ಸ್‌ನಲ್ಲಿ ಇಂಗ್ಲಿಷ್ ಓದಿ ಜಗತ್ತಿನ ಅಪಾರ ಜ್ಞಾನವನ್ನು ಅರಗಿಸಿಕೊಂಡು ಅಪಾರ ಶಿಷ್ಯಕೋಟಿಗೆ ಧಾರೆಯೆರೆದು ಆದರ್ಶ ಗುರುವಾದರು.ಸಮಾಜದ ಎಲ್ಲರ ಬದುಕು ಹಸನಾಗಿಸಬೇಕೆಂದು ತಮ್ಮ ಸುತ್ತಮುತ್ತಲ ಜನಪರ ಹೋರಾಟಗಳಿಗೆ ತಾತ್ವಿಕ ತಳಹದಿಯನ್ನು ರೂಪಿಸುತ್ತಲೇ ಹೋರಾಟ ಮತ್ತು ಲೇಖನಿಯ ಮೂಲಕ ಮುನ್ನೋಟ ತೋರಿರುವ ಸಾಧನೆ ಅವರದು. ಸದಾ ‘ನೆಮ್ಮದಿಯ ನಾಳೆ’ಗಾಗಿ ಕನವರಿಸುತ್ತಾ ‘ಹೊಸತು’ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. ಮಾರ್ಕ್ಸ್‌ವಾದ ಇವರ ಉಸಿರು. ಸ್ವತಂತ್ರ ವೈಚಾರಿಕ ಕೃತಿಗಳನ್ನೇ ಅಲ್ಲದೆ, ಪ್ರಸಿದ್ಧ ತತ್ವಶಾಸ್ತ್ರಜ್ಞ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರ ಹಲವಾರು ಕೃತಿಗಳನ್ನು ಕನ್ನಡದ ಓದುಗರಿಗೆ ನೀಡಿರುವ ಜಿ.ರಾಮಕೃಷ್ಣ ಕನ್ನಡದ ವೈಚಾರಿಕ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.ಶಿಕ್ಷಕರಾಗಿ, ಶಿಕ್ಷಕ ಚಳವಳಿಯ ನೇತಾರರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ನೀವು ಇಂದಿನ ಶಿಕ್ಷಣ ಕ್ಷೇತ್ರದ ಸವಾಲುಗಳೇನೆಂದು ಗುರುತಿಸುತ್ತೀರಾ? ಏಕರೂಪ ಸಮಾನ ಶಿಕ್ಷಣ ವ್ಯವಸ್ಥೆ ರೂಪಿಸುವತ್ತ ಹೆಜ್ಜೆ ಹಾಕುವುದು ಮೂಲಭೂತ ವಿಷಯ. ಇಂದು ಎಲ್ಲ ಹಂತಗಳಲ್ಲೂ ಛಿದ್ರೀಕರಣವು ಹೆಚ್ಚುತ್ತಿದೆ, ಪ್ರತ್ಯೇಕತೆಯು ಪ್ರಧಾನವಾಗುತ್ತಿದೆ. ಪ್ರಾಥಮಿಕ ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಇದು ವ್ಯಾಪಿಸಿದೆ. ಸಮಾಜದಲ್ಲಿ ಶ್ರೇಣೀಕರಣವಿರುವಂತೆ ಶಿಕ್ಷಣದಲ್ಲೂ ಅದು ಅಸ್ತಿತ್ವದಲ್ಲಿದೆ. ಸುತ್ತಣ ಪ್ರಪಂಚ ಮತ್ತು ಅದರ ವಿದ್ಯಮಾನಗಳ ಅವಲೋಕನ ಮತ್ತು ವಿಶ್ಲೇಷಣೆ ಎಲ್ಲ ನೂತನ ಆವಿಷ್ಕಾರಗಳ ಸೆಲೆ. ಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಅವೇ ಮುಖ್ಯ ಮಾರ್ಗದರ್ಶಿ ಸೂತ್ರಗಳು. ಅವುಗಳನ್ನಾಧರಿಸಿದ ಶೈಕ್ಷಣಿಕ ಪದ್ಧತಿಯು ಸರ್ವಾಂಗೀಣ ಪ್ರಗತಿಗೆ ಸಾಧನ. ಅದು ಎಲ್ಲರಿಗೂ ಸಮಾನವಾಗಿ ದಕ್ಕಿದಾಗ ನೂರಾರು ಮನಸ್ಸುಗಳಿಂದ ಕೊಡುಗೆಗಳು ಸಾಧ್ಯ.ಈಗೇನೋ ಹೊಸ ಶಿಕ್ಷಣ ನೀತಿಯ ಮಾತುಗಳು ಕೇಳಿಬರುತ್ತಿವೆ. ಪ್ರಕಟಿತ ಕರಡನ್ನು ನೋಡಿದರೆ ಹಿನ್ನಡೆ ಸೂಚನೆಯು ಪ್ರಬಲವಾಗಿರುವಂತೆ ಕಾಣುತ್ತದೆ. ಅದನ್ನು ಹಿಮ್ಮೆಟ್ಟಿಸುವುದು, ಅದಕ್ಕೆ ಪರ್ಯಾಯವನ್ನು ರಚಿಸುವಾಗ ಸಮಾಜದ ಎಲ್ಲ ವಿಭಾಗಗಳಿಗೂ ಸಮಾನ ಅವಕಾಶದ ಸಾಧ್ಯತೆಯನ್ನು ಖಚಿತಗೊಳಿಸುವುದು ನಿಜವಾದ ಸವಾಲು.ಕನ್ನಡ ಮಾಧ್ಯಮದ ಶಾಲೆಗಳಿಗಾಗಿ ಸಾಹಿತಿಗಳು ಏರು ಸ್ವರದಲ್ಲಿ ಹೋರಾಡುತ್ತಿದ್ದಾರೆ. ಇದರ ಔಚಿತ್ಯವೇನು? ಕನ್ನಡದ ಸಾಹಿತಿಗಳ ಕೃತಿಗಳನ್ನು ಓದುವ ವರ್ಗ ಅದೃಶ್ಯವಾಗದಿರಬೇಕಾದರೆ ಕನ್ನಡ ಮಾಧ್ಯಮದ ಶಿಕ್ಷಣ ಅಗತ್ಯವೆನಿಸುವುದು ಅವರ ಕಾಳಜಿಗೆ ಒಂದು ಕಾರಣವಿರಬಹುದು. ಮೂಲಭೂತ ಶಿಕ್ಷಣ ತತ್ವವೂ ಅದನ್ನು ಅಪೇಕ್ಷಿಸುತ್ತದೆ. ಸುಲಭ ಮತ್ತು ಸಮಗ್ರ ಶಿಕ್ಷಣವು ದಕ್ಕಬೇಕಾದರೆ ಶಿಕ್ಷಣ ಮಾಧ್ಯಮವು ಅಡಚಣೆ ಒಡ್ಡುವಂತಿರಬಾರದು. ಆ ದೃಷ್ಟಿಯಿಂದ ಕನ್ನಡ ಮಾಧ್ಯಮವನ್ನು ಪುರಸ್ಕರಿಸುವುದು ಉತ್ತಮ ಶಿಕ್ಷಣ ನೀತಿಯಾದ್ದರಿಂದ ಅದಕ್ಕಾಗಿ ಆಗ್ರಹವು ನ್ಯಾಯೋಚಿತವಾದದ್ದು.ಶಿಕ್ಷಣದ ಪಠ್ಯದಲ್ಲಿ ಹಿಂದಿ ಹೇರಿಕೆಯ ಪ್ರಯತ್ನಗಳು ನಡೆಯುತ್ತಿವೆ. ಅದರಿಂದ ಉಂಟಾಗುವ ಸಾಂಸ್ಕೃತಿಕ ಪರಿಣಾಮಗಳೇನು?ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದಿ ಹೇರಿಕೆಯು ಸತತವಾಗಿ ಒಂದು ಕಾರ್ಯಸೂಚಿಯಾಗಿದೆ. ಸಂವಿಧಾನ ರಚನಾ ಸಭೆಯಲ್ಲೂ ಅದು ವ್ಯಕ್ತವಾಗಿತ್ತು. ಮತ್ತು ಕ್ರಮೇಣ ಒತ್ತಡ ಮತ್ತು ಪ್ರಯತ್ನ ಹೆಚ್ಚುತ್ತಾ ಬಂದಿದೆ. ಬೇರೆ ಭಾಷೆಗಳಿಗೂ ಅದರಿಂದ ಕುತ್ತು ಕಟ್ಟಿಟ್ಟಿದ್ದೇ. ಆಕಾಶವಾಣಿಯೂ ಸೇರಿದಂತೆ ಎಲ್ಲ ಸಂವಹನ ಕ್ರಮಗಳನ್ನೂ ಬಳಸಿಕೊಂಡು ಪ್ರಾದೇಶಿಕ ಭಾಷೆಗಳನ್ನು ಗೌಣವಾಗಿಸಲಾಗುತ್ತಿದೆ. ವಿವಿಧ ರಾಜ್ಯಗಳ ವ್ಯಕ್ತಿತ್ವದ ಅನನ್ಯತೆಗೆ ಇದು ಧಕ್ಕೆಯುಂಟು ಮಾಡುವುದು ನಿಶ್ಚಿತ. ಭಾರತವೆಂದರೆ ಒಂದು ಮೂಟೆಯಲ್ಲಿ ತುರುಕಲಾದ ತರಗೆಲೆಗಳಾಗಬಾರದು. ದೇಶದ ಯಾವ ಭಾಗವೂ ತನ್ನ ವೈಶಿಷ್ಟ್ಯ ಬೆಳೆಸಿಕೊಳ್ಳುವ ಅವಕಾಶದಿಂದ ವಂಚಿತವಾಗಕೂಡದು. ಅದೇ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆ.ನಮ್ಮ ಕಣ್ಣ ಮುಂದಿರುವ ಸಾಂಸ್ಕೃತಿಕ ಭಾರತದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇಂದು ಬಹುತ್ವದ ಸಂಸ್ಕೃತಿಯ ಧ್ವಂಸಕ್ಕಾಗಿ ಬದ್ಧರಾಗಿರುವ ಜನ ನಮ್ಮ ನಡುವಿದ್ದಾರೆಂಬುದು ಆತಂಕದ ಸಂಗತಿ. ರೋಡ್ ರೋಲರ್ ತಂದು ಎಲ್ಲವನ್ನೂ ಸಮಗೊಳಿಸಿ ಏಕಮುಖೀ ಸಾಂಸ್ಕೃತಿಕ ಸಂಚಾರವನ್ನು ವಿಧಿಸುವುದು ವಿಕೃತ ಮನಸ್ಸುಗಳ ಹುನ್ನಾರ. ನಮ್ಮ ದೇಶದಲ್ಲಿ ‘ಏಕ’ಸಾಂಸ್ಕೃತಿಕ ಧಾರೆಯೇ ಇಲ್ಲ. ಅನ್ಯಾಕ್ರಮಣಶೀಲತೆಯ ಸೂಚನೆ ಈಚಿನ ವರ್ಷಗಳಲ್ಲಿ ಢಾಳಾಗಿ ಗೋಚರಿಸುತ್ತಿದೆ. ಸಂಸ್ಕೃತಿಯ ಏಕೈಕ ರೂಪವೆಂಬುದು ಭಾರತದ ವಿನಾಶವೇ ಸರಿ. ಸಂವಿಧಾನದ ಮೂಲಸೂತ್ರಗಳನ್ನು ಗೌರವಿಸಿದರೆ ಇಂತಹ ಅನಿಷ್ಟವು ಘಟಿಸುವುದಿಲ್ಲ. ಸಂಸ್ಕೃತಿಯೆಂದರೆ ದಿನನಿತ್ಯದ ಆಚರಣೆಗಳು, ಸಾಹಿತ್ಯ, ಕಲೆ ಇತ್ಯಾದಿಗಳಷ್ಟೇ ಅಲ್ಲ. ಅದು ನಮ್ಮ ಆಂತರಿಕ ಸಂಬಂಧಗಳನ್ನೂ ಒಳಗೊಳ್ಳುತ್ತದೆ. ಮನುಸ್ಮೃತಿ, ಭಗವದ್ಗೀತೆ, ರಾಷ್ಟ್ರೀಯತೆ, ಸಂಸ್ಕೃತಿ, ಸಂವಿಧಾನ… ಮುಂತಾದ ವಿಷಯಗಳು ಇವತ್ತಿನ ಬಹುಚರ್ಚಿತ ಸಂಕಥನಗಳಾಗಿವೆ. ಈ ವಿಷಯಗಳ ಬಗ್ಗೆ ಪರ-ವಿರೋಧಗಳು, ತಪ್ಪು ವ್ಯಾಖ್ಯಾನಗಳು, ವೈಭವೀಕರಣ ಮತ್ತು ನಿರಾಕರಣ ಪ್ರವೃತ್ತಿಗಳು ಅತ್ಯಂತ ತೀಕ್ಷ್ಣವಾಗಿ ವ್ಯಕ್ತವಾಗುತ್ತಿವೆ. ಇವುಗಳ ಬಗ್ಗೆ ಏನು ಹೇಳುತ್ತೀರಿ? ಈ ವಿಷಯಗಳ ಬಗ್ಗೆ ವಿವಿಧ ಅಭಿಪ್ರಾಯಗಳು ಆರೋಗ್ಯಕರವಾದದ್ದೇ. ನಮ್ಮ ನಡುವಿನ ತಪ್ಪು ವ್ಯಾಖ್ಯಾನಗಳಿಗೆ ಚಾರಿತ್ರಿಕ ದೃಷ್ಟಿಕೋನದ ಕೊರತೆ ಮತ್ತು ಸಮಾಜದಲ್ಲಿ ಕೆಳಹಂತಕ್ಕೆ ದೂಡಲ್ಪಟ್ಟಿರುವವರ ಅಭೀಪ್ಸೆಗೆ ಸ್ಪಂದಿಸದಿರುವುದು ಕಾರಣ. ಸಮಾಜದ ಒಂದು ವಿಭಾಗಕ್ಕೆ ಹೆಚ್ಚು ಅನುಕೂಲಕರವಾದ ಸಂಗತಿಗಳ ವೈಭವೀಕರಣ ಇತಿಹಾಸದುದ್ದಕ್ಕೂ ನಡೆದಿದೆ. ಅದಕ್ಕೆ ಪೂರಕವಾದ ಉಕ್ತಿ ಮತ್ತು ಭಾವನೆಗಳೇ ಶ್ರೇಷ್ಠ ಮತ್ತು ಮೌಲಿಕವೆಂಬ ಹಮ್ಮು ಹಲವು ಕ್ಷೇತ್ರಗಳನ್ನು ಆವರಿಸಿದೆ. ಅದಕ್ಕೆ ಪ್ರತಿಯಾಗಿ ನಿರಾಕರಣ ಪ್ರವೃತ್ತಿಯು ಹೇಯವಲ್ಲ. ಆದರೆ ಸಕಾರಣವಾಗಿ ಮತ್ತು ಶುದ್ಧವಾಗಿ ಆ ಪ್ರವೃತ್ತಿಯು ವ್ಯಕ್ತವಾಗಬೇಕು. ಪರಂಪರೆಯನ್ನು ಇಡಿಯಾಗಿ ನಿರಾಕರಿಸಿ ನೂತನವಾದದ್ದೇನನ್ನೋ ಕಟ್ಟುತ್ತೇವೆಂಬ ನಿಲುವು ಅತಂತ್ರಕ್ಕೆ ಹಾದಿ ಮಾಡಿಕೊಡುತ್ತದೆ. ಯಾವ ಮೌಲ್ಯಗಳು ಪ್ರಸ್ತುತವೆಂಬ ವಿಮರ್ಶೆಯು ಸದಾ ಸ್ವಾಗತಾರ್ಹವೇ. ಮನುಸ್ಮೃತಿ, ಭಗವದ್ಗೀತೆ…. ಮುಂತಾದ ಪಠ್ಯಗಳನ್ನು ಅವಲೋಕಿಸದೆಯೇ ಕೆಲವು ಅಹಿತಕರ ತೀರ್ಮಾನಗಳಿಗೆ ಕಟ್ಟುಬೀಳುವುದು ಅನುಚಿತ. ನಿಮ್ಮಲ್ಲಿ ಭಾರತದ ಪ್ರಾಚೀನ ತತ್ವಶಾಸ್ತ್ರ ಗ್ರಂಥಗಳನ್ನು ಕುರಿತ ವಿಶೇಷ ಅಧ್ಯಯನ ನಡೆಸಿದ ವಿದ್ವತ್ತು ಮತ್ತು ಮಾರ್ಕ್ಸ್‌ವಾದದ ಅಧ್ಯಯನ ಮತ್ತು ತಿಳಿವಳಿಕೆ ಕಾಣುತ್ತೇವೆ. ಈ ನಿಮ್ಮ ವ್ಯಕ್ತಿತ್ವವನ್ನು ಹೇಗೆ ವಿಶ್ಲೇಷಿಸುತ್ತೀರಾ? ಮಾರ್ಕ್ಸ್‌ವಾದ ಮತ್ತು ಪ್ರಾಚೀನ ತತ್ವಶಾಸ್ತ್ರ ವಿರುದ್ಧ ಧ್ರುವಗಳಲ್ಲ. ಇಷ್ಟಕ್ಕೂ ಮಾರ್ಕ್ಸ್‌ವಾದವೆಂದರೆ ಒಂದು ಚಿಂತನೆ ಮತ್ತು ವಿಶ್ಲೇಷಣಾ ವಿಧಾನ, ಎಂಬುದನ್ನು ನೆನಪಿನಲ್ಲಿಡಬೇಕು. ಚರಿತ್ರೆಯಲ್ಲಿ ಸ್ಥಗಿತತೆಯು ಸಾಂದ್ರವಾಗಿದೆ, ಅದನ್ನು ಪೋಷಿಸುವುದು ನಮ್ಮ ಜವಾಬ್ದಾರಿ, ಎಂಬ ನಿಲುವು ತೀರಾ ಪ್ರಶ್ನಾರ್ಹವಾದ್ದು. ವೇದೋಪನಿಷತ್ತುಗಳ ವ್ಯಾಸಂಗವು ಅವುಗಳ ನಿರ್ದಿಷ್ಟ ಚಾರಿತ್ರಿಕ ಹಿನ್ನೆಲೆ ಮತ್ತು ಅದರ ವಿಕಾಸದ ಹಾದಿಯನ್ನು ತೊರೆದು ನಡೆಸಬಹುದಾದ ಪ್ರಕ್ರಿಯೆಯಲ್ಲ. ಮಾರ್ಕ್ಸ್‌ವಾದವೆಂದರೆ ಪ್ರಕೃತಿ ವಿಜ್ಞಾನದ ಪದ್ಧತಿಯಲ್ಲಿ ಸರ್ವಸ್ವವನ್ನೂ ಅರ್ಥೈಸಿಕೊಳ್ಳುವುದು ನನ್ನ ತಿಳಿವು. ಅದು ಉಪನಿಷತ್ತು, ಪ್ಲೇಟೋ, ಶಂಕರ, ಹೀಗೆ ಯಾವ ಜ್ಞಾನದ ಮಾಪನಕ್ಕೂ ಸಾಧನವಾಗಿದೆ.ನಿಮ್ಮ ಬರಹದ ಮೂಲ ದ್ರವ್ಯವೇನು? ನೀವು ಆಯ್ದುಕೊಂಡ ಸಾಹಿತ್ಯ ಪ್ರಕಾರಗಳು ಯಾವುವು? ಯಾವುದೇ ಮೌಲಿಕ ಬರಹಕ್ಕೂ ಮೂಲದ್ರವ್ಯವು ಚಾರಿತ್ರಿಕ ದೃಷ್ಟಿ, ವೈಚಾರಿಕತೆ ಮತ್ತು ಸಮುದಾಯದ ಹಿತ ಹಾಗೂ ಸಮಾನತೆಯಲ್ಲದೆ ಬೇರೇನೂ ಆಗಬಾರದು. ವಿಭಿನ್ನ ಸಂಸ್ಕೃತಿಗಳ ಪೋಷಣೆಯು ಇದರಿಂದ ಲಭಿಸುತ್ತದೆ. ಸಾಹಿತ್ಯ, ತತ್ವಶಾಸ್ತ್ರ, ಸಮಾಜ ವಿಜ್ಞಾನ, ಇತಿಹಾಸ – ಹೀಗೆ ಎಲ್ಲವನ್ನೂ ಮೇಳೈಸಿಕೊಂಡು ಅಧ್ಯಯನ ಮಾಡಿದರೆ ನಮ್ಮ ಪ್ರಾಚೀನ ಗ್ರಂಥಗಳ ನಿಜಾರ್ಥ ಮತ್ತು ಮೂಲೋದ್ದೇಶಗಳನ್ನು ತಿಳಿಯಲು ಶಕ್ಯ. ಯಥಾಶಕ್ತಿ ಆ ನಿಟ್ಟಿನಲ್ಲಿ ನಾನು ಹೆಜ್ಜೆ ಹಾಕಬಯಸಿದ್ದೇನೆ.ನಿಮ್ಮನ್ನು ಪ್ರಭಾವಿಸಿದ ಮುಖ್ಯ ಗ್ರಂಥಗಳು ಮತ್ತು ಲೇಖಕರು ಯಾರು? ನಿಷ್ಕೃಷ್ಟವಾಗಿ ಹೀಗೆ ಎಂದು ಪಟ್ಟಿ ಮಾಡಲು ಬರುವುದಿಲ್ಲ. ಋಗ್ವೇದ ಮತ್ತು ಅಥರ್ವವೇದ, ಪ್ರಾಚೀನ ವೈದ್ಯಕೀಯ ಗ್ರಂಥಗಳಲ್ಲಿ ಶ್ರೇಷ್ಠವಾದ ಚರಕ ಸಂಹಿತೆ, ನ್ಯಾಯಸೂತ್ರದ ಮೇಲಿನ ವಾತ್ಸ್ಯಾಯನ ಭಾಷ್ಯ, ಹೀಗೆ ಹಲವನ್ನು ಹೆಸರಿಸಬಹುದು. ಶೂದ್ರಕ, ಬ್ರೆಕ್ಟ್, ಡಿಕೆನ್ಸ್, ಟಾಲ್‍ಸ್ಟಾಯ್ ಮತ್ತು ಅವರಂತಹ ಸಾಹಿತಿಗಳು ನನಗೆ ಪ್ರಿಯವಾದವರು. ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಜೋಸೆಫ್ ನೀಡ್‍ಹ್ಯಾಮ್, ಜೆ.ಡಿ. ಬರ್ನಾಲ್ , ಆರ್.ಎಸ್. ಶರ್ಮ, ಬ್ಯಾರೋಸ್ ಡನ್‍ಹ್ಯಾಮ್, ಮುಂತಾದವರನ್ನು ಹೆಸರಿಸಬಹುದು. ಕನ್ನಡದ ಪ್ರಾಚೀನ ಸಾಹಿತಿಗಳಲ್ಲಿ ಲಕ್ಷ್ಮೀಶನು ನನಗೆ ಹಿಡಿಸುತ್ತಾನೆ.ಇಂದು ವಿಫುಲವಾದ ವೈಚಾರಿಕ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಇದರಿಂದ ಸಮಾಜದ ಮೂಢನಂಬಿಕೆಗಳನ್ನು ತೊಡೆಯಲು ಸಾಧ್ಯವಾಗುತ್ತದೆಯೇ? ಸಾಹಿತ್ಯ ಮತ್ತು ಬರಹಗಳಷ್ಟೇ ಮೂಢನಂಬಿಕೆ ನಿವಾರಿಸಲಾರವು. ಮೂಢನಂಬಿಕೆಗಳಿಗೆ ಒಂದು ಸಾಮಾಜಿಕ ಕ್ರಿಯೆ ಇದೆ. ಅದೇ ಮಿಥ್ಯಾ ಪ್ರಜ್ಞೆಯನ್ನು ಪೋಷಿಸಿ ಬೆಳೆಸುವುದು. ಆದರೆ ಸಾಹಿತ್ಯವು ಸಮಾನತೆಯ ಭಾವನೆ ಉದ್ದೀಪಿಸಬಲ್ಲುದಾದರೂ ಸಮಾನತೆ ನಿರ್ಮಿಸಲಾರದು. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರಚನೆಯನ್ನು ಆಮೂಲಾಗ್ರವಾಗಿ ಮರು-ರಚಿಸುವ ಆಶಯಗಳನ್ನು ಗಟ್ಟಿಯಾಗಿ ನೆಲೆಗೊಳಿಸುವ ಪಾತ್ರ ವಹಿಸಬಲ್ಲುದಾದ್ದರಿಂದ ಅದರ ಪಾತ್ರವನ್ನೂ ಗೌಣವೆನ್ನಲಾಗದು.ಸಾಹಿತ್ಯ, ಸಾಂಸ್ಕೃತಿಕ ಉತ್ತೇಜನಕ್ಕಾಗಿ ಪ್ರಶಸ್ತಿಗಳ ಸಂಖ್ಯೆ ಹೆಚ್ಚಿದೆ. ಹೀಗೆ ಸಾಹಿತಿಗಳಿಗೆ ನೀಡುವ ಪುರಸ್ಕಾರದಿಂದ ಬರಹಗಾರರ ಸೃಜನಶೀಲತೆಗೆ ಅಷ್ಟು ನೆರವಾಗುತ್ತದೆಯೇ? ಇತ್ತೀಚೆಗೆ ಕೆಲವು ಸಾಹಿತಿಗಳು ತಮಗೆ ಬಂದ ಪ್ರಶಸ್ತಿಗಳನ್ನು ನಿರಾಕರಿಸುವ ಸಂದರ್ಭಗಳೂ ಇವೆ. ಈ ಪಟ್ಟಿಯಲ್ಲಿ ನೀವೂ ಇದ್ದೀರಾ. ಕಾರಣವೇನು? ಸಾಹಿತಿಗಳಿಗೆ ತೆರೆದಿಡಲಾಗಿರುವ ಪ್ರಶಸ್ತಿಗಳು ಇಂದು ಅಸಂಖ್ಯ. ಕೃಷಿ ಮತ್ತು ವಿಜ್ಞಾನ ಕ್ಷೇತ್ರ ಸಹ ಅಷ್ಟು ಪ್ರೋತ್ಸಾಹ ಪಡೆಯುತ್ತಿಲ್ಲ. ಜನಸಂಸ್ಕೃತಿಯ ಆವಿಷ್ಕಾರಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸದೆ ಪುರಸ್ಕಾರಗಳ ವಿತರಣೆಯಿಂದ ಅಷ್ಟೇನೂ ಉಪಯೋಗವಿಲ್ಲ. ಕೆಲವು ಸಾಹಿತಿಗಳಿಗೆ ವೈಯಕ್ತಿಕ ಸಂತೃಪ್ತಿ ದೊರೆಯಬಹುದೇನೋ, ಅಷ್ಟೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಭೀಕರವಾದಾಗ ಹಲವರು ಪ್ರಶಸ್ತಿಗಳನ್ನು ಹಿಂತಿರುಗಿಸಿದರು ಮತ್ತು ನಿರಾಕರಿಸಿದರು. ಅದರಿಂದಾಗಿ ವಾತಾವರಣವು ತಿಳಿಗೊಳ್ಳಲಿಲ್ಲವಾದರೂ ಎಚ್ಚರದ ಅಗತ್ಯವನ್ನು ಒತ್ತಿ ಹೇಳಲಾಯಿತು. ಅಂದಿಗಿಂತಲೂ ಭೀಕರ ಸನ್ನಿವೇಶ ಇಂದಿನದು. ಅದಕ್ಕೆ ಸಾಮೂಹಿಕ ಮಧ್ಯಪ್ರವೇಶವು ಇನ್ನೂ ಹೆಚ್ಚು ಸಂಘಟಿತವಾಗಿ ನಡೆಯಬೇಕಿದೆ. ಅದು ಯಾವ ಸ್ವರೂಪ ಪಡೆಯುತ್ತದೋ ಈಗಲೇ ಹೇಳಲಾಗದು ಏನೇ ಇರಲಿ, ಪ್ರಶಸ್ತಿಗಳು ಸೃಜನಶೀಲತೆಗೆ ನೆರವು ನೀಡುತ್ತವೆಂಬುದು ಒಂದು ಮಿಥ್ಯೆ. ಈಗಾಗಲೇ ಸಾಧನೆ ಮಾಡಿರುವುದನ್ನು ಗಮನಿಸಿ ಪ್ರಶಸ್ತಿ ನೀಡುತ್ತಾರೆಂದರೆ ಅದು ಮಾಡಬೇಕಾದುದಕ್ಕೆ ಪ್ರೇರಣೆ ಹೇಗಾದೀತು? ಪ್ರಶಸ್ತಿಯನ್ನು ಪಡೆಯಲೆಂದೇ ಬರೆಯುವ ಲೇಖಕರು ವಿರಳವೆಂದು ಭಾವಿಸುತ್ತೇನೆ.
courtsey:prajavani.net
https://www.prajavani.net/artculture/article-features/eka-samsrkruthi-647152.html