ಸಮಯವಿದ್ದುದರಿಂದ ಮೂಢ ತನ್ನ ಗೆಳೆಯ ಮಂಕನನ್ನು ಮಾತನಾಡಿಸಿಕೊಂಡು ಬರಲು ಆತನ ಮನೆಗೆ ಹೋದ. ಆ ಸಮಯದಲ್ಲಿ ಮಂಕ ಮತ್ತು ಅವನ ಪತ್ನಿಯ ನಡುವೆ ಯಾವುದೋ ವಿಷಯಕ್ಕೆ ಬಿರುಸಿನ ವಾಗ್ವಾದ ನಡೆದಿತ್ತು. ಸಂದರ್ಭ ಸರಿಯಿಲ್ಲವೆಂದು ಮೂಢ ಹಿಂತಿರುಗಿ ಹೋಗಬೇಕೆಂದಿದ್ದಾಗ ಅವನನ್ನು ನೋಡಿದ ಗೆಳೆಯ ‘ಏಯ್, ಬಾರೋ’ ಎಂದು ನಗುತ್ತಾ ಆಹ್ವಾನಿಸಿದ. ‘ಊರಗಲ ಬಾಯಿ ಮಾಡಿಕೊಂಡು ಮಾತಾಡಿಸೋದು ನೋಡು’ಎಂದು ಮೂದಲಿಸಿದ ಪತ್ನಿ ಮೂಢನಿಗೆ ‘ನೋಡಣ್ಣಾ, ಇವರು ಊರಿನವರೊಂದಿಗೆಲ್ಲಾ ನಗುನಗುತ್ತಾ ಮಾತನಾಡುತ್ತಾರೆ. ನನ್ನ ಹತ್ತಿರ ಮುಖ ಗಂಟಿಕ್ಕಿಕೊಂಡು ಮಾತಾಡುತ್ತಾರೆ’ ಎಂದು ದೂರಿದಳು. ಮೂಢ ಸುಮ್ಮನಿರಲಾರದೆ ‘ಊರಿನವರು ನಗುತ್ತಾ ಮಾತಾಡಿಸಿದಾಗ ಇವನು ಸಿಟ್ಟು ಮಾಡಿಕೊಂಡು ಮಾತಾಡಲು ಆಗುತ್ತೇನಮ್ಮಾ? ನೀನೂ ನಗುತ್ತಾ ಮಾತಾಡಿಸು. ಆಗ ನೋಡು. ಮುಖ ಗಂಟಿಕ್ಕುವುದಿರಲಿ, ಮುಡಿಯಲು ಮಾರುದ್ದಾ ಮಲ್ಲಿಗೆ ಹೂವು ತರುತ್ತಾನೆ’ ಎಂದ. ಮಂಕನ ಪತ್ನಿ ‘ಅದಕ್ಕೇ ನಿಮ್ಮನ್ನು ಎಲ್ಲರೂ ಮೂಢ ಅನ್ನುವುದು’ ಎಂದು ಹೇಳಿ ಒಳಗೆ ಹೋದರೂ ಅವಳ ಒಳಮನಸ್ಸು ‘ಅದೂ ನಿಜ’ ಎಂದು ಹೇಳುತ್ತಿತ್ತು. ಗೆಳೆಯರು ಮಾತನಾಡುತ್ತಿದ್ದಾಗ ಮಂಕನಿಗೆ ಇಷ್ಟವಾದ ತಿಂಡಿಯ ಜೊತೆಗೆ ಕಾಫಿ ಇಬ್ಬರಿಗೂ ಬಂದಿತು. ಪತಿ ಪತ್ನಿಯರ ನಡುವೆ ಕಣ್ಣುಗಳು ಮಾತಾಡಿದವು. ತಿಂಡಿಯ ರುಚಿ ಹೆಚ್ಚಾಯಿತು.
– ಕ.ವೆಂ.ನಾಗರಾಜ್.
ಜಗಳ
You must be logged in to post a comment.
2 Comments
ಇದು ಎಲ್ಲರ ಮನೆಯ ದೂರು….. 🙂
ನಕ್ಕು ಮಾತನಾಡಿದರೆ ಸಂಶಯ….ನಗದಿದ್ದರೆ ದೂರು…… 🙁
ಚೆನ್ನಾಗಿದೆ, ಬ್ಯಾಂಕಲ್ಲೂ ಹಾಕಿರ್ತಾರೆ ಕ್ಯಾಶಿಯರ್ ಮುಂದೆ “ನಗದು” ಎಂದು