ಚಿನ್ಮಯಿ

ಚಿನ್ಮಯಿ

ಕೈ-ಕಾಲು ಮುಖ ತೊಳೆದು ದೇವರ ಮುಂದೆ ‘ಶುಭಂ ಕರೋತಿ’ ಹೇಳುತ್ತಿದ್ದ ಮುದ್ದು ಚಿನ್ಮಯಿ ಅರ್ಧಕ್ಕೆ ನಿಲ್ಲಿಸಿ-“ಅಮ್ಮಾ, ಒನ್ಸ್ ಫಾರ್ ಆಲ್ ಅಂದ್ರೇನು?” ಎಂದಳು.
“ಮುದ್ದೂ, ದೇವರ ಸ್ತೋತ್ರ ಹೇಳುವಾಗ ಬೇರೆ ಮಾತಾಡಿದ್ರ ದೇವ್ರಿಗೆ ಸಿಟ್ಟು ಬರ್ತದ” ಎಂದ ನನ್ನ ಮಾತಿಗೆ- “ಏಯ್, ಹೋಗ ನೀ ಬರೇ ಸುಳ್ಳು ಮಾತಾಡ್ತಿ. ನಂಗ ಚಂಪಾಮಾಮಿ ಹೇಳ್ಯಾರ, ದೇವ್ರು ನನ್ನಂಥ ಪುಟ್ಟ ಮಕ್ಕಳ ಮ್ಯಾಲ ಎಂದೂ ಸಿಟ್ಟಿಗೆ ಏಳೂದಿಲ್ಲಂತ, ಮಕ್ಕಳಂದ್ರ ಅಂವಗ ಭಾಳಾ ಪ್ರೀತಿ” ಎಂದುತ್ತರಿಸಿದಳು.
ಕೆಲಸ ಮುಗಿದ ಮೇಲೆ ಮಾತಾಡೋಣ ಎಂದಾಗ ಮರು ಮಾತಾಡದೆ ತನ್ನ ಅಭ್ಯಾಸ ಮಾಡುತ್ತ ಕುಳಿತ ಚಿನ್ನೂ ನಾನು ಕೆಲಸ ಮುಗಿಸಿ ಕುಳಿತಾಗ ಬಂದು ನನ್ನ ತೊಡೆಯ ಮೇಲೆ ತಲೆಯಿರಿಸಿದಳು.
“ಅಮ್ಮಾ, ಈಗ ಹೇಳ್ತಿ, ಮತ್ತ ಒನ್ಸ್ ಫಾರ್ ಆಲ್ ಅಂದ್ರೇನು?” ಇನ್ನೂ ಮರೆಯದ ಅವಳ ಕುತೂಹಲ ಮೋಜೆನಿಸಿತು ನನಗೆ. ಅವಳು ಆ ಶಬ್ದವನ್ನು ಎಲ್ಲಿ ಕೇಳಿದಳೆಂದು ಪ್ರಶ್ನಿಸಿದೆ.
ತುಂಬು ಉತ್ಸಾಹದಿಂದ ಪ್ರಾರಂಭಿಸಿದಳವಳು- “ಮುಂಜಾನೆ ನೀ ನನ್ನ ಚಂಪಾಮಾಮಿ ಮನ್ಯಾಗ ಬಿಟ್ಟು ಹೋದೆ ನೋಡು, ಆಗ ಸ್ವಲ್ಪ ಹೊತ್ತಿಗೆ ಉಷಕ್ಕನ ಫೋನ್ ಬಂದಿತ್ತು. ಮಾಮಿಗೆ ಕೊಟ್ಟೆ. ಮಾತಾಡಿಕೋತ ಚಂಪಾಮಾಮಿ ಕಣ್ಣಾಗ ನೀರು ಬಂದ್ಹಂಗ ಕಾಣ್ತಿತ್ತು. ಮಾಮಿ, ದಿನೂ ಮಾಮಾಗ ಎರಡು ಗಂಟೆಗೆ ಬಸ್ ಸ್ಟ್ಯಾಂಡಿಗೆ ಹೋಗಿ ಉಷಕ್ಕನ ಕರ್ಕೊಂಡು ಬರ್ಲಿಕ್ಕೆ ಹೇಳಿದ್ರು. ಆವಾಗ ಅಂದ್ರು-‘ನಂಗೇನೋ ಎದೀನ ಒಡೆದ್ಹಂಗ ಆಗೇದ. ಉಷಿ ಏನೇನೋ ಹುಚ್ಚು ಹುಚ್ಚಾಗಿ ಬಡಬಡಿಸಿದ್ಲು. ರಮೇಶನ ಬಗ್ಗೆ ಕೇಳಿದ್ರ, ಅವನ ಹೆಸರss ಎತ್ತಬ್ಯಾಡಾ ಅಂತಾಳ. ನಾನಂತೂ ಗೋವಾ ಬಿಟ್ಟು ಒನ್ಸ್ ಫಾರ್ ಆಲ್ ಬರ್ಲಿಕ್ಕೆ ಹತ್ತೇನಿ ಅಂದ್ಲು. ನಂಗಂತೂ ಏನೂ ತೋಚವೊಲ್ಲದು’. ಅಮ್ಮಾ ಅದಕ್ಕ ಕೇಳಿದೆ. ಮಾಮಿ ಯಾಕಳ್ತಿದ್ರು? ಒನ್ಸ್ ಫಾರ್ ಆಲ್ ಬರ್ತೇನಿ ಅಂದ್ರೇನು?”
ನಿಧಾನವಾಗಿ ಯೋಚಿಸಲಾರಂಭಿಸಿದೆ. ಚಂಪಾಮಾಮಿಯ ಒಬ್ಬಳೇ ಮಗಳಾದ ಉಷಾ ಬಹಳ ಮುದ್ದಿನಿಂದ ಬೆಳೆದ ಹುಡುಗಿ. ಮದುವೆಯಾಗಿ ಹತ್ತು ವರ್ಷಗಳ ಅನಂತರ ಹುಟ್ಟಿದವಳು. ಮತ್ತೆ ಬೇರೆ ಮಕ್ಕಳೂ ಆಗಿರಲಿಲ್ಲ. ಸಹಜವಾಗಿಯೇ ತಂದೆ-ತಾಯಿ, ಅಜ್ಜಿ-ಅಜ್ಜ ಅವಳಿಗೆ ಯಾವುದಕ್ಕೂ ಇಲ್ಲ ಎನ್ನದೆ ಬೆಳೆಸಿದ್ದರು. ಅಂತೆಯೇ ಡಿಗ್ರಿ ಕೊನೆಯ ವರ್ಷದಲ್ಲಿರುವಾಗಲೇ ಮಧ್ಯಮವರ್ಗದ ರಮೇಶನನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹಠ ಹಿಡಿದಾಗ ಅವಳಿಗೆ ಬಹಳೇ ತಿಳಿಸಿ ಹೇಳಲು ಪ್ರಯತ್ನಿಸಿದರು. ಬ್ಯಾಂಕ್ ನೌಕರನಾದ ರಮೇಶ್ ತುಂಬು ಕುಟುಂಬದಲ್ಲಿ ಬೆಳೆದ ಒಳ್ಳೆಯ ಸ್ವಭಾವದ ಹುಡುಗನಾದರೂ ಉಷಾಳ ಸ್ವಭಾವಕ್ಕೆ ಹೊಂದುವುದು ಕಷ್ಟವೆಂದು ಚಂಪಾಮಾಮಿಗೆ ಅರಿವಿತ್ತು. ಆದರೆ ಅವಳ ಹಠದ ಮುಂದೆ ಯಾರದೂ ನಡೆಯಲಿಲ್ಲ. ಮದುವೆಯ ಅನಂತರ ಗೋವಕ್ಕೆ ವರ್ಗವಾಗಿ ಹೋದಾಗ ಸ್ವತಃ ಚಂಪಾಮಾಮಿಯೇ ಹೋಗಿ ಎಲ್ಲ ಮನೆ ಹೊಂದಿಸಿ ಬಂದಿದ್ದರು. ಸ್ವಾಭಿಮಾನಿಯಾದ ರಮೇಶನಿಗೆ ತಾವು ಉಡುಗೊರೆಯ ನೆವದಲ್ಲಿ ಪದೇ ಪದೇ ಉಷಾಳ ಬೇಡಿಕೆಗಳನ್ನು ಪೂರೈಸುವುದು ಹಿಡಿಸುವುದಿಲ್ಲವೆಂದು ಅರ್ಥವಾಗಿತ್ತು. ಆದರೆ ಉಷಾಳ ಸ್ವಭಾವದ ಅರಿವಿದ್ದ ಅವರು ರಮೇಶನಿಗೆ ಪ್ರಾರಂಭದಲ್ಲಿಯೇ ಆರ್ಥಿಕ ಮುಗ್ಗಟ್ಟಿನಿಂದಾಗಿ ಅವರ ನಡುವೆ ಭಿನ್ನಾಭಿಪ್ರಾಯ ಬರುವುದು ಬೇಡವೆಂದು ಎಲ್ಲ ಪೂರೈಸುತ್ತಿದ್ದರು. ಉಷಾಳಿಗೂ ತಿಳಿ ಹೇಳಿದ್ದರು.
ಒಂದು ವರ್ಷ ಹಾಗೂ -ಹೀಗೂ ಓಡಿತ್ತು. ಇತ್ತೀಚೆಗೆ ಉಷಾ ನೂರು ತಕರಾರುಗಳೊಂದಿಗೆ ಫೋನ್ ಮಾಡುವುದು, ಒಂದೆರಡು ದಿನ ಬಂದು ಮತ್ತೆ ಹಿಂತಿರುಗುವುದು ನಡೆದೇ ಇತ್ತು. ಆದರೆ ದಿಢೀರನೆ ಈ ಬೆಳವಣಿಗೆ ಏನೆಂದು ಅರ್ಥವಾಗಲಿಲ್ಲ. ಚಿನ್ನು ನನ್ನನ್ನು ಅಲುಗಾಡಿಸಿದಾಗ ವಾಸ್ತವಕ್ಕೆ ಬಂದೆ.
“ಅಮ್ಮಾ, ಯಾಕ ಏನೂ ಮಾತಾಡ್ತಿಲ್ಲಾ?”
“ಏನಿಲ್ಲ ಪುಟ್ಟಾ, ಇಲ್ನೋಡು ಉಷಕ್ಕ ಭಾಳಾ ದಿನ ಇಲ್ಲೇ ಇರ್ಲಿಕ್ಕೆ ಬರ್ತಾಳಂತ ಮಾಮಿಗೆ ಸಂತೋಷ ಆಗೇದ. ಮಾಮಿ ಅತ್ತಿಲ್ಲಾ. ಖುಶಿಯಿಂದನೂ ಒಮ್ಮೊಮ್ಮೆ ಕಣ್ಣಾಗ ನೀರು ಬರ್ತಾವ ಹೌದಲ್ಲೋ? ನೀ ನಿನ್ನ ಹುಟ್ಟುಹಬ್ಬದ ದಿನಾ ಹೊಸ ಫ್ರಾಕ್ ಹಾಕಿ ನಂಗ ನಮಸ್ಕಾರ ಮಾಡಿದಾಗ ನಂಗೂ ಕಣ್ಣಾಗ ನೀರೂ ಬರ್ತಾವಲ್ಲಾ ಹಂಗss, ಈಗ ಹೊತ್ತಾಗೇದ ಮಲಕ್ಕೋ…” ಎಂದು ತಟ್ಟಲಾರಂಭಿಸಿದೆ.
ಅಯ್ಯೋ ಎಂದು ಒಮ್ಮೆಲೇ ಎದ್ದು ಕುಳಿತ ಚಿನ್ನು “ನಾ ಗಡಿಬಿಡಿಯೊಳಗ ಡಂ ಡಂ ಪಿಂಕೀನ ಚಂಪಾಮಾಮೀ ಮನ್ಯಾಗ ಬಿಟ್ಟು ಬಂದ್ಬಿಟ್ಟೆ. ಅಮ್ಮಾ, ಬಾ ಹೋಗಿ ಕರ್ಕೊಂಡು ಬರೋಣ” ಎಂದಾಗ ಎದೆ ಧಸಕ್ಕೆಂದಿತು. ನಾನೂ ಗಮನಿಸಿರಲಿಲ್ಲ. ಈಗ ಬಯ್ದು ಮಲಗಿಸಿದರೂ ರಾತ್ರಿ ಮತ್ತೆ ಏಳುವವಳೇ ಅವಳು. ಒಂದು ದಿನವೂ ಅದಿಲ್ಲದೆ ಮಲಗಲಾರಳು. ಏನು ಮಾಡುವುದೆಂದು ತೋಚಲಿಲ್ಲ. ಮನೆಯಲ್ಲಿ ಬೇರೆ ಗೊಂಬೆಗಳಿದ್ದರೂ ಅದೇ ಬೇಕು. ಡಂ ಡಂ ಪಿಂಕಿ ಅವಳೇ ಇಟ್ಟ ಹೆಸರು. ಎರಡು ವರ್ಷದವಳಿರುವಾಗ ಅವಳ ತಂದೆ ತಂದುಕೊಟ್ಟ ಕಟ್ಟಿಗೆಯ ಬೊಂಬೆ ದೊಡ್ಡ ಮೂಗಿನ ಚಿಕ್ಕ ಚಿಕ್ಕ ಕಣ್ಣುಗಳ ಗುಲಾಬಿ ಮುಖದ, ದೊಡ್ಡ ಹೊಟ್ಟೆಯ ಮರದ ಗೊಂಬೆ ಎರಡು ಗಾಲಿಯ ರಥದ ಮೇಲೆ ನಿಂತಿತ್ತು. ಹಗ್ಗದಿಂದ ರಥವನ್ನು ಎಳೆದಾಗ ಗೊಂಬೆಯ ಕೈಗಳು ಅದರ ಮುಂದಿದ್ದ ಡೋಲನ್ನು ಬಡಿದು ಡಂ ಡಂ ಶಬ್ದ ಮಾಡುತ್ತಿತ್ತು. ಅತತ ಅದು ಅವಳೊಂದಿಗಿದ್ದು, ಅದರ ಶಬ್ದ ಚಿನ್ಮಯಿಯ ಬರುವಿನ ಸೂಚನೆಯಾಗಿತ್ತು. ಆ ಡಂ ಡಂ ಪಿಂಕಿ ಅವಳ 24ಗಂಟೆಯ ಸಂಗಾತಿ. ಎಂದೂ ಎಲ್ಲಿಯೂ ಮರೆಯದ ಅವಳು ಇಂದು ಹೇಗೆ ಮರೆತಳೋ ನನಗೂ ಆಶ್ಚರ್ಯ.
ಆದರೆ ರಾತ್ರಿ ಹೋಗಿ ಒಂದು ಗೊಂಬೆಗಾಗಿ ತೊಂದರೆ ಕೊಡುವುದು ಹೇಗೆಂಬ ಉಭಯಸಂಕಟ. ಚಿನ್ನು ಮತ್ತೆ ಕೈ ಜಗ್ಗಿದಳು. ಅಷ್ಟರಲ್ಲಿ ಬಾಗಿಲು ಬಡಿದ ಶಬ್ದವಾಯಿತು. “ಯಾರು?” ಎಂದೆ.
“ನಾನಕ್ಕಾ ಗೌರಿ” ಬಾಗಿಲು ತೆರೆದಾಗ ಚಂಪಾಮಾಮಿಯ ಮನೆ ಕೆಲಸದ ಹುಡುಗಿ ಗೊಂಬೆಯೊಂದಿಗೆ ನಿಂತಿದ್ದಳು. “ಚಿನ್ನೂ ಇದಿಲ್ದ ಮಲಗೂದಿಲ್ಲಂತ ಕೊಟ್ಟು ಬಾ ಅಂದ್ರು ಅವ್ವಾರು” ಎಂದಳು ನಗೆಯೊಡನೆ.
ಸಮಸ್ಯೆ ಪರಿಹಾರ ಮಾಡಿದ ಚಂಪಾಮಾಮಿಯ ಕಾಳಜಿಯಿಂದ ಕಣ್ಣು ಮತ್ತು ಮನಸ್ಸು ಎರಡೂ ತುಂಬಿ ಬಂದವು. ಡಂ ಡಂ ಪಿಂಕಿಯೊಂದಿಗೆ ಹಾಸಿಗೆ ಸೇರಿದ ಚಿನ್ನು ನಿಶ್ಚಿಂತೆಯಿಂದ ನಿದ್ದೆಗೆ ಜಾರಿದಳು. ಆದರೆ ನನ್ನ ನಿದ್ದೆ ದೂರ ಓಡಿ ಮನಸ್ಸು ಕಳೆದ ದಿನಗಳ ನೆನಪನ್ನು ಅರಸಿತ್ತು.
ಅತ್ತ ಶಹರವೂ ಅಲ್ಲದ, ಹಳ್ಳಿಯೂ ಅಲ್ಲದ ರಾಣಿಬೆನ್ನೂರಿನಲ್ಲಿದ್ದ ದಿನಗಳವು. ಪಕ್ಕದ ಮನೆಯಲ್ಲಿದ್ದ ಚಂಪಾಮಾಮಿ ಹಾಗೂ ದಿನೂ ಮಾಮಾರ ಮನೆಯೇ ನನಗೆ ಹೆಚ್ಚು ಪ್ರಿಯವಾಗಿತ್ತು. ಅಪ್ಪನ ಸಣ್ಣ ನೌಕರಿ, ಮೂರೂ ಹೆಣ್ಣುಮಕ್ಕಳೆಂಬ ಅಸಮಾಧಾನಗಳ ನಡುವೆ ಅವ್ವ ನಕ್ಕಿದ್ದೇ ಅಪರೂಪ. ಮಾಸದ ಮುಗುಳ್ನಗೆಯ, ನಕ್ಷತ್ರದಂಥ ಕಣ್ಣುಗಳ ಮಮತೆಯ ರೂಪದಂತಿದ್ದ ಚಂಪಾಮಾಮಿಯ ಸ್ನೇಹ ಅಪ್ಯಾಯಮಾನವಾಗಿತ್ತು. ಅವರ ಪ್ರೋತ್ಸಾಹದಿಂದ ಕಣ್ಣುಗಳಲ್ಲಿ ಕನಸುಗಳು ಜನ್ಮ ತಾಳುತ್ತಿದ್ದವು.
ಒಂದು ದಿನ ಕಾಲೇಜಿನಿಂದ ಬಂದಾಗ ಅವ್ವನ ನಗುಮುಖ ನೋಡಿ ಅಚ್ಚರಿಯಾಗಿತ್ತು. ಆದರೆ ಕಾರಣ ತಿಳಿದಾಗ ಅತ್ತುಬಿಟ್ಟೆ. ಯಾವುದೋ ಮದುವೆಯಲ್ಲಿ ನನ್ನನ್ನು ನೋಡಿದ ದೂರದ ಸಂಬಂಧಿಯೊಬ್ಬರು ತಮ್ಮ ಮಗನಿಗೆ ತಂದುಕೊಳ್ಳಬಯಸಿದ್ದರು. ಯಾವ ವಿರೋಧಕ್ಕೂ ಜಗ್ಗದೇ ಅವ್ವ ತನ್ನ ಮಕ್ಕಳ ಪೈಕಿ ಒಬ್ಬಳ ಜವಾಬ್ದಾರಿ ಕಳೆದುಕೊಂಡರು. ತಾಯಿಯ ಕೈಗೊಂಬೆಯಾದ ಪತಿಯೊಂದಿಗೆ ಐದು ವರ್ಷಗಳು ಕಳೆದವು.
ಚಿನ್ಮಯಿಯ ಹುಟ್ಟಿನೊಂದಿಗೆ ತನ್ನ ಭಾವನೆಗಳೂ ಸ್ವಲ್ಪ ಜೀವ ತಳೆಯುತ್ತಿರುವಂತೆಯೇ ಮತ್ತೆ ಮುರುಟಿಹೋದವು. ಅದೇ ಡಂ ಡಂ ಪಿಂಕಿಯೊಂದಿಗೆ ಆಡುತ್ತಿದ್ದ ಚಿನ್ಮಯಿಯೊಂದಿಗೆ ಕುಳಿತು ಪತಿಯ ದಾರಿ ಕಾಯುತ್ತಿದ್ದವಳಿಗೆ ಬಂದುದು ಅಪಘಾತದಲ್ಲಿ ಪತಿ ತೀರಿದ ಸುದ್ದಿ.
ಪತಿಯ ನೌಕರಿ ದೊರಕಿ ಮತ್ತೆ ಯಾಂತ್ರಿಕ ಜೀವನ ಪ್ರಾರಂಭವಾಗಿತ್ತು. ಬಸ್ ನಲ್ಲಿ ಒಂದು ದಿನ ಮತ್ತೆ ಚಂಪಾಮಾಮಿ ಸಿಕ್ಕಿ ಮನೆಗೆ ಕರೆದೊಯ್ದರು. ಅಪರಿಚಿತ ಹುಬ್ಬಳ್ಳಿಯಲ್ಲಿ ತಮ್ಮ ಮನೆಯ ಹತ್ತಿರವೇ ಪುಟ್ಟ ಮನೆ ಕೊಡಿಸಿದ್ದಲ್ಲದೇ ತನ್ನ ಗೈರು ಹಾಜರಿಯಲ್ಲಿ ಚಿನ್ನುವನ್ನೂ ನೋಡಿಕೊಂಡರು. ದೈಹಿಕವಾಗಿ, ಮಾನಸಿಕವಾಗಿ ಚಿನ್ನು ಸುಧಾರಿಸಿದ ರೀತಿ ನೋಡಿ ಇದು ಯಾವ ಜನ್ಮದ ಮೈತ್ರಿಯೋ ಎನಿಸಿತ್ತು.
ಮರುದಿನ ಚಂಪಾಮಾಮಿಯ ಮನಃಸ್ಥಿತಿ ಹೇಗಿದೆಯೋ ಚಿನ್ನುವನ್ನು ಅಲ್ಲಿ ಬಿಡುವುದು ಬೇಡವೆಂದು ನಿರ್ಧರಿಸಿದೆ. ರಜೆ ಹಾಕಿ ಮನೆಯಲ್ಲಿದ್ದೆ. ಆದರೆ ಉಷಾಳೇ ಬಂದು ಅವಳನ್ನು ಕರೆದೊಯ್ದಳು. ಅವರು ಹೋದ ಅನಂತರವೂ ‘ಛೇ, ಗೋವಾ ಜೀವನ ಬ್ಯಾಸರಾತು. ನಾ ಇಲ್ಲೆ ಏನರ ನೌಕರಿ ಮಾಡ್ತೇನಿ’ ಎಂದ ಉಷಾಳ ಮಾತೇ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಅವಳಿಗೆ ಸದ್ಬುದ್ಧಿ ಕೊಡುವಂತೆ ದೇವರಲ್ಲಿ ಬೇಡಿದೆ.
ದಿನಗಳು ಸರಿದು ತಿಂಗಳಾಯಿತು. ಉಷಾ ಮೊದಲಿನ ಉತ್ಸಾಹವಿಲ್ಲದೇ ಏನೋ ಕಳೆದುಕೊಂಡವಳಂತೆ ಇರುತ್ತಿದ್ದಳು. ಅಂದು ಸಂಜೆ ಉಷಾಳೊಂದಿಗೆ ಹಿಂತಿರುಗಿದ ಚಿನ್ನುವಿನ ಕೈಯಲ್ಲಿ ಮತ್ತೊಂದು ಹೊಸ ಗೊಂಬೆ, ಸುಮಾರು ಸಾವಿರ ರೂಪಾಯಿ ಬೆಲೆಬಾಳುವ ಹಾಡು ಹೇಳುವ ಗೊಂಬೆ. ಇಷ್ಟೊಂದು ದುಬಾರಿಯ ಗೊಂಬೆ ಯಾಕೆಂದು ಕೇಳುತ್ತಿದ್ದ ನನ್ನ ಮಾತಿಗೆ ಲಕ್ಷ್ಯವೇ ಕೊಡದೇ ಹೊರಟೇಹೋದಳು.
ಎಂದಿನಂತೆ ಚಿನ್ನುವಿಗೆ ಊಟ ಮಾಡಿಸಿ ಮಲಗಿಸಲು ಹೊರಟೆ. ಒಮ್ಮೆಲೇ ಗಾಬರಿಯಾದವಳಂತೆ ಎದ್ದು ಕುಳಿತಳು. “ಅಮ್ಮಾ, ಡಂಡಂ ಪಿಂಕೀ”. ನನಗೂ ಆಯಾಸವಾಗಿತ್ತು. “ಚಿನ್ನೂ, ಚಂಪಾಮಾಮಿ ಮನ್ಯಾಗ ಮಲಗಿರ್ತಾಳ ಬಿಡು, ನಾಳೆ ಕರಕೊಂಡು ಬರೋಣ” ಎಂದೆ.
“ಇಲ್ಲಮ್ಮಾ, ಉಷಕ್ಕನ ಜತೆ ಸುಮಾ ಆಂಟಿ ಕಾರಿನ್ಯಾಗ ಪ್ಯಾಟಿಗೆ ಹೋಗಿದ್ವಿ, ಅವ್ರ ಕಾರಿನ್ಯಾಗ ಮಲಗಿಸಿದ್ದೆ” ಅಳಲು ಪ್ರಾರಂಭಿಸಿದಳು. ನನ್ನ ತಲೆ ಚಿಟ್ಟಾಗಿತ್ತು. ಅವಳ ಅಳು ನೋಡಿ ಸಹನೆ ತಂದುಕೊಂಡೆ.
“ಚಿನ್ನೂ, ಇವತ್ತ ಈ ಹೊಸ ಗೊಂಬವ್ವ ಇದ್ದಾಳಲ್ಲಾ, ಇಕಿನ್ನ ಮಲಗಿಸಿಕೋ. ಇಕೀ ಹೆಸರು ಏನು ಇಟ್ಟಿದೀ ನಂಗ ಗೊತ್ತೆ ಇಲ್ಲಾ”. ನನ್ನ ಮಾತಿನ ಕಡೆ ಅವಳ ಲಕ್ಷ್ಯವೇ ಇಲ್ಲ. ಬರೀ ಅಳು. ನನಗೋ ಸಿಟ್ಟು ಏರುತ್ತಿತ್ತು. ಕೊನೆಗೆ ಮಾಮಿ ಮನೆಗೆ ಹೊರಟು ನಿಂತೆವು. ಮನೆಯ ಕೀಲಿ ಹಾಕುತ್ತಿರುವಾಗ “ಅಮ್ಮಾ, ತಡೀ” ಎಂದವಳೇ ಒಳಗೆ ಓಡಿ ಹೋಗಿ ಹೊಸ ಗೊಂಬೆ ಎತ್ತಿ ತಂದಳು. “ಇದ್ಯಾಕ?” ಎಂದರೆ ಉತ್ತರಿಸಲಿಲ್ಲ. ಮುಖ ಅತ್ತು ಸೊರಗಿತ್ತು.
ರಾತ್ರಿ ಹತ್ತುಗಂಟೆಗೆ ಮತ್ತೊಬ್ಬರ ಮನೆಗೆ ಹೋಗಿ ತೊಂದರೆ ಕೊಡಲು ಸಂಕೋಚವೆನಿಸುತ್ತಿದ್ದರೂ ಅಸಹಾಯಕಳಾಗಿದ್ದೆ.
ನಮ್ಮನ್ನು ಕಂಡು ಚಂಪಾಮಾಮಿ, ಉಷಾ ಎದ್ದು ಬಂದರು. ಸಂಕೋಚದಿಂದಲೇ ನಾನು ಗೊಂಬೆಯ ಬಗೆಗೆ ಹೇಳಿದೆ. ಚಿನ್ನುವಿನ ಹಠದ ಅರಿವಿದ್ದ ಚಂಪಾಮಾಮಿ ಉಷಾಳಿಗೆ ಸುಮಾನ ಮನೆಗೆ ಫೋನ್ ಮಾಡಲು ಹೇಳಿದರು. ಅವಳಿಗೆ ಹಿಡಿಸಲಿಲ್ಲ. ಕೇವಲ ಒಂದು ಹಳೆಯ ಗೊಂಬೆಗಾಗಿ ಫೋನ್ ಮಾಡಿದರೆ ಅವರು ತಪ್ಪು ತಿಳಿಯಬಹುದೆಂದು ಅವಳ ವಾದ. ಕೊನೆಗೆ ಮಾಮಿಯ ಒತ್ತಾಯಕ್ಕೆ ಮಾಡಿದಳು.
ಫೋನ್ ಇಟ್ಟಾಗ ಅವಳ ಮುಖದಲ್ಲಿ ಗೊಂದಲ ಹಾಗೂ ಬೇಸರವಿತ್ತು. “ಅಕ್ಕಾ, ಅವರ ಡ್ರೈವರ್ ಸೋಮಯ್ಯ ತನ್ನ ಮಗಳಿಗೆ ತಗೊಂಡು ಹೋದ್ನಂತ, ಹೆಂಗೂ ಹಳೆಯದಲ್ಲಾ ಅಂತ ಅವರು ಕೊಟ್ಟು ಬಿಟ್ಟಾರ” ಉಷಾ ಚಿನ್ನುವನ್ನು ತಾನೇ ರಮಿಸಲು ನೋಡಿದಳು. ಚಿನ್ನುವಿಗೆ ವಿಷಯ ಅರ್ಥವಾಗಿ ಮತ್ತೆ ಅಳು ಪ್ರಾರಂಭವಾಗಿತ್ತು. ತನ್ನ ಹೊಸ ಗೊಂಬೆಯನ್ನು ಉಷಾಳೆಡೆಗೆ ಚಾಚಿದಳು.
“ಅಕ್ಕಾ, ನಂಗ ನನ್ನ ಡಂ ಡಂ ಪಿಂಕೀನ ವಾಪಸ್ಸು ಕೊಡಿಸು. ಆಕೀನೂ ನಾ ಇಲ್ಲಾಂತ ಅಳ್ತಿರ್ತಾಳ. ಈ ಹೊಸ ಗೊಂಬೀ ಬೇಕಾದ್ರ ಸೋಮಯ್ಯನ ಪಾಪೂಗ ಕೊಡು… ನನ್ನ ಡಂ ಡಂ ಪಿಂಕಿ…” ಧ್ವನಿ ಗದ್ಗದಿತವಾಗಿತ್ತು. ಚಂಪಾಮಾಮಿ ಮರುದಿನ ಬೆಳಗಾಗುತ್ತಲೇ ತಾವೇ ಹೋಗಿ ಡಂ ಡಂ ಪಿಂಕಿಯನ್ನು ಕರೆತರುವುದಾಗಿ ಹೇಳಿದ ಮೇಲೆ ಅಳುತ್ತಲೇ ನಿದ್ದೆ ಹೋದಳು. ನನಗೆ ಇತರರಿಗೆ ಉಂಟಾದ ತೊಂದರೆಯಿಂದ ಸಂಕೋಚವೆನಿಸುತ್ತಿದ್ದರೂ ಚಿನ್ನುವಿನ ಭಾವನೆಗಳು ಅರ್ಥವಾಗುತ್ತಿದ್ದವು.
ಮರುದಿನ ಚಂಪಾಮಾಮಿ ಸ್ವತಃ ತಾವೇ ಚಿನ್ನುವಿನೊಂದಿಗೆ ಡ್ರೈವರ್ ಸೋಮಯ್ಯನ ಮನೆಗೆ ಹೋದರು ಮತ್ತೊಂದು ಹೊಸ ಗೊಂಬೆಯೊಂದಿಗೆ. ಅಂತೂ ಡಂ ಡಂ ಪಿಂಕಿಯೊಂದಿಗೆ ಮನೆಗೆ ಬಂದ ಚಿನ್ನುವಿನ ಮುಖದಲ್ಲಿ ವಿಜಯೋತ್ಸಾಹ ಮಿಂಚುತ್ತಿತ್ತು. ಅನಂತರವೇ ಅವಳು ಹಾಲು ಕುಡಿದದ್ದು.
ಅವ್ವನ ಅನಾರೋಗ್ಯದ ಬಗೆಗೆ ಫೋನ್ ಬಂದಿದ್ದರಿಂದ ಎರಡು ದಿನ ರಜೆ ಹಾಕಿ ಊರಿಗೆ ಹೋದೆವು. ಹಿಂತಿರುಗಿ ಬರುತ್ತಲೇ ಚಂಪಾಮಾಮಿ ಮನೆಗೆ ಓಡಿದಳು ಚಿನ್ನು.
ಅರ್ಧಗಂಟೆಯಲ್ಲಿ ಹಿಂತಿರುಗಿದವಳ ಕೈಯಲ್ಲಿ ಚಾಕಲೇಟು ಮತ್ತು ಒಂದು ಕವರು. ಅದನ್ನು ನನಗಿತ್ತಳು-“ಉಷಕ್ಕ ಗೋವಾಕ್ಕೆ ವಾಪಸ್ಸು ಹೋದ್ಲಂತ, ನಿಂಗ ಒಂದು ಪತ್ರ ಕೊಟ್ಟಾಳ…” ಕುತೂಹಲದಿಂದ ತೆಗೆದೆ.
ಪ್ರೀತಿಯ ಅಕ್ಕ,
ನಿನ್ನನ್ನು ಭೇಟಿ ಆಗದೆಯೇ ಗಡಿಬಿಡಿಯಲ್ಲಿ ಹೊರಟು ಬಂದೆ. ಕ್ಷಮಿಸು. ಮುಂದಿನ ತಿಂಗಳು ರಮೇಶನೊಂದಿಗೆ ಬಂದಾಗ ಖಂಡಿತ ಭೇಟಿಯಾಗುತ್ತೇವೆ.
ಇನ್ನು ನಾನು ಚಿನ್ನುವಿನ ಹಠದಿಂದ ಬೇಸರಗೊಂಡೆನೆಂದುಕೊಂಡೆಯೇನೋ, ನಿಜ ಹೇಳಬೇಕೆಂದರೆ ಆ ಕ್ಷಣಕ್ಕೆ ಬೇಸರವಾಗಿದ್ದು ನಿಜ. ಆದರೆ ಕ್ರಮೇಣ ವಿಚಾರ ಮಾಡಿದಂತೆಲ್ಲ ಚಿನ್ನು ನನಗೆ ಒಂದು ದೊಡ್ಡ ಪಾಠವನ್ನು ನನಗರಿವಿಲ್ಲದೆಯೇ ಕಲಿಸಿದಂತೆನಿಸಿತು. ನಾನು ಅವಳನ್ನು ಕೇಳಿದ್ದೆ-“ಚಿನ್ನು ನಿಂಗ ಇಷ್ಟು ಛಲೋ ಗೊಂಬಿ ಕೊಡಿಸಿದ್ರೂ ಆ ಹಳೇ ಗೊಂಬೀ ಸಲುವಾಗಿ ಇಷ್ಟು ಹಠ ಮಾಡಿದ್ದು ಸರೀನಾ?” ಅಂತ. ನನ್ನ ದ್ರಷ್ಟಿಯಲ್ಲಿ ಅದು ಬಣ್ಣಗೆಟ್ಟ ಹಳೆ ಗೊಂಬೆಯಾಗಿತ್ತು. ಆಗ ಚಿನ್ನೂ ಹೇಳಿದ್ದಳು.
“ಇಲ್ಲಾ ಉಷಕ್ಕ, ಇಕೀ ನನ್ನ ಡಂ ಡಂ ಪಿಂಕೀ, ಇಕೀನ ಎಷ್ಟು ಛಲೋ ಇದ್ದಾಳ” ಎಂದು ಅದನ್ನು ಅಪ್ಪಿ ಮುತ್ತಿಟ್ಟಳು. ನನಗೆ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ಸಾವಿರ ರೂಪಾಯಿಯ ಗೊಂಬೆಯಲ್ಲಿ ಕಾಣದ ಗುಣಗಳು ಅವಳಿಗೆ ಆ ಹಳೆ ಗೊಂಬೆಯಲ್ಲಿ ಕಂಡಿದ್ದವು. ಕಾರಣ, ಅವಳಿಗೆ ಅದು ತನ್ನದೆನ್ನುವ ಅಭಿಮಾನ. ನಾನು ರಮೇಶನಲ್ಲಿ ಕಾಣುವ ಕೊರತೆಗಳ ಮೂಲ ಯಾವುದೆಂದು ಅರ್ಥವಾಯಿತು. ಕೊರತೆ, ನನ್ನ ದೃಷ್ಟಿಯಲ್ಲಿಯ ಅಭಿಮಾನದ ಕೊರತೆ, ಕೊರತೆ ಅವನಲ್ಲಿಲ್ಲ. ಅಪ್ಪ-ಅಮ್ಮ ತಿಂಗಳಿನಿಂದ ನನಗೆ ಮನಗಾಣಿಸಲು ಪ್ರಯತ್ನಿಸುತ್ತಿದ್ದುದು, ಆ ಪೋರಿ ಕ್ಷಣದಲ್ಲಿ ನನಗೆ ತೋರಿಸಿಕೊಟ್ಟಳು. ಅವಳಿಗೆ ನನ್ನ ಸವಿಮುತ್ತಿನೊಡನೆ ಧನ್ಯವಾದಗಳು ಸಹ.
ಇಂತೀ ನಿನ್ನ ಉಷಾ
ಕವರು ಮಡಚಿ ಚಿನ್ನುವಿನತ್ತ ನೋಡಿದೆ. ತನ್ನ ಡಂ ಡಂ ಪಿಂಕಿಯನ್ನು ಅಪ್ಪಿ ಹಿಡಿದು ಮಾತನಾಡುತ್ತ ಚಾಕಲೇಟು ತಿನ್ನುತ್ತಿದ್ದಳು. ಅವಳನ್ನು ಮತ್ತು ಡಂ ಡಂ ಪಿಂಕಿಯನ್ನು ಎತ್ತಿ ಮುದ್ದಿಸಿದೆ. ಅತೀವ ಹರ್ಷದಿಂದ ನಕ್ಕಳು ಚಿನ್ನು.

Leave a Reply