“ಚಿಟ್ಟೆ ಮತ್ತು ಹೂವಿನ ಹುಡುಗಿ”

“ಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವಕಾಕಡ ಹೂವಕನಕಾಂಬರದ ಹೂವಸ್ಯಾವಂತಿಗೆ ಹೂವ….ಕೊರೆಯ ಕಾಲದಲ್ಲಿ ಬೀಳುವ ದಟ್ಟ ಮಂಜಿಗೆ ಓಣಿಯ ಹಾದಿ ಮಸುಕಾಗಿತ್ತು. ಇನ್ನೂ ಹತ್ತು ವರ್ಷ ಎಟುಕದ ಹೂ ಮಾರುವ ಹುಡುಗಿ ಬಾಲನಾಗಮ್ಮ, ತನ್ನ ಸೊಂಟದ ಮೇಲೆ ಕುಕ್ಕೆಯನ್ನಿಟ್ಟುಕೊಂಡು, ಸರಳ ಮತ್ತು ಹೊಳಪಾದ ಶಬ್ದಗಳಿಂದ ಹೆಣೆದ ಹಾಗೂ ಎಲ್ಲ ಕೇರಿಗಳ ಕಿವಿಗಳಿಗೂ ಚಿರಪರಿಚಿತವೇ ಆಗಿದ್ದ ಹೂವಿನ ಹಾಡನ್ನು ಪುನರಾವರ್ತಿಸುತ್ತಾ ಓಣಿಗಳನ್ನು ಬರಿಗಾಲಲ್ಲಿ ಸುತ್ತುತ್ತಿದ್ದಳು. ಬಾಲನಾಗಮ್ಮನ ಬಿಸಿಯುಸಿರಿನಿಂದ ಆಕಾರ ಪಡೆದು ಹೊರಬಂದ ಈ ಹಾಡು, ಮಂಜು ಸುರಿದು ಮಸುಕಾಗಿದ್ದ ಓಣಿಯ ಕಣ್ಣುಗಳನ್ನು ಒರೆಸುತ್ತಾ ಸಾಗುತ್ತಿತ್ತು.ಕಾಕಡ ಮತ್ತು ಪಟಿಕದ ಹೂಕುಚ್ಚುಗಳೆಲ್ಲಾ ಬಾಲನಾಗಮ್ಮನ ಕುಕ್ಕೆಯಲ್ಲಿ ಇಂದು ಹಾಗೆ ಉಳಿದಿದ್ದವು. ದಿನವೂ ಈ ಹೊತ್ತಿಗೆಲ್ಲಾ ಹೂ ಮಾರಿಕೊಂಡು ತನ್ನ ಅಜ್ಜಿ ರಂಗವ್ವನಿಗೆ ಅಂದಿನ ವ್ಯಾಪಾರದ ಲೆಕ್ಕ ಚುಕ್ತ ಮಾಡುತ್ತಿದ್ದಳು. ‘ಇಂದ್ಯಾಕೊ ಎದ್ದ ಗಳಿಗೆ ಸರಿಯಿಲ್ಲ! ಹಾಳಾದ್ದು ಹೂವೆಲ್ಲ ಅಂಗೆ ಉಳಿದೈತೆ’ ಎಂದು ಬಾಲನಾಗಮ್ಮ ತನಗೆ ತಾನೆ ಅಂದುಕೊಂಡಳು. ಬೆಳಗಿನ ಸೂರ್ಯಕಾಂತಿಗೆ ಕುಕ್ಕೆಯಲ್ಲಿದ್ದ ಹೂಕುಚ್ಚುಗಳು ಬಾಡಿದರೂ; ಅವಳ ಮುಖ ಮಾತ್ರ ಬಾಡದೆ ಮುಂಜಾನೆಯ ಪ್ರಾರ್ಥನೆಯಂತೆ ಪರಿಮಳಿಸುತ್ತಿತ್ತು.ಬಾಲನಾಗಮ್ಮನಿಗೂ ಒಂದು ಸುಂದರ ಬಾಲ್ಯವಿತ್ತು. ಉತ್ತರೆ ಮಳೆ ಹೊಯ್ದ ಮುಂಜಾನೆ ಕಲ್ಲುಬಾವಿಯ ಮುಂದಿದ್ದ ಹಿಪ್ಪೆ ತೋಪಿನ ವಿಶಾಲ ಬಯಲಲ್ಲಿ ಕುಂಕುಮ ಚೆಲ್ಲಿದಂತೆ ಹರಿದಾಡುತ್ತಿದ್ದ ಕೆಂಪಗಿದ್ದ ರೇಷ್ಮೆ ಹುಳುಗಳನ್ನು ಆಯ್ದು ಬೆಂಕಿಪೊಟ್ಟಣವೊಂದರಲ್ಲಿ ಇಟ್ಟುಕೊಂಡು, ಸ್ಕೂಲಿಗೆ ತೆಗೆದುಕೊಂಡು ಹೋಗಿ, ಗಳಿಗೆಗೊಂದು ಸಲ ತೆಗೆದುನೋಡುವ ಕುತೂಹಲ ತುಂಬಿದ ದಿನಗಳಿದ್ದವು. ಇದೇ ಬಯಲಿನ ತುದಿಗಿದ್ದ ಮಾತಂಗಮ್ಮನ ಗುಡಿಯ ಮುಂದೆ, ಗೂಡಿನ ಸುತ್ತಲೂ ಹುಡಿಮಣ್ಣಿನ ದಿಬ್ಬವನ್ನು ಕಟ್ಟಿಕೊಂಡು ಅಲ್ಲಿಂದ ಇಲ್ಲಿಗೆ; ಇಲ್ಲಿಂದ ಅಲ್ಲಿಗೆ ಹರಿದಾಡುವ ಕಪ್ಪು ಇರುವೆಗಳನ್ನು ಕಣ್ಣಿನಲ್ಲೇ ಎಣಿಸುವುದು. ಜೀರಿಂಬೆಯ ಕಾಲನ್ನು ದಾರದಿಂದ ಕಟ್ಟಿ ಅದು ಅಲ್ಲಿಯೇ ಗುಂಯ್ಯ…. ಎಂದು ಭೂಮಿಯ ಸುತ್ತಲೂ ತಿರುಗುವಂತೆ ತನ್ನ ಸುತ್ತಲೂ ಹಾರಾಡುವುದನ್ನು ನೋಡುತ್ತಾ ಕಣ್ಣಿನೊಳಗೆ ಅದನ್ನು ಹಾಗೇ ಉಳಿಸಿಕೊಳ್ಳುತ್ತಿದ್ದಳು. ಸೂರ್ಯ ಕಣ್ಣುತೆರೆಯುವ ಮೊದಲೇ ಎದ್ದು, ಕಲ್ಲುಬಾವಿಯ ಎದುರಿಗಿದ್ದ ರಂಗನಾಥಸ್ವಾಮಿಯ ಗುಡಿಯ ಒತ್ತಿನಲ್ಲಿದ್ದ ಪಾರಿಜಾತದ ಗಿಡದಿಂದ ಉದುರಿದ ಹೂಗಳನ್ನು ನಲುಗದಂತೆ ಆಯ್ದು, ಜೋಪಾನವಾಗಿಟ್ಟುಕೊಂಡು ಸ್ಕೂಲಿನಲ್ಲಿದ್ದ ಗಾಂಧಿ ಮಹಾತ್ಮನ ಫೋಟೋಗೆ ಹಾಕುವುದನ್ನು ಬತದಂತೆ ಬಾಲನಾಗಮ್ಮ ಮಾಡುತ್ತಿದ್ದಳು. ಸ್ಕೂಲಿನ ಪಕ್ಕದ ಕಾಲುವೆಯಲ್ಲಿದ್ದ ಕೆಂಪುಮರಳಲ್ಲಿ ವಾರಿಗೆಯವರೊಂದಿಗೆ ಆಡುತ್ತಿದ್ದ ಕಪ್ಪೆಚಿಪ್ಪಿನ ಆಟ, ಉಪ್ಪುಪ್ಪುಕಡ್ಡಿಯಾಟ, ಆವಿನಕಲ್ಲಿನ ಆಟ, ಹೀಗೆ ಗುಂಪಿನೊಂದಿಗೆ ಆಟವಾಡುತ್ತಾ ಮೈಮರೆಯುವ ಉಲ್ಲಸಿತ ಎಳವೆಯ ಕ್ಷಣಗಳೂ ಅವಳ ಪಾಲಿಗೆ ಇದ್ದವು. ಇವುಗಳ ಜೊತೆಗೆ ರತ್ನ ಮೇಡಂ ಹೇಳಿದ ಮಹಾತ್ಮ ಗಾಂಧೀಜಿ ಪಾಠವೂ ಅವಳ ಮನಸ್ಸಿನೊಳಗೆ ಬೇರುಬಿಟ್ಟಿತ್ತು. ಗಾಂಧಿಯಂತೆಯೇ ತೆಳುವಾಗಿ, ಸರಳವಾಗಿದ್ದ ನಡೆ-ನುಡಿ, ಯಾರಿಂದಲೂ ಹೇಳಿಸಿಕೊಳ್ಳದೆ ಕೇರಿಯವರ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ನನ್ನ ಅಜ್ಜಿಯೂ ಥೇಟ್ ಗಾಂಧೀಯಮ್ಮನೇ ಎಂದು ಅವಳಿಗೆ ಅನೇಕಸಲ ಅನಿಸಿತ್ತು.ಬಾಲನಾಗಮ್ಮನಿಗೆ ತಿಳಿವು ಬರುವ ಮೊದಲೇ, ಅವಳ ಅಪ್ಪ ಬಾಲಯ್ಯ ದೈವಾಧೀನನಾಗಿದ್ದ. ಆ ನಂತರ ಕೆಲವೇ ದಿನಗಳಲ್ಲಿ ತಾಯಿ ಮುದ್ದುನಾಗಮ್ಮನೂ ತೀರಿಕೊಂಡ ಮೇಲೆ, ತನ್ನ ಅಜ್ಜಿಯ ಸೌಕರಣೆಗಾಗಿ ಬಾಲನಾಗಮ್ಮನು ಸ್ಕೂಲಿಗೆ ಎಳ್ಳುನೀರು ಬಿಟ್ಟು, ದಿನವೂ ಹೂ ಮಾರುವ ದುಡಿಮೆಗೆ ಯತ್ನವಿಲ್ಲದೆ ಹೋಗಬೇಕಾಯಿತು. ಹೀಗೆ ಬಾಲ್ಯವೇ ಅವಳನ್ನು ಕಳೆದುಕೊಂಡಿತು. ಮುಟ್ಟಿದರೆ ಜೀವವಾಡುವ ಆ ಹಸಿ ನೆನಪುಗಳು ಅವಳನ್ನು ಬಿಟ್ಟು ತೊರೆದಿರಲಿಲ್ಲ. ಒಮ್ಮೊಮ್ಮೆ ಬಾಲನಾಗಮ್ಮ ಹೂವಿನ ಮಂಕರಿ ಹೊತ್ತು ಬರುವಾಗ ಅರಳಿಕಟ್ಟೆ ಮುಂದಿರುವ ಸ್ಕೂಲಿನ ಮುಂದೆ ಒಂದು ಕ್ಷಣ ನಿಂತು ಸ್ಕೂಲಿನತ್ತ ಮುಖಮಾಡಿ ನೋಡುವಳು. ಕೂಡಲೆ ಅವಳ ದೇಹ ಹತ್ತಾರು ಬಣ್ಣಗಳನ್ನು ಹೊದ್ದ ಚಿಟ್ಟೆಯಾಗಿ ರೂಪಾಂತರಗೊಳ್ಳುತ್ತಿತ್ತು. ಆ ಚಿಟ್ಟೆಯು ಅಂಚಿಲ್ಲದ ಆಕಾಶದ ಕೆಳಗೆ ಹಾರುತ್ತಾ ಹಾರುತ್ತಾ ಸ್ಕೂಲಿನ ಆವರಣದಲ್ಲಿದ್ದ ಹೂಗಿಡಗಳ ಮೇಲೆಲ್ಲಾ ಕುಳಿತುಕೊಳ್ಳುತ್ತಿತ್ತು. ಗಿಡದಿಂದ ಗಿಡಕ್ಕೆ ಹಾರುತ್ತಾ, ತರಗತಿಯಲ್ಲಿ ಅವಳು ಕುಳಿತುಕೊಳ್ಳುತ್ತಿದ್ದ ಬೆಂಚಿನಮೇಲೆ, ಸ್ಲೇಟು ಬಳಪದ ಸುತ್ತಲು ಸುತ್ತುತ್ತಿತ್ತು. ಅಲ್ಲಿಂದ ಪಾರಿಜಾತದ ಗಿಡದ ಮೇಲೆ, ತೋಪಿನಲ್ಲಿದ್ದ ಹಿಪ್ಪೆ ಹೂವಿನ ಮೇಲೆ, ಇರುವೆ ಗೂಡಿನ ಮೇಲೆ, ದಿನವೂ ಆಡುತ್ತಿದ್ದ ಮರಳು ರಾಶಿಯಮೇಲೆ ಚಿಟ್ಟೆ ಹಾರುತ್ತಾ ಹಾರುತ್ತಾ ಮತ್ತೆ ಅರಳಿಕಟ್ಟೆ ಮೇಲೆ ಬಳಲಿ ಕೂಳಿತ್ತಿದ್ದ ತನ್ನ ಹೂವಿನ ಮಂಕರಿಯ ಬಳಿಗೆ ಬಂದು, ತನ್ನೆರೆಡು ಪುಟ್ಟ ರೆಕ್ಕೆಗಳಲ್ಲಿದ್ದ ಬಣ್ಣಗಳನ್ನು ಸುತ್ತಲೂ ಎರಚುತ್ತಾ ನಿಲ್ಲುತ್ತಿತ್ತು. ಅವಳು ಚಿಟ್ಟೆಯಾಗುವುದನ್ನು ನೋಡಿ ಕಣ್‍ತುಂಬಿಕೊಳ್ಳದೆ ಸೂರ್ಯ ಮುಂದಕ್ಕೆ ಚಲಿಸುತ್ತಿರಲಿಲ್ಲ! ಹೀಗೆ ದಿನಕ್ಕೊಂದು ಗಳಿಗೆ ಚಿಟ್ಟೆಯಾಗಿ ಬಣ್ಣಗಳ ಕಡಲಿನಲ್ಲಿ ಮುಳುಗೇಳುತ್ತಾ ಬದುಕುವುದೇ ಅವಳಿಗೆ ರೂಢಿಯಾಯಿತು.ರತ್ನ ಮೇಡಂ ಪರಿ ಪರಿಯಾಗಿ ಹೇಳಿದರೂ ರಂಗವ್ವ ತನ್ನ ಮೊಮ್ಮಗಳನ್ನು ಸ್ಕೂಲಿಗೆ ಕಳುಹಿಸಲು ಸುತರಾಂ ಒಪ್ಪಲಿಲ್ಲ! ರಂಗವ್ವ ಸಿಕ್ಕಿದಾಗಲೆಲ್ಲಾ ಬಾಲನಾಗಮ್ಮನನ್ನು ಸ್ಕೂಲಿಗೆ ಕಳುಹಿಸುವಂತೆ ಮೇಡಂ ಜುಲುಮೆ ಮಾಡುತ್ತಿದ್ದರು. ಬೇಕಿದ್ದರೆ, ಅವಳ ಓದಿನ ಖರ್ಚನ್ನು ನಾನೇ ವಹಿಸಿಕೊಳ್ಳುವುದಾಗಿಯೂ ಹೇಳಿದರು. ಆದರೂ ರಂಗವ್ವ ಮೊಮ್ಮಗಳ ಓದಿನತ್ತ ಗಮನ ಹರಿಸಿರಲಿಲ್ಲ.ಬಾಲನಾಗಮ್ಮನ ಅಜ್ಜಿ ರಂಗವ್ವ ಪತ್ತಿನ ಮಾಸ್ತಯ್ಯನನ್ನು ಮದುವೆಯಾದ ಏಳನೆ ವರ್ಷಕ್ಕೆ ಗಂಡನನ್ನು ಕಳೆದುಕೊಂಡು ವಿಧವೆಯಾದ ನತದೃಷ್ಟ ಹೆಣ್ಣು. ಆಗ ಊರಿನ ಗ್ರಾಮಪಂಚಾಯಿತಿ ಚುನಾವಣೆಯ ಸಮಯ. ಒಂದು ದಿನ ಮಾಸ್ತಯ್ಯ ಊರಿನ ಒಂದು ಪಾರ್ಟಿಯವರು ಕೊಟ್ಟ ಹೆಂಡವನ್ನು ಮೋಪಾಗಿ ಕಂಠಮಟ್ಟ ಕುಡಿದು ಅರಗಿಸಿಕೊಳ್ಳಲಾರದೆ, ಕಾಡುಹೆಣವಾಗಿ ಕೆರೆಕೋಡಿ ತಗ್ಗಿನಲ್ಲಿ ಬಿದ್ದಿದ್ದ. ಆಶ್ಚರ್ಯದ ಮಾತೆಂದರೆ, ಊರಿನ ಯುವಕರ ಗುಂಪೊಂದು ಮಾಸ್ತಯ್ಯನ ಹೆಣವನ್ನೂ ಓಟಾಗಿ ಪರಿವರ್ತಿಸಿಕೊಂಡಿದ್ದು! ಅಂದೇ ರಂಗವ್ವ ತನ್ನೆದೆಯಲ್ಲಿ ಬಹುಕಾಲದಿಂದಲೂ ಅವಿಸಿಟ್ಟುಕೊಂಡಿದ್ದ ನೋವೆಲ್ಲವೂ ಕರಗಿಹೋಗುವಂತೆ ಅತ್ತಿದ್ದು.ಕೈನೆರೆಗೆ ಬಂದಿದ್ದ ಮುದ್ದುನಾಗಮ್ಮ ಎಂಬುವ ಮಗಳನ್ನೂ ರಂಗವ್ವನ ಮಡಿಲಿಗೆ ಹಾಕಿ ಮಾಸ್ತಯ್ಯ ದೈವಾಧೀನನಾಗಿದ್ದ. ಆ ದಿನದಿಂದಲೇ ರಂಗವ್ವ ತನ್ನ ಮಗಳಿಗೊಂದು ಲಗ್ನ ಮಾಡುವ ಕನಸನ್ನು ಕಟ್ಟಿಕೊಂಡು ಜೀವ ತೇಯತೊಡಗಿದಳು. ಆದರೆ ಬರಿ ಕನಸುಗಳಿಂದಲೇ ಅವಳ ಸಂಸಾರ ನಡೆಯದಾಗಿತ್ತು! ಇದರ ಅರಿವಿದ್ದ ರಂಗವ್ವ ತನ್ನ ಪುಡಿಗಾಸಿನ ದುಡಿಮೆಯಿಂದಲೇ ಮಗಳ ಮದುವೆಯನ್ನೂ ಮಾಡಬೇಕಾಗಿತ್ತು. ‘ಮನೆಗೆ ಮುಮ್ಮನ್ಸ ಅನ್ನಿಸ್ಕೊಂಡೋನು ನನ್ನ ನಡುನೀರಿನಾಗೆ ಬಿಟ್ಟು ಸತ್ತ, ದಿಕ್ಕಿಲ್ಲದ ಹೆಣ್ಣೆಂಗಸು, ಒಂದು ಬಂಗಾ ನೀಸ್ಲಿಲ್ಲ, ಒಂದು ಸುಕ ಅನುಭವಿಸ್ಲಿಲ್ಲ! ಹೆಣ್ಣಾಗಿ ಯಾಕಾನಾ ಹುಟ್ಟಿಸ್ತೋ ಸಿವನೆ! ಮಗಳ ಮದುವೆ ಹೆಂಗೆ ಮಾಡ್ಲಿ!’ ಎಂದು ಆಗಾಗ್ಗೆ ಪರಲೋಕದಲ್ಲಿದ್ದ ತನ್ನ ಪತಿದೇವರನ್ನು ಶಪಿಸುತ್ತಾ ಕಾಲಹಾಕುತ್ತಿದ್ದಳು. ಮಗಳು ಮುದ್ದುನಾಗಮ್ಮನ ಮದುವೆಯ ಯೋಚನೆಗಳೂ ಅವಳನ್ನು ನಿರಂತರವಾಗಿ ಆವಿಗೆಯಲ್ಲಿ ಬೇಯುವಂತೆ ಮಾಡಿದ್ದವು.rಬಾಲನಾಗಮ್ಮನ ಅಜ್ಜಿ ವಿಧವೆ ರಂಗವ್ವನಿಗಾಗಿ ಮಾಸ್ತಯ್ಯ ವಿಸ್ತಾರವಾದ ಧರೆಯ ಮೇಲೆ ಒಂದು ಮುರುಕಲು ಮಾಳಿಗೆ ಮನೆಯನ್ನು ಮಾತ್ರ ಉಳಿಸಿ ಪೌತಿಯಾಗಿದ್ದ. ‘ನಾರು ಬತ್ತಿ; ನೀರೆಣ್ಣೆ’ಯಂಗಿತ್ತು ಅವಳ ಬಾಳು.rರಂಗವ್ವ ಅವರಿವರ ಕೈಕಾಲು ಹಿಡಿದು ಮುದ್ದುನಾಗಮ್ಮನನ್ನು ಬಾಲಯ್ಯನಿಗೆ ಕೊಟ್ಟು ಹೇಗೋ ಮದುವೆಮಾಡಿ, ಮಗಳು ಮತ್ತು ಅಳಿಯನನ್ನು ತನ್ನ ಕೈಯಾಸರೆಗೆ ಇರಲೆಂದು ಮನೆವಾಳ್ತನಕ್ಕೆ ಇಟ್ಟುಕೊಂಡಳು. ಅವಳು ಎಣಿಸಿದಂತೆ ಬಾಲಯ್ಯ ಮುದ್ದುನಾಗಮ್ಮನೊಡನೆ ದೀರ್ಘಕಾಲ ಸಂಸಾರ ಮಾಡಲಿಲ್ಲ. ಮನೆಯಲ್ಲಿ ಒಂದು ಕಡ್ಡಿ ಇತ್ಲಿಂದ ಅತ್ತ ಎತ್ತಿಕ್ಕಿದ್ದವನಲ್ಲ! ಶೋಕಿಲಾಲನಂತಿದ್ದ ಬಾಲಯ್ಯ ಊರುದಿರುಗನಾಗಿದ್ದ. ಕಂಡ ಕಂಡ ಹೆಣ್ಣಿನ ಹಿಂದೆ ಅಲೆಯುವುದು, ದಿನಗಟ್ಟಲೆ, ವಾರಗಟ್ಟಲೆ ಮನೆ-ಮಠ ಬಿಟ್ಟು ಊರೂರು ಅಲೆಯುವುದು ಅವನ ಜಾಯಮಾನ. ಇದರ ಜೊತೆಗೆ ಜೂಜಾಡುವುದೂ ಅವನಿಗಂಟಿದ್ದ ಖಯಾಲಿಯಾಗಿತ್ತು! ಇದರಿಂದಾಗಿ ತನ್ನ ಹೆಂಡತಿ ಮುದ್ದುನಾಗಮ್ಮನ ಮೈಮೇಲಿದ್ದುದನ್ನೆಲ್ಲಾ ಕಿತ್ತುಕೊಂಡು, ನಾಮಕಾವಸ್ತೆಗಾಗಿ ಎರಡೆಳೆ ಕರಿಮಣಿಸರವನ್ನು ಮಾತ್ರ ಅವಳ ಕೊರಳಲ್ಲಿ ಉಳಿಸಿದ್ದ.ಮದುವೆ ಮಾಡಿದ ತಪ್ಪಿಗೆ ರಂಗವ್ವ ಮತ್ತು ಮುದ್ದುನಾಗಮ್ಮನೇ ದುಡಿದು ಬಾಲಯ್ಯನನ್ನು ಸಾಕುವಂತಾಯಿತು. ಹೀಗಿದ್ದ ಬಾಲಯ್ಯ ಎಂತದ್ದೋ ಖಾಯಿಲೆಯಿಂದಾಗಿ ಮಲಗಿದ. ನೋಡು ನೋಡುತ್ತಿದ್ದಂತೆ ಅನ್ನ, ನೀರು ಸೇರದೆ, ಅವನ ದೇಹ ಸೊರಗಿ ಇದ್ದಲಿನ ಕಡ್ಡಿಯಂತಾಯಿತು. ಅವನ ಕಣ್ಣುಗುಡ್ಡೆಗಳು ನೀರಿಲ್ಲದ ಆಳವಾದ ಬಾವಿಯಲ್ಲಿ ಬಿದ್ದಂತೆ ನಿಸ್ತೇಜವಾಗಿದ್ದವು.ಬಾಲಯ್ಯ ತೀರಿಕೊಂಡು ಒಂದೆರೆಡು ತಿಂಗಳಿಗೆ ಮುದ್ದುನಾಗಮ್ಮನೂ ಮೂಲೆ ಹಿಡಿದಳು. ದೊಡ್ಡಾಸ್ಪತ್ರೆಯ ಡಾಕ್ಟರ್ ಮುದ್ದುನಾಗಮ್ಮನನ್ನು ನೋಡಿ ‘ಇವಳ ಗಂಡನಿಂದಾಗಿ ಇವಳಿಗೂ ಈ ಖಾಯಿಲೆ ಬಂದಿದೆ’ ಎಂದು ಕೈಚೆಲ್ಲಿದರು. ಮುದ್ದುನಾಗಮ್ಮನೂ ತೀರಿಕೊಂಡ ನಂತರ ರಂಗವ್ವನಿಗೆ ಇನ್ನು ತನ್ನವರು ಎಂದು ಭೂಮಿಯ ಮೇಲೆ ಉಳಿದಿದ್ದು ತನ್ನ ವಂಶದ ಕುಡಿ ಬಾಲನಾಗಮ್ಮ ಮಾತ್ರ! ಮೊಮ್ಮಗಳ ಎಳೆಯ ಕಣ್ಣುಗಳಲ್ಲೇ ಬದುಕಿನ ಭರವಸೆಯ ಕಿರಣಗಳನ್ನು ಕಂಡ ರಂಗವ್ವ ಸೋಲೊಪ್ಪದೆ ತನ್ನ ಕಣ್ಣುಗಳಲ್ಲಿ ಛಲದ ಕಿಡಿಯನ್ನು ತುಂಬಿಕೊಂಡಳು.ಆದರೂ ಬಾಲನಾಗಮ್ಮನ ವಾರಿಗೆಯ ಹೆಣ್ಣುಮಕ್ಕಳು ಎರಡು ಜಡೆ ಹಾಕಿಕೊಂಡು, ಎರಡೂ ಜಡೆಗೆ ಚಂಡುಹೂವು ಮುಡಿದು ಬ್ಯಾಗುಗಳನ್ನು ಹೆಗಲಿಗೇರಿಸಿ ಸ್ಕೂಲಿಗೆ ಹೋಗುತ್ತಿರುವುದನ್ನು ನೋಡಿದಾಗಲೆಲ್ಲಾ ಅವಳ ಕರುಳು ಚುರುಕ್ ಅನ್ನುತ್ತಿತ್ತು. ಸ್ಕೂಲಿಗೆ ಹೋಗಲೇಗಬೇಕಾದ ವಯಸ್ನಾಗೆ ಮೊಮ್ಮಗಳು ಬೀದಿ ಬೀದಿ ಅಲೆದು ಹೂವು ಮಾರಿಕೊಂಡು ತರೋದು, ಅವಳು ತರುವ ಪುಡಿಗಾಸನ್ನು ಕುಡಿಕೆಯೊಳಗೆ ಹಾಕೋದು, ಆ ಮೂರುಕಾಸಿನಲ್ಲೇ ಉಪ್ಪು-ಮೆಣಸಿನಕಾಯಿ ತರೋದು; ಇವೆಲ್ಲಾ ನೆನಸಿಕೊಂಡರೆ ಅವಳಿಗೆ ಕುಡಿದ ನೀರು ಗಂಟಲಿಗಿಳಿಯುತ್ತಿರಲಿಲ್ಲ! ನನ್ನ ಮೊಮ್ಮಗಳೂ ನಾಲ್ಕು ಜನರಂತೆ ಸ್ಕೂಲಿಗೆ ಹೋಗಬೇಕು, ಎಂದು ಆ ಚಣವೇ ನಿರ್ಧಾರ ಮಾಡಿಕೊಂಡಳು.\rಮರುದಿನವೇ ರಂಗವ್ವ ಮಬ್ಬಿಗೇ ಎದ್ದು ಬುಡ್ಡಿ ದೀಪದ ಎದುರು ಕೂತು ಹೂ ಕಟ್ಟತೊಡಗಿದಳು…ಇತ್ತ ಈಸಲು ಚಾಪೆ ಮೇಲೆ ಮಲಗಿದ್ದ ಬಾಲನಾಗಮ್ಮ ಬಣ್ಣಗಳ ಕೊಳದಿಂದ ಚಿಟ್ಟೆಯಾಗಿ ಮೇಲೆದ್ದು ಇನ್ನೊಂದು ದಂಡೆಯಲ್ಲಿದ್ದ ಸ್ಕೂಲಿನ ಕಡೆ ಹಾರಿದಳು

“author”: “ಜಿ.ವಿ.ಆನಂದಮೂರ್ತಿ
courtsey:prajavani.net
https://www.prajavani.net/artculture/art/butterfly-and-flower-girl-635869.html

Leave a Reply