ಚಾತುರ್ವರ್ಣ್ಯದ ಮೂಲ ಪರಿಕಲ್ಪನೆ
ಸ್ವಭಾವಾಭಿರುಚಿಗಳು, ವಂಶವಾಹಿನಿಗಳು, ಪರಿಸರ, ದೇಶ, ಕಾಲಾದಿಗಳ ಪ್ರಭಾವದಿಂದ ಮನುಷ್ಯನಲ್ಲಿ ಮೂಡುವ ‘ಪ್ರವೃತ್ತಿ’ಯನ್ನೇ ಕೃಷ್ಣನು ‘ಗುಣ’ ಎಂದು ಒಕ್ಕಣಿಸಿದ್ದನ್ನು ನೋಡಿದೆವು. ಈ ಪ್ರವೃತ್ತಿಯನ್ನು ನಮ್ಮೊಳಗೆ ಗುರುತಿಸಿಕೊಳ್ಳುವುದು ಹಾಗೂ ನಮ್ಮ ಪರಿವಾರ–ಪರಿಸರಾದಿಗಳೀಯುವ ಸಂಸ್ಕಾರ–ಸಂಪನ್ಮೂಲಗಳನ್ನು ಮೈಗೂಡಿಸಿಕೊಂಡು ಅರಳುವುದೇ ಆತ್ಮವಿಕಾಸದ ನೈಸರ್ಗಿಕ ಪರಿ. ಸ್ವಭಾವಾನುಸಾರವೂ ದೇಶಕಾಲೋಚಿತವೂ ಆದ ವಿಕಾಸದ ಪರಿಕಲ್ಪನೆಯೇ ‘ಚಾತುರ್ವರ್ಣ್ಯ ಪದ್ಧತಿ’ಯ ರೂಪ ತಾಳಿತೆನ್ನುವುದು ಕೃಷ್ಣೋಕ್ತಿಯ ತಾತ್ಪರ್ಯ. (ಚಾತುರ್ವರ್ಣ್ಯ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ)
ಮನುಜ–ಮನುಜರೆಲ್ಲರಲ್ಲೂ ಸಾಮ್ಯವಿರುವಂತೆಯೇ ವೈಷಮ್ಯವೂ ಇರುತ್ತದೆ. ಪ್ರದೇಶ–ಕುಲ–ವೃತ್ತಿ–ಕಾಲ–ಸಾಮಾಜಿಕ ಸ್ಥಿತಿಗತಿಗಳಿಗೆ ಅನುಸಾರವಾಗಿಯೂ ಸಾಮ್ಯ–ವೈಶಿಷ್ಟ್ಯಳು ಮೂಡುತ್ತವೆ. ಜಗತ್ತೇ ಹೀಗೆ ಸಾಮ್ಯವೈಷಮ್ಯಗಳ ಸ್ವಾರಸ್ಯಗಳ ಆಗರ. ಈ ಸಾಮ್ಯವೈಷಮ್ಯಗಳನ್ನು ನಿಸರ್ಗದ ನಿಯಮವೆಂದು ಗೌರವಿಸಬೇಕು, ರಸದೃಷ್ಟಿಯಿಂದ ಆಸ್ವಾದಿಸಬೇಕು. ಮಲ್ಲಿಗೆ ಹೂವು ಉತ್ತಮ ಮಲ್ಲಿಗೆಯಾಗಿ ಅರಳಲೆಂದು ಒಂದಿಷ್ಟು ಮಣ್ಣು–ಗೊಬ್ಬರಗಳನ್ನೀಯಬೇಕೇ ಹೊರತು, ‘ನೀನು Tulip ಆಗು’ ಎಂದು ಬಲವಂತ ಮಾಡಿ ‘ಬದಲಾಯಿಸ’ಲೆಣಿಸುವುದು ಮೂರ್ಖತನ. ಗುಣಕ್ಕನುಗುಣವಾದ ಕರ್ಮವನ್ನು ಆಯ್ದುಕೊಂಡು ಆತ್ಮವಿಕಾಸದ ಮಾರ್ಗವನ್ನೂ ಜೀವನೋಪಾಯವನ್ನೂ ಸಹಬಾಳ್ವೆಯ ಸೂತ್ರವನ್ನೂ ಕಂಡುಕೊಳ್ಳಲು ಎಲ್ಲರಿಗೂ ಅವಕಾಶವಾಗಲೆಂದೇ ಚಾತುರ್ವರ್ಣ್ಯದ ಪರಿಕಲ್ಪನೆ ಮೂಡಿದ್ದು. ಎಲ್ಲರೂ ತಮ್ಮ ವೃತ್ತಿ–ಪ್ರವೃತ್ತಿಗಳನ್ನೂ ಇತರರ ವೃತ್ತಿ–ಪ್ರವೃತ್ತಿಗಳನ್ನೂ ಆದರಿಸುತ್ತಿದ್ದವರೆಗೂ ಈ ವ್ಯವಸ್ಥೆಯು ಅರ್ಥಪೂರ್ಣವಾಗಿ ಬಳಕೆಯಿತ್ತು. ಯುಗಯುಗಾಂತರಗಳವರೆಗೂ ನಮ್ಮಲ್ಲಿ ಅಸಾಧಾರಣ ಪ್ರಮಾಣದಲ್ಲಿ ವೃತ್ತಿನಿಷ್ಠೆಯನ್ನೂ (Domain discipline), ವೃತ್ತಿಪರಿಣತಿಯನ್ನೂ (professional excellence), ವಿಷಯತಜ್ಞತೆಯನ್ನೂ (specialization), ಸರ್ಜನಶೀಲತೆಯನ್ನೂ (creativity) ���ೋಷಿಸಿತು. ಪ್ರವೃತ್ತಿಧರ್ಮದಲ್ಲಿ ಲಾಭವಾಗದಿದ್ದರೂ ಜೀವನೋಪಾಯಕ್ಕೆ ಕುಲವೃತ್ತಿಯಿದ್ದೇ ಇರುತ್ತಿತ್ತಾದ್ದರಿಂದ, ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗಿರಲಿಲ್ಲ. ಈ ಅನುಕೂಲದಿಂದಾಗಿಯೇ ನಮ್ಮ ಈ ನಾಡಿನಲ್ಲಿ ಇಷ್ಟು ವೈವಿಧ್ಯಮಯತೆಗಳು ಅರಳಿ ಬೆಳೆದವು, ಪರಸ್ಪರ ವಿನಿಮಯದಿಂದ ಶ್ರೀಮಂತವಾಗುತ್ತಲೂ ಬಂದವು. ಎಲ್ಲರಿಗೂ ತಮ್ಮ ಕುಲಧರ್ಮದ ಬಗ್ಗೆ ನಿಷ್ಠೆಯೂ, ಪ್ರವೃತ್ತಿಧರ್ಮವನ್ನು ಸಾಧಿಸುವ ಅನುಕೂಲವೂ ಇದ್ದಿತು. ಪ್ರಜೆಗಳೆಲ್ಲರ ಯೋಗಕ್ಷೇಮ ನೋಡಿಳ್ಳುತ್ತಿದ್ದ ರಾಜರುಗಳೂ ಪ್ರಜೆಗಳ ಈ ಕುಲಧರ್ಮ–ಪ್ರವೃತ್ತಿಧರ್ಮಗಳ ಸ್ವಾತಂತ್ರ್ಯೊಳಗೆ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಚಾತುರ್ವರ್ಣ್ಯದ ಮೂಲಸ್ವರೂಪ ಹೀಗಿತ್ತು. ಎಲ್ಲರೂ ಅವರವರ ಚೌಕಟ್ಟಿನಲ್ಲಿದ್ದರೂ, ಆ ಚೌಕಟ್ಟಿನಲ್ಲಿ ಉಸಿರುಗಟ್ಟದೆ, ಎಲ್ಲ ವೃತ್ತಿಪ್ರವೃತ್ತಿಗಳೂ ದೇಶಕಾಲೋಚಿತ ಪರಿಷ್ಕಾರಗಳನ್ನೂ ಮೈಗೂಡಿಸಿಕೊಳ್ಳುತ್ತ ಬೆಳೆದವು. ಯುಗಗಳವರೆಗೂ ಈ ವ್ಯವಸ್ಥೆ ಸಫಲವಾಗಿಯೂ ಅರ್ಥಪೂರ್ಣವಾಗಿಯೂ ಬೆಳೆಯಿತು.
ಎಲ್ಲರಲ್ಲೂ ತಮ್ಮತಮ್ಮ ಪ್ರವೃತ್ತಿಧರ್ಮದ ಬಗ್ಗೆ ಆಸ್ಥೆಯೂ, ಸ್ವಕರ್ಮದ ಬಗ್ಗೆ ನಿಷ್ಠೆಯೂ, ಸ್ವದೇಶ–ಕುಲ–ಕಸುಬುಗಳ ಬಗ್ಗೆ ಸಾತ್ವಿಕ ಹೆಮ್ಮೆಯೂ ಇರಬೇಕು. ಆದರೆ ಸ್ವಾಭಿಮಾನವು ‘ನಿರಭಿಮಾನ’ವಾಗಿ ವಿಕಾರ ಹೊಂದಿದರೆ, ಕೀಳರಿಮೆ ಮೂಡುತ್ತದೆ. ಅದೇ ಸ್ವಾಭಿಮಾನ ದುರಭಿಮಾನವಾಗಿ ವಿಕಾರ ಹೊಂದಿದರೆ, ಮೇಲರಿಮೆಯೆದ್ದು ಇತರರ ವೃತ್ತಿ–ಪ್ರವೃತ್ತಿಗಳ ಬಗ್ಗೆ ಅಸಹಿಷ್ಣುತೆ ಮೂಡಿಸಿ, ತಿರಸ್ಕಾರದಿಂದ ಕಾಣುವಂತೆ ಮಾಡುತ್ತದೆ. ಈ ವಿಕಾರಗಳೇ ಕಾಲಾಂತರದಲ್ಲಿ ಚಾತುರ್ವರ್ಣ್ಯ ವ್ಯವಸ್ಥೆಯ ಅಂದಗೆಡಿಸತೊಡಗಿದ್ದು!
ಇಂದಿಗೂ ಈ ಚಾತುರ್ವರ್ಣ್ಯವನ್ನು ಹಳಿಯುವವರು, ಬಯ್ಯುತ್ತಿರುವುದು ಪ್ರವೃತ್ತಿ–ವೃತ್ತಿಗಳ ವೈವಿಧ್ಯ–ವೈಶಿಷ್ಟ್ಯಳನ್ನಲ್ಲ! ವೃತ್ತಿ–ಪ್ರವೃತ್ತಿಗಳನ್ನಾಧರಿಸಿ ಬೆಳೆದಿರುವ ಮೇಲು–ಕೀಳೆಂಬ ತಾರತಮ್ಯಭಾವದ ಅಹಂಕಾರವನ್ನು ಮಾತ್ರವೇ! ಒಟ್ಟಿನಲ್ಲಿ ಈ ಚಾತುರ್ವರ್ಣ್ಯವು ಅಪಕ್ವಮತಿಗಳ ಧೋರಣೆಯಿಂದಾಗಿ ತನ್ನ ಮೂಲೋದ್ದೇಶದಿಂದ ಜಾರುತ್ತ ಬಂದಿದ್ದು ದುರಂತ. ಇದಕ್ಕೆ ಬಾಹ್ಯಾಂತರಿಕ ಕಾರಣಗಳನ್ನು ಮುಂದೆ ರ್ಚಚಿಸೋಣ.
ಡಾ. ಆರತೀ ವಿ. ಬಿ.
ಕೃಪೆ: ವಿಜಯವಾಣಿ