ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ, ಸೊಕ್ಕಿಲ್ಲ, ಮಿಕ್ಕಿಲ್ಲ, ಸಿಕ್ಕಿಲ್ಲ
ದೂರದ ಕಾಡಲ್ಲೊಂದು
ಹಸಿರು ಗಿಳಿ.
ಅದಕ್ಕೊಂದು ಕೆಂಪು ಕೊಕ್ಕು.
ತುಟಿಗೆಂಪಿನ ಅವಳಿಗೆ
ಪ್ರತಿರಾತ್ರಿ
ಕೆಂಪುಕೊಕ್ಕಿನ ಗಿಣಿಯ
ಕನಸು.
ಗಿಣಿಗೂ ಅವಳಿಗೂ
ಕೊಕ್ಕಿನ ಕುರಿತು ಅಜ್ಞಾನ.
ಆ ಅಜ್ಞಾನದಲ್ಲೇ ಸುಖ.
ಒಮ್ಮೊಮ್ಮೆ ನಡು ಸುಡು
ಮಧ್ಯಾಹ್ನದಲ್ಲಿ
ಅವಳಿಗೆ ಕೆಂಪುಕೊಕ್ಕು
ಕುಟುಕಿದ ಹಾಗೆ ಅನ್ನಿಸಿ
ರೋಮಾಂಚನ.
ಅದು ಗಿಣಿಯ ಕೊಕ್ಕೋ
ಮುಂಗುಸಿಯ ಮೂಗೋ ಅನುಮಾನ.
ವಿಚಾರಿಸಲು ಒಳಗೊಳಗೆ
ಮುಜುಗರ
ಸಂಕೋಚ.
ಹೊರಗೆ ಬಂದು ನೋಡಿದರೆ
ಕವಲೊಡೆದ ಸಂಪಿಗೆ ಮರದ
ಟೊಂಗೆಮಧ್ಯಕ್ಕೆ ಕೊಕ್ಕು
ಮಸೆಯುತ್ತಿರುವ ಗಿಳಿರಾಯ.
ಮದುವೆಯ ಕತ್ತಲ
ಬೆತ್ತಲ ಇರುಳು
ಅದೇ ಗಿಣಿಕೊಕ್ಕು ಬಂದು
ಗುಟ್ಟನ್ನೆಲ್ಲ ಕೆದಕಿದ ನಂತರ
ಎಲ್ಲಾ ಯಥಾಪ್ರಕಾರ.
ಕೆಂಪುಕೊಕ್ಕಿನ ಗಿಣಿಗಳ
ಮೇಲಿನ ವ್ಯಾಮೋಹ ಕಳಕೊಂಡ
ಕತೆಯನ್ನು ಅವಳು ಮಗಳಿಗೆ
ಎಷ್ಟೋ ವರ್ಷದ ನಂತರ ಹೇಳಿದಳಂತೆ.
ಮಗಳು ನಕ್ಕು ನಡೆದದ್ದು
ಕಂಡು ಅವಳಿಗೆ ಅಪಾರ ದಿಗಿಲು.
ಮಧ್ಯಾಹ್ನದ ನಡು ಸುಡು
ಬಿಸಿಲು.
ಕಂಡೂ ಕಾಣಿಸದ ಹಾಗೆ
ಮಗಳು.
ಅವಳ ಮೈತುಂಬ
ಕೆಂಪುಕೊಕ್ಕಿನ ಕರಿನೆರಳು.
ದೂರದಲ್ಲಿ ಕಾಡಿಲ್ಲ,
ಹಸಿರು ಗಿಳಿಯಿಲ್ಲ
ಅದಕ್ಕೆ ಕೆಂಪುಕೊಕ್ಕಿಲ್ಲ
ಎಂದರೆ ಮಗಳು
ನಂಬಲೊಲ್ಲಳು.
ಇವಳಿಗೂ
ನಂಬಿಕೆಯಿಲ್ಲ.
ನಂಬಿಸಲೇ ಬೇಕೆಂಬ
ಹಠಕ್ಕೆ ಇದೀಗ ವಜ್ರ
ಮಹೋತ್ಸವ.