ಕ್ಯಾಂಪಸ್–ಕಲಕಲ-ಪುಲಕ

ಕ್ಯಾಂಪಸ್–ಕಲಕಲ-ಪುಲಕ

ಹದಿ ಹರೆಯದ ಯುವಕ ಯುವತಿಯರು ನಮ್ಮ ವಿದ್ಯಾಲಯಗಳ ಆವರಣದಲ್ಲಿ ಮುಕ್ತ ಮನಸುಗಳೊಂದಿಗೆ, ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಅಡ್ಡಾಡುವುದನ್ನು, ಅಲ್ಲಿ ಇಲ್ಲಿ ನಿಂತುಕೊಂಡು, ಅಲ್ಲಲ್ಲಿ ಕೂತುಕೊಂಡು ಹಲವು ಹತ್ತು ವಿಷಯಗಳ ಬಗ್ಗೆ ನೋಡುತ್ತಿದ್ದಂತೆ ಕಿಶೋರ ಕುಮಾರನ ಹಿಂದಿ ಚಲನಚಿತ್ರದ ಹಾಡು ನೆನಪಾಗುತ್ತದೆ. “ಖಿಲತೆ ಹೈ ಗುಲ್ ಯಹಾ ಖಿಲಕೆ ಬಿಚಡನೆಕೊ”. ಆ ಹಾಡಿನ ಮೊದಲು ಕಿಶೋರ ಕುಮಾರ ರಾಗಬದ್ಧವಾಗಿ ಆಲಾಪ ಹು ಹೂ.. ಅಂತಾ ಹೇಳುವುದು ಸಹ ಒಂದು ಅನುಭವಕ್ಕೆ ಅಡಿಪಾಯ ಹಾಕುತ್ತದೆ. ಕ್ಷಣ ಕ್ಷಣಕ್ಕೂ ಒಂದೊಂದು ಅನುಭವಗಳ ಸಿಂಚನವಾಗುತ್ತದೆ. ಕಾಡಿನಲ್ಲಿ ಗಿಡಮರಗಳಲ್ಲಿ ಹಸಿರು ಬಸಿರಿನಲ್ಲಿಯೆ ಮೊಗ್ಗು ಹೂಗಳನ್ನು ನೋಡಿದಾಗ ಸಿಗುವ ಆನಂದ ಸಂತೋಷವೆ ಬೇರೆ. ಆ ವಯಸ್ಸೇ ಅಂತಹದು. ವಯಸ್ಸಿಗೆ ಮೀರಿದ ಪೂರ್ವಾಗ್ರಹಗಳಿಲ್ಲದ ನೆಲದ ಮೇಲಿನ ತಾರೆಗಳು ಇಡೀ ಸೌರವ್ಯೂಹದಲ್ಲಿ ಎಲ್ಲೊ ಕೇಂದ್ರಗಳ ಸುತ್ತ ತಿರುಗುತ್ತಿರುವ ಆಕಾಶ ಗಂಗೆಗಳಲ್ಲಿ ಮಿನುಗುವ ನಕ್ಷತ್ರಗಳು. ಪ್ರತಿಯೊಂದು ನಕ್ಷತ್ರವೂ ಸೂರ್ಯನೇ. ಪ್ರತಿ ನಕ್ಷತ್ರಕ್ಕೂ ಅದರದೇ ಆದ ಸೋಲಾರ ಸಿಸ್ಟಮ್! ಅಲ್ಲಿ ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು, ಧೂಮಕೇತುಗಳು, ನೀಹಾರಿಕೆಗಳು ಎಲ್ಲವೂ ಲಬ್ಧವೇ! ಈ ವಿದ್ಯಾಲಯದ ಕ್ಯಾಂಪಸ್‍ಗಳು ಅದರಲ್ಲಿ ಅದರದೇ ಆದ ಭಿನ್ನತೆಗಳು. ವಿಶ್ವವಿದ್ಯಾನಿಲಯದ ಕ್ಯಾಂಪಸ್‍ಗಳು, ವಿದ್ಯಾಲಯಗಳ ಕ್ಯಾಂಪಸ್ ಮತ್ತೆ ಅದರಲ್ಲಿ ಕಲಾ ವಿದ್ಯಾಲಯದ್ದು, ವಿಜ್ಞಾನ ವಿದ್ಯಾಲಯದ್ದು, ವಾಣಿಜ್ಯ ವಿದ್ಯಾಲಯದ್ದು, ಪಾಲಿಟೆಕ್ನಿಕ್‍ಗಳ ಕ್ಯಾಂಪಸ್‍ಗಳು, ಖಾಸಗಿ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‍ಗಳು ಎಲ್ಲವೂ ಬೇರೆ ಬೇರೆ ರೀತಿಯವೆ. ಹಿಮಾಲಯದ ಕಾಡು, ಸಹ್ಯಾದ್ರಿಯ ಕಾಡುಗಳು, ಅಮೆಝಾನ್ ಕಾಡುಗಳು, ಮಿಸಿಸಿಪಿಯ ಕಾಡುಗಳು ಹೀಗೆ ಪಟ್ಟಿ ವಿಸ್ತಾರವಾಗುತ್ತ ಹೋಗುತ್ತದೆ. ಇಲ್ಲಿ ಹುಡುಗ ಹುಡುಗಿಯರು ಕಂಡುಕೊಳ್ಳುವ ಸತ್ಯ “ಆಪ್ ಕೆ ಆಂಖೋಮೇ ಕುಚ್ ಮೆಹಕಿ ಹುವ ರಾಜ್ ಹೈ” ಅನ್ನುವ ಹಾಡಿನ ಥರ. ದೃಷ್ಟಿಯಲ್ಲಿ ಇರುವ ಭಾವ ಅಪ್ಪಟ ಸ್ನೇಹದ್ದಾ, ಮೋಹದ್ದಾ ಅಥವಾ ವಯೋಮಾನದ ಕುತೂಹಲ ಆಕರ್ಷಣೆಗಳೋ ಒಂದೂ ಗೊತ್ತಾಗುವುದಿಲ್ಲ ಅನ್ನುವದೇ ರಾಜ ರಹಸ್ಯ. ಆದರೂ ಒಬ್ಬರನ್ನೊಬ್ಬರು ಬಿಡುವುದಿಲ್ಲ. ಸಂಧಿಸಲು, ನೋಡಲು, ಸ್ಪರ್ಷಕ್ಕಾಗಿ, ವಾಸನೆಗಾಗಿ ಒಂದು ತರಹದ ಹಪಾಹಪಿತನ, ಅದರಲ್ಲಿ ಮತ್ತಿಷ್ಟು ವಿಶೇಷಗಳು. ಇಂಗ್ಲೀಷ್ ಮಾಧ್ಯಮದ್ದು, ಕನ್ನಡ ಅಥವಾ ಪ್ರಾದೇಶಿಕ ಮಾಧ್ಯಮದ್ದು, ರಾಜ್ಯ, ಹೊರ ರಾಜ್ಯದ್ದು, ಹಾಸ್ಟೆಲ್‍ನಲ್ಲಿರುವವರು, ಮನೆಯಿಂದ ಕಾಲೇಜಿಗೆ ಅಡ್ಡಾಡುವರು. ಯಾರೆ ಇರಲಿ ಕ್ಯಾಂಪಸ್‍ಗಳಲ್ಲಿ ಹೀಗೆ ತಿರುಗುತ್ತ, ಕ್ಯಾಂಟೀನ್‍ಗಳಲ್ಲಿ ಚಹನೋ, ಕಾಫಿಯೋ ಸೇವಿಸುತ್ತ ಕುಳಿತಿರುದನ್ನು ನೋಡಿದಾಗ “ಕಹಿಯೇ, ಸುನಿಯೇ, ಸುನ್‍ತೇ, ಕಹತೇ ಬಾತೋ ಬಾತೋಮೇ ಪ್ಯಾರ್ ಹೋಜಾಯೆಗಾ” ಆನ್ನುವ ಹಾಡು ನೆನಪಾದರೆ ಆಶ್ಚರ್ಯಪಡಬೇಕಾಗಿಲ್ಲ. ಆವಾತಾವರಣವೇ ಅಂತಹದು. ಸ್ವಲ್ಪು ಥಳಕು ಸ್ವಲ್ಪು ಬಳುಕು, ಒಂದು ತರಹಾ ಪುಲಕ, ಹದಿ ಹರಿಯದ ತಲ್ಲಣಗಳು, ಎಲ್ಲವೂ ಒಂದು ಹಿತಕರವಾದ ಭಾವನೆಗಳನ್ನು ಕೆರಳಿಸುತ್ತ. ಅಲ್ಲಲ್ಲಿ ಒಡ್ಡು ಕಟ್ಟಿ ನೀರಾವರಿ ಮಾಡಿ ಅಧ್ಯಯನದ ಕೃಷಿಗೆ ಉಪಯೋಗಿಸಿಕೊಳ್ಳುವ ಒಂದಿಷ್ಟು ಯುವಕ ಯುವತಿಯರನ್ನು ನೋಡಬಹುದು. ಆಶೋತ್ತರಗಳು ಅವುಗಳನ್ನು ಬೆಳೆಸುವ ಪ್ರಯತ್ನಗಳು. ಇದಕ್ಕೆ ತರುಣ ಜನಾಂಗದ್ದೆ ಒಂದು ಪಠ್ಯಕ್ರಮ ಯಾವಾಗಲು Flexible ಅನುಭವ ಕನಸುಗಳು. ಪರೀಕ್ಷೇಗಳು. ಪಾಲಕರ ಆಶೋತ್ತರಗಳು ಎಲ್ಲದರ ಕೂಡಲಸಂಗಮ, ಕ್ರಾಂತಿಯ ಏಕತೆ ಹುಟ್ಟಿಸಬಹುದು, ಮೋಹಿನಿ ಮೇನಕೆ ಎಲ್ಲರನ್ನು ಕಾಣಬಹುದಾದ ವಾತ್ಸಾಯನರೂ ಇರುತ್ತಾರೆ. ಅದು ಕ್ಯಾಂಪಸ್‍ಗಳಲ್ಲಿರುವ ಆರೋ, ಎಂಟೋ ಅಥವಾ ನಾಲ್ಕೋ ಸೆಮಿಸ್ಟರ್‍ಗಳಲ್ಲಿ ಅವಾಗ ಅವಾಗ ಕಾಣಸಿಗುತ್ತಾರೆ.

ಕೃಪೆ : ಸಂಯುಕ್ತ ಕರ್ನಾಟಕ

Leave a Reply