ಕಾಲ ಕಾಯುವುದಿಲ್ಲ
ತುಂಬ ನೋವಿನಲ್ಲಿದ್ದರೆ ಕಾಲವೇ ಎಲ್ಲವನ್ನು ಮರೆಯಿಸುತ್ತದೆ ಎನ್ನುತ್ತಾರೆ, ಒಬ್ಬ ವ್ಯಕ್ತಿ ಸಾಕಷ್ಟು ನಷ್ಟ ಅನುಭವಿಸಿದ್ದರೆ ಕಾಲ ಹೀಗೇ ಇರೋದಿಲ್ಲ ನಿನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಸಮಾಧಾನ ಪಡಿಸುತ್ತಾರೆ. ಕಾಲ ಎನ್ನುವುದು ಮನುಷ್ಯನ ಎಲ್ಲ ಚಟುವಟಿಕೆಗಳಿಗೆ ಜೀವಂತ ಸಾಕ್ಷಿಯಾಗಿ ನಿಲ್ಲುವಂತಹದು. ಆದರೆ ವಿಪರ್ಯಾಸವೆಂದರೆ ಸಮಯ ಮಾತ್ರ ಎಂದಿಗೂ ತಟಸ್ಥವಾಗುವುದಿಲ್ಲ. ಕಾಲಚಕ್ರ ಯಾವತ್ತೂ ತನ್ನದೆ ಪರಧಿಯಲ್ಲಿ ತಿರುಗುತ್ತಲೆ ಇರುತ್ತದೆ. ನಾವೆಲ್ಲರೂ ಕಾಲನ ಬಂದಿಗಳೆ. ಮನುಷ್ಯ ಕೆಲಸ ಮಾಡುತ್ತಿರಲಿ ಬಿಡುತ್ತಿರಲಿ ಸುಖದಿಂದ ಇರಲಿ, ದುಃಖದಿಂದ ಇರಲಿ ಎನೇ ಆದರೂ ಕಾಲ ಮಾತ್ರ ತನ್ನ ಪಾಡಿಗೆ ತಾನು ತನ್ನ ಕರ್ತವ್ಯ ಮಾಡುತ್ತಲೆ ಇರುತ್ತದೆ.
ಸಮಯ ಅತ್ಯಂತ ಅಮೂಲ್ಯವಾದುದು, ಸಮಯದ ನೀತಿ ತಿಳಿಯದ ಜನರು ಕೊನೆಯಲ್ಲಿ ಪಶ್ಚಾತಾಪ ಪಡುತ್ತಾರೆ. ಇವತ್ತಿದ್ದಂತೆ ನಾಳೆ ಇಲ್ಲ. ನಾಳೆಯಿದ್ದಂತೆ ನಾಡಿದ್ದಿಲ್ಲ. ಪ್ರತಿಯೊಂದು ಕ್ಷಣವೂ ಮಹತ್ವವಾದುದೇ. ಪ್ರತಿಯೊಬ್ಬ ವ್ಯಕ್ತಿಗೂ ಕಾಲ ತನ್ನದೇ ಆದ ಪರಿಮಿತಿಯನ್ನು ನೀಡಿರುತ್ತದೆ. ಅದನ್ನು ಅರಿತು ಕೆಲಸ ಮಾಡಿದವರು ಸಾಧಕರಾಗುತ್ತಾರೆ. ಇಪ್ಪತ್ನಾಲ್ಕು ಗಂಟೆಯೇ ಎಲ್ಲರಿಗೂ ಇರುವಂತಹದ್ದು. ಆದರೆ ಈ ಅವಧಿಯಲ್ಲಿಯೇ. ಇನ್ನುಳಿದವರು ಸಮಯ ಸಾಕಾಗಲಿಲ್ಲ ಎಂಬ ಸಬೂಬಿನಲ್ಲಿಯೇ ದಿನ ದೂಡುತ್ತಿರುತ್ತಾರೆ.
ಕಾಲ ಯಾವತ್ತೂ ಕಾಯುವುದಿಲ್ಲ, ಆದ್ದರಿಂದ ಇರುವಷ್ಟು ದಿನ ಜೀವನವನ್ನು ಸಾರ್ಥಕದೆಡೆಗೆ ಸಾಗಿಸಬೇಕು. ಕಾಲ ನಮ್ಮ ಹಿಂದೆಯೆ ನೆರಳಿನಂತೆ ನಿಂತಿರುತ್ತದೆ. ಅತ್ಯಂತ ಉನ್ನತವಾದ ಮಾನವ ಜನ್ಮದಲ್ಲಿ ಹುಟ್ಟಿದರೂ ಮನುಷ್ಯ ಕಾಲದ ಪರಿವೆಯೇ ಇಲ್ಲದೆ ಅನರ್ಥ ಕೆಲಸದಲ್ಲಿಯೇ ತೊಡಗುತ್ತಿರುತ್ತಾನೆ. ಭಗವಂತನ ಸ್ಮರಣೆಯಿಂದ ಆಶೀರ್ವಾದದಿಂದ ಮಾತ್ರ ಉತ್ತಮ ಕೆಲಸ ಮಾಡಲು ಪ್ರೇರೇಪಣೆ ಸಿಗುತ್ತದೆ. “ತಾಯಿ ಇಂದಿನ ದಿನವೂ ಕಳೆದು ಹೋಯಿತು ನಿನ್ನ ದರ್ಶನ ಭಾಗ್ಯ ದೊರೆಯಲೇ ಇಲ್ಲ” ಎಂದು ರಾಮಕೃಷ್ಣ ಪರಮಹಂಸರು ವ್ಯಾಕುಲದಿಂದ ನುಡಿಯುತ್ತಿದ್ದರು. ಕಾಲನ ಕಬಂಧಬಾಹುಗಳಲ್ಲಿ ಆಯುಸ್ಸೆಂಬುದು ಕಳೆಯುತ್ತಲೇ ಇರುತ್ತದೆ. ಆದರೆ ಅದರ ಅರಿವು ಮಾತ್ರ ಮನುಷ್ಯನಿಗಾಗುವುದಿಲ್ಲ. ಶಂಕರಾಚಾರ್ಯರು ತಮ್ಮ ಪ್ರಸಿದ್ಧ ಮೋಹ ಮುದ್ಗರದಲ್ಲಿ ಈ ರೀತಿ ಹೇಳಿದ್ದಾರೆ.
ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತತೌ ಪುನರಾಯತಃ| ಕಾಲಃ ಕ್ರೀಡತಿ ಗಚ್ಚತ್ಯಾಯುಃ ತದಪಿ ನ ಮುಂಚತ್ಯಾಶಾವಯುಃ|| ಹಗಲು ರಾತ್ರಿ ಸಂಜೆ ಬೆಳಿಗ್ಗೆ ಶಿಶಿರ ವಸಂತ ಮುಂತಾದ ಕಾಲಗಳ ಬಂದು ಹೋಗುತಿರುವವು, ಕಾಲವು ಆಡುತ್ತಲೂ, ಆಯಸ್ಸು ಕಳೆಯುತ್ತಲೂ ಇರುವವು, ಇಷ್ಟಾದರೂ ಆಶಾ ಪಾಶವು ಬಿಡುವುದಿಲ್ಲ.
ಒಮ್ಮೊಮ್ಮೆ ಕಾಲದಷ್ಟು ದೀರ್ಘ ಯಾವುದೂ ಇಲ್ಲ ಎನಿಸುತ್ತದೆ. ಕಾಲದಷ್ಟು ಉತ್ತಮ ಬಂಧು ಇನ್ನೊಂದಿಲ್ಲವೆನಿಸುತ್ತದೆ. ಇದ್ದಷ್ಟು ಕಾಲದಲ್ಲಿ ಆಧ್ಯಾತ್ಮಿಕ ಚಿಂತನೆಯ ಮೂಲಕ ಜೀವನವನ್ನು ನಡೆಸುವುದು ಉತ್ತಮವಾದುದಾಗಿದೆ. ನಾವೆಷ್ಟೇ ಪ್ರಯತ್ನ ಪಟ್ಟು ಕೆಲಸ ಮಾಡಿದರೂ ಕಾಲ ಪರಿಪಕ್ಷವಾಗಿಲ್ಲದಿದ್ದರೆ ಆ ಕೆಲಸ ಕೈಗೂಡುವುದಿಲ್ಲ. ಭಗವಂತನ ಅನುಗ್ರಹದಿಂದ ಮಾತ್ರ ಸರಿಯಾದ ಕಾಲಕ್ಕೆ ಸರಿಯಾದ ಕೆಲಸ ನಡೆಯಲು ಸಾಧ್ಯ. ಶ್ರದ್ಧೆ ಭಕ್ತಿ ನಂಬಿಕೆಗಳು ಮನುಷ್ಯನನ್ನು ಅತ್ಯುನ್ನತ ಕಾರ್ಯದೆಡೆಗೆ ಪ್ರೇರೇಪಿಸುತ್ತದೆ. ಸ್ವಾಮಿ ವಿವೇಕಾನಂದ, ಶಂಕರಾಚಾರ್ಯರಂತವರು ಅತ್ಯಲ್ಪ ಕಾಲದಲ್ಲೇ ಬೃಹತ್ತಾದುದನ್ನು ಸಾಧಿಸಿ ಮಹಾಪುರುಷರಾದರು, ಅಂತಹ ದಿವ್ಯ ಪುರುಷರ ಮುಂದೆ ಕಾಲವೇ ತಲೆಬಾಗಿತ್ತು ಎಂದರೂ ತಪ್ಪಿಲ್ಲ. ಡಿ.ವಿ.ಜಿ. ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಈ ಕಾಲನ ಕುರಿತು ಈ ರೀತಿ ಹೇಳಿದ್ದಾರೆ.-
ಕಾಲವಕ್ಷಯ ದೀಪವದರ ಪಾತ್ರಿಯಪಾಠ
ಬಾಳ್ ಅದರಿನಾದೊಂದು ಕಿರು ಹಣತೆ ಮಿಣುಕು
ಗಾಳಿಯಾರಿಪುದೊಂದ ನಿನ್ನೊಂದ ಹೊತ್ತಿಪುದು ತೈಲಧಾರೆಯ ಖಂಡ-
ಕಾಲ ಎನ್ನುವುದು ಯಾವತ್ತಿಗೂ ನಂದಿ ಹೋಗದ ದೀಪ. ಅದು ಇರುವ ಪಾತ್ರೆ ಬಹಳ ಅಧಿಕವಾದುದು. ಅದಕ್ಕೆ ಹೋಲಿಸಿದರೆ ನಮ್ಮ ಬಾಳು ಒಂದು ಸಣ್ಣ ದೀಪ ಒಂದು ಚಿಕ್ಕ ಮಿಂಚು. ಗಾಳಿ ಒಂದು ದೀಪವನ್ನಾರಿಸಿ ಇನ್ನೊಂದನ್ನು ಹೊತ್ತಿಸುತ್ತದೆ. ಒಂದು ಜೀವ ಹೋದರೆ ಮತ್ತೊಂದು ಹುಟ್ಟುತ್ತದೆ. ಎಣ್ಣೆ ನಿರಂತರವಾಗಿ ಸುರಿಯುತ್ತಿರುತ್ತದೆ ಖಾಲಿಯಾಗುವುದಿಲ್ಲ.
ಕಾಲ ತನ್ನ ಒಡಲಿನಲ್ಲಿ ಏನೆಲ್ಲವನ್ನು ಹುದುಗಿಸಿಟ್ಟುಕೊಂಡಿದೆ. ಸಮಯ ಕ್ಷಣ ಕ್ಷಣಕ್ಕೂ ಜಾರುತ್ತಲೇ ಇರುತ್ತದೆ. ಕಾಲನ ಜೊತೆಗೆ ಹೆಜ್ಜೆ ಹಾಕುವುದು ಅಸಾಧ್ಯ. ಅದು ಮಹಾತ್ಮರಿಗಷ್ಟೇ ಸಾಧ್ಯ. ಆದರೆ ಒಳ್ಳೆಯ ಚಿಂತನೆ ಉತ್ತಮ ಕೆಲಸಗಳತ್ತ ಮನಸ್ಸನ್ನು ವಾಲಿಸಬಹುದು. ಅಂತಹ ಬುದ್ಧಿಯನ್ನು ಭಗವಂತನೇ ದಯಪಾಲಿಸಬೇಕು. ಅವನ ದಯೆಯಿಂದ ಮಾತ್ರ ಇಲ್ಲ ಬಂಧನಗಳಿಂದ ಜಾರಿಕೊಳ್ಳಲು ಸಾಧ್ಯ. ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಲದ ಮಹಿಮೆಗೆ ಕಾಲವೇ ಸರಿಸಾಟಿ. ನಾವಿರುವಷ್ಟು ಕಾಲ ಸತ್ಪಥದ ಹಾದಿಯಲ್ಲಿ ಸಾಗುವ ಮನಸ್ಸು ಬರಲಿ. ವ್ಯರ್ಥಗೊಳ್ಳದ ಬದುಕು ನಮ್ಮೆಲ್ಲರದ್ದಾಗಲಿ.