ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ…
ಈ ಪುಟ್ಟ ಕತೆ ಹೀಗೇ ಯಾಕಿರಬೇಕು ಅಂತ ನಂಗೊತ್ತಿಲ್ಲ. 1937ರಲ್ಲೇ ಆತ ಬರೆದ ಈ ಪುಟ್ಟ ಕತೆ ಇವತ್ತು ಓದಿದರೂ ಸಾಕು ತಲ್ಲಣಿಸುವಂತೆ ಮಾಡುತ್ತದೆ. ಬರೆದಾತನ ಹೆಸರು ಯೊಹಾನ್ನೆಸ್ ಯೆನ್ಸೆನ್ ಡೆನ್ಮಾರ್ಕಿನ ಕತೆಗಾರ.
ಈತನ ಕತೆ ಹೀಗೆ;
ಒಬ್ಬ ರೈತ. ನಾಲ್ಕು ಕಾಸು ಸಂಪಾದಿಸಿದ ನಂತರ ದುಡಿಯುವುದಕ್ಕೊಬ್ಬ ಗುಲಾಮ ಬೇಕು ಅನ್ನಿಸುತ್ತದೆ. ಸಂತೆಗೆ ಹೋಗುತ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಗುಲಾಮರನ್ನು ಮಾರುತ್ತಿದ್ದಾನೆ. ರೈತನಿಗೆ ಆ ಗುಲಾಮರು ಯಾರೂ ಇಷ್ಟವಾಗಲಿಲ್ಲ.
ವ್ಯಾಪಾರಿ ಕೊನೆಗೆ ಒಳಗೆ ಮಲಗಿದ್ದ ಎಲ್ಲ ಗುಲಾಮರನ್ನೂ ಕರೆಯುತ್ತಾನೆ. ಒಬ್ಬೊಬ್ಬರನ್ನಾಗಿ ತೋರಿಸುತ್ತಾನೆ. ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಪರೀಕ್ಷಿಸುತ್ತಾನೆ ಗುಲಾಮ. ಕೊನೆಗೊಬ್ಬ ಗುಲಾಮನನ್ನು ಮುಂದಿಟ್ಟು `ಈತ ಹ್ಯಾಗಿದ್ದಾನೆ ನೋಡು. ಕಟ್ಟುಮಸ್ತು ಆಸಾಮಿ. ಒಂದೇಟು ಕೊಟ್ಟು ನೋಡು. ಕಮಕ್ ಕಿಮಕ್ ಅನ್ನೋಲ್ಲ. ಮಾಂಸಖಂಡಗಳು ಹೇಗಿವೆ ನೋಡು’ ಎನ್ನುತ್ತಾನೆ. ಗುಲಾಮನ ಬಾಯಿ ತೆಗೆಸಿ, ಚೂರಿಯ ಹಿಡಿಯಲ್ಲಿ ಹಲ್ಲುಗಳನ್ನು ತೋರಿಸುತ್ತಾನೆ.
ರೈತ ಕೊಂಚ ಹೊತ್ತು ಯೋಚಿಸುತ್ತಾನೆ. ಪರೀಕ್ಷಿಸುವಂತೆ ಗುಲಾಮನ ಹೊಟ್ಟೆಗೊಂದು ಏಟು ಹಾಕುತ್ತಾನೆ. ಗುಲಾಮ ಮಿಸುಕಾಡೋದಿಲ್ಲ. ಪರವಾಗಿಲ್ಲ ಅನ್ನಿಸಿ ವ್ಯಾಪಾರಿ ಹೇಳಿದ ರೇಟನ್ನು ಗೊಣಗುತ್ತಲೇ ಕೊಟ್ಟು ಗುಲಾಮನನ್ನು ಮನೆಗೆ ಕರೆತರುತ್ತಾನೆ.
ದುರದೃಷ್ಟ. ರೈತ ಮನೆಗೆ ಕರೆತಂದ ಕೆಲವೇ ದಿನಗಳಲ್ಲಿ ಗುಲಾಮ ಕಾಯಿಲೆ ಬಿದ್ದು ಬಡವಾಗುತ್ತಾ ಹೋಗುತ್ತಾನೆ. ಅವನು ನಿತ್ಯವೂ ತಾನು ಬಿಟ್ಟು ಬಂದ ಕಾಡುಗಳಿಗಾಗಿ ಹಂಬಲಿಸುತ್ತಿದ್ದಾನೆ ಅನ್ನೋದು ರೈತನಿಗೆ ಗೊತ್ತಾಗುತ್ತದೆ. ರೈತನಿಗೆ ಆತನ ಹಂಬಲದ ಬಗ್ಗೆ ಅಂಥ ಅನಾದರವೇನೂ ಇಲ್ಲ. ಹಂಬಲಿಸುವ ಮನುಷ್ಯ ಮಾತ್ರ ಉಪಯೋಗಕ್ಕೆ ಬರಬಲ್ಲ ಅನ್ನುವುದು ರೈತನಿಗೂ ಗೊತ್ತು. ಕನಸುಗಳೂ ಆಶೆಗಳೂ ಇರುವವರನ್ನಷ್ಟೇ ದುಡಿಸಿಕೊಳ್ಳಬಹುದು. ಸ್ಥಿತಪ್ರಜ್ಞರು ದುಡಿಯುವುದಿಲ್ಲ.
ರೈತ ನಿರಾಸಕ್ತಿಯಿಂದ ಮಲಗಿರುವ ಗುಲಾಮನ ಹತ್ತಿರ ಹೋಗಿ ಹೇಳಿದ. `ನೀನೇನೂ ಚಿಂತೆ ಮಾಡಬೇಡ. ನಿನ್ನ ಕಾಡುಗಳಿರುವ ಜಾಗಕ್ಕೆ ನಾನೇ ನಿನ್ನನ್ನು ಕಳುಹಿಸುತ್ತೇನೆ. ಇದು ಪ್ರಮಾಣ. ನೀನಿನ್ನೂ ತರುಣ. ಐದೇ ಐದು ವರುಷ ಕಷ್ಟಪಟ್ಟು ಕೆಲಸ ಮಾಡು. ನಾನು ನಿನ್ನನ್ನು ಬಿಟ್ಟುಬಿಡ್ತೇನೆ. ನಿನಗಿಷ್ಟ ಬಂದ ಕಡೆ ಹೋಗುವಿಯಂತೆ. ನಾನೂ ನಿನ್ನನ್ನು ದುಡ್ಡು ಕೊಟ್ಟು ಕೊಂಡುಕೊಂಡಿದ್ದೇನೆ ಅಲ್ವಾ. ನನಗೂ ನಷ್ಟವಾಗಬಾರದು ತಿಳೀತಲ್ಲ’
ಮಾತು ಮಂತ್ರವಾಗಿ ಕೆಲಸ ಮಾಡಿತು. ಗುಲಾಮ ಮೈಮುರಿಯೆ ದುಡಿಯತೊಡಗಿದ. ರೈತ ನೋಡನೋಡುತ್ತಿದ್ದಂತೆ ಗುಲಾಮ ಬಿಡುವಿಲ್ಲದೆ ಕೆಲಸ ಮಾಡತೊಡಗಿದ. ರೈತನಿಗೆ ಕಟ್ಟಿಗೆ ಒಡೆಯುವಾಗ, ನೀರು ಸೇದುವಾಗ, ಹಾರೆಯಲ್ಲಿ ನೆಲ ಅಗೆಯುವಾಗ ತೋಳುಗಳಲ್ಲಿ ಪುಟಿಯುವ ಗುಲಾಮನ ಮಾಂಸಖಂಡಗಳನ್ನು ನೋಡುವುದೇ ಖುಷಿ ಅನ್ನಿಸತೊಡಗಿತು.
ಗುಲಾಮ ವರುಷಗಳ ಲೆಕ್ಕ ಹಾಕುತ್ತಿದ್ದ. ಐದು ವರುಷ ಎಂದರೆ ಐದು ಸಂಕ್ರಮಣಗಳು. ತನ್ನ ಕೈಯಲ್ಲಿ ಎಷ್ಟು ಬೆರಳುಗಳಿವೆಯೋ ಅಷ್ಟು ಸಂಕ್ರಮಣಗಳು. ಪ್ರತಿದಿನವೂ ಸೂರ್ಯ ಮುಳುಗುವುದನ್ನೇ ನೋಡುತ್ತಿದ್ದ ಗುಲಾಮ. ಸೂರ್ಯ ಮುಳುಗಿದಂತೆಲ್ಲ ಖುಷಿ. ಒಂದು ಕಲ್ಲೆತ್ತಿ ಪಕ್ಕಕ್ಕಿಡುತ್ತಿದ್ದ. ಮೊಟ್ಟ ಮೊದಲಿಗೆ ಸೂರ್ಯ ಪಥ ಬದಲಾಯಿಸಿದಾಗ ಗುಲಾಮ ತನ್ನ ಹೆಬ್ಬೆರಳು ಮಡಿಚಿದ. ಹಾಗೇ ಮತ್ತೊಂದು ಸಂಕ್ರಮಣ ಕಳೆಯಿತು, ತೋರು ಬೆರಳು ಮಡಿಚಿದ. ಗುಲಾಮನಿಗೆ ತನ್ನ ಬಿಡುಗಡೆಗೆ ಕಾರಣವಾಗುತ್ತಿರುವ ಎರಡು ಬೆರಳುಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಉಳಿದ ಮೂರು ಬೆರಳುಗಳು ಗುಲಾಮಗಿರಿಯ ಸಂಕೇತ ಅನ್ನಿಸಿ ಬೇಸರವಾಗುತ್ತಿತ್ತು.
ಹೀಗೆ ಗುಲಾಮ ಸೂರ್ಯನನ್ನು ನೋಡುತ್ತಾ ಕಾಲ ಸರಿಯುವುದನ್ನು ನೋಡುತ್ತಾ ದುಡಿಯುತ್ತಿದ್ದ ಗುಲಾಮ. ಕ್ರಮೇಣ ಅವನ ಲೆಕ್ಕಗಳು ಆಳವೂ ವಿಶಾಲವೂ ಆದವು. ಹಿಗ್ಗಿದವು. ಗೋಜಲು ಗೋಜಲಾದ ದೊಡ್ಡ ಗಂಟುಗಳಾಗಿ ಸಾಗುತ್ತಿದ್ದ ವರುಷಗಳನ್ನು ಹಿಡಿಯುವುದು ಅವನ ಅಳವಿಗೆ ಮೀರಿದ್ದು. ಆದರೆ ಹೊತ್ತು ಮುಳುಗುವ ಪುಟ್ಟ ಕ್ಷಣ ಅವನಿಗೆ ನಿಲುಕುವಂತದ್ದು. ವರ್ತಮಾನದಲ್ಲಿ ಕಣ್ಮರೆಯಾದ ಕಾಲ ಭೂತಕ್ಕೆ ಸೇರಿಕೊಳ್ಳುವ ಸೂರ್ಯಾಸ್ತದ ಘಳಿಗೆಯಲ್ಲೇ ಆತ ತನ್ನ ಬದುಕನ್ನು ಪುನರ್ರೂಪಿಸಿಕೊಳ್ಳುತ್ತಿದ್ದ. ಭೂತಕಾಲವೆನ್ನುವುದು ಎಂದೂ ಹಿಂದಿರುಗಲಾರದ ಹಾದಿಯಂತೆ, ಭವಿಷ್ಯವೆಂಬುದು ಎಂದೂ ದಾಟಲಾರದ ಮರಳುಗಾಡಿನಂತೆ ಕಾಣಿಸುತ್ತಿತ್ತು.
ಹೀಗೆ ಕಾಲದ ಬಗ್ಗೆ ಚಿಂತಿಸುತ್ತಾ ಗುಲಾಮನ ಒಳಜಗತ್ತು ವಿಸ್ತಾರಗೊಂಡಿತು.ಅವನ ಹಂಬಲವೇ ಕಾಲಕ್ಕೊಂದು ಅನಂತತೆಯನ್ನು ತಂದುಕೊಟ್ಟಿತ್ತು. ಜಗತ್ತು ಅನಂತವಾಗುತ್ತಾ ಸಾಗಿತ್ತು. ಪ್ರತಿಯೊಂದು ಸೂರ್ಯಾಸ್ತವೂ ಅವನ ಬದುಕನ್ನು ಅರ್ಥಪೂರ್ಣವಾಗಿಸುತ್ತಾ ಹೋಗುತ್ತಿತ್ತು.
ಕೊನೆಗೂ ಐದು ವರುಷ ಕಳೆಯಿತು. ಗುಲಾಮ ರೈತನ ಬಳಿಗೆ ಬಂದು ಬಿಡುಗಡೆ ಕೋರಿದ. ಕಾಡುಗಳ ನಡುವೆ ಇದ್ದ ತನ್ನ ಮನೆಗೆ ಹೋಗಬೇಕು ಅನ್ನಿಸಿತು. ರೈತ ಯೋಚಿಸಿ ಹೇಳಿದ;
`ನಿನ್ನ ಕೆಲಸಕ್ಕೆ ಮೆಚ್ಚಿದ್ದೇನೆ. ನೀನು ಹೋಗಬಹುದು. ಆದರೆ ನಿನ್ನ ಮನೆ ಎಲ್ಲಿದೆ? ಪಶ್ಚಿಮಕ್ಕಾ? ನೀನು ಆ ದಿಕ್ಕನ್ನೇ ನೋಡುತ್ತಿದ್ದುದನ್ನು ನಾನೂ ನೋಡಿದ್ದೇನೆ’
`ಹೌದು, ಪಶ್ಚಿಮಕ್ಕೆ’ ಎಂದ ಗುಲಾಮ.
`ಹಾಗಿದ್ದರೆ ಅದು ತುಂಬ ದೂರ. ಅಲ್ಲಿಗೆ ಹೋಗುವುದಕ್ಕೆ ನಿನ್ನ ಹತ್ತಿರ ಹಣವಾದರೂ ಎಲ್ಲಿದೆ? ದುಡ್ಡಿಲ್ಲದೆ ಅಲ್ಲಿಗೆ ಹೇಗೆ ಹೋಗ್ತೀಯ? ಒಂದು ಕೆಲಸ ಮಾಡು. ಮೂರು ವರುಷ, ಉಹುಂ.. ಎರಡೇ ಎರಡು ವರುಷ ಕೆಲಸ ಮಾಡು. ನಿಂಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀನಿ’
ಗುಲಾಮ ತಲೆದೂಗಿದ. ಮತ್ತೆ ಗೆಯ್ಮೆ ಶುರುಮಾಡಿದ. ಆದರೆ ಮೊದಲಿನಂತೆ ದಿನಗಳ ಲೆಕ್ಕ ಇಡೋದು ಅವನಿಗೆ ಸಾಧ್ಯವಾಗಲಿಲ್ಲ. ಹಗಲುಗನಸು ಕಾಣುತ್ತಿದ್ದ ಗುಲಾಮ ನಿದ್ದೆಯಲ್ಲಿ ಅಳುತ್ತಾ ಮಾತಾಡುತ್ತಿದ್ದ. ಮತ್ತೆ ಕಾಯಿಲೆ ಬಿದ್ದ.
ಈ ಬಾರಿ ರೈತ ಮತ್ತೆ ಅವನ ತಲೆಯ ಬಳಿ ಕೂತು ಪ್ರೀತಿಯಿಂದ ಮಾತಾಡಿದ;
`ನಾನೀಗ ಮುದುಕ. ನನಗೂ ಪಶ್ಚಿಮದ ಕಾಡುಗಳತ್ತ ಹೋಗಬೇಕು ಅನ್ನೋ ಹಂಬಲವಿತ್ತು. ಆದರೆ ಆಗ ನನ್ನ ಬಳಿ ದುಡ್ಡಿರಲಿಲ್ಲ. ಈಗ ದುಡ್ಡಿದ್ದರೂ ಅಲ್ಲಿಗೆ ಹೋಗಲಾರೆ. ಆದರೆ ನೀನು ಹುಡುಗ, ಬಲಶಾಲಿ. ಮೊದಲು ಕಾಯಿಲೆಯಿಂದ ಸುಧಾರಿಸಿಕೋ’.
ಗುಲಾಮನ ಕಾಯಿಲೆ ನಿಧಾನವಾಗಿ ಗುಣವಾಗತೊಡಗಿತು. ಆದರೆ ಕೆಲಸದಲ್ಲಿ ಹಳೆಯ ಉತ್ಸಾಹ ಇರಲಿಲ್ಲ. ಕೆಲಸದ ನಡುವೆ ನಿದ್ದೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡ. ಅದಕ್ಕೋಸ್ಕರ ರೈತನಿಂದ ಏಟು ತಿಂದ. ಬಿಕ್ಕಿ ಬಿಕ್ಕಿ ಅತ್ತ.
ಹೀಗೆ ಎರಡು ವರುಷ ಕಳೆಯಿತು. ರೈತ ಗುಲಾಮನನ್ನು ಬಿಟ್ಟುಬಿಟ್ಟ. ಗುಲಾಮ ಪಶ್ಚಿಮದ ಕಡೆಗೆ ಹೆಜ್ಜೆ ಹಾಕಿದ. ಎಷ್ಟೋ ತಿಂಗಳುಗಳ ನಂತರ ಆತ ನಿರಾಶೆ ಮತ್ತು ಹತಾಶೆಯಿಂದ ಜರ್ಜರಿತನಾಗಿ ವಾಪಸ್ಸು ಬಂದ. ಅವನಿಗೆ ತನ್ನ ಕಾಡುಗಳ ಸುಳಿವು ಸಿಕ್ಕಿರಲಿಲ್ಲ.
ರೈತ ಹೇಳಿದ `ಪೂರ್ವ ದಿಕ್ಕಿಗೆ ಹೋಗು. ಅಲ್ಲಾದರೂ ನಿನ್ನ ಕಾಡುಗಳು ಸಿಗಬಹುದು’.
ಗುಲಾಮ ಪೂರ್ವಕ್ಕೆ ಅಲೆದ. ತುಂಬ ದಿನ ನಡೆದ ನಂತರ ಅವನಿಗೆ ಅವನ ಕಾಡುಗಳು ಸಿಕ್ಕವು. ಆದರೆ ಆ ಕಾಡುಗಳ ಪರಿಚಯವೇ ಅವನಿಗೆ ಇರಲಿಲ್ಲ. ಆತ ಅಲ್ಲಿಂದಲೂ ನಿರಾಶನಾಗಿ ಮರಳಿದ, ರೈತನ ಬಳಿ ತನ್ನ ಕಾಡುಗಳು ಎಲ್ಲಿಯೂ ಇಲ್ಲ ಎಂದ. ರೈತ ಹಾಗಿದ್ದರೆ ನನ್ನ ಜೊತೆಗಿರು ಎಂದು ಪ್ರೀತಿಯಿಂದಲೇ ಹೇಳಿದ.
ಗುಲಾಮ ಅಲ್ಲೇ ಉಳಿದ. ಹೊಟ್ಟೆ ತುಂಬ ತಿನ್ನುತ್ತಿದ್ದ. ಆರೋಗ್ಯ ಕಾಪಾಡಿಕೊಳ್ಳುತ್ತಿದ್ದ. ಕಷ್ಟಪಟ್ಟು ದುಡಿಯುತ್ತಿದ್ದ. ತಪ್ಪು ಮಾಡಿದಾಗ ಏಟು ತಿನ್ನುತ್ತಿದ್ದ. ಪ್ರತಿ ಭಾನುವಾರ ಪಶ್ಚಿಮದತ್ತ ನೋಡುತ್ತಾ ಕೂರುತ್ತಿದ್ದ. ಕ್ರಮೇಣ ಅವನಿಗೊಬ್ಬಳು ದಾಸಿಯೂ ಸಿಕ್ಕಳು.
ವರುಷ ಸಂದವು. ರೈತನ ಮನೆಯಲ್ಲಿ ಗುಲಾಮನ ಆರು ಮಕ್ಕಳು ದುಡಿಯುತ್ತಿದ್ದರು. ಫಸಲು ಹುಲುಸಾಗಿತ್ತು. ಮಕ್ಕಳಿಗೆ ಕಾಡಿನ ಕಲ್ಪನೆಯೂ ಇರಲಿಲ್ಲ. ದುಡಿಯುತ್ತಿದ್ದರೆ ಕಾಲ ಸರಿಯುತ್ತದೆ ಮತ್ತು ನಮ್ಮನ್ನು ಶಾಶ್ವತವಾದ ಕಾಡುಗಳಿಗೆ ಕರೆದೊಯ್ಯುತ್ತಾರೆ ಎಂದು ರೈತ ಹೇಳುತ್ತಿದ್ದ. ಪ್ರತಿ ಭಾನುವಾರ ಗುಲಾಮ ಮಕ್ಕಳನ್ನೂ ದಿಬ್ಬದ ಮೇಲೆ ಕರೆದೊಯ್ದು ಸೂರ್ಯಾಸ್ತ ತೋರಿಸುತ್ತಿದ್ದ. ಅವರಿಗೂ ಹಂಬಲಿಸುವುದನ್ನು ಕಲಿಸುತ್ತಿದ್ದ.
ರೈತನಿಗೆ ವಯಸ್ಸಾಗಿದೆ. ಆತ ಏಳಲಾರ ಕೂರಲಾರ. ಆತನ ಮಗ ಇನ್ನೂ ಎಳಸು. ಆದರೆ ರೈತನಿಗೆ ಚಿಂತೆಯಿಲ್ಲ. ಯಾಕೆಂದರೆ ಗುಲಾಮರಿದ್ದಾರೆ. ಒಬ್ಬೊಬ್ಬರು ಬಲಶಾಲಿಗಳು. ಯಾರ ಭಯವೂ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಈ ಗುಲಾಮ ಹುಡುಗರು ಕೊಡಲಿ ಬೀಸಿ ಮರಗಳನ್ನು ಕಡಿಯುತ್ತಿದ್ದಾರೆ. ಅವರಿಗೆ ಕಾಡೇ ಇಲ್ಲ.