ಕಾಂತಾವರದಲ್ಲೊಂದು ಸಾಂಸ್ಕೃತಿಕ ಗ್ರಾಮ

ಕಾಂತಾವರದಲ್ಲೊಂದು ಸಾಂಸ್ಕೃತಿಕ ಗ್ರಾಮ

ಇಂತಹ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ, ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ. ತಮಗೀಗ 74 ವರ್ಷ. ಜೀವನ ಇನ್ನೆಷ್ಟು ದಿನವೋ ಗೊತ್ತಿಲ್ಲ, ಆದರೆ ಕನ್ನಡ ಸಂಘದ ಚಟುವಟಿಕೆ ನೂರ್ಕಾಲ ಮುಂದುವರಿಯಬೇಕು…

ಮಂಗಳೂರು: ದಾನಿಗಳಿಂದ ಹಣ ಪಡೆದು ಕನ್ನಡ ತಾಯಿ ಸೇವೆ ಮಾಡುತ್ತಿರುವ ಕಾಂತಾವರ ಕನ್ನಡ ಸಂಘವನ್ನು ಭವಿಷ್ಯದಲ್ಲಿ ಮುನ್ನಡೆಸುವ ಸಲುವಾಗಿ ಕಾಂತಾವರದಲ್ಲಿ ಸಾಂಸ್ಕೃತಿಕ ಗ್ರಾಮವೊಂದು ನಿರ್ಮಾಣವಾಗುತ್ತಿದೆ. ಸಾಹಿತಿಗಳು, ಕಲಾವಿದರು ಮತ್ತು ಪರಿಸರಾಸಕ್ತರಿಗೆ ಮಾತ್ರ ಇಲ್ಲಿ ನೆಲೆಸಲು ಅವಕಾಶವಿದೆ!

ಇಂತಹ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ, ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ. ತಮಗೀಗ 74 ವರ್ಷ. ಜೀವನ ಇನ್ನೆಷ್ಟು ದಿನವೋ ಗೊತ್ತಿಲ್ಲ, ಆದರೆ ಕನ್ನಡ ಸಂಘದ ಚಟುವಟಿಕೆ ನೂರ್ಕಾಲ ಮುಂದುವರಿಯಬೇಕು. ನಾಡಿನ ಮೂಲೆ ಮೂಲೆಗಳಿಂದ ಹತ್ತಾರು ಕನ್ನಡಾಸಕ್ತರು ಕಾಂತಾವರದಲ್ಲೇ ಬಂದು ನೆಲೆಸಿ ಕನ್ನಡ ಕಾಯಕ ಮುಂದುವರಿಸಬೇಕು ಎಂಬ ಕಳಕಳಿಯ ಫಲವೇ ಸಾಂಸ್ಕೃತಿಕ ಗ್ರಾಮ.

ಕುಗ್ರಾಮವಾಗಿದ್ದ ಕಾಂತಾವರದಲ್ಲಿ 1965ರಲ್ಲಿ ಕಾರ್ಕಳ ತಾಲ್ಲೂಕು ಬೋರ್ಡ್‌ ಗ್ರಾಮೀಣ ಚಿಕಿತ್ಸಾಲಯ ತೆರೆಯಿತು. ಅಲ್ಲಿಗೆ ವೈದ್ಯಾಧಿಕಾರಿಯಾಗಿ ಬಂದ ಡಾ.ನಾ.ಮೊಗಸಾಲೆ ಅವರು 2002ರಲ್ಲಿ ನಿವೃತ್ತಿಯಾಗುವವರೆಗೂ ಅಲ್ಲಿಯೇ ವೈದ್ಯರಾಗಿ ಸೇವೆ ಸಲ್ಲಿಸಿದರು. ಜತೆಗೆ ಅವರು ಕೈಗೊಂಡ ಸಾಹಿತ್ಯ ಸೇವೆಯ ಫಲ 17 ಕಾದಂಬರಿಗಳು, 11 ಕವನ ಸಂಕಲನಗಳು, 6 ಸಣ್ಣಕಥಾ ಸಂಕಲನಗಳು, 5 ಲೇಖನ ಸಂಕಲನಗಳು, 10 ಸಂಪಾದನಾ ಕೃತಿಗಳು, 6 ವೈದ್ಯಕೀಯ ಕೃತಿಗಳು, ಒಂದು ಗೀತಾನಾಟಕ. ಜತೆಗೆ ಅಂಕಣ ಬರಹ. ಇದಕ್ಕಿಂತಲೂ ಮಿಗಿಲಾಗಿ ಅವರು ಕಟ್ಟಿ ಬೆಳೆಸಿದ್ದು ಕಾಂತಾವರ ಕನ್ನಡ ಸಂಘವನ್ನು, ಆ ಮೂಲಕ ಎಳೆದದ್ದು ಕನ್ನಡ ಬಂಡಿಯನ್ನು.

ಕನ್ನಡ ಸಂಘದ ಹೆಸರಲ್ಲಿ ಮೊಗಸಾಲೆಯವರು ಮಾಡಿದ ಕಾರ್ಯ ಬಹಳ ದೊಡ್ಡದು. ಕಾಂತಾವರದಲ್ಲಿ ಕನ್ನಡ ಭವನ ನಿರ್ಮಿಸಿ ಸುಮ್ಮನಾಗದೆ, ಮುದ್ದಣ ಕಾವ್ಯ ಪ್ರಶಸ್ತಿ, ಸುವರ್ಣ ಸನ್ಮಾನ, ಕಾಂತಾವರ ಪುರಸ್ಕಾರ,ನಾಡುನುಡಿಗೆ ಸೇವೆ ಸಲ್ಲಿಸಿದವರಿಗೆ ವಾರ್ಷಿಕ ಗೌರವ ಪ್ರಶಸ್ತಿ, ನಾಡಿಗೆ ನಮಸ್ಕಾರ ಪುಸ್ತಕ ಮಾಲಿಕೆ, ತಿಂಗಳ ಕಾರ್ಯಕ್ರಮ ನುಡಿನಮನ, ಅಲ್ಲಿನ ಭಾಷಣಗಳನ್ನು ದಾಖಲಿಸುವ ನುಡಿಹಾರ…ಪಟ್ಟಿ ಬೆಳೆಯುತ್ತದೆ. ಪ್ರಶಸ್ತಿಗಳ ಮೊತ್ತ ವಾರ್ಷಿಕ ರೂ 1 ಲಕ್ಷ ಮೀರುತ್ತಿದೆ. ಅಲ್ಲಮಪ್ರಭು ಪೀಠವನ್ನೂ ಅವರು ಸ್ಥಾಪಿಸಿದ್ದು, ಕಾಂತಾವರವೆಂದರೆ ಪುಟ್ಟ ಹಳ್ಳಿಯಲ್ಲ, ಅದು ಕನ್ನಡದ ನಾಳೆಗೊಂದು ಭರವಸೆ ಎಂಬಂತೆ ಸಜ್ಜುಗೊಳಿಸಿದ್ದಾರೆ. ಒಂದು ವಿಶ್ವವಿದ್ಯಾಲಯ ಮಾಡಲಾಗದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ.

ಇಂತಹ ಊರಿನಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರ ನಡೆಯಬೇಕು ಎಂಬ ಪರಿಕಲ್ಪನೆಯಲ್ಲಿ 5 ವರ್ಷದ ಹಿಂದೆ ಮೊಗಸಾಲೆ ಅವರು ಐದೂವರೆ ಎಕರೆ ಜಮೀನು ಖರೀದಿಸಿ, 32 ವಸತಿ ನಿವೇಶನಗಳನ್ನು ಸಿದ್ಧಪಡಿಸಿದ್ದಾರೆ. ನೀರು, ವಿದ್ಯುತ್‌ ಸೌಲಭ್ಯ ಕಲ್ಪಿಸಿದ್ದಾರೆ.

‘ನಾನು ಪ್ರಚಾರಕ್ಕಾಗಿ ಕನ್ನಡ ತಾಯಿಯ ಸೇವೆ ಮಾಡಲಿಲ್ಲ. ನನ್ನ ಸೇವೆಯನ್ನು ಕಂಡು ಜಗತ್ತು ಇಂದು ಕಾಂತಾವರದತ್ತ ದೃಷ್ಟಿ ನೆಟ್ಟಿದೆ. ಸರ್ಕಾರ ಇದುವರೆಗೆ ಸುಮಾರು ರೂ 1 ಕೋಟಿಯಷ್ಟು ನೆರವು ನೀಡಿದೆ. ಇಲ್ಲಿ ಅದಕ್ಕಿಂತಲೂ ಅಧಿಕ ವೆಚ್ಚದ ಕನ್ನಡ ಕೆಲಸಗಳಾಗಿವೆ. ಎಲ್ಲವೂ ದಾನಿಗಳು, ಕನ್ನಡ ಪ್ರೇಮಿಗಳ ಉದಾರತೆಯಿಂದಲೇ ನಡೆದಿದೆ. ಈ ಕಾಯಕ ನಿರಂತರವಾಗಿರಬೇಕು ಎಂಬ ಕಾಣಕ್ಕೆ ಕನ್ನಡಾಭಿಮಾನಿಗಳನ್ನು ನಾಡಿನ ನಾನಾ ಭಾಗಗಳಿಂದ ಕಾಂತಾವರಕ್ಕೆ ಆಹ್ವಾನಿಸಿ ಇಲ್ಲಿಯೇ ಮನೆ ಕಟ್ಟಿಕೊಳ್ಳುವ ಯೋಜನೆ ರೂಪಿಸಿದೆ. 52 ವರ್ಷಗಳಲ್ಲಿ ನಾನು ರೂಪಿಸಿದ ಯೋಜನೆಗಳೆಲ್ಲವೂ ಇಲ್ಲಿ ಕಾರ್ಯಗತಗೊಂಡಿವೆ. ಅದರ ಮುಂದುವರಿದ ಭಾಗವೇ ಸಾಂಸ್ಕೃತಿಕ ಗ್ರಾಮ’ ಎನ್ನುತ್ತಾರೆ ಡಾ.ಮೊಗಸಾಲೆ.

ಇಲ್ಲಿದೆ ಕಾಂತಾವರ

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನಲ್ಲಿದೆ ಕಾಂತಾವರ. ಕಾರ್ಕಳ–ಮೂಡುಬಿದಿರೆ ಹೆದ್ದಾರಿಯ ಬೆಳುವಾಯಿಯಿಂದ 5 ಕಿ.ಮೀ.ಕ್ರಮಿಸಿದರೆ ಕಾಂತಾವರ ಸಿಗುತ್ತದೆ. ಕಾಂತಾವರದಿಂದ ಕಾರ್ಕಳ ಮತ್ತು ಮೂಡುಬಿದಿರೆಗೆ ತಲಾ 15 ಕಿ.ಮೀ., ಬೆಳ್ಮಣ್‌ಗೆ 10 ಕಿ.ಮೀ. ನಿಟ್ಟೆಗೆ 7 ಕಿ.ಮೀ. ಅಂತರ.

* ಇದು ರಿಯಲ್‌ ಎಸ್ಟೇಟ್‌ ವ್ಯವಹಾರವಲ್ಲ, ಕನ್ನಡ ತಾಯಿಯ ತೇರು ಎಳೆಯುವವರಿಗೆ ಮಾತ್ರ ಮೀಸಲಿಟ್ಟ ನಿವೇಶನಗಳು ಇವು
–ಡಾ.ನಾ.ಮೊಗಸಾಲೆ
ಕಾಂತಾವರ ಕನ್ನಡ ಸಂಘದ ಅಧ್ಯಕ್ಷ

ಮುಖ್ಯಾಂಶಗಳು

* 11 ಸೆಂಟ್ಸ್ ಗಾತ್ರದ 29 ನಿವೇಶನಗಳು ಲಭ್ಯ

* ಸೆಂಟ್ಸ್‌ಗೆ ರೂ 35 ಸಾವಿರ ದರ

* ಕನ್ನಡ ಸೇವಕರು ಎಂಬು ದನ್ನು ಸಾಬೀತುಪಡಿಸುವ ಪುರಾವೆಯೊಂದಿದ್ದರೆ ಸಾಕು

ಮಾಹಿತಿಗೆ ಸಂಪರ್ಕಿಸಿ: 9900701666 (ಡಾ.ನಾ.ಮೊಗಸಾಲೆ), 9900218345 (ನಿರಂಜನ ಮೊಗಸಾಲೆ). [email protected]

Leave a Reply