ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ….
ಮನುಷ್ಯನ ಜೀವನದ ಅತ್ಯಂತ ನಿರ್ಣಾಯಕ ಘಳಿಗೆ ಯಾವುದು ಎಂದು ಕೇಳಿಕೊಳ್ಳಿ. ಅದನ್ನು ಇನ್ನಷ್ಟು ಸರಳಗೊಳಿಸಿ `ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ ಯಾವುದಾಗಿರುತ್ತದೆ’ ಅಂತ ಪ್ರಶ್ನಿಸಿಕೊಳ್ಳಿ. ತಕ್ಷಣಕ್ಕೆ ಉತ್ತರ ಸಿಕ್ಕುವುದಿಲ್ಲ. `ನಾನು ಇಂತಿಂಥವರ ಮಗನಾಗಿಯೋ ಮಗಳಾಗಿಯೋ ಹುಟ್ಟಿದ್ದು. ಇಂಥ ಸ್ಕೂಲಿಗೆ ಹೋಗಲು ಇಚ್ಚಿಸಿದ್ದು. ಇಂಥ ಕೋರ್ಸು ತೆಗೆದುಕೊಂಡದ್ದು, ಇಂಥಿಂಥಾ ಗೆಳೆಯರನ್ನು ಆರಿಸಿಕೊಂಡಿದ್ದು. ಇಂಥಾ ಕೆಲಸಕ್ಕೆ ಸೇರಿದ್ದು. ಇಂಥ ಹುಡುಗನಿಗೆ ಮನಸೋತದ್ದು..’. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದೂ ನಿರ್ಣಾಯಕವೇ ಅನ್ನಿಸಿಬಿಡುತ್ತದೆ. ಒಂದು ವೇಳೆ ನಮ್ಮೂರಿನಲ್ಲಿ ಕಾಲೇಜು ಮುಗಿಸಿ ಮೈಸೂರು ಯೂನಿವರ್ಸಿಟಿಗೆ ಬಂದಿದ್ದರೆ ಒಳ್ಳೆಯ ಮೇಷ್ಟರ ಕೈಲಿ ಪಾಠ ಹೇಳಿಸಿಕೊಳ್ಳಬಹುದಿತ್ತು. ಮೈಸೂರಿನವಳೇ ಆದ ಅಷ್ಟಿಷ್ಟು ಹಾಡುವುದಕ್ಕೂ ಬರುವ ಮುಗುದೆಯೊಬ್ಬಳನ್ನು ಮದುವೆಯಾಗಬಹುದಿತ್ತು. ಅಥವಾ ಮೈಸೂರಿನಲ್ಲೇ ಮನೆಯಿರುವ ಸಂಜೆ ಚಾಮುಂಡಿ ಬೆಟ್ಟದ ತಪ್ಪಲಿಗೆ ಕರೆದೊಯ್ಯುವ ಜಾಣನ ಕೈ ಹಿಡಿಯಬಹುದಿತ್ತು. ಹಾಗೆಲ್ಲ ಮನಸ್ಸು ಹರಿದಾಡುತ್ತದೆ. ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ನಾವು ಚಲಿಸುತ್ತೇವೆ.
ಅದೇ ಸಾಹಿತ್ಯ. ಹೀಗನ್ನಿಸಿದ್ದನ್ನು ಯಾರೋ ಬರೆದಾಗ ಮೆಚ್ಚುಗೆಯಾಗುತ್ತದೆ. ಅದನ್ನು ಓದುತ್ತೇವೆ. ಓದಿದ ಪಾತ್ರದ ಜೊತೆ ನಮ್ಮನ್ನು ಗುರುತಿಸಿಕೊಳ್ಳುತ್ತೇವೆ. ನಾವೇ ವಾಸಿ ಅನ್ನಿಸುತ್ತದೆ ಅಥವಾ ನಾನು ಅನಿವಾಸಿ ಎನಿಸುತ್ತದೆ. ಒಂದು ಸಣ್ಣ ಬದಲಾವಣೆ ನಮ್ಮಲ್ಲಿ ನಮಗೆ ಗೊತ್ತಿಲ್ಲದೆ ಆಗುತ್ತದೆ. ಅದು ಸಾಹಿತ್ಯಕ್ಕಿರುವ ಶಕ್ತಿ.
ಸೀತೆಯಂಥ ಸೀತೆಯೇ ಕಾಡಲ್ಲಿದ್ದಳು, ಪಾಂಡವರಂಥ ಧರ್ಮಾತ್ಮರು ವನವಾಸಕ್ಕೊಳಪಟ್ಟರು, ಐವರು ಗಂಡರ ದ್ರೌಪದಿಗೆ ಮಾನಭಂಗವಾದಾಗ ಯಾರೂ ನೆರವಿಗೆ ಬರಲಿಲ್ಲ, ಅಷ್ಟು ಚೆನ್ನಾಗಿ ಅಡುಗೆ ಮಾಡುತ್ತಿದ್ದ ನಳನಿಂದ ದಮಯಂತಿ ದೂರಾದಳು, ಅಷ್ಟೆಲ್ಲ ಇದ್ದೂ ಸಿದ್ದಾರ್ಥ ಎಲ್ಲ ಬಿಟ್ಟು ಹೊರಟನಲ್ಲ. ಇನ್ನು ನಮ್ದೇನು ಮಹಾ? ಇದು ಸಾಹಿತ್ಯಕ್ಕಿರುವ ಸಾಂತ್ವನ.
ಹೇಗೆ ನೋಡಿದರೂ ನಮಗೆ ಪಾಠ ಕಲಿಸುವುದು ಅಕ್ಷರವೇ ಹೊರತು ಅನುಭವವಲ್ಲ. ಕಲೆಯೇ ಹೊರತು ಜೀವನವಲ್ಲ. ಅನುಭವದಿಂದ ಪಾಠ ಕಲಿಯಬೇಕು ಅನ್ನುತ್ತೇವೆ. ಆದರೆ ನಮ್ಮೆದುರಿಗೇ ನಡೆದ ಘಟನೆಯಿಂದ ನಾವು ಪಾಠ ಕಲಿಯುವುದಿಲ್ಲ. ನಮ್ಮ ಕಣ್ಮುಂದೆ ಕಾಣುವ ಮೋಚಿಯ ಕಷ್ಟ ನಮಗೆ ಕಾಣುವುದಿಲ್ಲ. ಭಾರತೀಪ್ರಿಯ `ಮೋಚಿ’ ನಮ್ಮ ಕಡು ಅನುಕಂಪಕ್ಕೆ ಕಾರಣನಾಗುತ್ತಾನೆ. ನಮ್ಮ ಕಣ್ಣೆದುರಿಗಿನ ತಬರನ ಕಷ್ಟಕ್ಕೆ ನಾವು ಸ್ಪಂದಿಸುವುದಿಲ್ಲ. ತೇಜಸ್ವಿ ತಬರನ ಕತೆ ಬರೆದರೆ ನಿಟ್ಟುಸಿರಿಡುತ್ತೇವೆ.
ಅಂದರೆ, ಕಲೆ ಜೀವನದ ಪ್ರತಿಬಿಂಬವಾಗಿದ್ದೂ ಜೀವನಕ್ಕಿಂತ ಆಪ್ತವಾಗುವುದಕ್ಕೆ ಕಾರಣವೇನು? ಉತ್ತರ ಅಷ್ಟು ಸರಳವಾಗಿಲ್ಲ. ಅದು ನಮ್ಮನ್ನು ತಲುಪಬೇಕಾದ ರೀತಿಯಲ್ಲಿ, ತಲುಪಬೇಕಾದ ಸ್ತರದಲ್ಲಿ ಮತ್ತು ತಲುಪಬೇಕಾದ ಮನಸ್ಥಿತಿಯಲ್ಲಿ ತಲುಪುತ್ತದೆ. ಬಸ್ಸು ಸಿಗದೆ ಒದ್ದಾಡುತ್ತಾ, ಪರವೂರಲ್ಲಿ ಸತ್ತು ಬಿದ್ದಿರುವ ಅಪ್ಪನ ಅಂತ್ಯಕ್ರಿಯೆಗೆ ಹೋಗಲಾರದವನ ಕಷ್ಟವನ್ನು ಓದಿದವನಿಗೆ ಆಗುವ ಅನುಭವ, ಅವನ ಪಕ್ಕದಲ್ಲೇ ನಿಂತಿದ್ದ ಅವನ ಗೆಳೆಯನಿಗೆ ಆಗುವುದಿಲ್ಲ. ಯಾಕೆಂದರೆ ಆ ಗೆಳೆಯ ಕೂಡ ಕಷ್ಟದಲ್ಲಿರುವವನ ಸಹಪ್ರಯಾಣಿಕ. ಅವನೂ ಆ ಕಷ್ಟದಲ್ಲಿ ಭಾಗಿ. ಹೀಗಾಗಿ ಅವನಿಗೆ ಆ ಪ್ರಸಂಗ ಅನುಭವಕ್ಕೆ ಬಂದಿದೆ. ಅದರ ಹಿನ್ನೆಲೆ ಮುನ್ನೆಲೆಗಳು ಗೊತ್ತಿವೆ.
ಸಾಹಿತ್ಯ, ಕಲೆಗಳಿಗಿರುವ ಶಕ್ತಿಯೇ ಅದು. ಅವು ಬದುಕನ್ನು ಹತ್ತಿರಕ್ಕೆ ತರುತ್ತವೆ. ನಮ್ಮ ಕಷ್ಟಗಳ ನಡುವೆ ನಿಂತುಕೊಂಡು ಮತ್ತೊಬ್ಬರ ಕಷ್ಟಗಳನ್ನು ನೋಡುವ ಹೊತ್ತಿಗೆ ನಮಗೆ ನಮ್ಮ ರಗಳೆಗಳೇ ಸಾಕಾಗಿರುತ್ತವೆ. ಆದರೆ ನಿರಾಳವಾಗಿರುವ ಹೊತ್ತಿನಲ್ಲಿ ಓದುತ್ತಾ ಕುಳಿತಾಗ ಇನ್ನೊಂದು ಜೀವನದ ದರ್ಶನವಾಗುತ್ತದೆ.
-2-
ಹಿಂದೊಂದು ಪದ ಬಳಕೆಯಲ್ಲಿತ್ತು, ಬಹುಶ್ರುತ. ತುಂಬ ಓದಿಕೊಂಡವನು ಎನ್ನುವುದು ಧ್ವನ್ಯರ್ಥ. ತುಂಬ ಕೇಳಿಸಿಕೊಂಡವನು ಅನ್ನುವುದು ಪದಾರ್ಥ. ಹೀಗೆ ಓದಿಕೊಂಡು ಹಿರಿಯನಾದವನು ಕಿರಿಯರಿಗೆ ತಿಳಿಸಿಹೇಳಬೇಕು ಅನ್ನುವ ಕ್ರಮವೊಂದಿತ್ತು. ಕಿರಿಯರು ಹಿರಿಯರ ಸಲಹೆ ಕೇಳಬೇಕಾಗಿತ್ತು.
ಆದರೆ ಈಗ ಬಹುಶ್ರುತರೆಲ್ಲಿದ್ದಾರೆ? ಇವತ್ತಿನ ಸಿದ್ಧಾಂತವೇ ಬೇರೆ. ಅಗತ್ಯಕ್ಕೆ ತಕ್ಕಷ್ಟನ್ನು ಓದಿಕೊಂಡರೆ ಸಾಕು ಎಲ್ಲ ಪ್ರಾಕ್ಟಿಕಲ್ ಮನುಷ್ಯರು ನಾವು. ಪರೀಕ್ಷೆ ಪಾಸಾಗುವುದಕ್ಕೆ, ನಿತ್ಯದ ವ್ಯವಹಾರ ಸರಿದೂಗಿಸುವುದಕ್ಕೆ ಎಷ್ಟು ಬೇಕೋ ಅಷ್ಟಿದ್ದರೆ ಸಾಕು. ಇವತ್ತು ಎಲ್ಲಕ್ಕಿಂತ ಮುಖ್ಯ ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು, ಅದು ಮಾನವೀಯವೋ ಅಮಾನವೀಯವೋ ಎಂದು ನೋಡದೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು. ಆದಷ್ಟು ಕಡಿಮೆ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳುವುದು. ಯಾರಿಗೂ ನಮ್ಮ `ಕತೆ’ಗಳನ್ನು ಹೇಳಿಕೊಳ್ಳದೇ ಇರುವುದು. ಆದಷ್ಟು ಗೌಪ್ಯವಾಗಿ ಬದುಕುವುದಕ್ಕೆ ಯತ್ನಿಸುವುದು. ಕರ್ತವ್ಯನಿಷ್ಠರಾಗುವುದು.
ರಾಬರ್ ಲೂಯಿಸ್ ಸ್ಟೀವ್ಸ್ ತನ್ನ ಒಂದು ಪ್ರಬಂಧದಲ್ಲಿ ಬರೆಯುತ್ತಾನೆ;
ಅವಸರದಲ್ಲಿ ಓಡುತ್ತಿದ್ದ ಗೆಳೆಯನನ್ನು ಕರೆದೆ; `ಸ್ವಲ್ಪ ನಿಲ್ಲೋ ಗೆಳೆಯ’.
`ಪುರುಸೊತ್ತಿಲ್ಲ’ ಅಂದ.
`ಯಾಕೆ’
`ಬ್ಯಾಂಕಿಗೆ ಹೋಗಬೇಕು. ಎಷ್ಟು ಕೆಲಸ ಇದೆ ಗೊತ್ತಾ? ಊಟಕ್ಕೂ ಟೈಮಿರೋಲ್ಲ.’
`ಬ್ಯಾಂಕಿಗೆ ಯಾಕೆ ಹೋಗ್ತೀಯಾ’
`ಅಂದ್ರೆ… It’s my business’
`ಬಿಸಿನೆಸ್… ಹಾಗಂದ್ರೇನು?’
`ಕರ್ತವ್ಯ ಕಣಯ್ಯಾ… ಡ್ಯೂಟಿ’
ಅಂದರೆ ಒಬ್ಬನ ವ್ಯಾಪಾರವೇ ಅವನ ಕರ್ತವ್ಯವೂ ಹೌದಾ? ಅವನು ಹೋದ ನಂತರ ಯೋಚಿಸಿದೆ. ಬ್ಯಾಂಕು ನಡೆಸುವುದು ನನ್ನ ಕರ್ತವ್ಯವಂತೂ ಅಲ್ಲ. ಅಂದ ಮೇಲೆ ನನ್ನ ಗೆಳೆಯನಿಗೆ ಹೇಗೆ ಅದು ಕರ್ತವ್ಯವಾಯಿತು? ಹಾಗಂತ ಅವನಿಗೆ ಯಾರು ಹೇಳಿದರು? ಭಗವದ್ಗೀತೆಯಲ್ಲಿ ಹಾಗೆ ಬರೆದಿದೆಯಾ? ಬ್ಯಾಂಕಿನಲ್ಲಿ ಕೆಲಸ ಮಾಡುವುದು ಒಳ್ಳೆಯ ಕೆಲಸ ಎಂದು ಆತ ಹೇಗೆ ಅಂದುಕೊಂಡ? ಒಂದು ವೇಳೆ ಬ್ಯಾಂಕಿನಲ್ಲಿ ಅವನಿಗೆ ಕೆಲಸ ಸಿಕ್ಕಿರದೇ ಇದ್ದರೆ ಅದು ಅವನ ಕರ್ತವ್ಯ ಆಗಿರುತ್ತಿತ್ತಾ? ಇಂಥ ಪ್ರಶ್ನೆಗಳನ್ನೆಲ್ಲ ಕೇಳಿಕೊಂಡು ಸಾಕಾದ ನಂತರ ಅವನ್ನೆಲ್ಲ ಒಂದಾಗಿಸಿ ಕೇಳಿಕೊಂಡೆ; ನನ್ನ ಗೆಳೆಯನೇಕೆ ಬ್ಯಾಂಕ್ ಆದ?
ನನಗೆ ಉತ್ತರ ನಿಧಾನವಾಗಿ ಹೊಳೆಯಿತು. ಅವನೇನು ಆಸೆಪಟ್ಟು ಬ್ಯಾಂಕ್ ಆಗಲಿಲ್ಲ. ಅವನನ್ನು ಹಾಗಾಗುವಂತೆ ಮಾಡಿದ್ದು ಅವನ ಸುತ್ತಮುತ್ತಲಿನ ಮಂದಿ. ಅವನ ಓದು, ಅವನ ಹಿನ್ನೆಲೆ ಎಲ್ಲವೂ ಆತ ಬ್ಯಾಂಕಿನಲ್ಲೊಂದು ಉದ್ಯೋಗ ಹಿಡಿಯುವಂತೆ ಪ್ರೇರೇಪಿಸಿರಬೇಕು.
ಅವನು ಬ್ಯಾಂಕಿನಲ್ಲಿ ಉದ್ಯೋಗಿಯಾದಂತೆ ಒಬ್ಬೊಬ್ಬರು ಒಂದೊಂದು ಕಡೆ ನೆಲೆ ಕಂಡುಕೊಳ್ಳುತ್ತಾರೆ. ಕೆಲವರು ತಮ್ಮ ತಂದೆಯ ಓಬೀರಾಯನ ಕಾಲದ ಬಣ್ಣಮಾಸಿದ ಅಂಗಡಿಗಳಲ್ಲಿ, ಮತ್ತೆ ಕೆಲವರು ತಮ್ಮದೇ ಆಫೀಸುಗಳಲ್ಲಿ ದುಡಿಯುತ್ತಾರೆ. ಕಾಲೇಜು ಮೆಟ್ಟಲು ಹತ್ತುವ ಆಸೆಯಿದ್ದರೂ ಅದಕ್ಕೆ ಬೇಕಾದ ಸಂಪತ್ತಿದ್ದರೂ ಕರ್ತವ್ಯಕ್ಕೆ ಅಂಟಿಕೊಂಡು ಉದ್ಯೋಗಸ್ಥರಾದವರಿದ್ದಾರೆ.
ಆದರೆ ಯಾರೂ ಯಾಕೆ ಸಾಹಿತ್ಯವನ್ನು, ಬರೆಯುವುದನ್ನು ವೃತ್ತಿಯಾಗಿ ಸ್ವೀಕರಿಸುವುದಿಲ್ಲ. ಬರೆಯುವುದು ಯಾಕೆ ಕರ್ತವ್ಯವಲ್ಲ. ಅದೇಕೆ ಹವ್ಯಾಸವಾಗುತ್ತದೆ? ಬ್ಯಾಂಕಿಗೆ ಹೋಗಿ ದುಡಿಯುವುದು ಹವ್ಯಾಸವಾಗಿ, ನಾಟಕ ಮಾಡುವುದು ವೃತ್ತಿಯಾಗುವ ಕಾಲ ಯಾವತ್ತು ಬರುತ್ತದೆ?
-3-
ಈ ಪ್ರಶ್ನೆಗಳು ಸ್ಟೀವ್ಸ್ ನಲ್ಲಿ ಮೂಡಿದ್ದು 1880ರ ಹೊತ್ತಿಗೆ. ಆತ ಹೇಗೆ ಅನೇಕರು ತಮ್ಮ ಸ್ವಂತ ಆಯ್ಕೆಯೇ ಇಲ್ಲದವರಂತೆ ಒಂದೇ ವೃತ್ತಿ ಹಿಡಿಯುತ್ತಾರೋ ಹಾಗೇ ಅಭ್ಯಾಸಗಳೂ ಒಂದೇ ಆಗಿರುತ್ತವೆ ಎನ್ನುವುದನ್ನೂ ಗಮನಿಸಿದ. ಇಂಗ್ಲೆಂಡಿನವನು ಗಟಗಟ ಬಿಯರ್ ಕುಡಿಯುತ್ತಾನೆ; ಫ್ರೆಂಚ ನಾಲಗೆ ತುದಿಯಲ್ಲಿಟ್ಟುಕೊಂಡು ವೈನ್ ಹೀರುತ್ತಾನೆ. ಹೀಗಾಗಿ ಫ್ರೆಂಚ ಅರ್ಧಗ್ಲಾಸ್ ವೈನನ್ನು ಇಡೀ ಮಧ್ಯಾಹ್ನ ಕುಡೀತಿರಬಲ್ಲ. ಇಂಗ್ಲೀಷ್ ನವನಿಗೆ ಬಾರ್ ನಲ್ಲಿ ತುಂಬ ಹೊತ್ತು ಕಳೆಯುವುದು ಇಷ್ಟವಿಲ್ಲ. ಆ ಅಲ್ಪಾವಧಿಯಲ್ಲೇ ಆತ ಒಂದು ಬಕೆಟ್ ಬಿಯರ್ ಕುಡಿಯಬೇಕು. ಬ್ರಿಟನ್ನಿನವನು ಪ್ರತಿದಿನ ಮುಂಜಾನೆ ತಣ್ಣೀರ ಸ್ನಾನ ಮಾಡುತ್ತಾನೆ. ಫ್ರೆಂಚಿನ ಮನುಷ್ಯ ಅಪರೂಪಕ್ಕೆ ಬಿಸಿನೀರು ಸ್ನಾನ ಮಾಡುತ್ತಾನೆ.
ಹೀಗೆ… ಇಲ್ಲಿ ಸ್ವಂತದ್ದೇನೂ ಇಲ್ಲ. ನಾವು ಏನೂ ಮಾಡುವುದಿಲ್ಲ, ಏನೂ ಓದುವುದಿಲ್ಲ, ಏನೂ ಕೇಳುವುದಿಲ್ಲ, ಏನೂ ಹೇಳುವುದಿಲ್ಲ. ಎಲ್ಲರೂ ಒಂದು ರಾಷ್ಟ್ರ ಏನು ಮಾಡುತ್ತದೋ ಅದನ್ನೇ ಮಾಡುತ್ತಾರೆ. ಕ್ರಿಕೆಟ್ ಮ್ಯಾಚು ನಡೆಯುತ್ತಿದ್ದರೇ ಇಡೀ ರಾಷ್ಟ್ರವೇ ಮ್ಯಾಚು ನೋಡುತ್ತಿರುತ್ತದೆ. ಸುದ್ದಿ ಬಿತ್ತರವಾಗುತ್ತಿದ್ದರೆ ಇಡೀ ದೇಶವೇ ಸುದ್ದಿ ಕೇಳುತ್ತಿರುತ್ತದೆ. ಹೀಗಾಗಿ ಒಂದು ರಾಷ್ಟ್ರದ ಯೋಚನೆ, ಚಿಂತನೆ ಒಂದೇ ಆಗಿರುತ್ತದೆ. ಯಾರೂ ಯಾಕೆ ಒರಿಜಿನ್ ಆಗಿ ಚಿಂತಿಸುವುದಿಲ್ಲ?
ಈ ದೃಷ್ಟಿಯನ್ನಿಟ್ಟುಕೊಂಡು ನೋಡಿದಾಗ ಲೇಖಕ ಅಪಾರ ಜೀವನಾನುಭವದ ಮನುಷ್ಯ ಆಗಿರಬೇಕಾದದ್ದು ಮುಖ್ಯವಾಗುತ್ತದೆ. ಒಬ್ಬ ಸ್ಕೂಲು ಮಾಸ್ತರನ ಕಷ್ಟ ಮತ್ತು ಒಬ್ಬ ಹೊಟೆಲಿನ ಮಾಣಿಯ ಕಷ್ಟ ಎರಡೂ ಅವನಿಗೆ ಗೊತ್ತಿರಬೇಕಾಗುತ್ತದೆ. ಶಿವರಾಮ ಕಾರಂತರು `ಚೋಮನದುಡಿ’ ಬರೆದಾಗ ಎದುರಾದದ್ದು ಅಥೆಂಟಿಸಿಟಿಯ ಪ್ರಶ್ನೆ.