“ಕಲೆಯ ಹೆಜ್ಜೆಯೊಂದಿಗೆ ಜೀವನ ಪಯಣ”,

ಕಲೆಯ ಯಾವುದೇ ಪ್ರಕಾರವೇ ಇರಲಿ, ಅದು ಬಹಳ ಪರಿಣಾಮಕಾರಿಯಾಗಿರುತ್ತದೆ; ನಮ್ಮಲ್ಲಿ ಸೌಂದರ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ; ಸಂಸ್ಕಾರ–ಸಂಸ್ಕೃತಿಯನ್ನು ಕಲಿಸುತ್ತದೆ. ಈ ಕಲೆ ಸೃಷ್ಟಿಯಾಗುವುದೇ ದೇಹ ಮತ್ತು ಮನಸ್ಸಿನ ಸಮ್ಮಿಲನದಿಂದ. ಈ ಸಮ್ಮಿಲನ ಉತ್ತಮ ಸಂವಹನಕ್ಕೆ ನಾಂದಿಯಾಗುತ್ತದೆ. ಉತ್ತಮ ಸಂವಹನಕ್ಕೆ ಒಳಪಡುವ ವ್ಯಕ್ತಿಯು ಸಂಸ್ಕಾರಯುತನಾಗಿ ಬೆಳೆಯುತ್ತಾನೆ. ಈ ನಿಟ್ಟಿನಲ್ಲಿ ಕಲೆ ವ್ಯಕ್ತಿತ್ವನಿರ್ಮಾಣದ ಹಂತಗಳಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ.ಹಿಂದೆ ಗುರುಕುಲಪದ್ಧತಿಯಲ್ಲಿ ಕಲಿಯಲು ಮಾತ್ರ ಅವಕಾಶ ಇದ್ದ ಸಾಂಪ್ರದಾಯಿಕ ಕಲೆಗಳು ಇದು ಕಾಲಕ್ಕೆ ತಕ್ಕಂತೆ ಬದಲಾಗಿದೆ ಎನ್ನುವುದೂ ಸತ್ಯ. ಶಾಲಾ ಓದು ಹಾಗೂ ಇನ್ನೀತರ ಚಟುವಟಿಕೆಗಳನ್ನು ಪಠ್ಯ ಹಾಗೂ ಪಠ್ಯೇತರ ಅಂತ ಕರೆಯಬಹುದಾದರೂ ಎಲ್ಲವೂ ನಿರ್ಧಿಷ್ಟ ಪಠ್ಯದೊಳಗೆ ಸೇರಿದೆ. ನಮ್ಮ ಬೌದ್ಧಿಕ ವಿಕಸನಕ್ಕೆ ಇಂತಹ ‘ಪಠ್ಯೇತರ ಚಟುವಟಿಕೆ’ ಎಂದು ಅನಿಸಿಕೊಂಡಿರುವ ಕಲೆಗಳು ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕಲೆಯ ಭಿನ್ನ ಭಿನ್ನ ಸಾಧ್ಯತೆಗಳು – ನೃತ್ಯ, ಸಂಗೀತ, ಸಾಹಿತ್ಯ, ಚಿತ್ರಕಲೆ, ರಂಗಭೂಮಿ‌ – ಇವೆಲ್ಲವೂ ಬೌದ್ಧಿಕತೆಯನ್ನು ಕಲಾತ್ಮಕವಾಗಿಯೇ ಸಂವಹನವನ್ನು ಸಾಧ್ಯಮಾಡುತ್ತವೆ.ನೃತ್ಯಕಲಿಕೆಯೇ ಒಂದು ಸುದೀರ್ಘ ಪಯಣದಂತೆ. ಕಲಿಯಬೇಕೆಂಬ ಉತ್ಕಟ ಆಸೆ ಎಲ್ಲರದ್ದೂ, ಆದರೆ ಅದಕ್ಕೆ ಒದಗಿಬರುವ ಸಮಯವೆಷ್ಟು ಎನ್ನುವುದೇ ಪ್ರಶ್ನೆ.‌ ‌ನಮ್ಮ ಹುಟ್ಟು–ಬೆಳವಣಿಗೆಯಂತೆಯೇ ಈ ನೃತ್ಯಪಾಠ. ಭೂಮಿಗೆ‌ ಬಂದ ಮಗು ಹೇಗೆ ಕೂರಲು, ನಿಲ್ಲಲು, ನಡೆಯಲು ಓಡಲು, ಹಾರಲು ಕುಣಿಯಲು ಪ್ರಾರಂಭಿಸುತ್ತದೆಯೋ ಹಾಗೆ ಪ್ರಾರಂಭದ ಹೆಜ್ಜೆಯಿಂದ ಪಾಠ ಶುರು. ನೇರ ನಿಲುವು ಹಾಗೂ ಕುಳಿತುಕೊಳ್ಳುವ ಭಂಗಿಯಿಂದ ತೊಡಗಿ ಭರತನಾಟ್ಯದಲ್ಲಿ ತಟ್ಟಡವು, ನಾಟಡವು, ಮೆಟ್ಟಡವು, ಎಗರು ತಟ್ಟಡವು, ಎಗರು ಮೆಟ್ಟಡವು, ರಂಗಾಕ್ರಮಣ – ಹೀಗೆ ಮೂಲಭೂತವಾದ ಹೆಜ್ಜೆಗಳ ಕಲಿಕೆಯೇ ಪ್ರಾಥಮಿಕ ಪಾಠ. ಇದು ಒಂದೊಂದೇ ಚಲನೆಯನ್ನು ಹೆಚ್ಚಿಸುತ್ತಾ ಕಾಲನ್ನು ತಟ್ಟುವುದು, ಮೆಲ್ಲಗೆ ನಾಟುವುದು, ತಟ್ಟಿ ಎಗರುವುದು – ಹೀಗೇಯೇ ಮುಂದುವರೆಯುತ್ತದೆ – ಹೇಗೆ ಮಗು ಬೆಳವಣಿಗೆಯ ಒಂದೊಂದೇ ಹಂತವನ್ನು ದಾಟಿ ದೊಡ್ಡದಾಗುತ್ತದೆಯೋ ಹಾಗೆಯೇ ಎಂದು ನಾವು ಪರಿಭಾವಿಸಬಹುದು.ನಂತರದ ಕಲಿಕೆಯಲ್ಲಿ ಒಂದೊಂದೇ ನೃತ್ತ, ನೃತ್ಯ‌ಬಂಧಗಳು ಆರಂಭವಾಗುತ್ತವೆ. ಅದರಲ್ಲೂ ನೃತ್ಯದ ಮಾರ್ಗಪದ್ಧತಿ (ಅಲರಿಪು, ಜತಿಸ್ವರ, ಶಬ್ಧಂ, ಪದವರ್ಣ, ಪದಂ, ಜಾವಳಿ ತಿಲ್ಲಾನ) ಎಂದು ನಾವೇನು ಕರೆಯುತ್ತೇವೆಯೋ ಅದರ ಮೊದಲ ನೃತ್ತಬಂಧ ಅಲರಿಪು, ಶಬ್ಧವೇ ಹೇಳಿದಂತೆ ಅರಳಿದ ಹೂವಿನಂತೆ ನಮ್ಮ ದೇಹ–ಮನಸ್ಸನ್ನು ಪ್ರಪುಲ್ಲಗೊಳಿಸಿಕೊಂಡು ದೇವರಿಗೆ, ಗುರುಹಿರಿಯರಿಗೆ, ಪ್ರೇಕ್ಷಕರಿಗೆ ವಂದಿಸುವುದು ಎಂದು‌ ಅರ್ಥ. ಅದು ನೃತ್ಯಜ್ಞಾನ ಇಲ್ಲದ ಪ್ರೇಕ್ಷಕನಿಗೆ ಅರ್ಥವಾಗುವುದು ಕಷ್ಟವೇ. ಕೈ ಮುಗಿದುಕೊಂಡು ಒಂದಷ್ಟು ಮೈಬಾಗುವಿಕೆಗಳು, ಚಲನೆಗಳನ್ನೆಲ್ಲಾ ಕೂಡಿಕೊಂಡಿದೆ ಎಂದು ಅನಿಸಲೂಬಹುದು. ಅದರ ಭಾವದೊಳಗೆ ಇಳಿದಾಗ ಬಂದ ಅತಿಥಿಯನ್ನು ಸತ್ಕರಿಸುವಂತಹ ಕ್ರಿಯೆಗಳೇ ನಡೆಯುತ್ತಿರುತ್ತವೆ. ಬಂದವರನ್ನು ನಮಸ್ಕರಿಸಿ ಉಪಚರಿಸುವುದರಿಂದ ಮೊದಲ್ಗೊಂಡು ಬನ್ನಿ ಕೂತ್ಕೊಳ್ಳಿ, ಚೆನ್ನಾಗಿದ್ದೀರಾ– ಹೀಗೆಯೆ ಮಾತಿನ ಭಾವದ ದಾಟಿಯನ್ನು ಅದಕ್ಕೆ ಸರಿದೂಗಿಸುತ್ತಾ ಹೋದರೆ ನೃತ್ಯಭಾಷೆ ಕೂಡ ಉಪಚರಿಸುವ ಭಾಷೆಯಾಗಿ ಕಾಣಿಸಿಕೊಳ್ಳತೊಡಗುತ್ತದೆ. ಹೀಗೆ ಒಂದೊಂದು ನೃತ್ಯಬಂಧಗಳಿಗೂ ನಮ್ಮ ದಿನಚರಿಯ ಒಂದೊಂದು ಭಾಗಗಳನ್ನು ಸಮೀಕರಿಸುತ್ತಾ ಹೋದ ಹಾಗೆ ನೃತ್ಯಕಲಿಕೆ ನಮ್ಮ ಜೀವನದ ಒಂದು ಭಾಗವೇ ಆಗಿಬಿಡುತ್ತದೆ.ನಾವು ಪ್ರಕೃತಿಯ ಅರಾಧಕರು. ಪ್ರಕೃತಿಪೂಜೆ ನಮ್ಮ ಸಂಪ್ರದಾಯ. ಪ್ರಕೃತಿಯೊಂದಿಗಿನ ಒಡನಾಟವೇ ಬದುಕಿನ ಪಾಠ. ಈ ನೃತ್ಯಕಲೆಯೂ ಪ್ರಕೃತಿಯ ಕೊಡುಗೆಯೆ. ಪ್ರಕೃತಿಯ ಎಲ್ಲ ಚಲನೆಗಳೇ ‘ನೃತ್ಯ’ ಎಂದೆನಿಸಿಕೊಂಡಿದೆ. ಹೀಗಾಗಿ ನೃತ್ಯಕಲೆಯು ನಮ್ಮಲ್ಲಿ‌ ಅಧ್ಯಾತ್ಮಿಕ ಚಿಂತನೆಯನ್ನೂ ಗಟ್ಟಿಗೊಳಿಸುತ್ತದೆ. ಕಲೆಯ ಖುಷಿಯನ್ನು ನಮ್ಮೊಳಗೆ ಅನುಭವಿಸಬೇಕು, ಧ್ಯಾನಿಸಬೇಕು. ಆಗ ಅದು ಇತರರಿಗೂ ಉಣಬಡಿಸಲು ಶಕ್ತವಾಗುತ್ತದೆ. ನೃತ್ಯ ನಮ್ಮ ಜೀವನೋತ್ಸಾಹವನ್ನೂ ಹೆಚ್ಚಿಸುತ್ತದೆ‌.ನೃತ್ಯಪ್ರದರ್ಶನ ಎನ್ನುವುದಂತೂ ಕಲಿಕೆಯ ಇನ್ನೊಂದು ಭಾಗ. ನಯ, ವಿನಯದೊಂದಿಗೆ ವಿಧೇಯತೆ ಅಷ್ಟೇ ಮುಖ್ಯ. ದೇಹದ‌ ಭಾಷೆಯ ಮೂಲಕ ಮುಂದಿರುವ ಅಪರಿಚಿತ ಪ್ರೇಕ್ಷಕರ ಜೊತೆಗೆ ಸಂವಹನ ಸಾಧ್ಯವಾಗಿಸಬೇಕು. ಅವರನ್ನು ನಮ್ಮ ಜೊತೆ ಜೊತೆಗೆ ಕೊಂಡೊಯ್ಯಬೇಕು. ಆಗ ಮನಸ್ಸಿನ ಏಕಾಗ್ರತೆಯ ಅವಶ್ಯಕತೆಯನ್ನು ಕಾಣುತ್ತೇವೆ. ಹೀಗೆ ವ್ಯಕ್ತಿತ್ವಕ್ಕೆ ಪೂರಕವಾದ ಎಲ್ಲ ಗುಣಗಳನ್ನೂ ಏಕಕಾಲದಲ್ಲಿ‌ ಸಾಧ್ಯವಾಗಿಸುವ ಶಕ್ತಿ ಈ ಕಲೆಗಿದೆ.

courtsey;prajavani.net

“author”: “ಮಂಜುಳಾ ಸುಬ್ರಹ್ಮಣ್ಯ”,

https://www.prajavani.net/artculture/short-story/story-about-dance-and-life-642518.html

Leave a Reply