ಕರ್ಣನ ನೆನೆನೆನೆದು..
ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು ಹೆಸರಾದವಳು. ಅವಳು ತೇಲಿಸಿದ ಕರ್ಣನಿಗೆ ಕೊನೆಗೂ ದಕ್ಕಿದ್ದು ಕೌಂತೇಯ, ರಾಧೇಯ, ಸೂತಪುತ್ರ ಎಂಬ ಹೆಸರು ಮಾತ್ರ.
ಎಂಥ ವಿಚಿತ್ರ ಸನ್ನಿವೇಶದಲ್ಲಿ ಕರ್ಣ ಸಿಲುಕಿಹಾಕಿಕೊಂಡ ಎನ್ನುವುದನ್ನು ನೆನೆಯಿರಿ. ಕುಂತಿ ನಿರ್ಭಾವದಿಂದ ತೊರೆದ ಕರ್ಣ, ರಥಿಕನೊಬ್ಬನ ಕೈಸೇರಿ, ತನ್ನ ಉತ್ಸಾಹ ಮತ್ತು ತೀವ್ರತೆಗೋಸ್ಕರ ಬಿಲ್ವಿದ್ಯೆ ಕಲಿತು, ದ್ರೋಣರಿಂದ ಶಾಪಗ್ರಸ್ತನಾಗಿ ಆ ಶಾಪವನ್ನು ಮೀರಬಲ್ಲೆ ಎಂಬ ಹುಮ್ಮಸ್ಸಿನಲ್ಲಿ ಬದುಕಿ, ಕೌರವನ ಆಸ್ಥಾನ ಸೇರಿ, ಅವನಿಗೂ ಪ್ರಿಯಮಿತ್ರನಾಗಿ ಬದುಕಿನಲ್ಲಿ ನೆಲೆ ಕಂಡುಕೊಂಡದ್ದು ಒಂದು ರೋಚಕ ಕತೆ. ಅವನ ಬಾಲ್ಯದ ಬಗ್ಗೆ ವಿವರಗಳೇ ಇಲ್ಲ. ಅಂಥವನ್ನು ಆ ಬಡವ ಹೇಗೆ ಬೆಳೆಸಿದ, ಕರ್ಣ ಏನೇನು ಕೇಳುತ್ತಿದ್ದ, ಏನು ಬೇಡುತ್ತಿದ್ದ, ಹೇಗೆ ಮಾತಾಡುತ್ತಿದ್ದ, ತನ್ನ ತಂದೆ ತಾಯಿ ಯಾರೆಂದು ಅವನು ಕೇಳಲೇ ಇಲ್ಲವೇ, ಅವನ ಕರ್ಣಕುಂಡಲ ಮತ್ತು ಕವಚದ ಬಗ್ಗೆ ಅವನಿಗೆ ಬೆರಗು ಮತ್ತು ಹೆಮ್ಮೆ ಇತ್ತಾ, ಅದನ್ನು ನೋಡಿದಾಗಲಾದರೂ ದ್ರೋಣನಿಗೆ ಅನುಮಾನ ಬರಲಿಲ್ಲವಾ?
ಮತ್ತೆ ನೆನಪಾಗುತ್ತಾನೆ ಭಗ್ನಪ್ರೇಮಿ ಕರ್ಣ. ಅವನು ಯಾರನ್ನು ಪ್ರೀತಿಸಿದ್ದ? ಭಾನುಮತಿಯ ಜೊತೆ ಪಗಡೆಯಾಡುತ್ತಾ ಅವಳ ಕೊರಳಹಾರಕ್ಕೆ ಕೈ ಹಾಕಿದ ಕರ್ಣನನ್ನು ಕೌರವ ಗೆಳೆಯನಂತೆ ಸ್ವೀಕರಿಸಿದ್ದು ಯಾಕೆ? ಕೌರವನಂಥ ಕೌರವನಿಗೆ ಕರ್ಣನ ಸ್ನೇಹ ಯಾತಕ್ಕೆ ಬೇಕಿತ್ತು? ಕರ್ಣನ ಶೌರ್ಯವನ್ನು ನೋಡಿ ಕೌರವ ಅವನನ್ನು ಮೆಚ್ಚಿಕೊಂಡಿದ್ದನಾ? ಸ್ನೇಹ ಹುಟ್ಟುವುದು ಮೆಚ್ಚುಗೆಯಿಂದ ಅಲ್ಲ. ಅಭಿಮಾನಿಯಾಗಿದ್ದವನು ಗೆಳೆಯನಾಗಲಾರ. ಮೆಚ್ಚಿಕೊಳ್ಳುವವರು ಎತ್ತರದಲ್ಲಿರುತ್ತಾರೆ, ಮೆಚ್ಚಿಕೆಗೆ ಒಳಗಾದವರು ಕೊನೆಯ ಮೆಟ್ಟಿಲಲ್ಲಿ ನಿಂತಿರುತ್ತಾರೆ. ಗೆಳೆಯರ ನಡುವಿನ ಮೆಚ್ಚುಗೆಯಲ್ಲಿ ಮೆಚ್ಚಿಸಲೇಬೇಕೆಂಬ ಹಟವಿಲ್ಲ. ಮೆಚ್ಚಿಸುವುದು ಅನಿವಾರ್ಯವೂ ಅಲ್ಲ.
ಕರ್ಣನ ಕುರಿತು ಪ್ರೇಮ ಕತೆಗಳಿಲ್ಲ. ಹಾಗಿದ್ದರೂ ಅವನೊಬ್ಬ ಭಗ್ನಪ್ರೇಮಿಯಾಗಿದ್ದನೇನೋ ಅನ್ನಿಸುತ್ತದೆ. ಹಸ್ತಿನಾವತಿಯ ಅರಮನೆಯ ಆವರಣದಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿದ್ದ ಕರ್ಣ ಬೇರೊಬ್ಬರ ಜೊತೆ ಆಪ್ತವಾಗಿ ಮಾತಾಡಿದ ಪ್ರಸ್ತಾಪ ಕೂಡ ಮಹಾಭಾರತದಲ್ಲಿ ಇಲ್ಲ. ಅವನದೇನಿದ್ದರೂ ಏಕಾಂತವಾಸ. ಕೌರವ ಬಿಟ್ಟರೆ ಮತ್ಯಾರೂ ತನ್ನವರಲ್ಲ ಎಂದು ನಂಬಿದವನಂತೆ ಬಾಳಿ ಕರ್ಣ ಎಲ್ಲ ಸೈನಿಕರ ಹಾಗೆ ಬಾಳುತ್ತಿದ್ದ. ಅವನಿಗೂ ಮದುವೆಯಾಗಿ, ಮಕ್ಕಳಾದರು. ಕರ್ಣನಿಗೆ ಹಳೆಯದರ ನೆನಪಿರಲಿಲ್ಲ. ತನ್ನ ಹುಟ್ಟಿನ ಕುರಿತು ಜಿಜ್ಞಾಸೆಯೂ ಇರಲಿಲ್ಲ. ಅಪರಾತ್ರಿಗಳಲ್ಲಿ ಅವನು ಹಾಸಿಗೆಯಲ್ಲಿ ಎದ್ದು ಕೂತು ಏನನ್ನೋ ಹಂಬಲಿಸುವವನಂತೆ ಆಕಾಶದತ್ತ ನೋಡುತ್ತಿದ್ದ ಎಂಬುದು ಕರ್ಣನನ್ನು ಪ್ರೀತಿಸುವ ನನ್ನ ಊಹೆ ಮಾತ್ರ.
ಸೂರ್ಯ ಇದನ್ನೆಲ್ಲ ನೋಡುತ್ತಿದ್ದ. ಅವನಿಗೆ ಯಾವತ್ತೂ ಕರ್ಣನನ್ನು ಮಗನೆಂದು ಒಪ್ಪಿಕೊಳ್ಳುವ ಅಗತ್ಯ ಬರಲಿಲ್ಲ. ಅವನ ಪಾಲಿಗೆ ಕರ್ಣ ಮಗನಾದರೂ ಮಗನಲ್ಲ. ಅವನು ತಾನು ಕೊಟ್ಟ ವರ. ತನ್ನನ್ನು ಓಲೈಸಿದ, ಆರಾಧಿಸಿದ, ಸಂತೋಷಪಡಿಸಿದ ಕಾರಣಕ್ಕೆ ಮುನಿ ಕುಮಾರಿ ಕುಂತಿಗೆ ಕೊಟ್ಟ ಮಂತ್ರಕ್ಕಷ್ಟೇ ಅವನು ಬಂಧಿ. ಮಂತ್ರದ ಅಪ್ಪಣೆ ಇಷ್ಚೇ: ಕೇಳಿದಾಗ ಈ ಕುಮಾರಿಗೆ ವರ ಕರುಣಿಸು. ಅದರಾಚೆಗಿನ ಹೊರೆ, ಹೊಣೆ, ಅನುಕಂಪ ಮತ್ತು ಅಕ್ಕರೆಗೆ ಅಲ್ಲಿ ಜಾಗವಿಲ್ಲ. ಮುಂದಿನ ಮಾತುಗಳಿಗೆ ಅವನು ಕಿವುಡ. ಹೀಗಾಗಿ ಕರ್ಣ ಏನು ಮಾಡಿದರೂ ಅದು ಅವನದೇ ಜವಾಬ್ದಾರಿ. ಕುಂತಿ ಅವನನ್ನು ಗಂಗೆಯಲ್ಲಿ ತೇಲಿ ಬಿಟ್ಟಾಗಲೂ ಸೂರ್ಯ ಮೂಕಪ್ರೇಕ್ಷಕ.
ಇಂಥ ಕರ್ಣನನ್ನು ಸಂದಿಗ್ಧ ಕಾಡುವುದು ಕೇವಲ ಒಮ್ಮೆ. ಕೌರವರ ಪರವಾಗಿ ಹೋರಾಡಲು ಹೊರಟ ಕರ್ಣನನ್ನು ಕೃಷ್ಣ ಭೇಟಿಯಾಗುತ್ತಾನೆ. ಅವನಿಗೆ ಜನ್ಮರಹಸ್ಯ ಹೊತ್ತು. ಹುಟ್ಟಿನ ಗುಟ್ಟು ಬಲ್ಲವನು ಏನು ಬೇಕಾದರೂ ಮಾಡಬಲ್ಲ ಎಂದು ನಂಬಿದ್ದ ಕಾಲವಿರಬೇಕು ಅದು. ಆ ಗುಟ್ಟನ್ನು ಬಿಚ್ಚಿಟ್ಟು ಅವನು ಕರ್ಣನನ್ನು ಕಾಣುತ್ತಾನೆ.
ಕರ್ಣ ಆಗೇನು ಮಾಡಬೇಕಾಗಿತ್ತು?
ಯಾಕೋ ಕರ್ಣ ಕೊಂಚ ಮೆದುವಾದನೇನೋ ಅನ್ನಿಸುತ್ತದೆ. ಕರ್ಣ-ಕೃಷ್ಣರ ನಡುವೆ ಏನೇನು ಮಾತಾಯಿತು ಎನ್ನುವುದು ನಿಗೂಢ. ಕವಿ ಹೇಳಿದ್ದರೂ ಅದು ಅನೂಹ್ಯವೇ. ಅವರಿಬ್ಬರೂ ಏನೇನು ಮಾತಾಡಿರಬಹುದು ಎಂದು ಯೋಚಿಸುತ್ತಾ ಕೂತರೆ ನಮ್ಮ ನಮ್ಮ ಅನುಭವ ಮತ್ತು ಭಾವನೆಗೆ ತಕ್ಕಂತೆ ಉತ್ತರಗಳು ಹೊಳೆಯುತ್ತಾ ಹೋಗುತ್ತವೆ. ಕೃಷ್ಣ ನೀನೇ ಪಾಂಡವರಲ್ಲಿ ಹಿರಿಯವನು. ರಾಜ್ಯ ನಿನ್ನದೇ ಎಂದು ಕರೆಯುತ್ತಾನೆ. ಕರ್ಣ ಹೋಗಿದ್ದರೆ ಅವನಿಗೆ ರಾಜ್ಯ ಸಿಗುತ್ತಿತ್ತಾ? ಆ ಕ್ಷಣವೇ ಕರ್ಣ ಸೋಲುತ್ತಿದ್ದ. ಹೋಗದೇ ಸತ್ತ ಕರ್ಣ ಗೆದ್ದವನಂತೆ ಕಾಣುತ್ತಾನೆ. ಈ ಜಗತ್ತಿನಲ್ಲಿ ಆಮಿಷಗಳಿಗೆ ಬಲಿಯಾಗದವರೇ ನಮಗೆ ದೇವರಂತೆ ಕಾಣಿಸುತ್ತಾರೆ. ಟೆಂಪ್ಟೇಷನ್ಗಳನ್ನು ಮೆಟ್ಟಿನಿಲ್ಲುವುದೇ ಸಾಧನೆಯಾದರೆ, ಅಂಥ ಟೆಂಪ್ಟೇಷನ್ನುಗಳನ್ನು ಹುಟ್ಟುಹಾಕುವ ನಮ್ಮ ಮನಸ್ಸಿಗೇನು ಹೇಳೋಣ. ಆಮಿಷಗಳನ್ನು ಸೃಷ್ಟಿಸುವುದು ಮನಸ್ಸು, ಮೀರಲೆತ್ನಿಸುವುದೂ ಮನಸ್ಸು. ಮನಸೇ ಮನಸಿನ ಮನಸ ನಿಲ್ಲಿಸುವುದು.
ಕರ್ಣನನ್ನು ಕೃಷ್ಣ ಒಲಿಸುವ ರೀತಿ ವಿಚಿತ್ರವಾಗಿದೆ. ಅವನಿಗೆ ರಾಜ್ಯದ ಆಮಿಷ ಒಡ್ಡುತ್ತಾನೆ ಅವನು. ಜೊತೆಗೇ, ಧರ್ಮರಾಯ, ಭೀಮ, ಅರ್ಜುನರಂಥವರು ಸೇವೆಗೆ ನಿಲ್ಲುತ್ತಾರೆ ಎನ್ನುತ್ತಾನೆ. ಕರ್ಣನ ಮನಸ್ಸಿನಲ್ಲಿ ದ್ರೌಪದಿ ಸುಳಿದುಹೋಗಿರಬಹುದೇ ಎಂಬ ತುಂಟ ಅನುಮಾನವೊಂದು ಸುಮ್ಮನೆ ಸುಳಿಯುತ್ತದೆ; ದ್ರೌಪದಿಯ ಮನಸ್ಸಿನಲ್ಲಿ ಕರ್ಣನ ನೆರಳು ಹಾದು ಹೋದಹಾಗೆ. ಕರ್ಣನಿಗೆ ಅವೆಲ್ಲವನ್ನೂ ಧಿಕ್ಕರಿಸುವಂಥ ಧೀಮಂತ ಶಕ್ತಿ ಬಂದದ್ದಾದರೂ ಎಲ್ಲಿಂದ? ಕೌರವನ ಸ್ನೇಹದ ಬಲದಿಂದಲೇ? ಅಥವಾ ತಾನು ಕೌಂತೇಯ, ಕುಂತಿಯ ಮಗ, ಸೂರ್ಯನ ಮಗ ಎಂದು ಗೊತ್ತಾದ ನಂತರ ಕರ್ಣ ಗಟ್ಟಿಯಾಗುತ್ತಾ ಹೋದನೇ?
ಕೊನೆಗೂ ಕರ್ಣ ಅವನಿಗೊಂದು ಮಾತು ಕೊಡುತ್ತಾನೆ: ನಿನ್ನಯ ವೀರರೈವರ ನೋಯಿಸೆನು. ಈ ಮಾತನ್ನು ಕರ್ಣನಿಂದ ಹೊರಡಿಸುವಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಕೃಷ್ಣ. ಅಲ್ಲಿಗೆ ಕೌರವರ ಪಾಲಿಗೆ ಕರ್ಣ ನಿರುಪಯೋಗಿ. ಸೈನಿಕರನ್ನಷ್ಟೇ ಕೊಲ್ಲುತ್ತೇನೆ, ಪಾಂಡವರನ್ನು ಮುಟ್ಟುವುದಿಲ್ಲ ಎಂದು ಮಾತುಕೊಟ್ಟರೂ ಕೃಷ್ಣನಿಗೆ ಸಮಾಧಾನ ಇಲ್ಲ. ಅವನು ಮತ್ತೆ ಕುಂತಿಯನ್ನು ಕರ್ಣನೆಡೆಗೆ ಕಳುಹಿಸುತ್ತಾನೆ. ಕರ್ಣ ಜೀವನದ ಕರುಣಾಜನಕ ಸನ್ನಿವೇಶ ಅದು.
ಕುಮಾರವ್ಯಾಸ ನುರಿತ ಚಿತ್ರಕತೆಗಾರನಂತೆ ಆ ದೃಶ್ಯವನ್ನು ವರ್ಣಿಸುತ್ತಾನೆ. ಗಂಗಾತೀರದಲ್ಲಿ ಕರ್ಣ, ತಂದೆ ಸೂರ್ಯನ ಉಪಾಸನೆಯಲ್ಲಿರುವ ಹೊತ್ತಿಗೆ ಔದಾರ್ಯದ ಕಲ್ಪವೃಕ್ಷದಂತಿದ್ದ ಕುಂತಿ ಅಲ್ಲಿಗೆ ಬರುತ್ತಾಳೆ ಎನ್ನುವಲ್ಲಿ ಕುಮಾರವ್ಯಾಸನ ವ್ಯಂಗ್ಯ ಮೆರೆಯುತ್ತದೆ. ಕುಂತಿ ಬಂದದ್ದು ತಾನು ಹುಟ್ಟಿದ ತಕ್ಷಣವೇ ನೀರಲ್ಲಿ ತೇಲಿಬಿಟ್ಟ ಕರ್ಣನನ್ನು ಕೊಲಿಸುವುದಕ್ಕಲ್ಲವೇ?
ಅಲ್ಲಿ ಮತ್ತೊಂದು ವಿಚಿತ್ರವೂ ನಡೆಯುತ್ತದೆ. ಕುಂತಿಯನ್ನು ಕಂಡದ್ದೇ ತಡ, ಗಂಗೆ ನೀರಿನಿಂದೆದ್ದು ಬಂದು ನಿನ್ನ ಮಗನನ್ನು ನಾನು ಇಷ್ಟು ದಿನ ಕಾಪಾಡಿದೆ. ಈಗ ನಿನಗೆ ಒಪ್ಪಿಸುತ್ತಿದ್ದೇನೆ. ನೀನು ನನಗೆ ಕೊಟ್ಟ ಭಾಷೆಯನ್ನು ಉಳಿಸಿಕೊಂಡಿದ್ದೇನೆ ಎಂದು ಕರ್ಣನನ್ನು ಕುಂತಿಗೆ ಒಪ್ಪಿಸಿಹೋಗುತ್ತಾಳೆ. ಹೆತ್ತತಾಯಿ, ಪೊರೆದ ತಾಯಿ ಮತ್ತು ಆಕಾಶದಲ್ಲಿ ಹುಟ್ಟಿಸಿದ ತಂದೆ. ಈ ತ್ರಿಕೋನದ ನಡುವೆ ಏಕಾಂಗಿ ಕರ್ಣ. ಸೂರ್ಯನೂ ಆ ಕ್ಷಣ ಕರ್ಣನ ಬಳಿಗೆ ಬಂದು, ನಿಮ್ಮಮ್ಮನನ್ನು ನಂಬಬೇಡ, ಆಕೆ ಬಂದದ್ದು ನಿನ್ನ ಅಳಿವಿಗಾಗಿಯೇ ಹೊರತು, ಪ್ರೀತಿಯಿಂದಲ್ಲ ಅನ್ನುತ್ತಾನೆ. ಕರ್ಣನಿಗೆ ಪ್ರತಿಯೊಂದು ಮಾತೂ ಕರ್ಣಕಠೋರ.
ಕುಂತಿ ಕರ್ಣನನ್ನು ತನ್ನ ಜೊತೆಗೆ ಬಾ ಎಂದು ಕರೆದಾಗ ಕರ್ಣ ಹೇಳುವ ಮಾತು ಮಾರ್ಮಿಕವಾಗಿದೆ: ಇಂದೇನೋ ನಾನು ನಿನ್ನ ಮಗ ಎಂದು ನನಗೆ ಗೊತ್ತಾಯಿತು. ಆದರೆ ಇದ್ಯಾವುದೂ ಗೊತ್ತಿಲ್ಲದ ದಿನಗಳಲ್ಲಿ ನನ್ನನ್ನು ಕೌರವ ಸಲಹಿದ್ದಾನೆ. ಸ್ನೇಹಹಸ್ತ ಚಾಚಿದ್ದಾನೆ. ಅವನು ನನ್ನ ಕುಲ ನೋಡಲಿಲ್ಲ. ಅವನನ್ನು ನಾನು ಬಿಟ್ಟು ಬರುವುದಿಲ್ಲ ಎನ್ನುತ್ತಾನೆ.
ಕುಂತಿ ಕೊನೆಗೂ ಕರ್ಣನಿಗೆ ಹೋದ ಬಾಣವ ಮರಳಿ ತೊಡದಿರು, ನನ್ನ ಐವರು ಮಕ್ಕಳನ್ನು ಕಾಪಾಡು’ ಎಂದು ಕೇಳಿಕೊಳ್ಳುತ್ತಾಳೆ. ಆರನೆಯ ಮಗನ ಹತ್ತಿರ ಐವರು ಮಕ್ಕಳನ್ನು ಕಾಪಾಡು ಎನ್ನುವ ಕುಂತಿಯ ಕ್ರೌರ್ಯವನ್ನು ಕೂಡ ಕರ್ಣ ಅನುಮಾನದಿಂದ ನೋಡುವುದಿಲ್ಲ. ಕರ್ಣ ನಿಜಕ್ಕೂ ನಿಷ್ಠುರನಾಗಿದ್ದರೆ? ಅವನಿಗೆ ದಾನಶೂರ ಎನ್ನಿಸಿಕೊಳ್ಳುವ ಹಂಬಲವೇ ಬಲವಾಗಿತ್ತಾ? ಕೇಳಿದ್ದನ್ನೆಲ್ಲ ಕೊಡುವುದು ಸದ್ಗುಣ ನಿಜ. ಅದು ಸದ್ಗುಣ ಎನ್ನಿಸಿಕೊಳ್ಳುವುದು ಕೇಳುವವರು ಯೋಗ್ಯರಾಗಿರುವ ತನಕ ಮಾತ್ರ. ಹಾಗಿಲ್ಲದೇ ಹೋದಾಗ ಕೊಡುವುದು ಕೊಡದಿರುವುದಕ್ಕಿಂತ ದೊಡ್ಡ ತಪ್ಪು.
ಒಮ್ಮೊಮ್ಮೆ ಹುಂಬನಂತೆ, ಮತ್ತೊಮ್ಮೆ ದಾರಿ ತಪ್ಪಿದವನಂತೆ, ಕೆಲವೊಮ್ಮೆ ಸೊರಗಿದವನಂತೆ, ಪ್ರೀತಿಗಾಗಿ ಕಾತರಿಸಿದವನಂತೆ, ಅಸಹಾಯಕನಂತೆ, ಅಬ್ಬೇಪಾರಿಯಂತೆ, ಒಳ್ಳೆಯ ಗೆಳೆಯನಂತೆ ಕಾಣಿಸುವ ಕರ್ಣ ಉದ್ದಕ್ಕೂ ತಪ್ಪುಗಳನ್ನು ಮಾಡುತ್ತಲೇ ಹೋದ. ನಿರಾಕರಿಸುವ ಶಕ್ತಿ ಕಳಕೊಂಡವನು ನಿರುಪಯುಕ್ತ ಅನ್ನಿಸುವುದು ಹೀಗೆ.
ವ್ಯಾಸರು ಸೃಷ್ಟಿಸಿದ ಪಾತ್ರಗಳ ಪೈಕಿ ಜಾಣತನ, ಕುಯುಕ್ತಿ ಇಲ್ಲದ ಬೋಳೇಸ್ವಭಾವದ ವ್ಯಕ್ತಿ ಕರ್ಣ. ಒಮ್ಮೊಮ್ಮೆ ಧರ್ಮರಾಯ ಕೂಡ ಅಧರ್ಮಿಯನಂತೆ, ಸುಳ್ಳುಗಾರನಂತೆ ವರ್ತಿಸುತ್ತಾನೆ. ಕರ್ಣನೊಬ್ಬನೇ ನಮ್ಮಲ್ಲಿ ಅನುಕಂಪ ಮತ್ತು ಪ್ರೀತಿ ಉಕ್ಕಿಸುತ್ತಾನೆ.