ಕನ್ನಡ ನೆಲದ ಬಲಿದಾನಿ ಮೈಲಾರ ಮಹದೇವ
ಮೈಲಾರ ಮಹದೇವ: 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲಿನಿಂದಲೇ ಆರಂಭಿಸಿ, ಕ್ವಿಟ್ ಇಂಡಿಯಾ ಚಳುವಳಿ, ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ವಿವಿಧ ರೀತಿಯ ಹೋರಾಟಗಳು ನಡೆದವು. ಹೋರಾಟದ ಕಿಚ್ಚು, ಕ್ರಾಂತಿಯ ಕಿಡಿ ವಿವಿಧ ರೂಪದಲ್ಲಿ ಪ್ರಕಟಗೊಂಡು ಸಾವಿರಾರು ಮಂದಿ ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದರು. ಹಾಗೆ ಬ್ರಿಟಿಷರ ಗುಂಡಿಗೆ ಎದೆಕೊಟ್ಟು ವೀರಸ್ವರ್ಗ ವೇರಿದ ಅಪ್ರತಿಮ ಬಲಿದಾನಿಗಳಲ್ಲಿ ಹಾವೇರಿ ಜಿಲ್ಲೆ ಮೋಟೆಬೆನ್ನೂರಿನ ಮೈಲಾರ ಮಹದೇವ ಅವರ ಪಾತ್ರ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಸ್ವಾತಂತ್ರ್ಯಾಂದೋಲನದಲ್ಲಿ ಮಹದೇವರ ತಾಯಿ ಬಸಮ್ಮ ಕೂಡಾ ಸೆರೆಮನೆವಾಸ ಅನುಭವಿಸಿದವರು. ತಾಯಿಯ ದೇಶಾಭಿಮಾನದ ಫಲವಾಗಿ ಬಾಲಕ ಮಹದೇವ ಅವರಿಗೂ ದೇಶಭಕ್ತಿ ರಕ್ತಗತವಾಗಿ ಬಂದಿತು. ಮೈಲಾರ ಮಹದೇವ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಅಂದಿನ ದಿನಗಳಲ್ಲೇ ಅಸಂಖ್ಯ ಹೋರಾಟಗಾರರಿಗೆ ಸ್ಫೂರ್ತಿಯ ಮಾತಾಗಿತ್ತು. ಗಾಂಧೀಜಿಯವರ ಪ್ರಸಿದ್ಧ ದಾಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ. 1930ರ ಮಾರ್ಚ್ 12 ರಂದು ದಿನ ಮಹಾತ್ಮ ಗಾಂಧಿಯವರು ತಾವೇ ಆರಿಸಿಕೊಂಡ 78 ಸೇನಾನಿಗಳೊಂದಿಗೆ ಸಾಬರಮತಿಯಿಂದ ಉಪ್ಪಿನ ಸತ್ಯಾಗ್ರಹಕ್ಕಾಗಿ ದಾಂಡೀ ಯಾತ್ರೆ ಆರಂಭಿಸಿದರು. ಈ ತಂಡದಲ್ಲಿ ಕರ್ನಾಟಕದ ಏಕಮೇವ ಪ್ರತಿನಿಧಿಯಾಗಿದ್ದವರು ಮೈಲಾರ ಮಹಾದೇವ. ಸುಮಾರು 385 ಕಿಮೀ ದೂರದ ಧಾಂಡಿಯನ್ನು 25 ದಿನಗಳ ಪಾದಯಾತ್ರೆಯಲ್ಲಿ ಗಾಂಧೀ ಸೇರಿದಂತೆ ಅಪ್ರತಿಮ ಹೋರಾಟಗಾರರೊಂದಿಗೆ ಸಾಗಿ ಉಪ್ಪನ್ನು ಎತ್ತಿಕೊಂಡು ಕಾಯ್ದೆ ಭಂಗ ಚಳುವಳಿಗೆ ಅವರೂ ಸಾಕ್ಷಿಯಾದರು. ಇದಕ್ಕಾಗಿ ಗಾಂಧೀಜಿಯೊಂದಿಗೆ ಮೈಲಾರ ಮಹಾದೇವರಿಗೂ 6 ತಿಂಗಳ ಕಾರಾಗೃಹ ಶಿಕ್ಷೆಯಾಯಿತು. ಮೈಲಾರರು ಜೈಲಿನಿಂದ ಬಿಡುಗಡೆಗೊಂಡು ಮರಳಿ ತಾಯ್ನಾಡಿಗೆ ಬಂದಾಗ ಅವರಿಗೆ ಧಾರವಾಡ, ಮೋಟೆಬೆನ್ನೂರುಗಳಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. 1932-33ರಲ್ಲಿ ಅಸಹಕಾರ ಹಾಗೂ ಕಾಯ್ದೆಭಂಗ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಮಹಾದೇವರ ಪತ್ನಿ ಸಿದ್ದಮ್ಮನಿಗೂ 6 ತಿಂಗಳಜೈಲು ಶಿಕ್ಷೆಯಾಗಿ ಅಹಮದಾಬಾದಿಗೆ ಕಳಿಸಲ್ಪಟ್ಟರು. ಕರ್ನಾಟಕಕ್ಕೆ ಮರಳಿ ಬಂದು ಚಳುವಳಿ ನಡೆಸಿದ್ದರಿಂದ ಮಹಾದೇವರಿಗೂ ಶಿಕ್ಷೆಯಾಗಿ ಹಿಂಡಲಗಾ ಜೈಲಿಗೆ ತಳ್ಳಲ್ಪಟ್ಟರು. ಹೀಗೆ ಸ್ವಾತಂತ್ರ್ಯಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಒಂದೇ ಕುಟುಂಬದ ತಾಯಿ ಮಗ ಸೊಸೆ ಎಲ್ಲರೂ ಜೈಲುವಾಸ ಅನುಭವಿಸಿದ್ದು ಆ ದೇಶಭಕ್ತ ಕುಟುಂಬದ ಹಿರಿಮೆಯನ್ನು ಸಾರುತ್ತದೆ. ನಾಲ್ಕಾರು ಬಾರಿ ಕಾರಾಗೃಹಕ್ಕೆ ಹೋಗಿ ಬಂದರೂ ಮಹಾದೇವರು ಹೊರಗಿದ್ದಾಗಲೆಲ್ಲ ಖಾದಿ ಪ್ರಚಾರ, ದಲಿತೋದ್ಧಾರ ಮುಂತಾದ ಕಾರ್ಯಕ್ರಮಗಳನ್ನು ಮುಂದುವರೆಸುತ್ತಿದ್ದರು. ಇದಕ್ಕಾಗಿ ಇಂದಿನ ಹಾವೇರಿ ಜಿಲ್ಲೆಯ ಕೊರಡೂರಿನಲ್ಲಿ ತಮ್ಮದೇ ಆದ ಒಂದು ಗ್ರಾಮ ಸೇವಾಶ್ರಮವನ್ನು (1937) ಪ್ರಾರಂಭಿಸಿದರು. ಧಾರವಾಡ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ನೇತೃತ್ವ ಮೈಲಾರ ಮಹಾದೇವರದ್ದಾಗಿತ್ತು. ಅದೇ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ರೈತರಿಂದ ಬಲವಂತವಾಗಿ ಕಂದಾಯ ಸಂಗ್ರಹಿಸುವ, ಕಂದಾಯ ಕೊಡದದವರ ಮೇಲೆ ದೌರ್ಜನ್ಯ ಎಸಗುವ ಕಾರ್ಯದಲ್ಲಿ ನಿರತವಾಗಿತ್ತು. ಬಡಜನರ ಶೋಷಣೆ ಸಹಿಸದ ಮೈಲಾರರು, ರೈತರಿಂದ ಸರ್ಕಾರ ಕಂದಾಯವನ್ನು ಬಲಾತ್ಕಾರವಾಗಿ ವಸೂಲಿಮಾಡಿ ಸಂಗ್ರಹಿಸಿಟ್ಟಿದ್ದನ್ನು ರೈತರಿಗೆ ಹಿಂದಿರುಗಿಸಲು ಸರ್ಕಾರಕ್ಕೆ ತೊಂದರೆ ಕೊಡುವ ಕಾರ್ಯದಲ್ಲಿ ಸಂಗಡಿಗರೊಂದಿಗೆ ಅನಿವಾರ್ಯವಾಗಿ ತೊಡಗಿದರು. ಇದಕ್ಕಾಗಿ ಹಲವಾರು ವಿಧ್ವಂಸಕ ಕೃತ್ಯಗಳನ್ನು ಕೈಕೊಂಡು ಬ್ರಿಟಿಷರ ಆಡಳಿತ ಯಂತ್ರ ನಿಷ್ಕ್ರಿಯವಾಗುವಂತೆ ಮಾಡಲು ಪ್ರಯತ್ನಿಸಿದರು. 1943ರ ಎಪ್ರಿಲ್ ಒಂದರಂದು ಮೈಲಾರರು ಹೊಸರಿತ್ತಿ ಕಂದಾಯ ವಸೂಲಿ ಕಚೇರಿಯ ಮೇಲೆ ದಾಳಿ ನಡೆಸುವ ಯೋಜನೆ ಹಾಕಿಕೊಂಡರು. ಅಲ್ಲಿ ನಡೆದ ಬ್ರಿಟಿಷ್ಅಧಿಕಾರಿಗಳ ಜತೆಗಿನ ಕಾಳಗದಲ್ಲಿ ಕೇವಲ ೩೨ರ ಹರೆಯದ ಧೀಮಂತ ವೀರ ದೇಶಭಕ್ತ ಮೈಲಾರ ಮಹಾದೇವರು (1911-1943) ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದರು. ಅಂದು ಮಹದೇವರ ಜತೆಗೆ ತಿರುಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಎಂಬ ದೇಶಭಕ್ತರು ಕೂಡಾ ಬಲಿದಾನ ಮಾಡಿದರು. ಹೀಗೆ ಕನ್ನಡ ನಾಡಿನ ವೀರ ದೇಶಭಕ್ತನೊಬ್ಬ ಜೀವನಪೂರ್ತಿ ದೇಶಕ್ಕಾಗಿ ತನ್ನನ್ನು ಅರ್ಪಿಸಿಕೊಂಡು ಕೇವಲ 32 ನೇ ವಯಸ್ಸಿಗೆ ಮಾತೃಭೂಮಿಯ ರಕ್ಷಣೆಗಾಗಿ ಜೀವ ನೀಡಿದ್ದು ಸ್ಮರಣಾರ್ಹ. ಮೈಲಾರ ಮಹಾದೇವರ ನೆನಪಿನಲ್ಲಿ ಹಾವೇರಿಯಲ್ಲಿ ವೀರಸೌಧ ನಿರ್ಮಿಸಿ ಆ ಧೀಮಂತ ದೇಶಭಕ್ತನಿಗೆ ಗೌರವ ಅರ್ಪಿಸಲಾಗಿದೆ.