ಕಟ್ಯಾರ್ ಕಾಳಜತ್ ಘುಸಲಿ
ಭಾರತದಲ್ಲಿ ಸಂಗೀತ ಪ್ರಧಾನ ನಾಟಕಗಳ ದೊಡ್ಡ ಪರಂಪರೆಯೇ ಇದೆ. ಅದರಲ್ಲಿಯೂ ಕಂಪೆನಿ ನಾಟಕಗಳಲ್ಲಂತೂ ಪ್ರಮುಖ ಪಾತ್ರಧಾರಿಗಳಿಗೆ ಅಭಿನಯಕ್ಕಿಂತ ಗಾಯನಕಲೆಯೇ ಹೆಚ್ಚು ಮುಖ್ಯವಾಗಿತ್ತು. ಹಾಗೆಯೇ ರಂಗಭೂಮಿಯಲ್ಲಿ ಯಶಸ್ಸು ಗಳಿಸಿದ ನಾಟಕಗಳನ್ನು ಸಿನಿಮಾ ಮಾಧ್ಯಮಗಳಿಗೆ ಅಳವಡಿಸುವ ಪ್ರಯತ್ನಗಳೂ ಸಾಕಷ್ಟು ನಡೆದಿವೆ. ಆದರೆ ಹೀಗೆ ರಂಗಭೂಮಿ ಮತ್ತು ಸಿನಿಮಾ ಎರಡೂ ಮಾಧ್ಯಮಗಳಲ್ಲಿ ಯಶಸ್ಸು ಗಳಿಸಿದ ಪ್ರಯೋಗಗಳು ಮಾತ್ರ ವಿರಳ.
ಮರಾಠಿಯ ‘ಕಟ್ಯಾರ್ ಕಾಳಜತ್ ಘುಸಲಿ’ ಹೀಗೆ ನಾಟಕ ಮತ್ತು ಸಿನಿಮಾ ಎರಡೂ ಮಾಧ್ಯಮಗಳಲ್ಲಿ ಅದ್ಭುತ ಯಶಸ್ಸನ್ನು ಗಳಿಸಿರುವ ಅಪರೂಪದ ಕೃತಿ.
1967ರಲ್ಲಿ ಮುಂಬೈನಲ್ಲಿ ಪ್ರದರ್ಶಿತವಾದ ‘ಕಟ್ಯಾರ್ ಕಾಳಜತ್ ಘುಸಲಿ’ ನಾಟಕದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ವಸಂತರಾವ್ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. 2010ರಲ್ಲಿ ಅದೇ ನಾಟಕ ಮರುರೂಪಗೊಂಡು ಮತ್ತೆ ಪ್ರದರ್ಶಿತಗೊಂಡಾಗ ವಸಂತರಾವ್ ದೇಶಪಾಂಡೆ ಅವರ ಮೊಮ್ಮಗ ರಾಹುಲ್ ದೇಶಪಾಂಡೆ ಮತ್ತು ಮಹೇಶ್ ಕಾಳೆ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಹೀಗೆ ರಂಗಭೂಮಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಈ ನಾಟಕವನ್ನು 2015ರಲ್ಲಿ ಸುಬೋಧ ಭಾವೆ ಅವರು ಸಿನಿಮಾ ಮಾಧ್ಯಮಕ್ಕೆ ಒಗ್ಗಿಸಿದರು. ಈ ಸಿನಿಮಾದಲ್ಲಿ ಗಾಯಕ ಶಂಕರ್ ಮಹದೇವನ್ ಜತೆ ಸ್ವತಃ ಸುಬೋಧ್ ಭಾವೆ ಅವರೇ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಂಕರ್ –ಎಹಸಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದರೂ ಮೂಲ ನಾಟಕಕ್ಕೆ ಜಿತೇಂದ್ರ ಅಭಿಷೇಕಿ ಅವರು ಸಂಯೋಜಿಸಿದ ಕೆಲವು ಹಾಡುಗಳನ್ನೇ ಬಳಸಿಕೊಂಡಿದ್ದಾರೆ.
ಇದು ಸಂಗೀತವನ್ನೇ ಪ್ರಧಾನವಾಗಿಸಿಕೊಂಡಿರುವ ಸಿನಿಮಾ. ಮನಮೋಹಕ ಹಾಡುಗಳ ಜತೆಗೆ ಸಂಗೀತ ಲೋಕದ ಒಳಸುಳಿಗಳು, ಸ್ಪರ್ಧೆಗಳು, ಅಸೂಯೆ – ಅದರ ಫಲಗಳು ಹೀಗೆ ಸಂಗೀತವೆಂಬ ಅಮೃತಬಳ್ಳಿಯ ಸುತ್ತಲೂ ಹಬ್ಬಿಕೊಂಡಿರುವ ಸಣ್ಣತನಗಳ ಕಳ್ಳಿಗಿಡಗಳನ್ನೂ ತೋರಿಸುತ್ತದೆ. ಇದು ಬ್ರಿಟಿಷರ ಕಾಲದಲ್ಲಿ ನಡೆಯುವ ಕಥೆ.
ಪಂಡಿತ್ ಭಾನುಪ್ರಕಾಶ ಶಾಸ್ತ್ರಿ ಮತ್ತು ಖಾನ್ಸಾಹೇಬ್ ಅಫ್ತಾಬ್ ಹುಸೇನ್ ಇಬ್ಬರೂ ಪ್ರತಿಭಾವಂತ ಗಾಯಕರು. ಒಬ್ಬರ ಗಾಯನ ಆಳವಾದ ಒಳಸುಳಿಗಳನ್ನು ಒಳಗೊಂಡು ಘನಗಂಭೀರವಾಗಿ ಹರಿಯುವ ನದಿಯಂಥದು. ಇನ್ನೊಬ್ಬರ ಗಾಯನ ಸದ್ದು ಮಾಡುತ್ತ ಭೋರ್ಗರೆದು, ನೊರೆಯುಕ್ಕಿಸಿ ಆಕರ್ಷಿಸುವ ಜಲಪಾತದಂಥದು. ಈ ಇಬ್ಬರಲ್ಲಿ ಯಾರು ಮೇಲು ಎಂಬ ಕುರಿತು ನಿರಂತರ ಸಂಘರ್ಷ ನಡೆಯುತ್ತದೆ. ಈ ಸಂಘರ್ಷದಲ್ಲಿ ಬೆಳೆಯಬೇಕಾಗಿದ್ದ ಸಂಗೀತ ನಲುಗುತ್ತದೆ. ಸ್ವಾರ್ಥವೇ ಮುಖ್ಯವಾಗಿ ಭಾನುಪ್ರಕಾಶ್ ಶಾಸ್ತ್ರಿ ಧ್ವನಿ ಕಳೆದುಕೊಳ್ಳುತ್ತಾನೆ. ಕೊನೆಗೆ ಅವನ ಶಿಷ್ಯನೇ ಅವನ ಪರವಾಗಿ ಸ್ಪರ್ಧಿಸಿ ಗೆಲ್ಲುತ್ತಾನೆ.
ಸಂಗೀತವನ್ನೇ ಉಸಿರಾಗಿಸಿಕೊಂಡವರು ಆ ಕಲಾಪಾವಿತ್ರ್ಯವನ್ನು ಇನ್ನೂ ಉನ್ನತಿಗೇರಿಸಬೇಕಾದವರು ಸಣ್ಣತನಕ್ಕೆ ಬಲಿಯಾದರೆ ಏನಾಗುತ್ತದೆ ಎನ್ನುವುದನ್ನು ಬಹುಸೂಕ್ಷ್ಮವಾಗಿ ತೋರಿಸುತ್ತದೆ. ಹಾಗೆಯೇ ಎಲ್ಲ ಕಲಾಪ್ರಕಾರವೂ ಮನುಷ್ಯನನ್ನು ಇನ್ನಷ್ಟು ಘನಗೊಳಿಸುವ ಉದ್ದೇಶಕ್ಕೆ ಹುಟ್ಟಿಕೊಂಡಂಥವು. ಅವೇ ಮನುಷ್ಯನ ಅಧಃಪತನಕ್ಕೂ ಕಾರಣವಾಗುವ ವಿಪರ್ಯಾಸವನ್ನೂ ಈ ಚಿತ್ರ ತೋರಿಸುತ್ತದೆ.
ಶಂಕರ್ ಮಹಾದೇವನ್, ಸಚಿನ್ ಪಿಲ್ಗಾಂವ್ಕರ್, ಸುಬೋಧ್ ಭಾವೆ, ಅಮೃತಾ ಕಾನ್ವಿಕರ್ ಅವರ ಪಕ್ವ ಅಭಿನಯವೂ ಈ ಚಿತ್ರದ ಧನಾತ್ಮಕ ಅಂಶ.
ಮರಾಠಿ ರಂಗಭೂಮಿಯ ಸಂಗೀತ ಶ್ರೀಮಂತಿಕೆ ಮತ್ತು ಮನುಷ್ಯನ ಸಣ್ಣತನ ಮತ್ತು ಉದಾರತೆಗಳನ್ನು ಸೂಕ್ಷ್ಮವಾಗಿ ತೋರಿಸುವ ಕಥನ ಎರಡನ್ನೂ ತೋರಿಸುವ ಈ ಸಿನಿಮಾವನ್ನು ನೋಡಲು ಯೂಟ್ಯೂಬ್ನಲ್ಲಿ https://www.youtube.com/watch?v=fyv7mv6KCh0 ಕೊಂಡಿ ಬಳಸಬಹುದು.
Courtesy : Prajavani.net
http://www.prajavani.net/news/article/2017/09/21/521077.html