ಇಡೀ ಜಗತ್ ಸೃಷ್ಟಿ ಮತ್ತು ರಕ್ಷಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದು. ಆಕೆ, ತನ್ನ ಕುಟುಂಬದ ಅಕ್ಕರೆ ಆರೈಕೆಯಲ್ಲಿ ಸದಾ ಬ್ಯುಸಿಯಾಗಿರುವ ಜೀವಿ. ತನ್ನವರ ಒಳಿತಿಗಾಗಿ ಸದಾ ಹಂಬಲಿಸುತ್ತಾಳೆ.ಮಹಿಳೆಯ ನಿತ್ಯದ ಬದುಕನ್ನು ಬಿಂಬಿಸುವ ಅನೇಕ ಹಾಡು, ಕಥೆ, ಕವನಗಳು ಇವೆ.ಈಗ ಆಕೆಯ ಬದುಕನ್ನು;ವರ್ಣಿಸಲು ಗೊಂಬೆಗಳೇ ರೂಪುಗೊಂಡಿವೆ. ಕಂಬದ ಮೇಲೆ ರಚಿತವಾಗಿರುವ ಈ ಗೊಂಬೆಗಳು ಬಲು ಅಪರೂಪದವು. ಇವುಗಳನ್ನು ನೋಡುತ್ತಿದ್ದರೆ, ‘ನಾಗಮಂಡಲ’ ಸಿನಿಮಾದಲ್ಲಿ ಗೋಪಾಲ ವಾಜಪೇಯಿ ಅವರು ರಚಿಸಿರುವ ‘ಕಂಬದ ಮ್ಯಾಲಿನ ಗೊಂಬೆಯೇ… ಎಂಬ ಹಾಡಿನ ಸಾಲುಗಳು ನೆನಪಾಗುತ್ತವೆ.ಈ ಗೊಂಬೆಗಳಿರುವುದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕು ಗೊಟಗೋಡಿಯ ಉತ್ಸವ ರಾಕ್ಗಾರ್ಡನ್ನಲ್ಲಿ. ಈ ಗಾರ್ಡನ್ಪ್ರವೇಶ ದ್ವಾರದ ಸಮೀಪದಲ್ಲೇ ನಿರ್ಮಾಣಗೊಂಡ ಕಂಬಗಳ ಮೇಲೆ ಗ್ರಾಮೀಣ ಬದುಕಿಗೆ ತುಂಬಾ ಹತ್ತಿರವಾಗುವಂತಹ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ. ಅದರಲ್ಲಿ ಮಹಿಳೆಯ ದೈನಂದಿನ ಬದುಕಿನ ಚಟುವಟಿಕೆಗಳನ್ನು ಗೊಂಬೆಗಳಾಗಿ ಪ್ರತಿಬಿಂಬಿಸಲಾಗಿದೆ.ಮನೆಗೆ ಕಂಬಗಳು ಹೇಗೆ ಆಧಾರವೋ ಹಾಗೆ ಕುಟುಂಬಕ್ಕೆ ಮಹಿಳೆಯೇ ಆಧಾರ’ ಎಂಬುದನ್ನು ಇಲ್ಲಿನ ಬೊಂಬೆಗಳು ವಿವರಿಸುತ್ತವೆ.ಪ್ರತಿ ಮನೆಯಲ್ಲೂ ಮಹಿಳೆಯರ ಕೈಕೊಳ್ಳುವ ಕಾರ್ಯಗಳನ್ನು ಇಲ್ಲಿನ ಕಂಬದ ಮೇಲೆ ಚಿತ್ರಿಸಲಾಗಿದೆ. ಪಾತ್ರೆ ತೊಳೆಯುವುದು, ಧಾನ್ಯಗಳನ್ನು ಹಸನು ಮಾಡುವುದು, ಬುಟ್ಟಿಯಲ್ಲಿ ಸಾಮಾನುಗಳನ್ನು ಹೊತ್ತು ಸಾಗುವುದು, ರೊಟ್ಟಿ ತಟ್ಟುವುದು, ಕೃಷಿ ಕಾರ್ಯ ಮಾಡುವುದು..ಹೀಗೆ ಗ್ರಾಮೀಣ ಬದುಕಿನ ವೈವಿಧ್ಯಮಯ ಚಟುವಟಿಕೆಗಳು ಇಲ್ಲಿ ಗೊಂಬೆಗಳಾಗಿ ರೂಪುಗೊಂಡಿವೆ.ಸಿಮೆಂಟ್ ಶಿಲ್ಪಗಳೊಂದಿಗೆ ಮಾಡಿರುವ ಗೊಂಬೆಗಳಲ್ಲಿ ಆಧುನಿಕ ಕಲಾ ಪ್ರಕಾರವೂ ಅಭಿವ್ಯಕ್ತಗೊಂಡಿದೆ. ದಿನನಿತ್ಯದ ಚಟುವಟಿಕೆ ಗಳನ್ನು ಸಮಕಾಲೀನ ಕಲೆಯೊಂದಿಗೆ ತಳಕು ಹಾಕಿ ಚಿತ್ರಗಳನ್ನು ರೂಪಿಸಿರುವುದು ವಿಭಿನ್ನವಾಗಿ ಗೋಚರಿಸುತ್ತವೆ.ಇವು ಮಹಿಳೆಯ ದಿನಚರಿಯ ಕುರುಹುಗಳಾದ್ದರಿಂದ ಇವುಗಳನ್ನು ‘ಮಹಿಳಾ ಬದುಕಿನ ಕಂಬಗಳು’ ಎಂದು ಹೆಸರಿಸಲಾಗಿದೆ ಎನ್ನುತ್ತಾರೆ ಉತ್ಸವ ರಾಕ್ಗಾರ್ಡನ್ನ ರೂವಾರಿ ಟಿ. ಬಿ. ಸೊಲಬಕ್ಕನವರ್.ಮಹಿಳಾ ಬದುಕಿನ ಚಿತ್ರಗಳ ಪ್ರತಿಪಾದನೆಯ ಜೊತೆಗೆ ಕೆಲವು ಜನಪದ ಕಲಾ ಪ್ರಕಾರಗಳನ್ನು ಕಂಬಗಳ ಮೇಲೆ ಗೊಂಬೆಗಳಾಗಿ ಬಿಂಬಿಸಲಾಗಿದೆ. ಪ್ರತಿ ಗೊಂಬೆಯಲ್ಲಿನ ಸೂಕ್ಷ್ಮತೆ, ಕುಸುರಿತನ, ಅದಕ್ಕೆ ತಕ್ಕದಾದ ವರ್ಣಲೇಪನ ಎಲ್ಲವೂ ಪೂರ್ವ ನಿರ್ಧಾರಿತ ಕಲ್ಪನೆಗಳಾಗಿವೆ. ಇದರಲ್ಲಿ ತಂಡದ ನಾಯಕರ ಶ್ರಮ ಹಾಗೂ ಮಾರ್ಗದರ್ಶನ ಎಲ್ಲರಿಗೂ ಹಿತವಾಗುವಂತೆ ಶಿಲ್ಪ ನಿರ್ಮಿಸಿರುವುದು ಅವರ ದೂರದೃಷ್ಟಿತ್ವವನ್ನು ಪ್ರತಿಪಾದಿಸುತ್ತವೆ.ಆಧುನಿಕತೆಗೆ ಮಾರುಹೋದ ಯಾಂತ್ರಿಕ ಜೀವನದಲ್ಲಿ ಕಳೆದುಹೋದ ಗ್ರಾಮೀಣ ಬದುಕಿನ ವೈವಿಧ್ಯಮಯ ಸ್ವರೂಪವನ್ನು ಜೀವಂತವಾಗಿಡುವ ಇಲ್ಲಿನ ಪ್ರಯತ್ನ ಶ್ಲಾಘನೀಯ. 42 ಎಕರೆ ವಿಶಾಲವಾದ ಪ್ರದೇಶದಲ್ಲಿ ಅಭಿವೃದ್ದಿಗೊಳಿಸಲಾದ ಈ ಗಾರ್ಡನ್ನ ಪ್ರತಿ ಶಿಲ್ಪಗಳು ತನ್ನದೇ ಮಹತ್ವ ಹೊಂದಿವೆ. ಮಹಿಳೆಯ ಬದುಕಿನ ಅದರಲ್ಲೂ ಗ್ರಾಮೀಣ ಮಹಿಳೆಯ ಬದುಕಿನ ಚಿತ್ರಣಗಳನ್ನು ಸವಿಯಲು ಒಮ್ಮೆಯಾದರೂ ನೋಡಬಹುದಾದ ತಾಣ ಉತ್ಸವ ರಾಕ್ಗಾರ್ಡನ್.
courtsey:prajavani.net
“author”: “ಆರ್.ಬಿ.ಗುರುಬಸವರಾಜ”,
https://www.prajavani.net/artculture/art/womens-work-pillar-648011.html