ಓದುಗ ಪ್ರಭು ಮತ್ತು ಲೇಖಕ ಮಹಾಶಯ!
ಮೊನ್ನೆ ಹೀಗೊಬ್ಬರು ವಾದಿಸಿದರು;
ಓದುಗರು ಮುಖ್ಯ, ಓದುಗರೇ ಸರ್ವಸ್ವ, ಓದುಗರು ದೇವರು, ಓದುಗ ಆತ್ಮಬಂಧು ಅಂತೆಲ್ಲ ಅನೇಕ ಕತೆಗಾರರು ಹೇಳುತ್ತಿರುತ್ತಾರೆ. ನಟರು ಪ್ರೇಕ್ಷಕರ ತೀರ್ಮಾನವೇ ಅಂತಿಮ ಅನ್ನುತ್ತಾರೆ. ಪ್ರೇಕ್ಷಕ ಪ್ರಭು ಅಂತಾರೆ, ಪ್ರೇಕ್ಷಕರನ್ನು ದೇವರು ಅಂತ ಕರೆಯುತ್ತಾರೆ. ಓದುಗರನ್ನೋ ಪ್ರೇಕ್ಷಕರನ್ನೋ ಅಷ್ಟೆತ್ತರದ ಸ್ಥಾನದಲ್ಲಿ ಕೂರಿಸುವುದು ಈ ಬರಹಗಾರರ, ನಟರ ತಂತ್ರ ಅಲ್ಲವೇ? ಎಷ್ಟೇ ಓಲೈಸಿದರೂ ಪೂಸಿ ಹೊಡೆದರೂ ಮುದ್ದಾಡಿದರೂ ಓದುಗ ತನಗೆ ಇಷ್ಟವಾಗದ ಕೃತಿಯನ್ನೇನೂ ಓದುವುದಿಲ್ಲ.
ಅಲ್ಲದೇ ಓದುಗನಿಗೆ ಓದುವುದರಿಂದ ಮನರಂಜನೆ ಸಿಗುತ್ತದೆ ಎಂದು ಓದುತ್ತಾನೆ. ಅವನ ಜ್ಞಾನ ಹೆಚ್ಚಾಗಲಿ ಅಂತ ಓದುತ್ತಾನೆ, ಲೇಖಕ ತನಗೆ ಅನ್ನಿಸಿದ್ದನ್ನೇ ಹೇಳುತ್ತಾನೆ ಎಂದು ಓದುತ್ತಾನೆ. ತನ್ನಿಷ್ಟದ ಗಾಯಕನ ಹಾಡು ಕೇಳುತ್ತಾನೆ. ಅಂದ ಮೇಲೆ ಓದುಗನನ್ನು ಹಾಡಿ ಹೊಗಳುವುದರಲ್ಲಿ ಏನರ್ಥ?
ಲಂಕೇಶರು ಯಾವುದೋ ಒಂದು ಸಂದರ್ಭದಲ್ಲಿ ನೀನೊಬ್ಬ ಜುಜುಬಿ ಓದುಗ’ ಅಂದಿದ್ದು ಸರಿಯಾಗಿಯೇ ಇದೆ.
ಅವರ ವಾದ ತಪ್ಪೋ ಸರಿಯೋ ಎನ್ನುವುದಕ್ಕಿಂತ ಹಾಗೆ ಹೇಳಿದವರು ಲೇಖಕರಾಗಿರಲಿಲ್ಲ. ಅವರು ಒಳ್ಳೆಯ ಓದುಗ. ಹೊಸ ಪುಸ್ತಕಗಳನ್ನು ಕೊಂಡು ಓದುತ್ತಾರೆ. ತನಗಿಷ್ಟವಾದದ್ದನ್ನು ಮೆಚ್ಚುತ್ತಾರೆ. ಯಾವತ್ತೂ ಲೇಖಕರ ಹತ್ತಿರ ಹೋದವರೇ ಅಲ್ಲ. ನಿಮ್ಮ ಪುಸ್ತಕ ಚೆನ್ನಾಗಿದೆ ಅಂತ ಹೇಳಿದವರೂ ಅಲ್ಲ. ನಾನೊಬ್ಬ ಅಜ್ಞಾತ ಓದುಗ. ಲೇಖಕನೂ ಅಜ್ಞಾತನಾಗೇ ಇರಬೇಕು. ನಾವು ಪರಸ್ಪರ ಕೃತಿಯ ಮೂಲಕ ಭೇಟಿಯಾದರೆ ಸಾಕು ಅನ್ನುವುದು ಅವರ ನಿಲುವು.
ಈ ಮಾತು ಚರ್ಚೆಗೆ ಬಿತ್ತು. ಅನೇಕರು ಇದನ್ನು ಒಪ್ಪಲಿಲ್ಲ. ಓದುಗರು ದೇವರು ಎನ್ನುವುದು ನಿಜ. ಅವರಿಲ್ಲದೇ ಹೋದರೆ ನೀವು ಯಾರಿಗೋಸ್ಕರ ಬರೆಯುತ್ತೀರಿ ಅಂತ ಮತ್ತೊಬ್ಬರು ವಾದಿಸಿದರು. ಓದುಗರು ಇರುವುದರಿಂದಲೇ ಲೇಖಕರಿಗೆ ಬರೆಯುವುದಕ್ಕೆ ಸ್ಫೂರ್ತಿ ಎಂದು ಇನ್ನೊಬ್ಬರು ಹೇಳಿದರು. ಮಾತಿಗೆ ರಂಗೇರಿತು.
ಓದುಗರಿಲ್ಲದೇ ಹೋದರೆ ಯಾರಿಗೆ ಬರೆಯುತ್ತೀರಿ ಅನ್ನುವುದು ಒಳ್ಳೆಯ ಪ್ರಶ್ನೆ. ಆದರೆ ಲೇಖಕ ಬರೆದಾಕ್ಷಣ ಓದುಗರು ಅದನ್ನು ಓದುತ್ತಾರೆ ಅಂತ ಏನೂ ಖಾತ್ರಿ. ಆತನ ಕೃತಿ ಚೆನ್ನಾಗಿದ್ದರೆ ಮಾತ್ರ ಕೊಳ್ಳುತ್ತಾನೆ. ಲೇಖಕ ಬಡವ, ಒಳ್ಳೆಯವನು, ಕುಡುಕನಲ್ಲ, ಸಭ್ಯ, ದಿನಾ ಸ್ನಾನ ಮಾಡುತ್ತಾನೆ, ಕರುಣಾಳು- ಅನ್ನುವ ಕಾರಣಕ್ಕೆ ಯಾರೂ ಕೆಟ್ಟ ಕೃತಿಯವನ್ನು ಕೊಳ್ಳುವುದಿಲ್ಲ. ಕೆಟ್ಟ ಕೃತಿಕಾರ ಒಳ್ಳೆಯ ಮನುಷ್ಯನಾಗಿರಬಹುದು. ಒಳ್ಳೆಯ ಕೃತಿಕಾರ ಕೆಟ್ಟವನಾಗಿರಬಹುದು. ಎರಡನ್ನೂ ನೀವು ಮಿಕ್ಸ್ ಮಾಡುವುದು ತಪ್ಪು. ಒಳ್ಳೆ ಲೇಖಕನಾಗಿರುವುದು ಬೇರೆ, ಒಳ್ಳೇ ಮನುಷ್ಯನಾಗಿರುವುದು ಬೇರೆ. ಲೇಖಕ ಹೆಂಡತಿಯನ್ನು ಹೊಡೆಯುತ್ತಾನಾ, ಅಪ್ಪ ಅಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಾನಾ ಅನ್ನುವುದೆಲ್ಲ ಬೇರೆ ಮಾತು. ಅವನ ಕೃತಿಯಷ್ಟೇ ನಮಗೆ ಮುಖ್ಯ. ಉಳಿದಂತೆ ಅವನು ಏನಾದರೂ ಮಾಡಿಕೊಳ್ಳಲಿ ಎಂದು ಇವರು ಪಟ್ಟು ಹಿಡಿದರು.
ಇದಕ್ಕಿರುವ ಆಯಾಮಗಳನ್ನು ಲೆಕ್ಕ ಹಾಕಿನೋಡಿ. ತಾನು ಸಮಾಜವಾದಿ ಅಂತ ಹೇಳಿಕೊಳ್ಳುವ ಲೇಖಕನೊಬ್ಬ ಕಾರಿನಲ್ಲಿ ಓಡಾಡುತ್ತಾನೆ. ಮಾನವತಾವಾದಿ ಅನ್ನಿಸಿಕೊಂಡವನು ಮನೆಯಲ್ಲಿ ಕ್ರೂರಿಯಾಗಿರುತ್ತಾನೆ. ಅವನನ್ನು ಒಪ್ಪಿಕೊಳ್ಳುವುದಕ್ಕೆ ಮನಸ್ಸು ಹಿಂಜರಿಯುತ್ತದೆ. ಅವನನ್ನು ಸೋಗಲಾಡಿ ಎಂದು ಮನಸ್ಸು ಹೇಳುತ್ತದೆ.
ಆದರೆ ಅವನ ಕೃತಿಗಳನ್ನು ಓದುವುದಕ್ಕೆ ಇದರಿಂದೇನಾದರೂ ತೊಂದರೆ ಆಗುತ್ತದಾ? ರಾಮಾಯಣ ಬರೆದ ವಾಲ್ಮೀಕಿಯ ಬಗ್ಗೆ ನಮಗೆ ಗೊತ್ತಿರುವ ಕತೆಗಳೆಲ್ಲ ನಿಜವಾ? ವೇದವ್ಯಾಸರು ಹೇಗಿದ್ದರು? ಕುಮಾರವ್ಯಾಸನ ಜೀವನ ಹೇಗಿತ್ತು? ಅವನು ತನ್ನವರನ್ನು ಚೆನ್ನಾಗಿ ನೋಡಿಕೊಂಡಿದ್ದನೇ?
ಕಾಲಾಂತರದಲ್ಲಿ ಉಳಿಯುವುದು ಕೃತಿಯೊಂದೇ. ಎಲ್ಲಾ ಕ್ರೌರ್ಯವನ್ನೂ ನುಂಗಿ ಹಾಕುತ್ತದೆ ಪ್ರತಿಭೆ. ಆ ಪ್ರತಿಭೆಯಿಂದ ಹೊರಹೊಮ್ಮಿದ ಕೃತಿ ನಮಗೆ ಕೊಡುವ ಸಂತೋಷ.
ಇಲ್ಲಿಗೆ ಮಾತು ಮತ್ತೆಲ್ಲಿಗೋ ಹೊರಳಿದ ಹಾಗಾಯಿತು ಅಂದುಕೊಂಡು ಮತ್ತೆ ಮೂಲಕ್ಕೇ ಬಂದರೆ ಯಾವ ಅಭಿಮಾನಿ ಕೂಡ ಅಭಿಮಾನಕ್ಕೆಂದು ಸಿನಿಮಾ ನೋಡುವುದಿಲ್ಲ. ಹಿಡಿಸದೇ ಹೋದರೆ ಎರಡನೇ ಸಾರಿ ನೋಡುವುದಿಲ್ಲ. ಸೂಪರ್ ಸ್ಟಾರ್ ರಜನೀಕಾಂತ್ ಚಿತ್ರಗಳು ಕೂಡ ಸೋತುಹೋಗಿವೆ. ಟಾಲ್ಸ್ಟಾಯ್ ಬರೆದದ್ದರಲ್ಲೂ ಮೆಚ್ಚಲಾಗದ್ದು ಸಾಕಷ್ಚಿದೆ. ಹೀಗಾಗಿ ಓದುಗನನ್ನು ಕಲಾವಿದ, ಕೃತಿಕಾರ ತನ್ನ ಕೃತಿಯಿಂದ ಮೆಚ್ಚಿಸಬೇಕೇ ಹೊರತು ಇನ್ನಾವುದರಿಂದಲೂ ಅಲ್ಲ.
ಅದು ಸರಿ, ಆದರೆ ಓದುಗ ತನ್ನ ಪಾಲಿಗೆ ಏನೇನೂ ಅಲ್ಲ ಅಂತ ಕೃತಿಕಾರ ದಾರ್ಷ್ಟ್ಯದಿಂದ ಹೇಳಿಕೊಳ್ಳಬಹುದೇ? ಅದರ ಅವಶ್ಯಕತೆ ಇಲ್ಲ. ಅಂಥ ಪ್ರಮೇಯವೇ ಬರುವುದಿಲ್ಲ. ಓದುಗ ಮೊಂಡು ಹಿಡಿದು ಜಗಳಕ್ಕೆ ಬಂದು ನಾನೇ ನಿನ್ನ ಓದುಗ, ನಿನ್ನನ್ನು ಉದ್ಧರಿಸಿದವನು ನಾನೇ ಎಂದಾಗ ಅಂಥ ಮಾತು ಬರಬಹುದೇ ವಿನಾ, ಓದುಗ ಮತ್ತು ಲೇಖಕರ ನಡುವೆ ಅದನ್ನು ಮೀರಿದಂಥ ಸಂಬಂಧ ಇರಲಾರದು, ಇರಲೂಬಾರದು. ಪ್ರತಿಯೊಬ್ಬ ಪ್ರತಿಭಾವಂತನೂ ತನ್ನ ತನ್ನ ಮಾಧ್ಯಮದ ಮೂಲಕವೇ ಪ್ರಕಟಗೊಳ್ಳುವುದು ಸರಿಯಾದ ಕ್ರಮ. ನಟ ನಟನೆಯ ಮೂಲಕ, ನಾಟಕಕಾರ ಮತ್ತು ನಿರ್ದೇಶಕ ನಾಟಕ, ಸಿನಿಮಾಗಳ ಮೂಲಕ, ಗಾಯಕ ಹಾಡಿನ ಮೂಲಕ.. ಇವರಿಗೆಲ್ಲ ತಮ್ಮನ್ನು ತೋರ್ಪಡಿಸಿಕೊಳ್ಳುವುದಕ್ಕೇ ಮತ್ತೊಂದು ಮೈ ಇದೆ. ಓದುಗರಿಗೆ ಸ್ವೀಕರಿಸುವುದಕ್ಕೆ ಕೂಡ. ಅಲ್ಲಿಗೆ, ಬೇರೆ ಯಾವುದೇ ಥರದ ಮುಖಾಮುಖಿ ಅಗತ್ಯವಿಲ್ಲ ಎಂದ ಹಾಗಾಯಿತಲ್ಲ.
ಅಷ್ಟಕ್ಕೂ ಮೀರಿ, ಈ ಕತೆಯ ಹಿನ್ನೆಲೆ ಏನು, ಈ ಕೃತಿ ಹುಟ್ಟಿದ ಸಂದರ್ಭ ಯಾವುದು, ಇದನ್ನು ಏತಕ್ಕಾಗಿ ಬರೆದಿರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕುತೂಹಲಕ್ಕೆ, ಹರಟೆಯ ಸಂತೋಷಕ್ಕೆ ಕೇಳಬಹುದು. ಕಾಲಾಂತರದಲ್ಲಿ ಅವಕ್ಕೆಲ್ಲ ಪ್ರಾಮುಖ್ಯತೆ ಇಲ್ಲ. ವಿಮರ್ಶೆಯೂ ಅಷ್ಟೇ, ಕಾಲಕಾಲಕ್ಕೆ ಒಂದು ಕೃತಿ ಹೊಸ ವಿಮರ್ಶೆಯೊಂದಿಗೆ ಹಾಜರಾಗದೇ ಹೋದರೆ ವಿಮರ್ಶೆ ಕೂಡ ಸ್ವೀಕಾರಾರ್ಹವಲ್ಲ. ಯಾಕೆಂದರೆ ವಿಮರ್ಶೆ ಎನ್ನುವುದು ವರ್ತಮಾನ ಒಂದು ಕೃತಿಯ ಜೊತೆ ನಡೆಸುವ ಮುಖಾಮುಖಿ.
ಇವೆಲ್ಲ ಯೋಚನೆಗಳ ಜೊತೆಗೆ ರಾಘವಾಂಕ ಹೇಳಿರುವ ಮಾತುಗಳನ್ನು ಓದೋಣ:
ಅವನು ಹೀಗೆ ಶುರುಮಾಡುತ್ತಾನೆ. ಇದು ಕಥಾ ಬೀಜ, ಇದನ್ನು ಬಿತ್ತಿ ಬೆಳೆಸಿದ್ದೇನೆ. ಇದೀಗ ಕಾವ್ಯವೃಕ್ಷವಾಗಿದೆ. ಇದಕ್ಕೆ ಪುಳಕದ ಗೊಬ್ಬರ ತಳಿದು, ಆನಂದ ಜಲ ಎರೆದು ಸಲಹುದು ರಸಿಕರ ಕೆಲಸ. ರಸದಲ್ಲಿ, ಅರ್ಥದಲ್ಲಿ, ಭಾವದಲ್ಲಿ, ಅಲಂಕಾರದಲ್ಲಿ, ಹೊಸ ಶೈಲಿಯಲ್ಲಿ, ಬಂಧದಲ್ಲಿ, ಲಕ್ಷಣದಲ್ಲಿ, ಪದವಿಸರದಲ್ಲಿ ತಪ್ಪುಗಳಿದ್ದರೆ ಅದನ್ನು ತಿದ್ದುವುದು, ಕೊಂಡಾಡಿ ಲಾಲಿಸಿ ಕೇಳುವುದು ನಿಮ್ಮ ಹೊಣೆ. ನಾನು ನಿಮ್ಮ ಕಂದ, ನನ್ನಲ್ಲಿ ಕುಂದಿಲ್ಲ ಎಂದು ಭಾವಿಸಬೇಡಿ ಎಂದು ಕೇಳಿಕೊಳ್ಳುತ್ತಾನೆ ಆತ.
ತಪ್ಪುಗಳಿರಬಹುದು ಅನ್ನುವುದಕ್ಕೆ ಅವನು ಕೊಡುವ ಮತ್ತೊಂದು ಕಾರಣ ಇದು:
ನಡೆವರೆಡಹದೆ ಕುಳಿತರೆಡಹುವರೆ ಕಾವ್ಯಮಂ
ನಡೆಸುವಾತಂ ರಸಾವೇಶ ಮರಹಾಲಸ್ಯ
ವೆಡೆಗೊಡಲು ತಪ್ಪುಗಲ್ಲದೆ ಕಾವ್ಯಕರ್ತೃಂ ತಪ್ಪುವನೆವೊಂದೆರಡೆಡೆಯೊಳು.
ತಪ್ಪುಗಳಿರಬಹುದು. ಆದರೆ ಅದನ್ನೇ ಹಿಡಿದು ಸಾಧಿಸಬೇಡಿ. ಒಳ್ಳೆಯ ಅಂಶಗಳು ಏನಿವೆಯೋ ಅದನ್ನು ನೋಡಿ. ಹಾಗೆ ಮಾಡೋದಕ್ಕೆ ನಿಮಗೇನು ರೋಗ? ಕವಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳದ ನೀರಸರನ್ನು ಯಾಕಾದರೂ ಸೃಷ್ಟಿಸಿದನೋ ಏನೋ ಆ ಬ್ರಹ್ಮ?
ಅಲ್ಲಿಂದಾಚೆ ಅವನ ಸಿಟ್ಟು ಸಹಕವಿಗಳತ್ತ ತಿರುಗುತ್ತದೆ:
ವ್ಯಾಕರಣ ಪರಿಣತನೂ ಅಲಂಕಾರ ಪರಿಚಿತನೂ ಅನೇಕ ರಸ ನಿಪುಣನೂ ಅಭಿದಾನ ಪ್ರವೀಣನೂ ಕಲಾಕುಶಲನೂ ಆದವನು ಕವಿ. ಅವನ ಎದುರು ಏನೂ ಗೊತ್ತಿಲ್ಲದ ಕಾಕುದುರ್ಬೋಧಕರೂ ಕವಿ ಎಂದು ಕರೆಸಿಕೊಂಡರೆ ಮಹಾಕವಿಯ ಖ್ಯಾತಿಗೇನೂ ಕುಂದು ಬರುವುದಿಲ್ಲ. ಜಲಶಯನ ವಿಷ್ಣು ಹರಿ ಎಂದು ಕರೆಸಿಕೊಳ್ಳುವ ಹಾಗೇ, ನೀರಲ್ಲಿರುವ ಮೊಸಳೆಯನ್ನೂ ಹರಿ ಅನ್ನುತ್ತಾರೆ. ಆದರೆ ಈ ಹರಿ, ಆ ಹರಿಯನ್ನು ಕೊಂದಿದ್ದು ಗೊತ್ತಿದೆ ತಾನೇ?
ಅಲ್ಲಿಂದ ಮುಂದೆ ಅವನು ಈ ಲೇಖನದ ಆರಂಭದಲ್ಲಿ ಪ್ರಸ್ತಾಪವಾದ ಮಾತಿಗೆ ಬರುತ್ತಾನೆ:
ಕವಿಯಧಿಕನಿರ್ದೊಡೆ ಕೇಳ್ವರಿಲ್ಲದೊಡೆ ಗಾ
ನವಿನೋದಿಯಿರ್ದೊಡೇಂ ಜಾಣರಿಲ್ಲದೊಡೆ ಜಾ
ತಿವಿದಗ್ಧೆಯಿದ್ದೊಡೇಂ ಸುವಿಟರಿಲ್ಲದೊಡೆ ಪೊಸ ಪೂಮಾಲೆಯಿದ್ದೊಡೇನು
ತವೆ ಮುಡಿವರಿಲ್ಲದೊಡೆ ನಾನಾ ಕಳಾನ್ವಿತರ
ನಿವಹವಿದ್ದೇನಾ ಕಲಾಪ್ರೌಢರಿಲ್ಲದೊಡೆ
ಕೇಳುವವರಿಲ್ಲದೇ ಹೋದರೆ, ಶ್ರೇಷ್ಠ ಕವಿಯಿದ್ದೇನು ಪ್ರಯೋಜನ? ಜಾಣ ಶೋತೃಗಳಿಲ್ಲದೇ ಇದ್ದಾಗ ಗಾನವಿನೋದಿ ಇದ್ದರೇನಂತೆ? ಮುಡಿಯುವವರೇ ಇಲ್ಲದಿದ್ದಾಗ ಹೂಮಾಲೆ ಇದ್ದು ಏನು ಉಪಯೋಗ? ಕಲಾಪ್ರೌಢರು ಇಲ್ಲದೇ ಇದ್ದಾಗ ಕಲಾವಿದರಿದ್ದು ಏನು ತಾನೇ ಮಾಡಲು ಸಾಧ್ಯ?
ವೈಯನ್ಕೆ ಹೇಳುತ್ತಿದ್ದ ಮಾತೊಂದು ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇದ್ದಂತಿದೆ:
ಸಕ್ಕರೆ ಸಿಹಿಯೋ ಕಹಿಯೋ ಯಾರಿಗೆ ಗೊತ್ತು. ಅದು ನಾಲಗೆಯನ್ನು ಸೇರಿ ಜೊಲ್ಲಿನ ಜೊತೆ ಬೆರೆತಾಗಲೇ ಅದರ ರುಚಿ ಗೊತ್ತಾಗುವುದು. ಕೃತಿಯೂ ಅಷ್ಟೇ, ಶ್ರೇಷ್ಠವೋ ಅಲ್ಲವೋ ನಿರ್ಧಾರವಾಗುವುದು ಓದುಗರ ಸನ್ನಿಧಿಯಲ್ಲೇ. ಓದುಗ ಒಳ್ಳೇ ಕೃತಿಯನ್ನೂ ಓದುತ್ತಾನೆ, ಕೆಟ್ಟದ್ದನ್ನೂ ಓದುತ್ತಾನೆ. ಒಳ್ಳೆಯ ಕೃತಿ ಉಳಿಯುತ್ತದೆ. ಕೆಟ್ಟದ್ದು ಅಳಿಯುತ್ತದೆ.
ಅಳಿದ ಮೇಲೆ!