ಎಲ್ಲಾ ನನ್ನದೆ!
ಬಡ ಬಂಧುಗಳೊಡನೆ ಮಾತು ಬೇಡ
ನಿತ್ಯ ಹಂಗಿಸುತ ಪರರ ಕಾಡುವುದು ನೋಡ
ಬರೆ ತೋರಿಸುತ ಅಷ್ಟ ಐಶ್ವರ್ಯವ ಸಕಲರಿಗೆ
ಮೊನ್ನೆ ತಂದೆನಿದನು ನೋಡಿರಿ ಮುತ್ತಿನ ಹಾರ
ಸಂಪ್ರದಾಯದಿ ಬಂದ ಬಾಗಿಣವು ಇದಿಹುದು
ಮನೆ ತುಂಬ ಹೊಸ ಮಾದರಿಯದಿಹುದು
ಒಳಕೋಣೆ, ಪಡಸಾಲೆ, ಮಲಗುವ ಕೋಣೆಯಿದು
ಸರ್ವ ಸೌಲಭ್ಯ ಇದರಲ್ಲಿ ಯಾವುದಕೂ ಕೊರತೆಯಿರದು
ತಂದೆ ಹೊಸ ನಾಲ್ಕು ಚಕ್ರದ ಗಾಡಿಯಿದು
ನನಗೊಂದು, ನನ್ನ ಮಕ್ಕಳಿಗೊಂದೊಂದು
ಬಂಗಾರ, ಬೆಳ್ಳಿ, ವಜ್ರ, ವೈಡೂರ್ಯಗಳಿಹವು
ಎಲ್ಲಾ ನನ್ನದೇ, ನಾ ಗಳಿಸಿದಂಥಹುದು
ಮುಂದೆ ಎನ್ನ ಮಕ್ಕಳಿಗೆ, ಮರಿಮೊಮ್ಮಕ್ಕಳಿಗಿಹುದು
ಧ್ವನಿ ಜೋರು ಮಾಡಿ ಉನ್ಮಾದದಲಿ ನುಡಿಯುತಿಹ
ಓ ಜಾಣ ಮನುಜನೇ ಯಾವುದು ನಿನ್ನದು
ಎಲ್ಲಾ ಸೃಷ್ಟಿಯೆಂಬ ಕರ್ತನದು
ಅಶಾಶ್ವತ ಭುವಿಯಲಿ ಎಲ್ಲಿಹುದು ನಿನ್ನದು
ಜೀವವೂ ನಿನ್ನದಲ್ಲ, ಆತ್ಮವೂ ನಿನ್ನದಲ್ಲ
ಜನುಮವಿತ್ತವರು ಬೇರೆ, ಸೃಷ್ಟಿಸಿದವ ಬೇರೆ
ಇರುವ ನೆಲ, ಉಸಿರಿಸುವ ಗಾಳಿ ನೀ ಮಾಡಿದ್ದಲ್ಲ
ಜೀವಿಸುವ ಆಹಾರಕ್ಕೂ ಅವಲಂಬಿ ನೀನು
ಇಂದಿದ್ದು ನಾಳೆ ಹೋಗುವ ನಿನಗೆ ನಾನು,
ನನ್ನದೆಂಬ ಅಹಂಕಾರವೇಕೆ ನಾನರಿಯೆ
ಗಿಡಮರ, ನೆಲ, ಜಲ, ವಾಯುಗಳೆಲ್ಲ
ಏನೂ ಬಯಸದೆ ಕೊಟ್ಟು ಸಲಹುತಿರಲು
ನೀ ಮಾಡಿದುಪಕಾರದ ಬಡಾಯಿ ಹೇಳಿಕೊಂಡು
ಬದುಕ ಸಾಗಿಸುತಿಹ ನೀ ಯಾರಿಗುಪಕಾರಿ
ಹೇಳು ಮನುಜ! ಹೇಳು ಮನುಜ!
-ಉಮಾ ಭಾತಖಂಡೆ.
1 Comment
Tumba channagide adhyatmavu ide. Iddanne bayasiddu. Thank you for nice poetry.